ಕ್ವೀನ್ ಎಲಿಜಬೆತ್ ನಿಧನದ ಬಳಿಕ ಬ್ರಿಟನ್ ರಾಜಮನೆತನ(Britain Royal Family)ವು ಮತ್ತೆ ಸುದ್ದಿಯಲ್ಲಿದೆ. ಪ್ರಾಚೀನ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಬ್ರಿಟನ್‌ನಲ್ಲಿ ಈಗಲೂ ರಾಯಲ್ ಫ್ಯಾಮಿಲಿಗೇ ಅಗ್ರ ಗೌರವ. ಆಧುನಿಕ ರಾಷ್ಟ್ರಗಳಲ್ಲಿ ಜನರೇ ಪ್ರಭುಗಳು. ಬ್ರಿಟನ್ ಕೂಡ ಇದಕ್ಕೆ ಹೊರತಾಗಿಲ್ಲ. ಆದರೂ, ಅವರು ತಮ್ಮ ಕಿಂಗ್/ಕ್ವೀನ್, ರಾಯಲ್ ಫ್ಯಾಮಿಲಿ, ಸಂಪ್ರದಾಯಗಳು, ಪದ್ಧತಿಗಳು, ಆಚಾರ-ವಿಚಾರಗಳಿಗೆ ಬಹಳ ಮಹತ್ವ ನೀಡುತ್ತಾರೆ. ಸಕಾರಾತ್ಮಕ ನೆಲೆಯಲ್ಲಿ ರಾಯಲ್ ಫ್ಯಾಮಿಲಿ ಹೇಗೆ ಆದರ್ಶವಾಗಿದೆಯೋ, ರಾಯಲ್ ಫ್ಯಾಮಿಲಿಯ ಸದಸ್ಯರ ಹರಾಕಿರಿಗಳಿಂದ ಅಗೌರವವೂ ಬಂದಿದೆ. ರಾಜ ಮನೆತನದೊಳಗಿನ ಜಗಳಗಳು, ಸಣ್ಣತನ, ಈರ್ಷೆ, ಹೊಟ್ಟೆಕಿಚ್ಚು, ಕೊಲೆ, ಲೈಂಗಿಕ ಸಂಬಂಧಗಳು ಇತ್ಯಾದಿ ವಿಷಯಗಳು ರಾಯಲ್ ಫ್ಯಾಮಿಲಿಯನ್ನು ಸದಾ ಸ್ಪಾಟ್‌ಲೈಟ್‌ನಲ್ಲಿ ಇಟ್ಟಿರುತ್ತವೆ.
ಬ್ರಿಟನ್‌ನಲ್ಲಿ ಜನರೇ ನೇರ ಅಧಿಕಾರದಲ್ಲಿದ್ದರೂ ಬ್ರಿಟನ್ ಕ್ವೀನ್ ಅಥವಾ ಕಿಂಗ್ ಕೆಲಸವಾದರೂ ಏನು, ಜವಾಬ್ದಾರಿಗಳೇನು, ರಾಯಲ್ ಫ್ಯಾಮಿಲಿ ಇತಿಹಾಸ, ರಾಜ/ರಾಣಿಯರ ಸಂಬಂಧಗಳು, ಅಫೇರ್ಸ್, ಒಳ ಜಗಳ, ದಾಯಾದಿ ಕಲಹ ಇತ್ಯಾದಿ ಮಾಹಿತಿ ಇಲ್ಲಿದೆ….
ಬ್ರಿಟನ್ ಕಿಂಗ್ ಮಾಡುವುದಾದರೂ ಏನು?
ನಾವು ಆಧುನಿಕ ಜಗತ್ತಿನಲ್ಲಿದ್ದೇವೆ; ಜನರೇ ಆಡಳಿತಗಾರರು; ಅವರೇ ರಾಜರು. ಎಲ್ಲ ದೇಶಗಳಲ್ಲೂ ಇದೇ ನೀತಿ ಇದೆ. ಹಾಗಿದ್ದೂ, ಬ್ರಿಟನ್‌ನಲ್ಲಿ ರಾಜಮನೆತನ ಇನ್ನೂ ಅಧಿಕೃತವಾಗಿದೆ. ರಾಯಲ್ ಫ್ಯಾಮಿಲಿಗೆ ಎಲ್ಲಿಲ್ಲದ ಮರ್ಯಾದೆ. ಅಲ್ಲೂ ಪ್ರಜಾಪ್ರಭುತ್ವವಿದೆ. ಹಾಗಿದ್ದೂ, ರಾಜನಿಗೆ ಏನು ಕೆಲಸ, ರಾಯಲ್ ಫ್ಯಾಮಿಲಿಯಿಂದ ಏನು ಲಾಭ?
