Site icon Vistara News

ವಿಸ್ತಾರ Explainer: 17 ಲಕ್ಷ ಆಫ್ಘನ್ನರನ್ನು ಪಾಕಿಸ್ತಾನ ಕ್ರೂರವಾಗಿ ಓಡಿಸುತ್ತಿರುವುದೇಕೆ?

Afghan Refugess

Economic Crisis, Security: Why is Pakistan Deporting 17 Lakh Afghan Refugees?

ಇಸ್ಲಾಮಾಬಾದ್:‌ ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರವು (Israel Palestine War) ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ನ ಲಕ್ಷಾಂತರ ನಾಗರಿಕರನ್ನು ನಿರಾಶ್ರಿತರನ್ನಾಗಿ ಮಾಡಿದೆ. ಇದರ ಬೆನ್ನಲ್ಲೇ, ಪಾಕಿಸ್ತಾನ ಹಾಗೂ ಅಫಘಾನಿಸ್ತಾನದ ಮಧ್ಯೆ ಬಿಕ್ಕಟ್ಟು ಉಂಟಾಗಿದೆ. ಅದರಲ್ಲೂ, ಆರ್ಥಿಕವಾಗಿ ದಿವಾಳಿಯಾಗಿ, ತನ್ನ ದೇಶವನ್ನು ತಾನು ರಕ್ಷಿಸಿಕೊಳ್ಳಲು ಆಗದಿರುವ ಪಾಕಿಸ್ತಾನವು ಏಕಾಏಕಿ 17 ಲಕ್ಷ ಆಫ್ಘನ್‌ ನಿರಾಶ್ರಿತರನ್ನು (Afghanistan Refugees) ಗಡಿಪಾರು ಮಾಡಲು ಮುಂದಾಗಿದೆ. ಇದರಿಂದಾಗಿ ಲಕ್ಷಾಂತರ ಆಫ್ಘನ್‌ ನಿರಾಶ್ರಿತರು ಈಗ ಪಾಕ್‌ ತೊರೆದು, ಆಫ್ಘನ್‌ಗೆ ಮರಳುವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಟ್ರಂಕ್‌ ಹೊತ್ತುಕೊಂಡು, ವಾಹನಗಳಲ್ಲಿ ಬ್ಯಾಗ್‌ಗಳನ್ನು ತುಂಬಿಕೊಂಡು, ಮಹಿಳೆಯರು, ಮಕ್ಕಳು ಸೇರಿ ಎಲ್ಲರೂ ಗುಳೆ ಹೊರಟಿರುವ ದೃಶ್ಯಗಳು ಮನಕಲಕುತ್ತಿವೆ. ಹಾಗಾದರೆ, ಪಾಕಿಸ್ತಾನವು 17 ಲಕ್ಷ ಆಫ್ಘನ್ನರನ್ನು ಗಡಿಪಾರು ಮಾಡುವ ತೀರ್ಮಾನ ತೆಗೆದುಕೊಂಡಿದ್ದು ಏಕೆ? ಇದರಿಂದ ಏನು ಪರಿಣಾಮ ಬೀರಲಿದೆ? ಆಫ್ಘನ್‌ ತಾಲಿಬಾನ್‌ ಸರ್ಕಾರದ ಪ್ರತಿಕ್ರಿಯೆ ಏನು ಎಂಬುದರ ಸಂಕ್ಷಿಪ್ತ (ವಿಸ್ತಾರ Explainer) ಮಾಹಿತಿ ಇಲ್ಲಿದೆ.

ಪಾಕಿಸ್ತಾನದ ಎಚ್ಚರಿಕೆ ಏನು?

