Site icon Vistara News

Moscow Attack: ರಷ್ಯಾದಲ್ಲಿ ಉಗ್ರರ ದಾಳಿ; ಸಾವಿನ ಸಂಖ್ಯೆ 150, ಏನೆಲ್ಲ ಬೆಳವಣಿಗೆ?

Moscow Terror Attack

Death Toll Rises To 150 In Russia Concert Hall Attack, 11 Gunmen Arrested

ಮಾಸ್ಕೊ: ರಷ್ಯಾ ರಾಜಧಾನಿ ಮಾಸ್ಕೋದಲ್ಲಿರುವ ಕ್ರೋಕಸ್ ಸಿಟಿ ಕನ್ಸರ್ಟ್ ಹಾಲ್‌ನಲ್ಲಿ ನಡೆದ ಭೀಕರ ಉಗ್ರರ ದಾಳಿಯಲ್ಲಿ (Moscow Attack) ಮೃತಪಟ್ಟವರ ಸಂಖ್ಯೆ 150ಕ್ಕೆ ಏರಿಕೆಯಾಗಿದೆ. ಇನ್ನೂ ನೂರಾರು ಜನ ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರಲ್ಲಿಯೇ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಇನ್ನೂ ಜಾಸ್ತಿಯಾಗುವ ಸಾಧ್ಯತೆ ಇದೆ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ.

11 ಉಗ್ರರ ಬಂಧನ

ಮಾಸ್ಕೋದಲ್ಲಿ ದಾಳಿ ನಡೆಸಿದ ನಾಲ್ವರು ಉಗ್ರರು ಸೇರಿ ಇದುವರೆಗೆ ಒಟ್ಟು 11 ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಉಕ್ರೇನ್‌ನಿಂದ ರಷ್ಯಾಗೆ ನುಸುಳಿದ ಉಗ್ರರು ದಾಳಿ ನಡೆಸಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದು, ಇನ್ನೂ ಹಲವು ದುಷ್ಕರ್ಮಿಗಳ ಪತ್ತೆ ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಉಗ್ರರ ದಾಳಿಯ ಬಳಿಕ ಮಾಸ್ಕೋದಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ರಾಷ್ಟ್ರೀಯ ಶೋಕ ದಿನ ಎಂದು ಘೋಷಣೆ

ಮಾಸ್ಕೋದಲ್ಲಿ ನಡೆದ ದಾಳಿ ಕುರಿತು ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಮೊದಲ ಪ್ರತಿಕ್ರಿಯೆ ನೀಡಿದ್ದು, ದಾಳಿಯನ್ನು ಖಂಡಿಸಿದ್ದಾರೆ. “ಮಾಸ್ಕೋ ಮೇಲೆ ನಡೆದ ದಾಳಿಯು ಖಂಡನೀಯವಾಗಿದೆ. ತಪ್ಪಿತಸ್ಥರಿಗೆ ತಕ್ಕ ಶಾಸ್ತಿ ಮಾಡದೆ ಬಿಡುವುದಿಲ್ಲ. ಇನ್ನು ಮುಂದೆ ದಾಳಿ ನಡೆದ ಮಾರ್ಚ್‌ 24ರಂದು ರಾಷ್ಟ್ರೀಯ ಶೋಕ ದಿನವನ್ನಾಗಿ ಆಚರಿಸಲಾಗುವುದು” ಎಂದು ಪುಟಿನ್‌ ಘೋಷಿಸಿದ್ದಾರೆ.

ಹೀಗಿದೆ ದಾಳಿಯ ಭೀಕರತೆ

ನಾಲ್ವರು ಭಯೋತ್ಪಾದಕರ ಗುಂಪು ಮಾಸ್ಕೋದ ಕ್ರೋಕಸ್ ಸಿಟಿ ಕನ್ಸರ್ಟ್ ಹಾಲ್‌ಗೆ ನುಗ್ಗಿತು ಮತ್ತು ಅಲ್ಲಿ ನೆರೆದಿದ್ದ ಸಭಿಕರ ಮೇಲೆ ಗುಂಡಿನ ದಾಳಿ ಎಸಗಿತು. ಇದರಿಂದ ಜನ ಗಾಬರಿಯಾಗಿ ದಿಕ್ಕಾಪಾಲಾಗಿ ಓಡಲು ಶುರುಮಾಡಿದಾಗ ಕಾಲ್ತುಳಿತ ಕೂಡ ಉಂಟಾಯಿತು, ಇದೇ ಸಂದರ್ಭದಲ್ಲಿ ಉಗ್ರರು ಗ್ರೆನೇಡ್‌ಗಳನ್ನು ಸ್ಫೋಟಿಸಿದರು. ದಾಳಿಕೋರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದ್ದಾರೆ. ಗ್ರೆನೇಡ್‌ಗಳನ್ನು ಎಸೆದಿದ್ದಾರೆ. ಹೀಗಾಗಿ ಬೆಂಕಿ ಹೊತ್ತಿಕೊಂಡು ಉರಿಯತೊಡಗಿದೆ. ನಂತರ ದಾಳಿಕೋರರು ಬಿಳಿ ಬಣ್ಣದ ರೆನಾಲ್ಟ್ ಕಾರಿನಲ್ಲಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ವಿಸ್ತಾರ Explainer: Moscow Attack: ಯಾವುದಿದು ಐಸಿಸ್‌-ಕೆ? ಮಾಸ್ಕೋ ಮೇಲೆ ಈ ಉಗ್ರರು ದಾಳಿ ನಡೆಸಿದ್ದೇಕೆ?

ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೊತ್ತುಕೊಂಡಿದೆ. ಶುಕ್ರವಾರ ಟೆಲಿಗ್ರಾಮ್‌ನಲ್ಲಿ ಐಸಿಸ್-ಸಂಯೋಜಿತ ಸುದ್ದಿ ಸಂಸ್ಥೆ ಅಮಾಕ್ ಪ್ರಕಟಿಸಿದ ಕಿರು ಹೇಳಿಕೆಯಲ್ಲಿ, ಭಯೋತ್ಪಾದಕ ಗುಂಪು ರಷ್ಯಾದ ರಾಜಧಾನಿಯಲ್ಲಿ ಕ್ರಿಶ್ಚಿಯನ್ನರ ದೊಡ್ಡ ಸಭೆಯ ಮೇಲೆ ದಾಳಿ ಮಾಡಿದೆ ಎಂದು ಹೇಳಿಕೊಂಡಿದೆ. ಮಾರಕ ದಾಳಿಗೆ ಇಸ್ಲಾಮಿಕ್ ಸ್ಟೇಟ್ ಹೊಣೆಗಾರಿಕೆಯನ್ನು ದೃಢೀಕರಿಸುವ ಗುಪ್ತಚರ ಮಾಹಿತಿಯನ್ನು ಅಮೆರಿಕದ ದೃಢಪಡಿಸಿದೆ.

ಭಾರತ, ಐರೋಪ್ಯ ಒಕ್ಕೂಟ, ಫ್ರಾನ್ಸ್, ಸ್ಪೇನ್ ಮತ್ತು ಇಟಲಿ ಮತ್ತಿತರ ಹಲವಾರು ದೇಶಗಳು ದಾಳಿಯನ್ನು ಖಂಡಿಸಿವೆ. ಅಮೆರಿಕದ ಈ ದಾಳಿಯನ್ನು “ಭಯಾನಕ” ಎಂದು ಕರೆದಿದೆ. ಉಕ್ರೇನ್‌ ಮೇಲಿನ ರಷ್ಯಾ ದಾಳಿಗೂ ಇದಕ್ಕೂ ಯಾವುದೇ ಸಂಬಂಧ ಕಂಡುಬರುತ್ತಿಲ್ಲ ಎಂದು ಹೇಳಿದೆ. ಉಕ್ರೇನ್‌ನ ಪ್ರೆಸಿಡೆನ್ಸಿ ಕೂಡ, “ತಮಗೆ ಈ ದಾಳಿಯೊಂದಿಗೆ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದೆ. ದಾಳಿಯ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸರ್ವ ಮಾಹಿತಿ ಪಡೆದಿದ್ದಾರೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪುಟಿನ್ ಹಾರೈಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version