ಇಸ್ಲಾಮಾಬಾದ್: ಪಾಕಿಸ್ತಾನವು ಸಕಲ ರೀತಿಯಲ್ಲಿ ದಿವಾಳಿಯಾಗಿದೆ. ಉತ್ತಮ ಆಡಳಿತ ಇಲ್ಲ, ಸಮರ್ಥ ನಾಯಕತ್ವ ಇಲ್ಲ. ವಿತ್ತೀಯ ಪರಿಸ್ಥಿತಿಯಂತೂ ಕೇಳಲೇಬೇಕಿಲ್ಲ. ಹಾಗಾಗಿ, ಮಾಜಿ ಪ್ರಧಾನಿ ಇಮ್ರಾನ್ ಅವರು ಭಾರತದ ಉದಾಹರಣೆ ನೀಡಿ ಪಾಕ್ ಸರ್ಕಾರವನ್ನು ಟೀಕಿಸುತ್ತಿದ್ದರು. ಈಗ ಮಾಜಿ ಪ್ರಧಾನಿ ನವಾಜ್ ಷರೀಫ್ (Nawaz Sharif) ಅವರು ಕೂಡ ಭಾರತದ ಏಳಿಗೆಯ ಉದಾಹರಣೆ ನೀಡಿ ಪಾಕಿಸ್ತಾನ ಸರ್ಕಾರವನ್ನು ಟೀಕಿಸಿದ್ದಾರೆ. “ಭಾರತ ಚಂದ್ರಯಾನ 3 (Chandrayaan 3) ಕೈಗೊಂಡರೆ, ಪಾಕಿಸ್ತಾನವು ಸಹಾಯಧನಕ್ಕಾಗಿ ಭಿಕ್ಷೆ ಬೇಡುತ್ತಿದೆ” ಎಂದು ನವಾಜ್ ಷರೀಫ್ ಹೇಳಿದ್ದಾರೆ.
“ಪಾಕಿಸ್ತಾನದ ಪ್ರಧಾನಿಯು ಆರ್ಥಿಕ ನೆರವು ಪಡೆಯಲು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ತೆರಳಿ ಅಂಗಲಾಚುತ್ತಿದ್ದಾರೆ. ಮತ್ತೊಂದೆಡೆ ಭಾರತವು ಚಂದ್ರಯಾನವನ್ನು ಯಶಸ್ವಿಯಾಗಿ ಕೈಗೊಂಡಿದೆ. ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದೆ. ಆದರೆ, ಪಾಕಿಸ್ತಾನ ಕೂಡ ಇಂತಹ ಸಾಧನೆ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ? ದೇಶದಲ್ಲಿ ಇಂತಹ ಅರಾಜಕತೆ ಮೂಡಲು ಯಾರು ಕಾರಣ? ಯಾರು ಜವಾಬ್ದಾರಿ” ಎಂದು ಪ್ರಶ್ನಿಸಿದ್ದಾರೆ.
Today India has reached the Moon, the G20 meeting was held in India, and Pakistan is begging countries around the world for a billion dollars- Former PM of Pakistan Nawaz Sharif pic.twitter.com/nGNOwt7wys
— Megh Updates 🚨™ (@MeghUpdates) September 19, 2023
“ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಭಾರತದ ಖಜಾನೆಯಲ್ಲಿ ಕೇವಲ ಒಂದು ಶತಕೋಟಿ ಡಾಲರ್ (ಈಗ ಸುಮಾರು 8,300 ಕೋಟಿ ರೂ.) ಇತ್ತು. ಆದರೀಗ ಅವರ ವಿದೇಶಿ ವಿನಿಮಯ ಮೀಸಲು 600 ಶತಕೋಟಿ ಡಾಲರ್ ಇದೆ. ಆದರೆ, ಪಾಕಿಸ್ತಾನದಲ್ಲಿ ಬಡವರು ಮಾತ್ರ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ನಮ್ಮ ದೇಶವು ವಿದೇಶಿ ನೆರವಿಗಾಗಿ ಭಿಕ್ಷೆ ಬೇಡುವಂತಾಗಿದೆ. ದೇಶವನ್ನು ಇಂತಹ ದುಸ್ಥಿತಿಗೆ ತಳ್ಳಿದವರು ನಿಜವಾಗಿಯೂ ಅಪರಾಧಿಗಳು” ಎಂದು ನವಾಜ್ ಷರೀಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Imran Khan Wife | ದುಬಾರಿ ವಾಚ್ ಮಾರಿ ಜೀವನ ಸಾಗಿಸುವ ಗತಿ ಬಂತೇ ಇಮ್ರಾನ್ ಖಾನ್‌ಗೆ? ಪತ್ನಿ ಆಡಿಯೊ ವೈರಲ್
ಇಮ್ರಾನ್ ಖಾನ್ ಕೂಡ ಮೆಚ್ಚಿದ್ದರು
ಭಾರತದ ನೀತಿಗಳ ಬಗ್ಗೆ ಕೆಲ ತಿಂಗಳ ಹಿಂದೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. “ಭಾರತವು ವಿದೇಶಾಂಗ ನೀತಿಯ ಜಾರಿಯಲ್ಲಿ ಸ್ಪಷ್ಟ ನಿಲುವು ಹೊಂದಿದೆ. ಜಗತ್ತಿನ ಯಾರ ಒತ್ತಡಕ್ಕೂ ಸಿಲುಕದೆ ರಷ್ಯಾ ಹಾಗೂ ಉಕ್ರೇನ್ ಬಿಕ್ಕಟ್ಟಿನ ಮಧ್ಯೆಯೂ ಭಾರತ ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾತೈಲ ಆಮದು ಮಾಡಿಕೊಂಡಿದೆ. ತನ್ನ ರಾಷ್ಟ್ರದ ಜನರ ಹಿತಾಸಕ್ತಿಯ ಮುಂದೆ ಜಗತ್ತಿನ ಯಾರ ಒತ್ತಡವೂ ಲೆಕ್ಕಕ್ಕಿಲ್ಲ ಎಂಬುದನ್ನು ಭಾರತ ತೋರಿಸಿದೆ. ಆದರೆ, ಬಿಕ್ಕಟ್ಟಿನ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಮಾತ್ರ ರಷ್ಯಾದಿಂದ ತೈಲ ಸಿಕ್ಕಿಲ್ಲ. ಇದು ಪಾಕಿಸ್ತಾನ ವಿದೇಶಾಂಗ ನೀತಿಯ ದೌರ್ಬಲ್ಯಕ್ಕೆ ಹಿಡಿದ ಕನ್ನಡಿ” ಎಂದಿದ್ದರು.