ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಿಂದು ದೇವಾಲಯಗಳ (Hindu Temple) ಮೇಲಿನ ದಾಳಿ ಮುಂದುವರಿದಿದೆ. ಪಾಕಿಸ್ತಾನದ ಅಫ್ಘಾನಿಸ್ತಾನ ಗಡಿಯಲ್ಲಿರುವ ಐತಿಹಾಸಿಕ ಹಿಂದು ದೇವಾಲಯವನ್ನು ಪಾಕ್ ಕೆಡವಿದೆ ಎಂದು ಮೂಲಗಳು ತಿಳಿಸಿವೆ. ಖೈಬರ್ ಪಖ್ತುಂಖ್ವಾ (Khyber Pakhtunkhwa) ಪ್ರಾಂತ್ಯದಲ್ಲಿದ್ದ ಈ ಇತಿಹಾಸ ಪ್ರಸಿದ್ಧ ದೇವಸ್ಥಾನವನ್ನು ಕೆಡವಿ ಅಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುತ್ತಿದೆ.
1947ರಲ್ಲಿ ಭಾರತ-ಪಾಕಿಸ್ತಾನ ವಿಭಜನೆಯಾದಾಗ ಈ ದೇವಸ್ಥಾನವನ್ನು ಮುಚ್ಚಲಾಗಿತ್ತು. ಇದೀಗ ಪಾಕ್ ಸರ್ಕಾರ ಆ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ದೇವಾಲಯವನ್ನು ಕೆಡವಿದೆ. ಈಗಾಗಲೇ ವಾಣಿಜ್ಯ ಸಂಕೀರ್ಣದ ಕಾಮಗಾರಿ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ. ಕೆಲವು ವರ್ಷಗಳಿಂದ ದೇವಾಲಯವು ಹಂತ ಹಂತವಾಗಿ ಕುಸಿಯಲು ಆರಂಭಿಸಿತ್ತು.
PESHAWAR: A historical Hindu temple (Khyber temple) has been demolished by PAKISTAN govt/authorities in blatant disregard of minority rights and to rub salt on the wound, construction of a commercial complex has started at the site in the Khyber Pakhtunkhwa province pic.twitter.com/55S9UfCSCw
— Megh Updates 🚨™ (@MeghUpdates) April 13, 2024
ಅಧಿಕಾರಿಗಳು ಹೇಳೋದೇನು?
ದೇವಸ್ಥಾನ ಕೆಡವಿರುವ ಬಗ್ಗೆ ಪಾಕಿಸ್ತಾನ ಆಡಳಿತ ಬೇರೆಯದ್ದೇ ಹೇಳಿಕೆ ನೀಡಿದೆ. ಇಲ್ಲಿ ಹಿಂದು ದೇವಾಲಯ ಅಸ್ತಿತ್ವದಲ್ಲಿದ್ದ ಬಗ್ಗೆ ತಮಗೆ ತಿಳಿದೇ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಣಿಜ್ಯ ಸಂಕೀರ್ಣವನ್ನು ಎಲ್ಲ ಕಾನೂನು ಪಾಲಿಸಿಯೇ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಲಾಂಡಿ ಕೊಟಾಲ್ ಮೂಲದ ಪತ್ರಕರ್ತ ಇಬ್ರಾಹಿಂ ಶಿನ್ವಾರಿ ಈ ಬಗ್ಗೆ ಮಾತನಾಡಿ, ʼʼಮುಖ್ಯ ಲ್ಯಾಂಡಿ ಕೊಟಾಲ್ ಬಜಾರ್‌ನಲ್ಲಿ ಈ ಐತಿಹಾಸಿಕ ದೇವಾಲಯವಿತ್ತುʼʼ ಎಂದು ಹೇಳಿದ್ದಾರೆ. ʼʼಸ್ಥಳೀಯ ಹಿಂದೂ ಕುಟುಂಬಗಳು ಭಾರತಕ್ಕೆ ವಲಸೆ ಹೋದ ನಂತರ 1947 ರಲ್ಲಿ ಈ ದೇವಾಲಯವನ್ನು ಮುಚ್ಚಲಾಯಿತು. 1992ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ಬಳಿಕ ಕೆಲವರು ಈ ದೇವಾಲಯಕ್ಕೆ ಭಾಗಶಃ ಹಾನಿ ಮಾಡಿದ್ದರುʼʼ ಎಂದು ಅವರು ತಿಳಿಸಿದ್ದಾರೆ.
