ಮಾಸ್ಕೋ: ಅಮೆರಿಕದಲ್ಲಿ ಖಲಿಸ್ತಾನಿ ನಾಯಕ (Khalistan Leader) ಗುರುಪತ್‌ವಂತ್ ಸಿಂಗ್ ಪನ್ನುನ್ (Gurpatwant Singh Pannun) ಹತ್ಯೆಯ ಸಂಚಿನಲ್ಲಿ (Murder plot) ಭಾರತದ ʼರಾʼ (RAW) ಅಧಿಕಾರಿಯ ಕೈವಾಡದ ಕುರಿತು ವಾಷಿಂಗ್ಟನ್ ಪೋಸ್ಟ್ (Washington Post) ಮಾಡಿದ ವರದಿಯನ್ನು ರಷ್ಯಾ ತಿರಸ್ಕರಿಸಿದೆ. ಅಮೆರಿಕ ತನ್ನ ಆರೋಪಕ್ಕೆ ಪೂರಕವಾದ ಸಾಕ್ಷ್ಯಾಧಾರ ನೀಡಿಲ್ಲ. ಹೀಗಾಗಿ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಭಾರತದ ಪರ ರಷ್ಯಾ ಧ್ವನಿ ಎತ್ತಿದೆ.
ಈ ಕುರಿತು ಮರಿಯಾ ಜಾಖರೋವಾ ಪ್ರತಿಕ್ರಿಯಿಸಿದ್ದು, ಭಾರತದಲ್ಲಿ ಆಂತರಿಕ ರಾಜಕೀಯ ಸ್ಥಿತಿಗತಿಯನ್ನು ಅಲ್ಲೋಲ ಕಲ್ಲೋಲ ಮಾಡಲು ಅಮೆರಿಕ ಯತ್ನಿಸುತ್ತಿದೆ. ಭಾರತೀಯ ರಾಷ್ಟ್ರೀಯತೆ ಮನಸ್ಥಿತಿ ಮತ್ತು ಇತಿಹಾಸವನ್ನು ಅರ್ಥಮಾಡಿಕೊಳ್ಳದ ಅಮೆರಿಕ ಸುಖಾ ಸುಮ್ಮನೆ ಭಾರತದ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಆರೋಪ ಮಾಡುತ್ತಿದೆ. ಭಾರತದ ಆಂತರಿಕ ವಿಚಾರದಲ್ಲಿ ಅಮೆರಿಕ ನಿರಂತರವಾಗಿ ಮೂಗು ತೂರಿಸುವ ಪ್ರಯತ್ನ ನಡೆಸುತ್ತಲೇ ಇದೆ. ಭಾರತವನ್ನು ಗೌರವಿಸುವ ಮನಸ್ಸು ಅಮೆರಿಕಕ್ಕೆ ಇಲ್ಲ. ಅಮೆರಿಕದ ಆರೋಪಗಳು ಸುಳ್ಳು ಮತ್ತು ನಿರಾಧಾರವಾಗಿದ್ದು, ಅದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಖಡಕ್ಕಾಗಿ ಹೇಳಿದೆ.
