ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ (Joe Biden) ಅವರು ತಮ್ಮ ಆಂತರಿಕ ನೀತಿ ಕಾರ್ಯಸೂಚಿ ಸಲಹೆಗಾರರಾಗಿ ಭಾರತೀಯ ಮೂಲದ ಅಮೆರಿಕನ್ ಪ್ರಜೆ ನೀರಾ ಟಂಡನ್ (Neera Tanden) ಅವರನ್ನು ನೇಮಿಸಿದ್ದಾರೆ.
“ಆರ್ಥಿಕ ಚಲನಶೀಲತೆ, ಜನಾಂಗೀಯ ಸಮಾನತೆ, ಆರೋಗ್ಯ ಸೇವೆ, ವಲಸೆ ಮತ್ತು ಶಿಕ್ಷಣ ಸೇರಿದಂತೆ ಆಂತರಿಕ ನೀತಿಯ ರಚನೆ ಮತ್ತು ಅನುಷ್ಠಾನವನ್ನು ನೀರಾ ಟಂಡೆನ್ ಮುಂದುವರಿಸುತ್ತಾರೆʼʼ ಎಂದು ಅಧ್ಯಕ್ಷ ಬೈಡೆನ್ ಘೋಷಿಸಿದ್ದಾರೆ. ಈ ಹಿಂದೆ ಸೂಸನ್ ರೈಸ್ ಅವರು ಈ ಸ್ಥಾನದಲ್ಲಿದ್ದರು.
“ಶ್ವೇತಭವನದ ಮೂರು ಪ್ರಮುಖವಾದ ನೀತಿ ಮಂಡಳಿಗಳಲ್ಲಿ ಒಂದನ್ನು ಮುನ್ನಡೆಸುವ ಮೊದಲ ಏಷ್ಯನ್-ಅಮೆರಿಕನ್ ಟಂಡೆನ್ ಆಗಿರುವುದು ಐತಿಹಾಸಿಕ. ಅವರು ನಮ್ಮ ಹಿರಿಯ ಸಲಹೆಗಾರರಾಗಿ, ಸಿಬ್ಬಂದಿ ಕಾರ್ಯದರ್ಶಿಯಾಗಿ ನನ್ನ ಆಂತರಿಕ, ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತಾ ತಂಡಗಳಲ್ಲಿ ಭಾಗವಹಿಸಿ ನೀತಿ ನಿರ್ಧಾರ ಪ್ರಕ್ರಿಯೆಗಳ ಮೇಲ್ವಿಚಾರಣೆ ಮಾಡಿದ್ದಾರೆ. ಸಾರ್ವಜನಿಕ ಪಾಲಿಸಿ ಪ್ರಕ್ರಿಯೆಯಲ್ಲಿ 25 ವರ್ಷಗಳ ಅನುಭವ ಹೊಂದಿದ್ದಾರೆ. ಮೂರು ಅಧ್ಯಕ್ಷರಿಗೆ ಸೇವೆ ಸಲ್ಲಿಸಿದ್ದಾರೆ ಮತ್ತು ದೇಶದ ಅತಿದೊಡ್ಡ ಥಿಂಕ್ ಟ್ಯಾಂಕ್‌ಗಳಲ್ಲಿ ಒಂದನ್ನು ಸುಮಾರು ಒಂದು ದಶಕ ಕಾಲ ಮುನ್ನಡೆಸಿದ್ದಾರೆ” ಎಂದು ಅಧ್ಯಕ್ಷ ಜೋ ಬೈಡೆನ್ ಶ್ಲಾಘಿಸಿದ್ದಾರೆ.
ನೀರಾ ಟಂಡನ್ ಪ್ರಸ್ತುತ ಅಧ್ಯಕ್ಷ ಬೈಡೆನ್ ಮತ್ತು ಮುಖ್ಯ ಕಾರ್ಯದರ್ಶಿಯ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಒಬಾಮಾ ಮತ್ತು ಕ್ಲಿಂಟನ್ ಆಡಳಿತಗಳಲ್ಲಿ, ಅಧ್ಯಕ್ಷೀಯ ಪ್ರಚಾರದ ಥಿಂಕ್ ಟ್ಯಾಂಕ್‌ಗಳಲ್ಲಿ ಸೇವೆ ಸಲ್ಲಿಸಿದ್ದರು. ಹಿಲರಿ ಕ್ಲಿಂಟನ್ ಪ್ರಚಾರಕ್ಕೂ ನೀತಿ ನಿರ್ದೇಶಕರಾಗಿದ್ದರು. ಅವರು ಸೆಂಟರ್ ಫಾರ್ ಅಮೇರಿಕನ್ ಪ್ರೊಗ್ರೆಸ್ ಆಕ್ಷನ್ ಫಂಡ್ ಎಂಬ ಸಂಸ್ಥೆಯ ಅಧ್ಯಕ್ಷೆ ಹಾಗೂ ಸಿಇಒ ಕೂಡ ಆಗಿದ್ದಾರೆ.
ಹಿಂದೆ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯಲ್ಲಿ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಒಬಾಮಾ ಅವರ ಆರೋಗ್ಯ ಸುಧಾರಣಾ ತಂಡದಲ್ಲಿ ಕೆಲಸ ಮಾಡಿದ್ದರು. ನ್ಯೂಯಾರ್ಕ್ ಸಿಟಿ ಶಾಲೆಗಳ ಚಾನ್ಸೆಲರ್‌ಗೆ ಹಿರಿಯ ಸಲಹೆಗಾರರಾಗಿ, ಕ್ಲಿಂಟನ್ ಅವರ ಆಂತರಿಕ ನೀತಿಯ ಸಹಾಯಕ ನಿರ್ದೇಶಕರಾಗಿ, ಹಿಲರಿಯ ಹಿರಿಯ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.
ನೀರಾ ಟಂಡನ್ ಅವರು ಯುಸಿಎಲ್‌ಎಯಿಂದ ತನ್ನ ವಿಜ್ಞಾನ ಪದವಿ, ಯೇಲ್ ಲಾ ಸ್ಕೂಲ್‌ನಿಂದ ಜೂರಿಸ್ ಡಾಕ್ಟರ್ ಪದವಿ ಪಡೆದವರು. ಭಾರತೀಯ ಮೂಲದ ತಂದೆ- ತಾಯಿಗೆ ಜನಿಸಿದ ನೀರಾ, ಐದು ವರ್ಷದವರಿದ್ದಾಗ ಹೆತ್ತವರು ಡೈವೋರ್ಸ್ ಪಡೆದಿದ್ದರು. ತಾಯಿ ಮಾಯಾ, ಇವರನ್ನು ಸರ್ಕಾರಿ ಹಣಕಾಸು ಸೌಲಭ್ಯ ಪಡೆದು ಬೆಳೆಸಿದ್ದರು.
ಇದನ್ನೂ ಓದಿ: Biden to visit India : ಭಾರತಕ್ಕೆ ಸೆಪ್ಟೆಂಬರ್‌ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಪ್ರವಾಸ