ಉತ್ತರ ತುಂಬ ಸಿಂಪಲ್- ರಾಜ ಹೆಸರಿಗಷ್ಟೇ. ರಾಜನಿಗಿರುವ ಎಲ್ಲ ಅಧಿಕಾರ ಸಾಂಕೇತಿಕ. ರಾಜಕೀಯವಾಗಿ ರಾಜ ತಟಸ್ಥ. ಒಂದಿಷ್ಟು ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ. ಅರ್ಥಾತ್, ಬ್ರಿಟನ್‌ನಲ್ಲಿ ರಿಯಲ್ ಪವರ್ಸ್ ಪ್ರಧಾನಿ ಹಾಗೂ ಆತನ ಮಂತ್ರಿ ಮಂಡಳದಲ್ಲಿದೆ! ಮತ್ತೊಂದು ಅರ್ಥದಲ್ಲಿ ಜನರೇ ರಾಜರು!
ಬ್ರಿಟನ್ ರಾಜಮನೆತನದ ಇತಿಹಾಸ
ಬ್ರಿಟನ್ ರಾಜಮನೆತನಕ್ಕೆ ಸುದೀರ್ಘ ಇತಿಹಾಸವಿದೆ. 9ನೇ ಶತಮಾನದಲ್ಲಿ ಬ್ರಿಟನ್ ರಾಜಮನೆತನ ಇತಿಹಾಸದ ಬೇರುಗಳಿವೆ. ವೆಸ್ಸೆಕ್ಸ್‌ನ ಆಂಗ್ಲೋ-ಸ್ಯಾಕ್ಸೋನ್ ರಾಜ್ಯವೇ ಮುಂದೆ ಇಂಗ್ಲಿಷ್ ರಾಜ್ಯವಾಗಿ ಉದಯವಾಯಿತು. ಈಗಿರುವ ಬ್ರಿಟನ್ ರಾಜಮನೆತನದ ಇತಿಹಾಸವು 1707ರಿಂದ ಆರಂಭವಾಗುತ್ತದೆ. ಈ ರಾಯಲ್ ಫ್ಯಾಮಿಲಿಗೂ ಮೊದಲು ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಪ್ರತ್ಯೇಕ ರಾಜ್ಯಗಳಾಗಿದ್ದವು. ಆ ಬಳಿಕ ಮೂರು ರಾಜ್ಯಗಳು ಜತೆಯಾಗಿ ಬ್ರಿಟನ್ ರಾಜ್ಯವು ಸೃಷ್ಟಿಯಾಯಿತು. ಜತೆಗೇ ರಾಯಲ್ ಫ್ಯಾಮಿಲಿ ಕೂಡ.
ಐದನೇ ರಾಜ ಜಾರ್ಜ್ (1865-1936) ಮತ್ತು ಮೇರಿ ಆಪ್ ಟೆಕ್ ಅವರು ಎರಡನೇ ಎಲಿಜಬೆತ್ ಅವರ ಅಜ್ಜ ಮತ್ತು ಅಜ್ಜಿ. ಇವರಿಗೆ ಆರು ಮಕ್ಕಳು. ಈ ಪೈಕಿ ನಾಲ್ವರಿಗೆ ಮಕ್ಕಳಿದ್ದರೆ, ಇಬ್ಬರಿಗೆ ಇರಲಿಲ್ಲ. ಹಿರಿಯ ಮಗ 8ನೇ ಕಿಂಗ್ ಎಡ್ವರ್ಡ್ 1936ರಲ್ಲಿ ತಂದೆಯ ನಂತರ, ಬ್ರಿಟನ್ ರಾಜನಾದ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಮೊನ್ನೆ ನಿಧನರಾದ ಎರಡನೇ ಎಲಿಜಬೆತ್ ಅವರ ದೊಡ್ಡಪ್ಪ. ರಾಣಿ ಎಲಿಜಬೆತ್ ಅವರ ಅಪ್ಪ ಆರನೇ ಕಿಂಗ್ ಜಾರ್ಜ್ ಅವರು ಕಿಂಗ್ ಎಡ್ವರ್ಡ್ ಸಹೋದರ.