ವಿಕ್ರಮ್ ಯಾದವ್ ಎಂದು ಗುರುತಿಸಲಾದ ರಾ ಅಧಿಕಾರಿಯು ಯುಎಸ್‌ನಲ್ಲಿ ಗುರುಪತ್‌ವಂತ್ ಸಿಂಗ್ ಪನ್ನುನ್ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್‌ನ “ತನಿಖಾ” ವರದಿ ಮಾಡಿತ್ತು. ಈ ಬಳಿಕ MEA ಹೇಳಿಕೆ ಬಂದಿದೆ. ಆ ಸಂದರ್ಭದಲ್ಲಿ ಬೇಹುಗಾರಿಕಾ ಸಂಸ್ಥೆಯ ಮುಖ್ಯಸ್ಥ ಸಮಂತ್ ಗೋಯೆಲ್ ಆಗಿದ್ದರು ಎಂದು ವರದಿ ತಿಳಿಸಿದೆ. ಖಲಿಸ್ತಾನ್ ಚಳವಳಿಯ ಪ್ರಮುಖ ಉಗ್ರರಲ್ಲಿ ಒಬ್ಬನಾದ ಗುರುಪತ್ವಂತ್ ಸಿಂಗ್ ಪನ್ನುನ್, ಸಿಖ್ಸ್ ಫಾರ್ ಜಸ್ಟಿಸ್‌ನ ಕಾನೂನು ಸಲಹೆಗಾರ ಮತ್ತು ವಕ್ತಾರನಾಗಿದ್ದಾನೆ. ಇದು ಪ್ರತ್ಯೇಕ ಸಿಖ್ ದೇಶದ ಕಲ್ಪನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಭಾರತ ಸರ್ಕಾರ ಗುರುಪತ್ವಂತ್ ಸಿಂಗ್ ಪನ್ನೂನ್‌ನನ್ನು ಭಯೋತ್ಪಾದಕ ಎಂದು ಘೋಷಿಸಿದೆ.
ಏತನ್ಮಧ್ಯೆ, ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಯ ಸಂಚಿನ ಆರೋಪಗಳನ್ನು ಭಾರತ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಶ್ವೇತಭವನ ಸೋಮವಾರ ಹೇಳಿದೆ. ಆದಾಗ್ಯೂ, ಈ ವಿಷಯದ ಬಗ್ಗೆ ಎಫ್‌ಬಿಐ ತನಿಖೆ ಮತ್ತು ನ್ಯಾಯಾಂಗ ಇಲಾಖೆ ಸಲ್ಲಿಸಿದ ಕ್ರಿಮಿನಲ್ ಮೊಕದ್ದಮೆಯ ಬಗ್ಗೆ ಪ್ರತಿಕ್ರಿಯಿಸಿಲ್ಲ. ವಾಷಿಂಗ್ಟನ್ ಪೋಸ್ಟ್‌ನ ವರದಿಯ ಕುರಿತು ಪ್ರಶ್ನೆಗಳಿಗೆ ಉತ್ತರಿಸಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್, ತನಿಖೆ ನಡೆಯುತ್ತಿದೆ ಮತ್ತು ನ್ಯಾಯಾಂಗ ಇಲಾಖೆ (ಡಿಒಜೆ) ಕ್ರಿಮಿನಲ್ ತನಿಖೆ ನಡೆಸುತ್ತಿದೆ ಎಂದು ಹೇಳಿದ್ದರು.
ಇದನ್ನೂ ಓದಿ:Nijjar Killing: ಒಂದೇ ದಿನದಲ್ಲಿ ಸ್ಟೂಡೆಂಟ್ ವೀಸಾ ಪಡೆದು ಕೆನಡಾಕ್ಕೆ ಬಂದಿದ್ನಂತೆ ನಿಜ್ಜರ್ ಹಂತಕ
ಸುದ್ದಿ ವರದಿಯ ಬಗ್ಗೆ, “ಇದು ಗಂಭೀರ ವಿಷಯವಾಗಿದೆ ಮತ್ತು ನಾವು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ತಾವು ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಭಾರತ ಸರ್ಕಾರವು ನಮ್ಮೊಂದಿಗೆ ಸ್ಪಷ್ಟವಾಗಿ ಹೇಳಿದೆ” ಎಂದು ಜೀನ್-ಪಿಯರ್ ಹೇಳಿದರು. “ನಾವು ಅದರ ಆಧಾರದ ಮೇಲೆ ಭಾರತ ಸರ್ಕಾರದಿಂದ ಉತ್ತರದಾಯಿತ್ವವನ್ನು ನಿರೀಕ್ಷಿಸುತ್ತೇವೆ. ನಾವು ನಮ್ಮ ಕಳವಳ ವ್ಯಕ್ತಪಡಿಸುವುದನ್ನು ಮುಂದುವರಿಸಲಿದ್ದೇವೆ” ಎಂದಿದ್ದಾರೆ.