Site icon Vistara News

Firing At Churches: ರಷ್ಯಾದ ಚರ್ಚ್‌ಗಳ ಮೇಲೆ ದಾಳಿ ನಡೆಸಿದ ಬಂಧೂಕುದಾರಿಗಳು; ಪಾದ್ರಿ ಸೇರಿ ಕನಿಷ್ಠ 15 ಮಂದಿ ಸಾವು

Firing At Churches

Firing At Churches

ಮಾಸ್ಕೋ: ರಷ್ಯಾದ ಉತ್ತರ ಕಾಕಸಸ್ ಪ್ರದೇಶದ ಡಾಗೆಸ್ತಾನ್‌ (Dagestan)ನಲ್ಲಿ ಭಾನುವಾರ ಅಪರಿಚಿತ ಬಂಧೂಕುದಾರಿಗಳು ಅಪ್ರಚೋದಿತವಾಗಿ ಎರಡು ಚರ್ಚ್‌ ಮತ್ತು ಪೊಲೀಸ್ ಪೋಸ್ಟ್ ಮೇಲೆ ಗುಂಡು ಹಾರಿಸಿದ್ದು, ಪೊಲೀಸರು ಮತ್ತು ಪಾದ್ರಿ ಸೇರಿದಂತೆ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ (Firing At Churches). ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಗವರ್ನರ್ ಸೆರ್ಗೆಯ್ ಮೆಲಿಕೋವ್ (Sergei Melikov) ತಿಳಿಸಿದ್ದಾರೆ.

ʼʼಶಸ್ತ್ರಸಜ್ಜಿತ ಉಗ್ರಗಾಮಿಗಳು 15ಕ್ಕೂ ಹೆಚ್ಚು ಪೊಲೀಸರು ಮತ್ತು ಆರ್ಥೊಡಾಕ್ಸ್ ಪಾದ್ರಿ ಸೇರಿದಂತೆ ಹಲವು ನಾಗರಿಕರನ್ನು ಹತ್ಯೆ ಮಾಡಿದ್ದಾರೆʼʼ ಎಂದು ಸೋಮವಾರ ಗವರ್ನರ್ ಸೆರ್ಗೆಯ್ ಮೆಲಿಕೋವ್ ಮಾಹಿತಿ ನೀಡಿದ್ದಾರೆ. ಡಾಗೆಸ್ತಾನ್‌ನ ಅತಿದೊಡ್ಡ ನಗರ ಮಖಚ್ಕಲಾ ಮತ್ತು ಕರಾವಳಿ ನಗರ ಡರ್ಬೆಂಟ್‌ನಲ್ಲಿ ಏಕಕಾಲದಲ್ಲಿ ದಾಳಿಗಳು ನಡೆದಿದ್ದು, ಸೆರ್ಗೆಯ್ ಮೆಲಿಕೊವ್ ಇದನ್ನು “ಭಯೋತ್ಪಾದಕ ದಾಳಿ” ಎಂದು ಕರೆದಿದ್ದಾರೆ. ಮಖಚ್ಕಲಾದಲ್ಲಿ ನಾಲ್ವರು ಮತ್ತು ಡರ್ಬೆಂಟ್‌ನಲ್ಲಿ ಇಬ್ಬರು ಬಂದೂಕುಧಾರಿಗಳನ್ನು ಪೊಲೀಸ್ ಸಿಬ್ಬಂದಿ ಹೊಡೆದುರುಳಿಸಿದ್ದಾರೆ.

ʼʼಎರಡು ಆರ್ಥೊಡಾಕ್ಸ್ ಚರ್ಚ್‌ಗಳು, ಸಿನಗಾಗ್ ಮತ್ತು ಟ್ರಾಫಿಕ್ ಪೋಲಿಸ್ ಪೋಸ್ಟ್ ಅನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ. ಮೃತರಲ್ಲಿ ಪೊಲೀಸ್ ಅಧಿಕಾರಿಗಳಲ್ಲದೆ, ಡರ್ಬೆಂಟ್‌ನಲ್ಲಿ 40 ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿದ ಆರ್ಥೊಡಾಕ್ಸ್ ಪಾದ್ರಿ ಸೇರಿದಂತೆ ಹಲವು ನಾಗರಿಕರು ಸೇರಿದ್ದಾರೆʼʼ ಎಂದು ಮೆಲಿಕೊವ್ ತಿಳಿಸಿದ್ದಾರೆ.

