ನ್ಯೂಯಾರ್ಕ್: ಹಲ್ಲೆ ಪ್ರಕರಣದಲ್ಲಿ ಪೊಲೀಸರು ಹುಡುಕಾಟ ನಡೆಸುತ್ತಿದ್ದ ಭಾರತೀಯ ಮೂಲದ ವ್ಯಕ್ತಿ (Indian origin man) ನ್ಯೂಯಾರ್ಕ್‌ನ ಸ್ಯಾನ್ ಆಂಟೋನಿಯೋ (San Antonio) ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. 42 ವರ್ಷದ ಸಚಿನ್ ಸಾಹೂ (Sachin Sahoo) ಎಂಬಾತ ಏ.21ರಂದು ಪೊಲೀಸ್ ಅಧಿಕಾರಿಗಳ ಗುಂಡೇಟಿ (Shot Dead) ಗೆ ಬಲಿಯಾಗಿದ್ದಾನೆ. ಮೂಲತಃ ಉತ್ತರಪ್ರದೇಶದವನಾಗಿರುವ ಸಾಹೂ ಅಮೆರಿಕದ ಪೌರತ್ವ (US citizenship) ಪಡೆದು ಅಲ್ಲೇ ವಾಸವಾಗಿದ್ದ ಎನ್ನಲಾಗಿದೆ.
ಪೊಲೀಸ್ ಪ್ರಾಥಮಿಕ ತನಿಖೆ ವರದಿ ಪ್ರಕಾರ, ಏ.21, ಸಂಜೆ 6.30ರ ವೇಳೆ ಸ್ಯಾನ್ ಆಂಟೋನಿಯೋದಲ್ಲಿ ಯಾವುದೋ ಒಂದು ಮನೆಯಲ್ಲಿ ಮಾರಣಾಂತಿಕ ಹಲ್ಲೆ ಪ್ರಕರಣದ ತನಿಖೆಗೆಂದು ಪೊಲೀಸರು ತೆರಳಿದ್ದಾಗ ವಾಹನ ಡಿಕ್ಕಿಯಾಗಿ 51 ಮಹಿಳೆ ಗಂಭೀರವಾಗಿ ಗಾಯಗೊಂಡಿರುವುದು ಕಂಡು ಬಂದಿತ್ತು. ಈ ಅಪಘಾತವನ್ನು ಸಾಹೂ ಉದ್ದೇಶಪೂರ್ವಕವಾಗಿ ಮಾಡಿದ್ದ ಹಾಗೂ ಪೊಲೀಸರನ್ನು ಕಂಡ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದ. ತಕ್ಷಣ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು ಸಾಹೂ ಹುಡುಕಾಟಕ್ಕೆ ಮುಂದಾದರು.
ಈ ಪ್ರಕರಣದಲ್ಲಿ ಸ್ಯಾನ್ ಆಂಟೋನಿಯೋ ಪೊಲೀಸರು ಸಾಹೂ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದ್ದರು. ಸುಮಾರು ಗಂಟೆಗಳ ಬಳಿಕ ಸಾಹೂ ತನ್ನ ಮನೆಗೆ ಮರಳಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸ್ ಅಧಿಕಾರಿಗಳು ಸಾಹೂವನ್ನು ಹಿಡಿಯಲು ಬರುತ್ತಿದ್ದಂತೆ ಆತ ತನ್ನ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದ. ಆಗ ಕಾರನ್ನು ತಡೆಯಲು ಯತ್ನಿಸಿದ ಪೊಲೀಸರಿಗೆ ಡಿಕ್ಕಿ ಹೊಡೆದಿದ್ದಾನೆ. ತಮ್ಮ ಪ್ರಾಣ ರಕ್ಷಣೆಗೆ ಮುಂದಾದ ಪೊಲೀಸರು ಸಾಹೂ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡು ತಗುಲುತ್ತಿದ್ದಂತೆ ಸಾಹೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಮತ್ತೊಂದೆಡೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್ ಅಧಿಕಾರಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಹಿರಿಯ ಅಧಿಕಾರಿ ಬಿಲ್ ಮ್ಯಾಕ್ ಮ್ಯಾನಸ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: China Road: ಕಾಶ್ಮೀರ ಗಡಿಯಲ್ಲಿ ರಸ್ತೆ ನಿರ್ಮಿಸಿ ಚೀನಾ ಮತ್ತೆ ಉದ್ಧಟತನ; ಇಲ್ಲಿವೆ ಸ್ಯಾಟಲೈಟ್ ಚಿತ್ರಗಳು
ಇನ್ನು ಸಾಹೂ ಕಾರಿನಲ್ಲಿ ಡಿಕ್ಕಿ ಹೊಡೆದಿದ್ದ ಮಹಿಳೆ ಆತನ ರೂಮೇಟ್ ಆಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ಈಗಾಗಲೇ ಹಲವು ಆಪರೇಷನ್‌ಗಳನ್ನು ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮತ್ತೊಂದೆಡೆ ಘಟನೆ ಬಗ್ಗೆ ವರದಿಯಾಗುತ್ತಿದ್ದಂತೆ ಸಾಹೂ ಮಾಜಿ ಪತ್ನಿ ಲೀ ಗೋಲ್ಡ್‌ಸ್ಟೀನ್ ಪ್ರತಿಕ್ರಿಯಿಸಿದ್ದು, ಸಾಹೂ ಸುಮಾರು 10 ವರ್ಷಗಳಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ. ಕೆಲವೊಮ್ಮೆ ತಾನು ಏನು ಮಾಡುತ್ತಿದ್ದೇನೆ ಎಂಬುದೇ ಆತನಿಗೆ ಅರಿವಿರಲಿಲ್ಲ. ಹೀಗಾಗಿಯೇ ನಾವು ಬೇರೆಯಾಗಿದ್ದೇವೆ ಎಂದು ಹೇಳಿದ್ದಾರೆ. ಇನ್ನು ಘಟನೆ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಲು ಪೊಲೀಸ್ ಬಾಡಿ ಕ್ಯಾಮ್ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.