ವಿಚ್ಛೇದಿತಳಿಗಾಗಿ ಸಿಂಸಾಹನ ತೊರೆದ ಎಡ್ವರ್ಡ್!
ಎಂಟನೇ ಕಿಂಗ್ ಎಡ್ವರ್ಡ್ ಅಮೆರಿಕದ ವಿಚ್ಛೇದಿತ ವಾಲಿಸ್ ಸಿಂಪ್ಸನ್ ಅವರನ್ನು ಮದುವೆಯಾಗಲು ನಿರ್ಧರಿಸಿದರು. ಹಾಗಾಗಿ, ಅವರು ರಾಯಲ್ ಫ್ಯಾಮಿಲಿ ಕರ್ತವ್ಯಗಳಿಂದ ಮುಕ್ತರಾಗಬೇಕ್ದಾದರಿಂದ, ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳುವುದ್ಕಕಾಗಿ ಸಿಂಹಾಸನವನ್ನು ತೊರೆದರು.
ಎಲಿಜಬೆತ್ ಅಪ್ಪ ರಾಜನಾದ!
ರಾಜನಾಗಿದ್ದ ತನ್ನ ಪ್ರೀತಿಗಾಗಿ 8ನೇ ಎಡ್ವರ್ಡ್ ಕಿಂಗ್ ಸಿಂಹಾಸನ ತೊರೆದ ಬಳಿಕ, ಅವರ ಸಹೋದರ ಪ್ರಿನ್ಸ್ 6ನೇ ಜಾರ್ಜ್ ಬ್ರಿಟನ್ ರಾಜನಾದ. ಮುಂದೆ 15 ವರ್ಷಗಳ ಕಾಲ ಬ್ರಿಟನ್ ರಾಜಮನೆತನದ ಜವಾಬ್ದಾರಿಗಳನ್ನು ನಿರ್ವಹಿಸಿದ. 6ನೇ ಕಿಂಗ್ ಜಾರ್ಜ್ ಮತ್ತು ಪತ್ನಿ ಎಲಿಜಬೆತ್ ಅವರಿಗೆ ಇಬ್ಬರು ಹೆಣ್ಣುಮಕ್ಕಳು ಜನಿಸಿದರು. ಆ ಪೈಕಿ ಮೊದಲನೆಯವಳೇ ಎರಡನೇ ಎಲಿಜಬೆತ್(ಮೊನ್ನೆಯಷ್ಟೇ ನಿಧನರಾದರು) ಹಾಗೂ ಅವರ ಸಹೋದರಿ ಮಾರ್ಗರೇಟ್.
2ನೇ ಎಲಿಜಬೆತ್ ರಾಜ್ಯಭಾರ ಶುರು
ರಾಜರಾಗಿದ್ದ 6ನೇ ಕಿಂಗ್ ಜಾರ್ಜ್ ಅವರು 1952ರಲ್ಲಿ ನಿಧನರಾದರು. ಗಂಡುಮಕ್ಕಳು ಇಲ್ಲದ್ದರಿಂದ ಸಹಜವಾಗಿಯೇ ಎರಡನೇ ಎಲಿಜಬೆತ್ ಉತ್ತರಾಧಿಕಾರಿಯಾದರು. ಹೀಗಿದ್ದೂ ಉತ್ತರಾಧಿಕಾರಿಯಾಗುವ ಅನುಮಾನಗಳಿದ್ದವು. ಆದರೆ, ಬ್ರಿಟನ್ ಇತಿಹಾಸದಲ್ಲಿ ಸಹಜ ಉತ್ತರಾಧಿಕಾರಿಯೇ ರಾಜ ಅಥವಾ ರಾಣಿಯಾಗುವುದು ನಡೆದುಕೊಂಡು ಬಂದಿದ್ದರಿಂದ, ಅಂತಿಮವಾಗಿ 2ನೇ ಕ್ವೀನ್ ಎಲಿಜಬೆತ್ 1952 ಫೆಬ್ರವರಿ 6ರಂದು ಬ್ರಿಟನ್ ಸಿಂಹಾಸನವೇರಿದರು. ಎಡಿನ್‌ಬರ್ಗ್ ಡ್ಯೂಕ್ ಪ್ರಿನ್ಸ್ ಫಿಲಿಪ್ ಅವರನ್ನು ವಿವಾಹವಾದರು. ಇವರಿಗೆ ನಾಲ್ವರು ಮಕ್ಕಳು. ಮೂರನೇ ಪ್ರಿನ್ಸ್ ಚಾರ್ಲ್ಸ್(ಹಾಲಿ ಬ್ರಿಟನ್ ರಾಜ), ಪ್ರಿನ್ಸೆಸ್ ರಾಯಲ್ ಆ್ಯನಿ, ಪ್ರಿನ್ಸ್ ಆಂಡ್ರೋ ಮತ್ತು ಪ್ರಿನ್ಸ್ ಎಡ್ವರ್ಡ್.
