Site icon Vistara News

President of World Bank: ಭಾರತೀಯ ಮೂಲದ ಅಜಯ್ ಬಂಗಾ ವರ್ಲ್ಡ್ ಬ್ಯಾಂಕ್ ಅಧ್ಯಕ್ಷರಾಗುವುದು ಪಕ್ಕಾ!

Indian-Origin Ajay Banga Set To Become World Bank President

ವಾಷಿಂಗ್ಟನ್, ಅಮೆರಿಕ: ಜಗತ್ತಿನಲ್ಲಿ ಬಡತನವನ್ನು ನಿರ್ಮೂಲನೆ ಮಾಡುವ ಪಣತೊಟ್ಟಿರುವ ವಿಶ್ವಬ್ಯಾಂಕ್(President of World Bank)ನ ಅಧ್ಯಕ್ಷರಾಗಿ ಭಾರತೀಯ ಮೂಲದ ಅಮೆರಿಕನ್ ಅಜಯ್ ಬಂಗಾ (Ajay Banga) ಅವರು ಅವಿರೋಧವಾಗಿ ಆಯ್ಕೆಯಾಗುವುದು ಪಕ್ಕಾ ಆಗಿದೆ. ವರ್ಲ್ಡ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಲು ಬುಧವಾರ ಕೊನೆಯ ದಿನವಾಗಿತ್ತು. ಈ ಹುದ್ದೆಗೆ ಬೇರೆ ಯಾವುದೇ ರಾಷ್ಟ್ರವು ಅರ್ಜಿ ಸಲ್ಲಿಸಿಲ್ಲ. ಹಾಗಾಗಿ, ಅಜಯ್ ಬಂಗಾ ವರ್ಲ್ಡ್ ಬ್ಯಾಂಕ್ ಪ್ರೆಸಿಡೆಂಟ್ ಆಗಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಬಂಗಾ ಅವರನ್ನು ಅಮೆರಿಕದ ಪರವಾಗಿ ನಾಮನಿರ್ದೇಶನ ಮಾಡಿದ್ದರು.

ಜಗತ್ತಿನ ಬಹುತೇಕ ಟೆಕ್ ಕಂಪನಿಗಳು, ಉತ್ಪಾದನಾ ಕಂಪನಿಗಳು ಹಾಗೂ ಹಣಕಾಸು ಸಂಸ್ಥೆಗಳು ಭಾರತೀಯರು ಅಥವಾ ಭಾರತೀಯ ಮೂಲದ ವ್ಯಕ್ತಿಗಳ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈಗ ಈ ಸಾಲಿಗೆ ವರ್ಲ್ಡ್ ಬ್ಯಾಂಕ್ ಕೂಡಾ ಸೇರ್ಪಡೆಯಾಗಲಿದೆ.

ಮಾಸ್ಟರ್‌ಕಾರ್ಡ್ ಇಂಕ್‌ನ ಮಾಜಿ ಸಿಇಒ ಅಜಯ್ ಬಂಗಾ ಅವರನ್ನು ಕಳೆದ ತಿಂಗಳು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ್ದರು. ವರ್ಲ್ಡ್ ಬ್ಯಾಂಕ್‌ನ ಹಾಲಿ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಅವರ ಕಳೆದ ವರ್ಷ ವಿಶ್ವ ಬ್ಯಾಂಕಿನ ಅಧ್ಯಕ್ಷ ಸ್ಥಾನವನ್ನು ತೊರೆಯುವುದಾಗಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಹೊಸ ಅಧ್ಯಕ್ಷರ ಆಯ್ಕೆ ಮಾಡಲಾಗುತ್ತಿದೆ. ಈ ಸ್ಥಾನಕ್ಕೆ ಸದಸ್ಯ ರಾಷ್ಟ್ರಗಳು ವ್ಯಕ್ತಿಗಳನ್ನು ಸೂಚಿಸಬಹುದಾಗಿದೆ. ಆದರೆ, ಈವರೆಗೆ ಅಮೆರಿಕ ಹೊರತುಪಡಿಸಿ ಬೇರೆ ಯಾವುದೇ ರಾಷ್ಟ್ರವು ತಮ್ಮ ವ್ಯಕ್ತಿಯನ್ನು ಹೆಸರಿಸಲಿಲ್ಲ. ಹಾಗಾಗಿ, ಅಜಯ್ ಬಂಗಾ ಅವರು ಅಧ್ಯಕ್ಷರಾಗುವುದು ಬಹುತೇಕ ಪಕ್ಕಾ ಆಗಿದೆ.

ಈಗ ವಿಶ್ವ ಬ್ಯಾಂಕಿನ ಅಧ್ಯಕ್ಷ ಹುದ್ದೆಯನ್ನು ತೊರೆಯುತ್ತಿರುವ ಡೇವಿಡ್ ಮಾಲ್ಪಾಸ್ ಅವರನ್ನು 2019ರಲ್ಲಿ ಅಮೆರಿಕದ ಅಂದಿನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ನಾಮನಿರ್ದೇಶನ ಮಾಡಿದ್ದರು. ಡೇವಿಡ್ ಮಾಲ್ಪಾಸ್ ಅವರೂ ಅವಿರೋಧವಾಗಿಯೇ ಆಯ್ಕೆಯಾಗಿದ್ದರು. ವರ್ಲ್ಡ್ ಬ್ಯಾಂಕಿನ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯವಾಗಿ ಅಮೆರಿಕ ಪ್ರಜೆಗಳೇ ನಿರ್ವಹಿಸುತ್ತಾ ಬಂದಿದ್ದಾರೆ. ಈ ಬಾರಿಯೂ ಅದೇ ಸಂಪ್ರದಾಯ ಮುಂದುವರಿದಿದೆ.