“ಈ ಭಯೋತ್ಪಾದಕ ದಾಳಿಗಳ ಹಿಂದೆ ಯಾರು ಇದ್ದಾರೆ ಮತ್ತು ಅವರು ಯಾವ ಉದ್ದೇಶ ಹೊಂದಿದ್ದಾರೆ ಎನ್ನುವುದು ಸ್ಪಷ್ಟವಾಗಿದೆʼʼ ಎಂದು ಎಂದು ಅವರು ಉಕ್ರೇನ್ ಯುದ್ಧವನ್ನು ನೇರವಾಗಿ ಪ್ರಸ್ತಾಪಿಸದೆ ಹೇಳಿದ್ದಾರೆ. ʼʼದಾಳಿಯ ಹಿಂದೆ ಯಾರಿದ್ದಾರೆ ಎನ್ನುವುದನ್ನು ಕಂಡು ಹಿಡಿಯಲು ಅಧಿಕಾರಿಗಳು ಈಗಾಗಲೇ ತನಿಖೆ ಆರಂಭಿಸಿದ್ದಾರೆ. ಡಾಗೆಸ್ತಾನ್​ ಸರ್ಕಾರ ಜೂನ್ 24ರಿಂದ 26ರ ವರೆಗೆ ಶೋಕಾಚರಣೆ ಘೋಷಿಸಿ ಆದೇಶ ಹೊರಡಿಸಲಾಗಿದೆ. ರಾಷ್ಟ್ರ ಧ್ವಜಗಳನ್ನು ಅರ್ಧಕ್ಕೆ ಇಳಿಸಲಾಗಿದೆ ಮತ್ತು ಎಲ್ಲ ಮನರಂಜನಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆʼʼ ಎಂದು ಅವರು ಹೇಳಿದ್ದಾರೆ.

ರಷ್ಯಾದ ತನಿಖಾ ಸಮಿತಿಯು ಈ ಶಂಕಿತ ಭಯೋತ್ಪಾದಕ ಕೃತ್ಯಗಳ ತನಿಖೆಯನ್ನು ಪ್ರಾರಂಭಿಸಿದೆ. ಆದಾಗ್ಯೂ ದಾಳಿಯ ಜವಾಬ್ದಾರಿಯನ್ನು ತಕ್ಷಣಕ್ಕೆ ಯಾವ ಸಂಘಟನೆಯೂ ವಹಿಸಿಕೊಂಡಿಲ್ಲ. ದಾಳಿಕೋರರಲ್ಲಿ ಮಧ್ಯ ಡಾಗೆಸ್ತಾನ್‌ನ ಸೆರ್ಗೋಕಲಾ ಜಿಲ್ಲೆಯ ಮುಖ್ಯಸ್ಥರ ಇಬ್ಬರು ಪುತ್ರರು ಸೇರಿದ್ದಾರೆ ಎಂದು ರಷ್ಯಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

ʼʼಅಧಿಕಾರಿಗಳು ಈ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಕೈಗೊಂಡಿದ್ದಾರೆ. ದಾಳಿಯಲ್ಲಿ ಪಾದ್ರಿ ಮತ್ತು ಪೊಲೀಸರು ಸಾವನ್ನಪ್ಪಿದ್ದಾರೆ. 6 ಬಂದೂಕುಧಾರಿಗಳನ್ನು ರಕ್ಷಣಾ ಪಡೆಗಳು ಬೆನ್ನಟ್ಟಿ ಹೊಡೆದುರುಳಿಸಿವೆ. ದಾಳಿಯಲ್ಲಿ ಎಷ್ಟು ಉಗ್ರರು ಭಾಗಿಯಾಗಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ” ಎಂದು ಭಯೋತ್ಪಾದನಾ ವಿರೋಧಿ ಸಮಿತಿ ತಿಳಿಸಿದೆ.

ಇದನ್ನೂ ಓದಿ: Mass Shooting: ಗುಂಡಿನ ದಾಳಿ ನಡೆಸಿದ ಬಂಧೂಕುದಾರಿಯನ್ನೇ ನೆಲಕ್ಕೆ ಕೆಡವಿದರು; ವಿಡಿಯೊ ಇಲ್ಲಿದೆ

ಮಾಸ್ಕೋ ಬಳಿಯ ಸಂಗೀತ ಕಛೇರಿ ಹಾಲ್ ಮೇಲೆ ಇಸ್ಲಾಮಿಕ್ ಸ್ಟೇಟ್ ನಡೆಸಿದ ದಾಳಿಯಲ್ಲಿ 145 ಜನರು ಸಾವನ್ನಪ್ಪಿದ ಕೆಲಚೇ ದಿನಗಳ ಅಂತರದಲ್ಲಿ ಈ ಘಟನೆ ನಡೆದಿದೆ.

Exit mobile version