ಈಗ ಮೂರನೇ ಚಾರ್ಲ್ಸ್ ರಾಜ
ತಮ್ಮ 73ನೇ ವಯಸ್ಸಿನಲ್ಲಿ ರಾಜನಾಗಿದ್ದಾರೆ ಮೂರನೇ ಚಾರ್ಲ್ಸ್. ಅಲ್ಲಿ ತನಕ ಅವರು ಬ್ರಿಟನ್‌ನ ಪ್ರಿನ್ಸ್ ಆಗಿದ್ದರು! ತಾಯಿ ಎರಡನೇ ಎಲಿಜಬೆತ್ ಅವರು ಬ್ರಿಟನ್ ರಾಜಮನೆತನದಲ್ಲಿ ಅತಿ ದೀರ್ಘಕಾಲದ ಆಡಳಿತ ನಡೆಸಿದ ಕೀರ್ತಿ ಪಾತ್ರರಾಗಿದ್ದಾರೆ. ಹಾಗಾಗಿ, ಚಾರ್ಲ್ಸ್ ತಮ್ಮ ಸರದಿಗಾಗಿ ದೀರ್ಘಸಮಯದವರೆಗೆ ಕಾಯಬೇಕಾಯಿತು!
ಮದ್ವೆ ಮುಂಚೆ ಚಾರ್ಲ್ಸ್‌ಗೆ ಅಫೇರ್
ಈಗ ರಾಜನಾಗಿರುವ ಮೂರನೇ ಕಿಂಗ್ ಚಾರ್ಲ್ಸ್ ಬಗ್ಗೆ ನಾನಾ ಕತೆಗಳಿವೆ. ಈ ಯಾರು ಚಾರ್ಲ್ಸ್ ಯಾರು ಎಂದರೆ, ಸುರಸುಂದರಿ ಡಯಾನಾಳ ಗಂಡ. ಮದುವೆ ಮುಂಚೆಯೇ ಚಾರ್ಲ್ಸ್, ವಿವಾಹಿತೆ ಕ್ಯಾಮಿಲ್ಲಾ ಪಾರ್ಕರ್ ಜತೆ ಅಫೇರ್ ಇಟ್ಟುಕೊಂಡಿದ್ದರು. ಈ ಬಗ್ಗೆ ತಾಯಿ ಎರಡನೇ ಎಲಿಜಬೆತ್ ಬುದ್ಧಿ ಹೇಳಿದ್ದಳು. ರಾಜಮನೆತನದಲ್ಲಿ ಈ ಬಗ್ಗೆ ಸಾಕಷ್ಟು ಕಿರಿಕಿರಿಯಾಗಿತ್ತು. ಆದರೆ, ಅವರೇನೂ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. 1981ರಲ್ಲಿ ಡಯಾನಾ ಅವರನ್ನು ಮದುವೆಯಾದರು. ಅಂತಿಮವಾಗಿ ಚಾರ್ಲ್ಸ್ ಮತ್ತು ಡಯಾನಾ 1996ರ ಡೈವೋರ್ಸ್ ಪಡೆದುಕೊಂಡರು. ಇದಾದ ವರ್ಷದಲ್ಲೇ 1997ರಲ್ಲಿ ಪ್ಯಾರಿಸ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಡಯಾನಾ ನಿಧನರಾದರು. ಕಾರಿನಲ್ಲಿ ಆಕೆಯ ಗೆಳೆಯ ದೋದಿ ಅಲ್ ಫಯಾದ್ ಕೂಡ ಇದ್ದ. 2005ರಲ್ಲಿ ಚಾರ್ಲ್ಸ್, ಕ್ಯಾಮಿಲ್ಲಾ ಪಾರ್ಕರ್ ಅವರನ್ನು ವಿವಾಹವಾದರು.