ಅಫಘಾನಿಸ್ತಾನದ ಸುಮಾರು 20 ಲಕ್ಷಕ್ಕೂ ಅಧಿಕ ನಿರಾಶ್ರಿತರು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ. 2021ರಲ್ಲಿ ತಾಲಿಬಾನ್‌ ಉಗ್ರರು ಅಫಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಒಂದಷ್ಟು ನಿರಾಶ್ರಿತರು ಅಫಘಾನಿಸ್ತಾನಕ್ಕೆ ಹೋಗಿದ್ದಾರೆ. ಈಗ ಪಾಕಿಸ್ತಾನವು 17 ಲಕ್ಷ ಆಫ್ಘನ್‌ ನಿರಾಶ್ರಿತರು ನವೆಂಬರ್‌ 1ರ ರಾತ್ರಿಯೊಳಗೆ ಪಾಕಿಸ್ತಾನ ತೊರೆಯಬೇಕು. ಇಲ್ಲದಿದ್ದರೆ, ಬಂಧಿಸಿ, ಜೈಲಿಗೆ ಕಳುಹಿಸಲಾಗುವುದು ಎಂದು ಎಚ್ಚರಿಸಿದೆ. ಈ ಗಡುವಿನಿಂದಾಗಿ ಲಕ್ಷಾಂತರ ಆಫ್ಘನ್ನರು ಕಷ್ಟಪಟ್ಟು ಗಡಿ ದಾಟುತ್ತಿದ್ದಾರೆ.

ಎಲ್ಲಿಗೋ ಪಯಣ, ಯಾವುದೋ ದಾರಿ ಎಂಬಂತಾಗಿದೆ ಆಫ್ಘನ್‌ ನಿರಾಶ್ರಿತರ ಸ್ಥಿತಿ

ಗಡಿಪಾರಿಗೆ ಪಾಕ್‌ ಆದೇಶಿಸಲು ಕಾರಣಗಳೇನು?

ಆಫ್ಘನ್‌ ನಿರಾಶ್ರಿತರು ವರ್ಷಗಳಿಂದಲೂ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ. ಈಗ ಏಕಾಏಕಿ ಭದ್ರತೆಯ ಕಾರಣಗಳಿಂದಾಗಿ ಪಾಕಿಸ್ತಾನವು ಆಫ್ಘನ್‌ ನಿರಾಶ್ರಿತರನ್ನು ವಾಪಸ್‌ ಕಳುಹಿಸಲು ಮುಂದಾಗಿದೆ. ಆಫ್ಘನ್ನರು ಅಕ್ರಮವಾಗಿ ನೆಲೆಸಿದ್ದು, ಇವರು ದೇಶದ ಭದ್ರತೆಗೆ ಅಪಾಯ ತಂದೊಡ್ಡಿದ್ದಾರೆ. ಹಾಗಾಗಿ, ಇವರನ್ನು ವಾಪಸ್‌ ಕಳುಹಿಸಲಾಗುತ್ತಿದೆ ಎಂದು ಪಾಕ್‌ ತಿಳಿಸಿದೆ. ಅದರಲ್ಲೂ, ಇತ್ತೀಚೆಗೆ ಪಾಕ್‌ ಗಡಿಯಲ್ಲಿ ಪಾಕಿಸ್ತಾನಿಯರು ಹಾಗೂ ಆಫ್ಘನ್‌ ನಿರಾಶ್ರಿತರ ಮಧ್ಯೆ ಸಂಘರ್ಷಗಳು ನಡೆಯುತ್ತಿವೆ.

ಪಾಕಿಸ್ತಾನವು ಆಫ್ಘನ್‌ ಜತೆ ಸುಮಾರು 2,611 ಕಿಲೋಮೀಟರ್‌ ಗಡಿ ಹೊಂದಿದೆ. ಪಾಕಿಸ್ತಾನದ ಮೇಲೆ ತಾಲಿಬಾನ್‌ ಉಗ್ರರು ಸಿಟ್ಟು ಮಾಡಿಕೊಂಡಿದ್ದಾರೆ. ತಾಲಿಬಾನಿಗಳು ಗಡಿಯಲ್ಲಿ ಉಗ್ರರನ್ನು ಕಳುಹಿಸಿ ಪಾಕ್‌ ನಾಗರಿಕರಿಗೆ ತೊಂದರೆ, ಕಿರುಕುಳ ಕೊಡತ್ತಿದ್ದಾರೆ. ಮತ್ತೊಂದೆಡೆ ಪಾಕಿಸ್ತಾನದಲ್ಲಿ ಪ್ರಸಕ್ತ ವರ್ಷದ ಜನವರಿಯಿಂದ ಇದುವರೆಗೆ 24 ಆತ್ಮಾಹುತಿ ದಾಳಿಗಳು ನಡೆದಿದ್ದು, ಇವುಗಳಲ್ಲಿ 14 ದಾಳಿಗಳನ್ನು ಆಫ್ಘನ್‌ ನಾಗರಿಕರೇ ಮಾಡಿದ್ದಾರೆ ಎಂದು ಪಾಕಿಸ್ತಾನ ತಿಳಿಸಿದೆ. ಹಾಗಾಗಿ, ಭದ್ರತಾ ಕಾರಣದಿಂದಾಗಿ ಆಫ್ಘನ್‌ ನಿರಾಶ್ರಿತರನ್ನು ವಾಪಸ್‌ ಕಳುಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಆಫ್ಘನ್ನರ ಮನೆ ಧ್ವಂಸಗೊಳಿಸಿದ ಪಾಕಿಸ್ತಾನ

ಪಾಕ್‌ ದಿವಾಳಿಯಾಗಿದ್ದೂ ಕಾರಣ?

ಹಾಗೆ ನೋಡಿದರೆ, ವಾಸ್ತವದಲ್ಲಿ ಪಾಕಿಸ್ತಾನವು ಆರ್ಥಿಕವಾಗಿ ದಿವಾಳಿಯಾಗಿರುವುದೇ ಆಫ್ಘನ್‌ನ ಲಕ್ಷಾಂತರ ನಾಗರಿಕರನ್ನು ವಾಪಸ್‌ ಕಳುಹಿಸಲು ಕಾರಣ ಎನ್ನಲಾಗುತ್ತಿದೆ. ಪಾಕಿಸ್ತಾನವು ಆರ್ಥಿಕವಾಗಿ ಸಂಪೂರ್ಣವಾಗಿ ದಿವಾಳಿಯಾಗಿರುವ ಕಾರಣ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದೇ ಸರ್ಕಾರಕ್ಕೆ ಕಷ್ಟವಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ರಾಜಕೀಯವಾಗಿ, ಆಡಳಿತಾತ್ಮಕವಾಗಿಯೂ ಪಾಕ್‌ ಕುಸಿದುಹೋಗಿದೆ. ಹಣಕ್ಕಾಗಿ ಅಂತಾರಾಷ್ಟ್ರೀಯ ಸಂಸ್ಥೆಗಳ ಎದುರು ಪಾಕ್‌ ಭಿಕ್ಷಾಪಾತ್ರೆ ಹಿಡಿದು ನಿಂತಿದೆ. ಹಾಗಾಗಿ, ಅಫಘಾನಿಸ್ತಾನಿಯರನ್ನು ಹೊರದಬ್ಬುತ್ತಿದೆ ಎಂದು ಹೇಳಲಾಗುತ್ತಿದೆ.

ಭವಿಷ್ಯದ ದಿನಗಳ ಅರಿವಿಲ್ಲದೆ ಪೋಷಕರ ಜತೆ ಗುಳೆ ಹೊರಟ ಮಕ್ಕಳು.

ಅಫಘಾನಿಸ್ತಾನದ ಪ್ರತಿಕ್ರಿಯೆ ಹೀಗಿದೆ

ಪಾಕಿಸ್ತಾನದಿಂದ ಏಕಾಏಕಿ ಲಕ್ಷಾಂತರ ಆಫ್ಘನ್‌ ನಿರಾಶ್ರಿತರು ದೇಶಕ್ಕೆ ಆಗಮಿಸುತ್ತಿರುವುದು ತಾಲಿಬಾನ್‌ ಆಡಳಿತಕ್ಕೂ ತಲೆನೋವಾಗಿದೆ. ತೋರ್ಖಾಮ್‌ ಗಡಿಯಲ್ಲಿಯೇ ಒಂದು ಲಕ್ಷ ನಿರಾಶ್ರಿತರು ಆಫ್ಘನ್‌ ತಲುಪಿದ್ದಾರೆ. ಇದುವರೆಗೆ ಎರಡು ಲಕ್ಷ ನಿರಾಶ್ರಿತರು ಅಫಘಾನಿಸ್ತಾನವನ್ನು ತಲುಪಿದ್ದಾರೆ. ಇವರಿಗೆ ಆಶ್ರಯ, ಅನ್ನ, ನೀರು ಸೇರಿ ಮೂಲ ಸೌಕರ್ಯಗಳನ್ನು ಒದಗಿಸುವುದು ತಾಲಿಬಾನ್‌ ಆಡಳಿತಕ್ಕೆ ಕಷ್ಟವಾಗಿದೆ. “ಪಾಕಿಸ್ತಾನವು ಕ್ರೂರ ಹಾಗೂ ನಿರ್ದಯಿಯಾಗಿ ವರ್ತಿಸುತ್ತಿದೆ” ಎಂದು ಆಫ್ಘನ್‌ ಆಡಳಿತವು ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: Israel Palestine War: ಹಮಾಸ್‌ ಲೀಡರ್‌ನನ್ನು ಕೊಂದು ನಿರಾಶ್ರಿತರ ಶಿಬಿರ ಧ್ವಂಸಗೊಳಿಸಿದ ಇಸ್ರೇಲ್‌

ಅಫಘಾನಿಸ್ತಾನ ಗಡಿಯಲ್ಲಿ ಹೀಗಿದೆ ಪರಿಸ್ಥಿತಿ.

ಪಂದ್ಯಶ್ರೇಷ್ಠ ಪ್ರಶಸ್ತಿ ಅರ್ಪಿಸಿದ್ದ ಆಫ್ಘನ್‌ ಕ್ರಿಕೆಟಿಗ

ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್​ ನಡೆಸಿ ಅಫಘಾನಿಸ್ತಾನ ತಂಡಕ್ಕೆ ಗೆಲುವು ತಂದು ಕೊಟ್ಟ ಇಬ್ರಾಹಿಂ ಜದ್ರಾನ್ ಅವರು ಪಾಕಿಸ್ತಾನದ ಕರಾಳ ಅನುಭವ ಬಿಚ್ಚಿಟ್ಟಿದ್ದರು. ಅಲ್ಲದೆ, ಪಂದ್ಯದಲ್ಲಿ ತಾನು ಪಡೆದ ಪಂದ್ರಶ್ರೇಷ್ಠ ಪ್ರಶಸ್ತಿಯನ್ನು ಪಾಕ್​ನಲ್ಲಿ ಚಿತ್ರಹಿಂಸೆ ಅನುಭವಿಸಿ ಗಡಿಪಾರಾದ ಜನತೆಗೆ ಅರ್ಪಿಸಿದ್ದರು.

ಇದನ್ನೂ ಓದಿ: ದಯವೇ ಧರ್ಮದ ಮೂಲವಯ್ಯ; ಪ್ಯಾಲೆಸ್ತೀನ್‌ಗೆ ಭಾರತ 38 ಟನ್‌ ಅಗತ್ಯ ವಸ್ತುಗಳ ನೆರವು

“ಈ ಪ್ರಶಸ್ತಿಯನ್ನು ಪಾಕಿಸ್ತಾನದಿಂದ ಗಡಿಪಾರಾಗಿರುವ ಎಲ್ಲ ಆಫ್ಘನ್​ ಜನತೆಗೆ ಅರ್ಪಿಸುತ್ತೇನೆ. ಈ ಗೆಲುವು ನನಗೆ ಹಾಗೂ ನಮ್ಮ ತಂಡಕ್ಕೆ ಸಾಕಷ್ಟು ಆತ್ಮವಿಶ್ವಾಸ ಮತ್ತು ಬಲ ತುಂಬಿದೆ. ಅದರಲ್ಲೂ ಪಾಕ್​ ವಿರುದ್ಧದ ಈ ಗೆಲುವು ಡಬಲ್​ ಖಷಿ ನೀಡಿದೆ” ಎಂದಿದ್ದರು.

Exit mobile version