Site icon Vistara News

ಆಸ್ಟ್ರೇಲಿಯಾಕ್ಕೆ ಕೊಕೇನ್‌ ರಫ್ತು; ಬ್ರಿಟನ್‌ನಲ್ಲಿ ಭಾರತೀಯ ಮೂಲದ ದಂಪತಿಗೆ 33 ವರ್ಷಗಳ ಜೈಲು ಶಿಕ್ಷೆ

england crime

england crime

ಲಂಡನ್‌: ಆಸ್ಟ್ರೇಲಿಯಾಕ್ಕೆ ಮಾದಕ ವಸ್ತು ರಫ್ತು ಮಾಡಿದ ಆರೋಪದ ಮೇಲೆ ಭಾರತೀಯ ಮೂಲದ ದಂಪತಿಗೆ ಬ್ರಿಟನ್‌ನಲ್ಲಿ 33 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ದಂಪತಿ ವಿರುದ್ಧ ಅರ್ಧ ಟನ್‌ಗಿಂತ ಅಧಿಕ ಕೊಕೇನ್‌ (Cocaine) ಅನ್ನು ಆಸ್ಟ್ರೇಲಿಯಾಕ್ಕೆ ಸಾಗಿಸಿದ ಆರೋಪ ಕೇಳಿ ಬಂದಿದೆ (Crime News).

ಈಲಿಂಗ್‌ ಹ್ಯಾನ್ವೆಲ್‌ನ ಆರತಿ ಧೀರ್ (59) ಮತ್ತು ಕವಲ್ಜಿತ್ ಸಿಂಗ್ ರೈಜಾಡಾ (35) ಶಿಕ್ಷೆಗೆ ಗುರಿಯಾದ ದಂಪತಿ. 2021ರ ಮೇಯಲ್ಲಿ ಸಿಡ್ನಿಯಲ್ಲಿ ದಂಪತಿ ರಫ್ತು ಮಾಡಿದ್ದ ಬಾಕ್ಸ್‌ನಲ್ಲಿದ್ದ 57 ಮಿಲಿಯನ್ ಪೌಂಡ್ ಮೌಲ್ಯದ ಕೊಕೇನ್ ಅನ್ನು ಆಸ್ಟ್ರೇಲಿಯಾದ ಬಾರ್ಡರ್ ಫೋರ್ಸ್ (Australian Border Force) ಪತ್ತೆ ಹಚ್ಚಿತ್ತು ಎಂದು ರಾಷ್ಟ್ರೀಯ ಅಪರಾಧ ಸಂಸ್ಥೆ (NCA) ತನಿಖಾಧಿಕಾರಿಗಳು ತಿಳಿಸಿದ್ದಾರೆ.

ವಿಮೆ ಹಣಕ್ಕಾಗಿ 2017ರಲ್ಲಿ ತಮ್ಮ 11 ವರ್ಷದ ದತ್ತು ಪುತ್ರ ಗೋಪಾಲ್ ಸೆಜಾನಿ ಹತ್ಯೆ ಮಾಡಿದ ಆರೋಪ ಈ ದಂಪತಿ ಮೇಲಿದೆ. ಇವರು 2015ರಲ್ಲಿ ಗುಜರಾತ್‌ಗೆ ಆಗಮಿಸಿ ಗೋಪಾಲ್‌ನನ್ನು ದತ್ತು ಪಡೆದಿದ್ದರು. ಆತನಿಗೆ ಲಂಡನ್‌ನಲ್ಲಿ ಉತ್ತಮ ಜೀವನವನ್ನು ನೀಡುವ ಭರವಸೆ ನೀಡಿದ್ದರು. ಆದರೆ ಬಳಿಕ ಆತನ್ನು ಹತ್ಯೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದಂಪತಿಯನ್ನು ಹಸ್ತಾಂತರಿಸುವಂತೆ ಭಾರತವು ಈ ಹಿಂದೆ ಬ್ರಿಟನ್‌ ಸರ್ಕಾರವನ್ನು ಕೋರಿತ್ತು.

ಕೊಕೇನ್ ಸಾಗಾಟದ ಆರೋಪ

ಸೌತ್ ವಾರ್ಕ್ ಕ್ರೌನ್ ನ್ಯಾಯಾಲಯದಲ್ಲಿ ಸೋಮವಾರ ನಡೆದ ವಿಚಾರಣೆಯ ನಂತರ ಮಾದಕ ವಸ್ತುಗಳ ರಫ್ತು ಮತ್ತು ಅಕ್ರಮ ಹಣ ವರ್ಗಾವಣೆ ಆರೋಪಗಳಲ್ಲಿ ದಂಪತಿ ತಪ್ಪಿತಸ್ಥರೆಂದು ಘೋಷಿಸಲಾಯಿತು. ಈ ಮಾದಕ ವಸ್ತುಗಳನ್ನು ಯುಕೆಯಿಂದ ವಾಣಿಜ್ಯ ವಿಮಾನದ ಮೂಲಕ ರವಾನಿಸಲಾಗಿತ್ತು. ಇದು ಆರು ಲೋಹದ ಟೂಲ್ ಬಾಕ್ಸ್ ಗಳನ್ನು ಒಳಗೊಂಡಿತ್ತು. ಸುಮಾರು 514 ಕೆ.ಜಿ. ಕೊಕೇನ್ ಇರುವುದು ಕಂಡುಬಂದಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಡ್ರಗ್ಸ್‌ ಸರಬರಾಜು ಮಾಡುವ ಕಂಪೆನಿ ಹೊಂದಿರುವ ಈ ದಂಪತಿ ಲೋಹದ ಟೂಲ್‌ ಬಾಕ್ಸ್‌ಗಳ ಜತೆ ಮಾದಕ ದ್ರವ್ಯವನ್ನು ಇಟ್ಟು ವಿಮಾನದ ಮೂಲಕ ರಫ್ತು ಮಾಡಿತ್ತು ಎನ್ನಲಾಗಿದೆ. ಆದರೆ ಆರತಿ ಧೀರ್ ಮತ್ತು ಕವಲ್ಜಿತ್ ಸಿಂಗ್ ರೈಜಾಡಾ ಈ ಆರೋಪಗಳನ್ನು ನಿರಾಕರಿಸಿದ್ದಾರೆ.