ಅಮೆರಿಕದ ಹೊರತಾಗಿ ಯಾವುದೇ ದೇಶಗಳು ಅಭ್ಯರ್ಥಿಗಳನ್ನು ಘೋಷಿಸದಿದ್ದರೂ, ವಿಶ್ವ ಬ್ಯಾಂಕ್ ನಿಯಮಗಳು ಸದಸ್ಯ ರಾಷ್ಟ್ರಗಳಿಗೆ ಬುಧವಾರ ಕೊನೆಯಾಗುವ ಗುಡುವಿನೊಳಗೇ ನಾಮನಿರ್ದೇಶನಗಳನ್ನು ಮಾಡಲು ಅವಕಾಶ ಮಾಡಿಕೊಡುತ್ತವೆ. ಬಂಗಾ ಅವರು ಖಾಸಗಿ ವಲಯದಲ್ಲಿ, ವಿಶೇಷವಾಗಿ ಹಣಕಾಸು ಮತ್ತು ಬ್ಯಾಂಕಿಂಗ್‌ನಲ್ಲಿ ಸುದೀರ್ಘ ವೃತ್ತಿಜೀವನವನ್ನು ಸವೆಸಿದ್ದಾರೆ. ಕ್ಲೈಮೇಟ್ ಸೈನ್ಸ್ ಕಡೆಗೆ ತಮ್ಮ ಬದ್ಧತೆಯನ್ನುಪ್ರದರ್ಶಿಸಿರುವ ಬಂಗಾ ಅವರ ಪ್ರಕಾರ, ಬಡತನ ಮತ್ತು ಪರಿಸರ ಸಮಸ್ಯೆಗಳು ಒಂದಕ್ಕೊಂದು ಹೆಣೆದುಕೊಂಡಿವೆ. ಈ ನಿಟ್ಟಿನಲ್ಲಿ ಕೆಲಸ ಮಾಡಲು ಅವರು ಯೋಜನೆಗಳನ್ನು ರೂಪಿಸಿಕೊಂಡಿದ್ದಾರೆ.

63 ವರ್ಷದ ಬಂಗಾ ಅವರು ತಮ್ಮ ಪರವಾಗಿ ಬೆಂಬಲವನ್ನು ಕ್ರೋಡೀಕರಿಸಲು ಹೆಚ್ಚಿನ ಸಮಯವನ್ನು ಜಾಗತಿಕ ಪ್ರವಾಸದಲ್ಲಿ ಕಳೆದಿದ್ದಾರೆ. ಅವರು ಸಾಲದಾತ ಹಾಗೂ ಸಾಲ ಪಡೆಯುವ ರಾಷ್ಟ್ರಗಳನ್ನು ಪ್ರವಾಸ ಕೈಗೊಂಡು ಬೆಂಬಲ ಕೋರಿದ್ದಾರೆ. ಈ ಪೈಕಿ ಚೀನಾ, ಕೆನ್ಯಾ ಮತ್ತು ಐವೋರಿ ಕೋಸ್ಟ್, ಇಂಗ್ಲೆಂಡ್, ಬೆಲ್ಜಿಯಂ, ಪನಾಮಾ ಹಾಗೂ ಭಾರತ ಪ್ರಮುಖ ರಾಷ್ಟ್ರಗಳಾಗಿವೆ.

ಇದನ್ನೂ ಓದಿ: Ajay Banga : ವಿಶ್ವಬ್ಯಾಂಕ್‌ ಅಧ್ಯಕ್ಷ ಹುದ್ದೆಗೆ ಅಜಯ್‌ ಬಾಂಗಾ ಅಮೆರಿಕ ಅಭ್ಯರ್ಥಿ, ಚೀನಾ ಆಕ್ಷೇಪ

ವಾಷಿಂಗ್ಟನ್‌ ಮೂಲದ ವರ್ಲ್ಡ್ ಬ್ಯಾಂಕ್, ಕಳೆದ ಫೆಬ್ರವರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿಗಳನ್ನು ಆಹ್ವಾನಿಸಿತ್ತು. ನಾಮನಿರ್ದೇಶನಕ್ಕಿರುವ ಗಡುವ ಮುಕ್ತಾಯವಾದ ಬಳಿಕ, ಸ್ಪರ್ಧಾಳಗಳನ್ನು ಬ್ಯಾಂಕ್ ಮಂಡಳಿಯು ಸಂದರ್ಶನ ಮಾಡುತ್ತದೆ. ಈ ಪ್ರಕ್ರಿಯೆ ಮೇ ತಿಂಗಳ ಆರಂಭದ ಹೊತ್ತಿಗೆ ಮುಕ್ತಾಯವಾಗಲಿದೆ ಎನ್ನಲಾಗುತ್ತಿದೆ.

Exit mobile version