Site icon Vistara News

China Drought | ಬತ್ತಿದ ನದಿಗಳು, ಜನರಿಗೆ ಉರುಳು; ಬರಗಾಲದಲ್ಲಿ ಅರ್ಧ ಚೀನಾ!

China Drought

ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರ ಚೀನಾ ಈಗ ಅಕ್ಷರಶಃ ಬಿಲಿಸಿನ ಬೇಗೆಯಿಂದ ಬಳಲುತ್ತಿದೆ. ಕೊರೊನಾ-19 ಮತ್ತು ಅದರ ನಿಯಂತ್ರಣಕ್ಕೆ ಲಾಕ್‌ಡೌನ್ ಹೇರಿದ್ದರ ಪರಿಣಾಮ ಆರ್ಥಿಕವಾಗಿ ತೀವ್ರ ಹಿನ್ನಡೆ ಅನುಭವಿಸಿದ್ದ ಚೀನಾಗೆ ಈ ಹೆಚ್ಚುತ್ತಿರುವ ತಾಪಮಾನವು ಗಾಯದ ಮೇಲೆ ಬರೆ ಎಳೆದಂತಾಗಿದೆ. ವಿಶೇಷವಾಗಿ ದಕ್ಷಿಣ ಚೀನಾ ಸಂಪೂರ್ಣವಾಗಿ ಈ ಕ್ಷಾಮಕ್ಕೆ ತುತ್ತಾಗಿದೆ. ನದಿಗಳು ಬತ್ತಲಾರಂಭಿಸಿವೆ. ಬಹಳಷ್ಟು ನಗರಗಳು ಗರಿಷ್ಠ ತಾಪಮಾನವನ್ನು ದಾಖಲಿಸಿವೆ. ಪರಿಸ್ಥಿತಿಯು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳು ಇನ್ನಷ್ಟು ಬರ್ಬರವಾಗಿರಲಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಚೀನಾ ಕ್ಷಾಮ (China Drought)ವನ್ನು ಎದುರಿಸುತ್ತಿದೆ.

ಟಿಬೆಟಿಯನ್ ಪ್ರಸ್ಥಭೂಮಿ ಸೇರಿದಂತೆ ದಕ್ಷಿಣ ಚೀನಾದಲ್ಲಿ ಅಸಾಮಾನ್ಯ ಮತ್ತು ಅತ್ಯಂತ ಕೆಟ್ಟ ಕ್ಷಾಮದ ದಿನಗಳನ್ನು ಎದುರಿಸುವ ಸಾಧ್ಯತೆ ಇದೆ ಎಂದು ಈಗಾಗಲೇ ತಜ್ಞರು ಎಚ್ಚರಿಸಿದ್ದಾರೆ. ನೈಋತ್ಯ ಚೀನಾದಲ್ಲಿ ಶಾಂಘೈ ಕರಾವಳಿಯಿಂದ ಸಿಚುವಾನ ಪ್ರಾಂತ್ಯದವರೆಗೂ ತೀವ್ರ ಕ್ಷಾಮ ಪರಿಸ್ಥಿತಿಯನ್ನು ಕಾಣಬಹುದಾಗಿದೆ. ಏತನ್ಮಧ್ಯೆ, ಚೀನಾದ ಕೆಲವು ಭಾಗಗಳಲ್ಲಿ ಪರಿಸ್ಥಿತಿಯು ತುಸು ಸುಧಾರಿಸುತ್ತಿದೆ.

ಬತ್ತಿದ ಯಾಂಗ್‌ಟ್ಜಿ ನದಿ
ದಕ್ಷಿಣ ಚೀನಾದ ಜೀವನದಿಯಾಗಿರುವ ಮತ್ತು ಜಗತ್ತಿನ ಮೂರನೇ ಅತಿದೊಡ್ಡ ನದಿ ಎನಿಸಿಕೊಂಡಿರುವ ಯಾಂಗ್‌ಟ್ಜಿ ಬತ್ತಲಾರಂಭಿಸಿದೆ. ಇದರಿಂದ ಆಂತರಿಕ ಜಲ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತವಾಗಿದೆ. ಜತೆಗೆ, ಬಹಳಷ್ಟು ಪ್ರಮುಖ ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನು ನಿಲ್ಲಿಸಿವೆ. ನದಿ ಕನಿಷ್ಠ ಮಟ್ಟಕ್ಕೆ ಕುಸಿದಿದ್ದರಿಂದ ಈ ಹಿಂದೆ ನೀರಿನಲ್ಲಿ ಮುಳುಗಿದ್ದ ಮೂರು ಬುದ್ಧನ ಪ್ರತಿಮೆಗಳು ತೆರೆದುಕೊಂಡಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಚಾಂಗ್‌ಕಿಂಗ್ ಎಂಬಲ್ಲಿ ಸುಮಾರು 600 ವರ್ಷಗಳಷ್ಟು ಹಳೆಯಾದ ಬುದ್ಧನ ಪ್ರತಿಮೆ ಈಗ ಗೋಚರವಾಗುತ್ತಿದೆ. ಈ ಯಾಂಗ್‌ಟ್ಜಿ ನದಿಯು ಸುಮಾರು 40 ಕೋಟಿ ಜನರಿಗೆ ಕುಡಿಯುವ ನೀರಿನ ಮೂಲವಾಗಿದೆ. ನದಿಯ ತಟವು ಸಾಕಷ್ಟು ಕಾರ್ಖಾನೆಗಳಿಗೆ ಆಶ್ರಯ ಕಲ್ಪಿಸಿದೆ. ಹಾಗಾಗಿ, ಪಟ್ಟಣಗಳು, ನಗರಗಳು ತಲೆ ಎತ್ತಿವೆ. ಈಗ, ನದಿಯ ತಟದ ಜನಜೀವನವೇ ಅಸ್ತವ್ಯಸ್ತಗೊಂಡಿದೆ.

ಮೋಡ ಬಿತ್ತನೆಗೆ ಚಿಂತನೆ
ತೀವ್ರ ಕ್ಷಾಮಕ್ಕೆ ತುತ್ತಾಗಿರುವ ಚೀನಾದಲ್ಲಿ ಮೋಡ ಬಿತ್ತನೆ ಮೂಲಕ ಮಳೆ ತರಿಸುವ ಬಗ್ಗೆ ಅಲ್ಲಿನ ಸರ್ಕಾರ ಯೋಚನೆ ಮಾಡುತ್ತಿದೆ. ಹೆಚ್ಚುತ್ತಿರುವ ತಾಪಮಾನವು ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ಹಿನ್ನಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಮೂಲಕ ಮಳೆ ತರಿಸುವ ಬಗ್ಗೆ ಯೋಚನೆ ಮಾಡಲಾಗುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಕೆಲವು ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಮತ್ತೊಂದೆಡೆ ಹೆಚ್ಚುತ್ತಿರುವ ತಾಪಮಾನದಿಂದ ತತ್ತರಿಸಿರುವ ಜನರಿಂದ ಏರ್‌ಕಂಡಿಷನರ್‌ಗಳಿಗೆ ತೀವ್ರ ಬೇಡಿಕೆ ಸೃಷ್ಟಿಯಾಗಿದೆ.

ರೈತರಿಗೆ ಸಂಕಷ್ಟ
ಚೀನಾದಲ್ಲಿ ಭತ್ತ ಬೆಳೆಯುವ ರೈತರು ತೀವ್ರ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಭತ್ತದ ಇಳುವರಿಯಲ್ಲಿ ಕುಂಠಿತವಾಗುವ ಸಾಧ್ಯತೆಗಳು ಹೆಚ್ಚಿದ್ದು, ಅಕ್ಕಿಯನ್ನು ಆಮದು ಮಾಡಿಕೊಳ್ಳುವ ಅನಿವಾರ್ಯತೆಯನ್ನು ಚೀನಾ ಕಾಣಲಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಸರ್ಕಾರವು 1.45 ಬಿಲಿಯನ್ ಅಮೆರಿಕನ್ ಡಾಲರ್ ನೆರವು ಘೋಷಿಸಿದೆ. ಚೀನಾ ಬಳಸುವ ಒಟ್ಟು ಅಕ್ಕಿಯಲ್ಲಿ ಶೇ.95 ರಷ್ಟು ಅಕ್ಕಿಯನ್ನು ಚೀನಾವೇ ಉತ್ಪಾದಿಸುತ್ತದೆ. ಅಕ್ಕಿ ಜತೆಗೆ ಗೋಧಿ ಮತ್ತು ಗೋವಿನಜೋಳವನ್ನು ಇಲ್ಲಿನ ಜನ ಹೆಚ್ಚಾಗಿ ಬಳಸುತ್ತಾರೆ. ಜಗತ್ತಿನ ಅತಿದೊಡ್ಡ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರ ಚೀನಾವೇನಾದರೂ ಅಕ್ಕಿಯನ್ನು ಆಮದು ಮಾಡಿಕೊಳ್ಳಲು ಮುಂದಾದರೆ, ಜಾಗತಿಕ ಮಾರುಕಟ್ಟೆಯಲ್ಲಿ ಸಾಕಷ್ಟು ಒತ್ತಡ ಸೃಷ್ಟಿಯಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಚೀನಾದಲ್ಲೇಕೆ ಕ್ಷಾಮ?
ಇತ್ತೀಚಿನ ಕೆಲವು ದಿನಗಳಿಂದ ಇಂಗ್ಲೆಂಡ್, ಫ್ರಾನ್ಸ್, ಇಟಲಿ, ಜರ್ಮನಿ ಸೇರಿದಂತೆ ಇಡೀ ಯುರೋಪ್ ಭಾರೀ ಪ್ರಮಾಣದಲ್ಲಿ ತಾಪಮಾನ ಏರಿಕೆಗೆ ಸಾಕ್ಷಿಯಾಗಿದ್ದವು. ಬಹುತೇಕ ನದಿಗಳು ಬತ್ತುತ್ತಿದ್ದ ಸುದ್ದಿಗಳು ಬಂದಿದ್ದವು. ಇದೀಗ ಅಂಥದ್ದೇ ಸ್ಥಿತಿ ಚೀನಾದಲ್ಲೂ ಎದುರಾಗಿದೆ. ಅರ್ಧ ಚೀನಾ ಕ್ಷಾಮದಿಂದ ತತ್ತರಿಸಿದೆ, ಬಹುತೇಕ ನಗರಗಳಲ್ಲಿ ಭಾರೀ ತಾಪಮಾನ ಹೆಚ್ಚಿದೆ. ಕಳೆದ ಕೆಲವು ವಾರಗಳಿಂದ ಚೀನಾದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಹೆಚ್ಚುತ್ತಿರುವ ತಾಪಮಾನ ಕೆಟ್ಟ ಪರಿಣಾಮವನ್ನು ಚೀನಾ ಅನುಭವಿಸುತ್ತಿದೆ.

ಚೀನಾದಲ್ಲಿನ ಕ್ಷಾಮಕ್ಕೆ ಹೆಚ್ಚುತ್ತಿರುವ ತಾಪಮಾನವೇ ಕಾರಣವಾಗಿದೆ. ಕೈಗಾರಿಕಾ ಕ್ರಾಂತಿ ಪೂರ್ವದ ಅವಧಿಗೆ ಹೋಲಿಸಿದರೆ ಇಡೀ ಜಗತ್ತು 1.1-1.3 ಡಿಗ್ರಿ ಸೆಲ್ಷಿಯಸ್‌ನಷ್ಟು ತಾಪಮಾನ ಏರಿಕೆಯನ್ನು ಕಾಣುತ್ತಿದೆ. ಈಗಲೇ ಸುಧಾರಣಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಇಡೀ ಜಗತ್ತು ಇನ್ನೂ ಕೆಟ್ಟ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಆದರೆ, ಈಗಲೂ ಬಗೆಹರಿಯದ ಪ್ರಶ್ನೆ ಏನೆಂದರೆ, ಜಗತ್ತಿನ ವಿವಿಧ ಭಾಗಗಳಲ್ಲಿ ಏಕ ಕಾಲಕ್ಕೆ ಹೀಟ್‌ವೇಯ್ಸ್ ಹೆಚ್ಚಾಗಲು ಕಾರಣ ಏನು? ಬದಲಾಗುತ್ತಿರುವ ಹವಾಮಾನವು ಜೆಟ್ ಸ್ಟ್ರೀಮ್‌ಗಳ ಚಲನೆಯ ದಿಕ್ಕನ್ನು ಬದಲಿಸುತ್ತಿರಬಹದು. ಇಲ್ಲವೇ, ಹವಾಮಾನದ ಮಾದರಿಗಳನ್ನು ನಿಯಂತ್ರಿಸುವ ಮೇಲಿನ ವಾತಾವರಣದಲ್ಲಿನ ಗಾಳಿಯ ಪ್ರವಾಹಗಳು ಏಕಕಾಲದಲ್ಲಿ ಅನೇಕ ಸ್ಥಳಗಳಲ್ಲಿ ತೀವ್ರವಾದ ಶಾಖವನ್ನು ಉಂಟುಮಾಡಬಹುದು ಎಂದು ಅಧ್ಯಯನಗಳು ಸೂಚಿಸುತ್ತವೆ. ಈ ಕಾರಣದಿಂದಾಗಿಯೇ ಚೀನಾದಲ್ಲೂ ಈಗ ತಾಪಮಾನ ಹೆಚ್ಚಲು ಕಾರಣವಾಗಿದೆ. ಕಳೆದ 60 ವರ್ಷಗಳಲ್ಲೇ ಇದೇ ಮೊದಲಿಗೆ ಚೀನಾ ಅತಿ ಕೆಟ್ಟ ಕ್ಷಾಮಕ್ಕೆ ತುತ್ತಾಗಿದೆ. ಬಹುತೇಕ ನದಿಗಳು ಬತ್ತುತ್ತಿವೆ.

ಇದನ್ನೂ ಓದಿ| ವಿಸ್ತಾರ Explainer | ಚೀನಾದ ಬೇಹುಗಾರಿಕೆ ನೌಕೆ ಲಂಕೆಗೆ ಬರುತ್ತಿರುವುದೇಕೆ?

Exit mobile version