Site icon Vistara News

Deepfake Scam: ಡೀಪ್‌ಫೇಕ್‌ ಬಳಸಿ ಕಂಪನಿಗೆ 200 ಕೋಟಿ ರೂ. ವಂಚಿಸಿದ ದುಷ್ಟರು! ಹೇಗೆ?

Deepfake Scam

Deepfake scam: Company loses around Rs 207 crore after employee connected to a video call

ನವದೆಹಲಿ: ಡೀಪ್‌ಫೇಕ್‌ ತಂತ್ರಜ್ಞಾನದ (Deepfake Technology) ದುರ್ಬಳಕೆ ಎಂದರೆ ಇದುವರೆಗೆ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್‌, ಸಚಿನ್‌ ತೆಂಡೂಲ್ಕರ್‌ ಅವರಂತಹ ಸೆಲೆಬ್ರಿಟಿಗಳು, ನಟಿಯರ ತಿರುಚಿದ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ಎಂದಾಗಿತ್ತು. ಆದರೆ, ಡೀಪ್‌ಫೇಕ್‌ ತಂತ್ರಜ್ಞಾನವನ್ನೀಗ ನೂರಾರು ಕೋಟಿ ರೂ. ವಂಚಿಸುವ (Deepfake Scam) ಮಟ್ಟಿಗೆ ದುಷ್ಕರ್ಮಿಗಳು ಬಳಸಿಕೊಳ್ಳುತ್ತಿದ್ದಾರೆ. ಹಾಂಕಾಂಗ್‌ನಲ್ಲಿ (Hong Kong) ಬಹುರಾಷ್ಟ್ರೀಯ ಕಂಪನಿಯೊಂದಕ್ಕೆ ಡೀಪ್‌ಫೇಕ್‌ ಮೂಲಕವೇ ಸುಮಾರು 207 ಕೋಟಿ ರೂ. (25 ದಶಲಕ್ಷ ಡಾಲರ್)‌ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಹಾಗೆಯೇ, ಇದು ಜಗತ್ತಿನ ಅತಿದೊಡ್ಡ ಡೀಪ್‌ಫೇಕ್‌ ವಂಚನೆ (Deepfake Fraud) ಎಂದು ಹೇಳಲಾಗುತ್ತಿದೆ.

ಹೌದು, ಹಾಂಕಾಂಗ್‌ ಮೂಲದ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿಯೊಬ್ಬರಿಗೆ ಡೀಪ್‌ಫೇಕ್‌ ಮೂಲಕ ವಂಚಿಸಿದ ದುಷ್ಕರ್ಮಿಗಳು, ಸುಮಾರು 207 ಕೋಟಿ ರೂಪಾಯಿಯನ್ನು ವಂಚಿಸಿದ್ದಾರೆ. ನೂರಾರು ಕೋಟಿ ರೂ. ವಂಚನೆ ಪ್ರಕರಣ ವಿಶ್ವಾದ್ಯಂತ ಸುದ್ದಿಯಾದರೂ ಇದುವರೆಗೆ ಡೀಪ್‌ಫೇಕ್‌ ತಂತ್ರಜ್ಞಾನದ ಮೂಲಕ ವಂಚಿಸಿದ ದುರುಳರ ಕುರಿತು ಪೊಲೀಸರಿಗೆ ಸ್ವಲ್ಪವೂ ಮಾಹಿತಿ ಲಭ್ಯವಾಗಿಲ್ಲ. ಇದುವರೆಗೆ ಒಬ್ಬನನ್ನೂ ಬಂಧಿಸಲು ಸಾಧ್ಯವಾಗಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ. ಕಳೆದ ಜನವರಿಯಲ್ಲಿಯೇ ಹಗರಣ ಬೆಳಕಿಗೆ ಬಂದರೂ ಇದುವರೆಗೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ.

ವಂಚನೆ ಮಾಡಿದ್ದು ಹೇಗೆ?

