Site icon Vistara News

ವಿಸ್ತಾರ ಸಂಪಾದಕೀಯ | ಅಧಿಕಾರ ಸಾಕೆಂದ ನ್ಯೂಜಿಲ್ಯಾಂಡ್‌ ಪ್ರಧಾನಿ ನಮ್ಮವರಿಗೆ ಮಾದರಿಯಾಗಬಲ್ಲರೇ?

Jacinda Ardern

ನ್ಯೂಜಿಲ್ಯಾಂಡ್‌ ಪ್ರಧಾನಿಯಾಗಿದ್ದ ಜಸಿಂಡಾ ಆರ್ಡೆನ್‌ ಅವರು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಗೆ ಅವರು ನೀಡಿರುವ ಕಾರಣ ಕುತೂಹಲಕರವಾಗಿದೆ. ʼನನಗಿನ್ನು ಅಧಿಕಾರ ಸಾಕುʼ ಎಂಬುದು ಅವರ ಮಾತು.
ತಮ್ಮ ರಾಜೀನಾಮೆ ಹಿಂದೆ ಯಾವುದೇ ರಹಸ್ಯ ಇಲ್ಲ. ನಾನು ಒಬ್ಬ ಮನುಷ್ಯಳು. ನನಗೆ ಎಷ್ಟು ಸಾಧ್ಯವೋ ಅಷ್ಟು ಸುದೀರ್ಘ ಕಾಲದಿಂದ ಪರಿಶ್ರಮ ಪಟ್ಟಿದ್ದೇವೆ. ಈಗ ಸಮಯ ಬಂದಿದೆ. ನನಗೆ ಇದು ನಿರ್ಗಮನದ ಸಮಯ. ಇಂತಹ ಅತ್ಯುನ್ನತ ಪದವಿಗಳಿಗೆ ದೊಡ್ಡ ಜವಾಬ್ದಾರಿಗಳಿರುತ್ತವೆ. ಅದನ್ನು ನಿರ್ವಹಿಸುವ ಚೈತನ್ಯ ನನ್ನಲ್ಲಿ ಕಡಿಮೆಯಾಗಿದೆ ಎಂಬುದು ನನಗೆ ಗೊತ್ತಾಗಿದೆ ಎಂದವರು ಹೇಳಿದ್ದಾರೆ. ಇಂಥ ಆತ್ಮವಿಮರ್ಶೆ ಹಾಗೂ ಅತ್ಯುನ್ನತ ಪದವಿಯಿಂದ ದೂರ ಸರಿಯುವ ನಡೆ ಅಪರೂಪವೇ ಸರಿ. ಅಧಿಕಾರ ಬೇಕು, ಇನ್ನೂ ಬೇಕು, ಮತ್ತೂ ಬೇಕು ಎಂದು ಹಪಹಪಿಸುವ ನಮ್ಮ ರಾಜಕಾರಣಿಗಳಿಗೆ ಇವರು ಮಾದರಿಯಾಗಿದ್ದಾರೆ.