ಎಷ್ಟು ಮೌಲ್ಯ?

ಬ್ರಿಟನ್‌ಗೆ ಹೋಲಿಸಿದರೆ ಆಸ್ಟ್ರೇಲಿಯಾದಲ್ಲಿ ಕೊಕೇನ್‌ಗೆ ಬೆಲೆ ಹೆಚ್ಚು. ಬ್ರಿಟನ್‌ನಲ್ಲಿ ಒಂದು ಕೆ.ಜಿ.. ಕೊಕೇನ್‌ಗೆ 26,000 ಪೌಂಡ್‌ ಇದ್ದರೆ ಆಸ್ಟ್ರೇಲಿಯಾದಲ್ಲಿ 11,0000 ಪೌಂಡ್‌ ಇದೆ. ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುವ ಏಕೈಕ ಉದ್ದೇಶದಿಂದ ವಿಯೆಫ್ಲಿ ಫ್ರೈಟ್ ಸರ್ವೀಸಸ್ (Viefly Freight Services) ಎಂಬ ಕಂಪನಿಯನ್ನು ಧೀರ್ ಮತ್ತು ರೈಜಾಡಾ ಸ್ಥಾಪಿಸಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ವಿವಿಧ ವಂಚನೆಯ ಜಾಲ

ಧೀರ್ ಮತ್ತು ರೈಜಾಡಾ ಅವರನ್ನು 2021ರ ಜೂನ್ 21ರಂದು ಹ್ಯಾನ್ವೆಲ್‌ನಲ್ಲಿರುವ ಅವರ ಮನೆಯಿಂದ ಬಂಧಿಸಲಾಗಿತ್ತು. ಜತೆಗೆ ಈ ವೇಳೆ 5,000 ಪೌಂಡ್ ಮೌಲ್ಯದ ಚಿನ್ನ ಲೇಪಿತ ಬೆಳ್ಳಿಯ ಗಟ್ಟಿ, 13,000 ಪೌಂಡ್ ನಗದು ಪತ್ತೆಯಾಗಿತ್ತು. ಹೊರ ಬಂದ ಇವರನ್ನು ಹೆಚ್ಚಿನ ತನಿಖೆಯ ನಂತರ 2023ರ ಫೆಬ್ರವರಿಯಲ್ಲಿ ಮತ್ತೆ ಬಂಧಿಸಲಾಯಿತು. ರೈಜಾಡಾ ತನ್ನ ತಾಯಿಯ ಹೆಸರಿನಲ್ಲಿ ಬಾಡಿಗೆಗೆ ಪಡೆದಿದ್ದ ಹ್ಯಾನ್ವೆಲ್‌ನ ಶೇಖರಣಾ ಘಟಕದಲ್ಲಿ ಅಡಗಿಸಿಟ್ಟಿದ್ದ ಸುಮಾರು 3 ಮಿಲಿಯನ್ ಪೌಂಡ್ ಹಣವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಕೇವಲ ಕೆಲವು ಸಾವಿರ ಪೌಂಡ್‌ಗಳ ಲಾಭವನ್ನು ಘೋಷಿಸಿದರೂ ಅವರು ಈಲಿಂಗ್‌ನಲ್ಲಿ 800,000 ಪೌಂಡ್‌ನ ಫ್ಲ್ಯಾಟ್ ಮತ್ತು 62,000 ಪೌಂಡ್‌ನ ಲ್ಯಾಂಡ್ ರೋವರ್ ಖರೀದಿಸಿರುವುದು ವಿಚಾರಣೆ ವೇಳೆಗೆ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: Fraud Case : ಪಿಎಂ ಹೆಸರಲ್ಲಿ ಲೂಟಿ; ಲಕ್ಷ ಲಕ್ಷ ಕಳೆದುಕೊಂಡ ಬೆಂಗಳೂರು ಉದ್ಯಮಿ

ಇಬ್ಬರೂ ತಮ್ಮ ಘೋಷಿತ ಆದಾಯಕ್ಕಿಂತ ಹೆಚ್ಚಿನ ಹಣವನ್ನು ಬ್ಯಾಂಕ್ ಖಾತೆಗಳಲ್ಲಿ ಹೊಂದಿದ್ದಾರೆ ಎನ್ನುವ ಸತ್ಯವೂ ಹೊರಗೆ ಬಂದಿದೆ. ಅವರು 2019ರಿಂದ 22 ವಿವಿಧ ಬ್ಯಾಂಕ್ ಖಾತೆಗಳಲ್ಲಿ ಸುಮಾರು 7,40,000 ಪೌಂಡ್ ಅನ್ನು ಠೇವಣಿ ಮಾಡಿರುವುದು ಬಹಿರಂಗವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version