ಹಾಂಕಾಂಗ್‌ ಮೂಲದ ಕಂಪನಿಯ ಹಣಕಾಸು ವಿಭಾಗದ ಉದ್ಯೋಗಿಯೊಬ್ಬರ ಮೊಬೈಲ್‌ಗೆ ಮೆಸೇಜ್‌ ರವಾನೆಯಾಗಿದೆ. ಆ ಮೆಸೇಜ್‌ನಲ್ಲಿ ಉದ್ಯೋಗಿಗೆ ಬ್ರಿಟನ್‌ ಮೂಲದ, ತಾನು ಕೆಲಸ ಮಾಡುವ ಕಂಪನಿಯದ್ದೇ ಮುಖ್ಯ ಹಣಕಾಸು ಅಧಿಕಾರಿ (CFO) ಎಂಬುದಾಗಿ ನಂಬಿಸಲಾಗಿದೆ. ಹಾಂಕಾಂಗ್‌ ಕಂಪನಿಯ ಉದ್ಯೋಗಿಯು ಇದನ್ನು ನಂಬಿದ ಉದ್ಯೋಗಿಯು ಮೆಸೇಜ್‌ನಲ್ಲಿ ಬಂದ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದ್ದಾನೆ. ಆಗ ಕಂಪನಿಯ ಸಿಎಫ್‌ಒ ಎಂದು ಹೇಳಲಾದ ವ್ಯಕ್ತಿ ಜತೆ ವಿಡಿಯೊ ಕಾಲ್‌ ಡಯಲ್‌ ಆಗಿದೆ. ಆಗ ಕಂಪನಿಯ ಉದ್ಯೋಗಿ ಮತ್ತು ಬ್ರಿಟನ್‌ ಮೂಲದ ಸಿಎಫ್‌ಒ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: Rashmika Mandanna: ಡೀಪ್‌ಫೇಕ್‌ ವಿಡಿಯೊ ಆರೋಪಿ ಬಂಧನ; ಪ್ರತಿಕ್ರಿಯಿಸಿದ ರಶ್ಮಿಕಾ!

ವಿಡಿಯೊ ಕಾಲ್‌ ವೇಳೆ ಕಾನ್ಫರೆನ್ಸ್‌ ಮೂಲಕ ಹಲವು ಉದ್ಯೋಗಿಗಳ ಜತೆ ಮಾತುಕತೆ ನಡೆಸಿದಂತೆ ಸಿಎಫ್‌ಒ ಎಂದು ಹೇಳಿಕೊಂಡವನು ನಾಟಕ ಮಾಡಿದ್ದಾನೆ. ಅಷ್ಟೇ ಅಲ್ಲ, ಸಿಎಫ್‌ಒ ಆದೇಶದಂತೆ ಹಾಂಕಾಂಗ್‌ನ ಸುಮಾರು 15 ಬ್ಯಾಂಕ್‌ ಖಾತೆಗಳಿಗೆ ಉದ್ಯೋಗಿಯು 207 ಕೋಟಿ ರೂ. ವರ್ಗಾಯಿಸಿದ್ದಾನೆ. ಇಷ್ಟೆಲ್ಲ ನಡೆದ ಬಳಿಕವೇ ವಂಚನೆಯ ಜಾಲ ಬಯಲಾಗಿದೆ. ಡೀಪ್‌ಫೇಕ್‌ ತಂತ್ರಜ್ಞಾನ ಬಳಸಿ ಹಾಂಕಾಂಗ್‌ ಕಂಪನಿಯ ಉದ್ಯೋಗಿ ಜತೆ ವಿಡಿಯೊ ಕಾಲ್‌ನಲ್ಲಿ ನಕಲಿ ವ್ಯಕ್ತಿಗಳು ಮಾತನಾಡಿದ ಹಾಗೆ ಚಿತ್ರಿಸಲಾಗಿದೆ. ಇದನ್ನು ನಂಬಿದ ವ್ಯಕ್ತಿಯು ಸಿಎಫ್‌ಒ ಎಂದು ಭಾವಿಸಿ ನೂರಾರು ಕೋಟಿ ರೂ. ವರ್ಗಾಯಿಸಿದ್ದಾನೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version