ʼʼಬಾಲ್ಯದಲ್ಲಿ ಈ ದೇವಸ್ಥಾನದ ಬಗ್ಗೆ ಅನೇಕ ಕಥೆಗಳನ್ನು ತಮ್ಮ ಪೂರ್ವಜರಿಂದ ಕೇಳಿದ್ದೆʼʼ ಎಂದು ಶಿನ್ವಾರಿ ಸ್ಪಷ್ಟಪಡಿಸಿದ್ದಾರೆ. ʼʼಹೀಗಾಗಿ ಇಲ್ಲಿ ಹಿಂದು ದೇವಸ್ಥಾನವಿತ್ತು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲʼʼ ಎಂದು ತಿಳಿಸಿದ್ದಾರೆ.
“ಲಾಂಡಿ ಕೊಟಾಲ್ ಬಜಾರ್‌ನಲ್ಲಿರುವ ಸಂಪೂರ್ಣ ಭೂಮಿ ರಾಜ್ಯದ ಒಡೆತನದಲ್ಲಿದೆ” ಎಂದು ಲ್ಯಾಂಡಿ ಕೊಟಾಲ್‌ನ ಸಹಾಯಕ ಆಯುಕ್ತ ಮುಹಮ್ಮದ್ ಇರ್ಷಾದ್ ಹೇಳಿದ್ದಾರೆ. ದೇವಾಲಯದ ನೆಲಸಮದ ಬಗ್ಗೆ ಕೇಳಿದಾಗ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ʼʼಮುಸ್ಲಿಮೇತರರ ಧಾರ್ಮಿಕ ಪ್ರಾಮುಖ್ಯತೆಯ ಐತಿಹಾಸಿಕ ಕಟ್ಟಡಗಳ ರಕ್ಷಣೆ ಮತ್ತು ಪುನರ್ವಸತಿಯನ್ನು ಖಚಿತಪಡಿಸಿಕೊಳ್ಳುವುದು ಜಿಲ್ಲಾಡಳಿತ ಮತ್ತು ಸಂಬಂಧಿತ ಸರ್ಕಾರಿ ಇಲಾಖೆಗಳ ಜವಾಬ್ದಾರಿʼʼ ಎಂದು ಪಾಕಿಸ್ತಾನ ಹಿಂದು ಮಂದಿರ ನಿರ್ವಹಣಾ ಸಮಿತಿಯ ಹರೂನ್ ಸರಬ್ಡಿಯಾಲ್ ಅಭಿಪ್ರಾಯ ಪಟ್ಟಿದ್ದಾರೆ.
ʼʼಪುರಾತತ್ವ ಮತ್ತು ವಸ್ತು ಸಂಗ್ರಹಾಲಯ, ಪೊಲೀಸ್, ಸಂಸ್ಕೃತಿ ಇಲಾಖೆ ಮತ್ತು ಸ್ಥಳೀಯ ಸರ್ಕಾರವು ಪೂಜಾ ಸ್ಥಳಗಳು ಸೇರಿದಂತೆ ಅಂತಹ ಸ್ಥಳಗಳನ್ನು ರಕ್ಷಿಸಲು 2016ರ ಕಾನೂನಿಗೆ ಬದ್ಧವಾಗಿವೆʼʼ ಎಂದು ಅವರು ಹೇಳಿದ್ದಾರೆ. ʼʼಅಲ್ಪಸಂಖ್ಯಾತರು ಬಳಸದ ಅಥವಾ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ನೆಲಸಮಗೊಳಿಸಿ ಹೊಸದನ್ನು ನಿರ್ಮಿಸುವ ಬದಲು ಸ್ಥಳೀಯ ಸಮುದಾಯಗಳ ಸಾಮೂಹಿಕ ಪ್ರಯೋಜನಕ್ಕಾಗಿ ಯಾವುದೇ ಕಲ್ಯಾಣ ಚಟುವಟಿಕೆಗೆ ಬಳಸಬಹುದುʼʼ ಎಂದು ಸರಬ್ಡಿಯಾಲ್ ಸಲಹೆ ಹೇಳಿದ್ದಾರೆ.
ಇದನ್ನೂ ಓದಿ: Pakistan: ದೇಗುಲ ಧ್ವಂಸ ಬೆನ್ನಲ್ಲೇ 30 ಪಾಕ್ ಹಿಂದೂಗಳ ಅಪಹರಣ! ನೆರವಿಗೆ ಮನವಿ ಮಾಡಿದ ಆಯೋಗ