ಹಾಗೆಂದು ಜಸಿಂಡಾ ಅವರ ಜನಪ್ರಿಯತೆಯೇನೂ ಕಡಿಮೆಯಾಗಿರಲಿಲ್ಲ. ಮೂಲತಃ ಬಡ ಕುಟುಂಬದವರಾದ ಅವರು ಪ್ರಧಾನಿ ಕಚೇರಿಯಲ್ಲಿ ಸಾಮಾನ್ಯ ಕೆಲಸಕ್ಕೆ ಸೇರಿ, ಆ ಬಳಿಕ ರಾಜಕೀಯಕ್ಕೆ ಬಂದು ಪ್ರಧಾನಿಯೇ ಆಗಿಬಿಟ್ಟಿದ್ದರು. 2017ರಲ್ಲಿ ಸಮ್ಮಿಶ್ರ ಸರಕಾರದ ಪ್ರಧಾನಿಯಾಗಿದ್ದ ಅವರು ಅತಿ ಕಿರಿಯ ವಯಸ್ಸಿನಲ್ಲೇ (38 ವರ್ಷ) ಅಧಿಕಾರ ಪಡೆದಿದ್ದರು. ಕೋವಿಡ್‌ ಸಂಕಷ್ಟವನ್ನು ಪರಿಣಾಮಕಾರಿಯಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದರು. ಇವರ ಕಾರ್ಯವೈಖರಿಗೆ ಒಲಿದ ನ್ಯೂಜಿಲ್ಯಾಂಡ್‌ ಜನತೆ ಇವರ ಲೇಬರ್‌ ಪಾರ್ಟಿಯನ್ನು 2020ರಲ್ಲಿ ಭರ್ಜರಿ ಬಹುಮತದಿಂದ ಗೆಲ್ಲಿಸಿ ಮರಳಿ ಅಧಿಕಾರ ನೀಡಿತ್ತು. 2022ರ ಜನವರಿಯಲ್ಲಿ, ಕೊರೊನಾ ಹೊಸ ಅಲೆ ತಡೆಗಟ್ಟಲು ನಿರ್ಬಂಧಗಳನ್ನು ವಿಧಿಸಿದ ಕಾರಣದಿಂದ ಜಸಿಂಡಾ ತಮ್ಮ ಮದುವೆಯನ್ನೇ ಅನಿರ್ದಿಷ್ಟಾವಧಿ ಮುಂದೂಡಿದ್ದರು. ಆ ಬಳಿಕ ಪ್ರಧಾನಿಯಾಗಿದ್ದಾಗಲೇ ಮಗುವಿಗೆ ಜನ್ಮ ನೀಡಿದ ಅವರು, ಹಸುಗೂಸನ್ನು ಸಂಸತ್ತಿಗೂ ವಿಶ್ವಸಂಸ್ಥೆಯ ಸಭೆಗೂ ಎತ್ತಿಕೊಂಡು ಬಂದದ್ದುಂಟು. ಸರಳತೆಯಿಂದ ಬದುಕಿರುವ ಅವರು ಅಷ್ಟೇ ಸುಲಭವಾಗಿ ಅಧಿಕಾರವನ್ನೂ ತ್ಯಾಗ ಮಾಡಿದ್ದಾರೆ.

ಇವರ ನಡೆ ನಮ್ಮವರಿಗೂ ಮಾದರಿಯಾಗಲಿ ಎಂದು ಕಾಂಗ್ರೆಸ್‌ ಮುಖಂಡ ಜೈರಾಮ್‌ ರಮೇಶ್‌ ಹೇಳಿದ್ದಾರೆ. ಈ ಮಾತಿನ ಹಿನ್ನೆಲೆಯಲ್ಲಿ ಬೇರ್ಯಾರಿಗೋ ಅವರು ಸಂದೇಶ ನೀಡಿರಬಹುದು, ಆದರೆ ಆ ಮಾತಿನ ಆಶಯ ಸರಿಯಾಗಿದೆ. ನಮ್ಮಲ್ಲಿ 1999ರಲ್ಲಿ ನಡೆದ ಒಂದು ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಒಂದೇ ಒಂದು ಮತದಿಂದ ಅಟಲ್‌ ಬಿಹಾರಿ ವಾಜಪೇಯಿ ಅವರು ಲೋಕಸಭೆಯಲ್ಲಿ ವಿಶ್ವಾಸಮತ ಸೋತಿದ್ದರು. ಮನಸ್ಸು ಮಾಡಿದ್ದರೆ ಅವರು ಒಬ್ಬ ಸಂಸದನನ್ನು ಖರೀದಿಸುವುದು ಕಷ್ಟವಾಗಿರಲಿಲ್ಲ. ಆದರೆ ಅವರು ಅಂಥ ವಾಮ ಮಾರ್ಗಕ್ಕಿಂತ ಅಧಿಕಾರ ತ್ಯಾಗವನ್ನೇ ಆರಿಸಿಕೊಂಡಿದ್ದರು. ಗೋವಾದ ಮುಖ್ಯಮಂತ್ರಿಯಾಗಿದ್ದ ಮನೋಹರ ಪರಿಕ್ಕರ್‌ ಅವರನ್ನು ಕೇಂದ್ರದ ರಕ್ಷಣಾ ಮಂತ್ರಿಯಾಗಲು ಕರೆದಾಗ, ಮರುಮಾತಿಲ್ಲದೇ ಕರ್ತವ್ಯದ ಕರೆಗೆ ಓಗೊಟ್ಟು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಾಗೇ ಗೋವಾಗೆ ಬರಬೇಕಾದಾಗ ರಕ್ಷಣಾ ಸಚಿವ ಹುದ್ದೆಗೂ ರಾಜೀನಾಮೆ ನೀಡಿದ್ದರು. ಸೈಕಲ್‌ನಲ್ಲೇ ಅವರು ಓಡಾಡುತ್ತಿದ್ದುದನ್ನೂ ಕಾಣಬಹುದಾಗಿತ್ತು. ಹೀಗೆಯೇ ಇದ್ದ ಇನ್ನೊಬ್ಬ ಮುಖ್ಯಮಂತ್ರಿ ಎಂದರೆ ತ್ರಿಪುರಾದ ಮಾಣಿಕ್‌ ಸರ್ಕಾರ್.‌ ಐದು ಅವಧಿಗೆ ಮುಖ್ಯಮಂತ್ರಿಯಾಗಿದ್ದರೂ ಅವರಿಗೆ ಸ್ವಂತ ಮನೆಯಾಗಲೀ, ಕಾರಾಗಲೀ ಇರಲಿಲ್ಲ. ಪ್ರಧಾನಿಯಾಗಿದ್ದ ಲಾಲ್‌ಬಹದ್ದೂರ್‌ ಶಾಸ್ತ್ರಿ, ರಾಷ್ಟ್ರಪತಿಯಾಗಿದ್ದ ಅಬ್ದುಲ್‌ ಕಲಾಂ ಅವರಲ್ಲೂ ಇಂಥ ಸರಳತೆ, ಯಾವಾಗ ಬೇಕಿದ್ದರೂ ಅಧಿಕಾರವನ್ನು ಕಾಲ ಕಸದಂತೆ ಒದ್ದು ಹೋಗುವ ಧೀಮಂತಿಕೆ ಇದ್ದುದನ್ನು ನಾವು ಕಂಡಿದ್ದೇವೆ. ಇಂಥವರಿಗೆ ಅಧಿಕಾರವೆಂಬುದು ಸೇವೆಯ ಸ್ಥಾನವಾಗಿರುತ್ತದೆಯೇ ಹೊರತು ಇನ್ನೇನೂ ಆಗಿರುವುದಿಲ್ಲ.

ಆದರೆ ನಮ್ಮ ಹೆಚ್ಚಿನ ರಾಜಕಾರಣಿಗಳು ಹೇಗಿದ್ದಾರೆ? ತಾವೇ ಶಾಶ್ವತವಾಗಿ ಅಧಿಕಾರದಲ್ಲಿರಬೇಕೆಂದು ಅಪೇಕ್ಷಿಸುತ್ತಾರೆ. ಸರಿಯಾಗಿ ನಡೆಯವಷ್ಟು ಚೈತನ್ಯ ಮೈಯಲ್ಲಿ ಇಲ್ಲದಿದ್ದರೂ ರಾಷ್ಟ್ರವನ್ನು ನಿಯಂತ್ರಿಸಲು ಮುಂದಾಗುತ್ತಾರೆ. ತಮಗೆ ಸಾಲದು ಎಂದು ಪತಿ/ಪತ್ನಿಗೆ, ಕುಟುಂಬಸ್ಥರಿಗೆ ಅಧಿಕಾರದ ಸ್ಥಾನಗಳನ್ನು ಕಲ್ಪಿಸಿಕೊಡುವವರು, ತಾವು ಅಳಿದ ಮೇಲೂ ಅಧಿಕಾರ ತಮ್ಮ ಕುಟುಂಬದಲ್ಲೇ ಉಳಿಯಲಿ ಎಂದು ಮಕ್ಕಳು ಮೊಮ್ಮಕ್ಕಳಿಗೂ ಅಧಿಕಾರದ ಸಾಮ್ರಾಜ್ಯಗಳನ್ನು ಕಟ್ಟಿಕೊಟ್ಟು ಹೋಗುವವರು ನಮ್ಮ ನಡುವೆಯೇ ಇದ್ದಾರೆ. ಚುನಾವಣೆ ಹತ್ತಿರ ಬಂದಂತೆ ಇಂಥವರ ನಾನಾ ಪ್ರಹಸನಗಳು ಕಣ್ಣಿಗೆ ರಾಚಲಾರಂಭಿಸಿವೆ. ಪಕ್ಷದಲ್ಲಿ ಯುವ ನಾಯಕರಿಗೆ ಹೆಚ್ಚಿನ ಅವಕಾಶ ನೀಡಬೇಕು, ಇದಕ್ಕಾಗಿ ಹಿರಿಯ ನಾಯಕರು ತಮ್ಮ ಸ್ಥಾನ ಬಿಟ್ಟುಕೊಡಬೇಕು ಎಂದು ಬಿಜೆಪಿಯಲ್ಲಿ ಆಗಿರುವ ನಿರ್ಣಯಕ್ಕೆ ಅರೆಮನಸ್ಸಿನಿಂದಷ್ಟೇ ನಾಯಕರು ಒಪ್ಪಿದ್ದಾರೆ. ಇನ್ನುಳಿದ ರಾಷ್ಟ್ರೀಯ ಪಕ್ಷಗಳಲ್ಲಿ ಕುಟುಂಬ ಅಧಿಕಾರದ್ದೇ ಪಾರುಪತ್ಯ. ಇದನ್ನೆಲ್ಲ ಮುಂದಿಟ್ಟುಕೊಂಡು ನ್ಯೂಜಿಲ್ಯಾಂಡ್‌ ಪ್ರಧಾನಿಯ ವರ್ತನೆಯನ್ನು ನೋಡಿದರೆ ವಿರುದ್ಧ ಧ್ರುವ ಅನ್ನಿಸದೇ ಇರದು.

ಅಧಿಕಾರದ ಹಪಾಹಪಿ, ಸದಾ ತಾನು ಅಧಿಕಾರದಲ್ಲಿಯೇ ಇರಬೇಕು ಎಂಬ ಗುಣ ಮುಂದಿನ ತಲೆಮಾರಿನ ದೃಷ್ಟಿಯಿಂದ ಕೆಟ್ಟದು. ಸಕಾಲದಲ್ಲಿ ಬಿಟ್ಟುಕೊಡುವುದು ಯುವ ನಾಯಕರ ಹೊಸ ನೋಟಗಳಿಗೆ, ಹುಮ್ಮಸ್ಸಿನ ಆಡಳಿತಕ್ಕೆ ಎಡೆ ಮಾಡಿಕೊಡುತ್ತದೆ. ಕಾಲ ಆಧುನಿಕವಾದಂತೆ ಆಡಳಿತವೂ ಆಧುನಿಕವಾಗಬೇಕು. ಖಾಸಗಿ ವಲಯದಲ್ಲಿ ಉತ್ತಮ ಸಾಧನೆ ಮಾಡುವ ಸಂಸ್ಥೆಗಳು ಸದಾ ಹೊಸ ನಾಯಕತ್ವವನ್ನು ಹೊಂದಿರುತ್ತವೆ. ಇದು ದೇಶದ ರಾಜಕಾರಣದಲ್ಲೂ ಆಗಬೇಕಾದರೆ ಹಿರಿಯರು ಕುರ್ಚಿಗೆ ಅಂಟಿಕೊಂಡು ಕೂಡುವುದನ್ನು ಬಿಡಬೇಕು.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ I ರಾಜಕೀಯ ಮುಖಂಡರಿಗೆ ನಾಲಿಗೆಯ ಮೇಲೆ ಹಿಡಿತ ಇರಲಿ

Exit mobile version