ವಾಷಿಂಗ್ಟನ್: ಗುಜರಾತ್ ದಂಗೆಯ ಕುರಿತು ಬಿಬಿಸಿ(BBC)ಯ ಸಾಕ್ಷ್ಯ ಚಿತ್ರವನ್ನು ಭಾರತದಲ್ಲಿ ನಿಷೇಧಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕವು, ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಪ್ರಜಾಪ್ರಭುತ್ವದ ಪರಿಕಲ್ಪನೆಗಳ ಮಹತ್ವವನ್ನು ಒತ್ತಿಹೇಳುವುದು ಮತ್ತು ಭಾರತವು ಸೇರಿದಂತೆ ಪ್ರಪಂಚದಾದ್ಯಂತ ಮುಖ್ಯವಾಗಿಸುವುದು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಅಮೆರಿಕವು ವಿಶ್ವಾದ್ಯಂತ ಮುಕ್ತ ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುತ್ತದೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಪ್ರಜಾಪ್ರಭುತ್ವ ತತ್ವಗಳನ್ನು ಒತ್ತಿಹೇಳುವುದು ನಿರ್ಣಾಯಕವಾಗಿದೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರ ನೆಡ್ ಪ್ರೈಸ್ ಅವರು ಹೇಳಿದರು. ಬಿಬಿಸಿಯ ರೂಪಿಸಿರುವ ಸಾಕ್ಷ್ಯ ಚಿತ್ರದಲ್ಲಿ ಪ್ರಧಾನಿ ಮೋದಿ(BBC Documentary on Modi) ಅವರನ್ನು ಋಣಾತ್ಮಕವಾಗಿ ಬಿಂಬಿಸಲಾಗಿದೆ ಎಂಬ ಕಾರಣಕ್ಕೆ ಭಾರತದಲ್ಲಿ, ಸಾಕ್ಷ್ಯ ಚಿತ್ರದ ಪ್ರದರ್ಶನದ ಮೇಲೆ ನಿಷೇಧ ಹೇರಲಾಗಿದೆ.
ಬುಧವಾರ ಪ್ರೆಸ್ ಬ್ರೀಫಿಂಗ್ ವೇಳೆ ಮಾಧ್ಯಮದ ಪ್ರಶ್ನೆಗ ಉತ್ತರಿಸಿದ ವಕ್ತಾರ ನೆಡ್ ಪ್ರೈಸ್ ಅವರು, ಜಗತ್ತಿನಾದ್ಯಂತ ನಾವು ಮುಕ್ತ ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುತ್ತೇವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಧಾರ್ಮಿಕ ಅಥವಾ ನಂಬಿಕೆ ಸ್ವಾತಂತ್ರ್ಯಗಳು ಪ್ರಜಾಪ್ರಭುತ್ವದ ಉನ್ನತ ಮೌಲ್ಯಗಳೆಂಬುದನ್ನು ನಾವು ಒತ್ತಿ ಹೇಳುತ್ತೇವೆ. ಮಾನವ ಹಕ್ಕುಗಳೂ ಆಗಿರುವ ಈ ಹಕ್ಕುಗಳು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗಳನ್ನು ಗಟ್ಟಿಗೊಳಿಸುತ್ತೇವೆ. ಖಂಡಿತವಾಗಿಯೂ ಭಾರತದ ದೃಷ್ಟಿಯಿಂದಲೂ ಹೇಳುತ್ತಿದ್ದೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ: BBC Documentary On Modi: ಜೆಎನ್‌ಯುನಲ್ಲಿ ಬಿಬಿಸಿ ಡಾಕ್ಯುಮೆಂಟರಿ ವೀಕ್ಷಣೆ ವೇಳೆ ಪವರ್ ಕಟ್, ಕಲ್ಲು ತೂರಿ ಗಲಾಟೆ
ಕಳೆದ ವಾರ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು, ಬಿಬಿಸಿ ಸಾಕ್ಷ್ಯ ಚಿತ್ರಗಳ ವಿವಾದದಿಂದ ಅಂತರ ಕಾಯ್ದುಕೊಂಡು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ್ದರು. ಸಾಕ್ಷ್ಯ ಚಿತ್ರದಲ್ಲಿ ಪ್ರಧಾನಿ ಮೋದಿ ಅವರನ್ನು ತೋರಿಸಿರುವ ರೀತಿಗೆ ನಾನು ಒಪ್ಪಿಗೆ ಸೂಚಿಸುವುದಿಲ್ಲಎಂದು ರಿಷಿ ಸುನಕ್ ಅವರು ಹೇಳಿದ್ದರು. ಈಗ ಅಮೆರಿಕವು ಭಾರತದ ನೀತಿಯನ್ನು ಟೀಕಿಸಿದ್ದು, ಪತ್ರಿಕಾ ಸ್ವಾತಂತ್ರ್ಯವನ್ನು ಗೌರವಿಸಬೇಕು ಎಂದು ಹೇಳಿದೆ.