ಡಯಾನಳದ್ದೇ ಬೇರೆಯ ಕತೆ
ಈಗ ಬ್ರಿಟನ್ ರಾಜನಾಗಿರುವ ಕಿಂಗ್ ಚಾರ್ಲ್ಸ್ ಅವರ ಮೊದಲ ಪತ್ನಿ ಡಯಾನಾ. ಬಹುಶಃ ಬ್ರಿಟನ್ ಕಂಡ ಅತ್ಯಂತ ವರ್ಣ ರಂಜಿತ ಪ್ರಿನ್ಸೆಸ್. ಮದುವೆ, ಅಫೇರ್, ಮಕ್ಕಳು, ಆಕ್ಟಿವಿಸಮ್, ನೇರ ನಿಷ್ಠುರ ನಡೆ ಮತ್ತಿತರ ಕಾರಣಗಳಿಂದಾಗಿ ಡಯಾನ ಜಗತ್ತಿನಾದ್ಯಂತ ಸದಾ ಸುದ್ದಿಯಲ್ಲಿರುತ್ತಿದ್ದರು. ರಾಜಮನೆತನದ ಹೊರಗಿನವರಾದ ಡಯಾನಾ, 1981ರಲ್ಲಿ ಪ್ರಿನ್ಸ್ ಚಾರ್ಲ್ಸ್ ಅವರನ್ನು ವಿವಾಹವಾದರು. ಕ್ವೀನ್ ಎಲೆಜಬೆತ್ ಪರವಾಗಿ ರಾಯಲ್ ಕರ್ತವ್ಯಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊತ್ತರು. ಸಾಮಾಜಿಕ ಕೆಲಸಗಳಿಂದಾಗಿ ಬಹಳ ಬೇಗ ಸುದ್ದಿಯಾಗತೊಡಗಿದರು. ರಾಜಮನೆತನ ಪಾಲಿಸಿಕೊಂಡ ಬಂದ ಅನೇಕ ಪದ್ಧತಿಗಳನ್ನು ಮುರಿದು ತಮ್ಮದೇ ಆದ ರೀತಿಯಲ್ಲಿ ಮುನ್ನುಗ್ಗುತ್ತಿದ್ದರು. ಆ ಕಾರಣಕ್ಕಾಗಿಯೇ ಅವರು ಎಲ್ಲರ ಅಚ್ಚುಮೆಚ್ಚಿನವರಾದರು. ಆದರೆ, ಡಯಾನಾ ಅವರು ಅನುಸರಿಸುತ್ತಿರುವ ರೀತಿ ನೀತಿ, ರಾಜಮನೆತನಕ್ಕೆ ಹೊಂದಾಣಿಕೆಯಾಗುತ್ತಿರಲಿಲ್ಲ. ದಿನಗಳೆದಂತೆ ಡಯಾನಾ ಮತ್ತು ರಾಯಲ್ ಫ್ಯಾಮಿಲಿಯ ನಡುವಿನ ಕಂದಕ ಹೆಚ್ಚುತ್ತಲೇ ಹೋಯಿತು.
ಚಾರ್ಲ್ಸ್ ಮತ್ತು ಡಯಾನಾ ದಂಪತಿಗೆ ಪ್ರಿನ್ಸ್ ವಿಲಿಯಂ ಮತ್ತು ಹ್ಯಾರಿ ಮಕ್ಕಳು. ಮೂರನೇ ಕಿಂಗ್ ಚಾರ್ಲ್ಸ್ ನಂತರ ಉತ್ತರಾಧಿಕಾರಿಯಾಗಿ ಪ್ರಿನ್ಸ್ ವಿಲಿಯಂ ಅವರನ್ನು ಈಗಾಗಲೇ ನೇಮಕ ಮಾಡಿಕೊಳ್ಳಲಾಗಿದೆ. ಸಹೋದರ ಪ್ರಿನ್ಸ್ ಹ್ಯಾರಿ, ಹಾಲಿವುಡ್ ನಟಿ ಮೇಘನ್ ಮಾರ್ಕೆಲ್ ಅವರನ್ನು ವಿವಾಹವಾಗಿ ರಾಯಲ್ ಫ್ಯಾಮಿಲಿಯಿಂದ ಹೊರ ಬಂದಿದ್ದಾರೆ.
ರಾಯಲ್ ಫ್ಯಾಮಿಲಿಯ ಮೇಲೆ ಡಯಾನಾ ಅವರ ಪ್ರಭಾವ ಗಾಢವಾಗಿತ್ತು. ಪ್ಯಾರಿಸ್‌ನಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದರು. ಇಡೀ ಜಗತ್ತೇ ಡಯಾನಾ ಸಾವಿಗೆ ಕಂಬನಿಗರೆಯಿತು. ಆಕೆಯ ನಿಧನದ ಬಳಿಕ, ಅಫೇರ್ಸ್ ಮತ್ತಿತರ ವಿಷಯಗಳು ಟ್ಯಾಬ್ಲಾಯ್ಡ್‌ಗಳಿಗೆ ಆಹಾರವಾಯಿತಾದರೂ, ಸಾಮಾಜಿಕ ಕಾರ್ಯಗಳು ತಮ್ಮ ಸ್ನಿಗ್ಧ ಸೌಂದರ್ಯದಿಂದಾಗಿ ಡಯಾನಾ ಇಂದಿಗೂ ಜಗತ್ತಿನ ಕಣ್ಮಣಿ.
ರಾಯಲ್ ಫ್ಯಾಮಿಲಿ ಕ್ರಿಟಿಕ್ ಡಯಾನಾಳ ಮಗ
ಪ್ರಿನ್ಸ್ ವಿಲಿಯಂ ಮತ್ತು ಪ್ರಿನ್ಸ್ ಹ್ಯಾರಿ ಡಯಾನಾಳ ಇಬ್ಬರು ಮಕ್ಕಳು. ಪ್ರಿನ್ಸ್ ವಿಲಿಯಂ, ಮೂರನೇ ಕಿಂಗ್ಸ್ ಚಾರ್ಲ್ಸ್ ನಂತರ ಬ್ರಿಟನ್ ರಾಜನಾಗಲಿದ್ದಾರೆ. ಆದರೆ, ಅವರ ಸಹೋದರ ಪ್ರಿನ್ಸ್ ಹ್ಯಾರಿ ಮಾತ್ರ ಥೇಟ್ ಅವರ ಅಮ್ಮನ ಹಾಗೆ. ಹ್ಯಾರಿ ಮದುವೆಯಾಗಿದ್ದು ರಾಜಮನೆತನದ ಹೊರಗಿನ ಹುಡುಗಿಯನ್ನು. ಹಾಲಿವುಡ್ ನಟಿ ಮೇಘನ್ ಮಾರ್ಕೆಲ್. ಇಬ್ಬರು ಲವ್ ಮಾಡಿ, ಪ್ರೀತಿಸಿ ಮದುವೆಯಾದರು. ಸಹಜವಾಗಿಯೇ ಮೇಘನ್ ರಾಜಮನೆತನದ ರೀತಿ ರಿವಾಜುಗಳಿಗೆ ಹೊಂದಿಕೊಳ್ಳುವುದು ಕಷ್ಟವಾಯಿತು. ರಾಯಲ್ ಫ್ಯಾಮಿಲಿಯೂ ಅಷ್ಟು ಸಲೀಸಾಗಿ ಮೇಘನ್ ಅವರನ್ನು ಬಿಟ್ಟುಕೊಳ್ಳಲಿಲ್ಲ. ಡಯಾನಾ ಎದುರಿಸಿದ ಸ್ಥಿತಿಯನ್ನೇ ಮೇಘನ್ ಕೂಡ ಎದುರಿಸಿದರು. ಮೊದಲೇ ರಾಯಲ್ ಫ್ಯಾಮಿಲಿಯ ಕಾರ್ಯವೈಖರಿ ಬಗ್ಗೆ ತುಸು ಕ್ರಿಟಿಕಲ್ ಆಗಿದ್ದ ಪ್ರಿನ್ಸ್ ಹ್ಯಾರಿ, ಹೆಂಡತಿ ಜತೆಗೂಡಿ ಅಮೆರಿಕದ ಕ್ಯಾಲಿಫೋರ್ನಿಯಾಗೆ ವಲಸೆ ