Site icon Vistara News

Fire Tragedy: ನೈಟ್‌ ಕ್ಲಬ್‌ನಲ್ಲಿ ಬೆಂಕಿ ಅವಘಡ; 29 ಮಂದಿ ಸಜೀವ ದಹನ

Fire Tragedy

Fire Tragedy

ಇಸ್ತಾಂಬುಲ್‌: ಟರ್ಕಿಯ ಇಸ್ತಾಂಬುಲ್‌ (Istanbul)ನಲ್ಲಿ ಭೀಕರ ಅಗ್ನಿ ಅವಘಡವೊಂದು ಸಂಭವಿಸಿದೆ. ನವೀಕರಣಕ್ಕಾಗಿ ಮುಚ್ಚಲ್ಪಟ್ಟ ನೈಟ್ ಕ್ಲಬ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು 29 ಮಂದಿ ಮೃತಪಟ್ಟು 7 ಮಂದಿಗೆ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿದೆ. ಅಗ್ನಿ ಅವಘಡಕ್ಕೆ ತುತ್ತಾದ ನೈಟ್‌ ಕ್ಲಬ್‌ 16 ಅಂತಸ್ತಿನ ಕಟ್ಟಡದ ನೆಲ ಮಹಡಿಯಲ್ಲಿತ್ತು (Fire Tragedy).

ನವೀಕರಣದ ಕೆಲಸಕ್ಕಾಗಿ ಸದ್ಯ ಮುಚ್ಚಿರುವ ಬೆಸಿಕ್ಟಾಸ್ ಜಿಲ್ಲೆಯ ಗೇರೆಟ್ಟೇಪೇಯದ ಗೋನೆನೊಗ್ಲು ಬೀದಿಯಲ್ಲಿ ದಿ ಮಾಸ್ಕ್ ನೈಟ್ ಕ್ಲಬ್‌ನಲ್ಲಿ ಈ ಅನಾಹುತ ನಡೆದಿದೆ. ಗಾಯಗೊಂಡಿರುವವವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಗಳು ತಿಳಿಸಿವೆ. ಘಟನೆಯ ಬಗ್ಗೆ ಮಾತನಾಡಿದ ಗವರ್ನರ್‌ ದಾವುತ್ ಗುಲ್, ʼʼಸದ್ಯ ಬೆಂಕಿಯನ್ನು ನಂದಿಸಲಾಗಿದೆ. ಬೆಂಕಿ ಹೇಗೆ ಹೊತ್ತಿಕೊಂಡಿತ್ತು ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ. ಮೃತಪಟ್ಟವರು ನವೀಕರಣ ಕಾಮಗಾರಿಯಲ್ಲಿ ಪಾಲ್ಗೊಂಡ ಕಾರ್ಮಿಕರು ಎನ್ನಲಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆʼʼ ಎಂದು ತಿಳಿಸಿದ್ದಾರೆ.

ಘಟನೆ ಬಗ್ಗೆ ಕೂಡಲೇ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡಿದ್ದು, ನೈಟ್‌ ಕ್ಲಬ್‌ ಮ್ಯಾನೇಜರ್‌, ಅಕೌಂಟೆಂಟ್‌, ಪಾಲುದಾರ ಸೇರಿದಂತೆ ಹಲವು ಮಂದಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಘಟನೆಯ ವಿಡಿಯೊ ಸದ್ಯ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಕಟ್ಟಡದಿಂದ ದಟ್ಟವಾದ ಹೊಗೆ ಮೇಲೆ ಏರುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಅರ್ಧ ಡಜನ್ ಅಗ್ನಿಶಾಮಕ ಎಂಜಿನ್‌ಗಳು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಜತೆಗೆ ಸಂತ್ರಸ್ತರ ರಕ್ಷಣೆಗೆ ಸಿಬ್ಬಂದಿ ಧಾವಿಸುತ್ತಿರುವುದು ಕೂಡ ಕಂಡು ಬಂದಿದೆ.

44 ಮಂದಿ ಬೆಂಕಿ ಆಕಸ್ಮಿಕದಲ್ಲಿ ಮೃತ್ಯು

ಕೆಲವು ದಿನಗಳ ಹಿಂದೆ ಬಾಂಗ್ಲಾದೇಶದ ರಾಜಧಾನಿ ಢಾಕಾದ ಏಳು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ದುರಂತ ಸಂಭವಿಸಿ 44 ಮಂದಿ ಸಾವನ್ನಪ್ಪಿದ್ದರು. ಢಾಕಾದ ಬೈಲಿ ರಸ್ತೆಯಲ್ಲಿರುವ ಈ ಕಟ್ಟಡದಲ್ಲಿ ಜನಪ್ರಿಯ ಬಿರಿಯಾನಿ ರೆಸ್ಟೋರೆಂಟ್ ಕೂಡ ಇದ್ದು, ಅಲ್ಲಿಗೆ ಬಂದ ಹಲವರು ಮೃತಪಟ್ಟಿದ್ದರು.

ರಾತ್ರಿ 10 ಗಂಟೆಯ ಸುಮಾರಿಗೆ ಕಚ್ಚಿ ಭಾಯಿ ರೆಸ್ಟೋರೆಂಟ್‌ನಲ್ಲಿ ಬೆಂಕಿ ಹೊತ್ತಿಕೊಂಡಿತು. ಇದು ಉಪಾಹಾರ ಗೃಹದ ಮೂಲಕ ತ್ವರಿತವಾಗಿ ಹರಡಿತು. ಅಗ್ನಿಶಾಮಕ ದಳದವರು ಬೆಂಕಿಯನ್ನು ಹತೋಟಿಗೆ ತಂದರು. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 33 ಜನರು ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಬಳಿಕ ಘೋಷಿಸಲಾಯಿತು. ಇತರ 10 ಜನರು ನಗರದ ಮುಖ್ಯ ಆಸ್ಪತ್ರೆಯಲ್ಲಿ ಸುಟ್ಟಗಾಯಗಳಿಂದ ಸಾವನ್ನಪ್ಪಿದ್ದರು ಎಂದು ಬಾಂಗ್ಲಾದೇಶದ ಆರೋಗ್ಯ ಸಚಿವ ಸಮಂತಾ ಲಾಲ್ ಸೇನ್ ಹೇಳಿದ್ದರು.

ಇದನ್ನೂ ಓದಿ: Fire Tragedy: ಬಣ್ಣದ ಫ್ಯಾಕ್ಟರಿಯಲ್ಲಿ ಭೀಕರ ಬೆಂಕಿ ದುರಂತ, 11 ಸಾವು

 ಕಚ್ಚಿ ಭಾಯಿ ರೆಸ್ಟೋರೆಂಟ್‌ಗಳ ಜನಪ್ರಿಯ ಗ್ರೂಪ್‌ ಆಗಿದೆ. ಇದು ಏಳು ಮಹಡಿಗಳನ್ನು ಹೊಂದಿರುವ ಕಟ್ಟಡದಲ್ಲಿದೆ. ಕಟ್ಟಡದ ಕೆಳಗಿನ ಮಹಡಿಯಲ್ಲಿರುವ ರೆಸ್ಟೋರೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕಟ್ಟಡವು ಇತರ ರೆಸ್ಟೋರೆಂಟ್‌ಗಳನ್ನೂ ಹೊಂದಿದೆ. ಜೊತೆಗೆ ಹಲವಾರು ಬಟ್ಟೆ ಮತ್ತು ಮೊಬೈಲ್ ಫೋನ್ ಅಂಗಡಿಗಳನ್ನು ಹೊಂದಿದೆ. ಬಾಂಗ್ಲಾದೇಶದಲ್ಲಿ ವಾಣಿಜ್ಯ ಮತ್ತು ವಸತಿ ಕಟ್ಟಡಗಳಲ್ಲಿ ಬೆಂಕಿಯು ಸಾಮಾನ್ಯವಾಗಿದೆ. ಸುರಕ್ಷತಾ ಅರಿವಿನ ಕೊರತೆ ಮತ್ತು ನಿಯಮಗಳ ಅಸಮರ್ಪಕ ಜಾರಿ ಇದಕ್ಕೆ ಕಾರಣ ಎನ್ನಲಾಗಿದೆ.

Exit mobile version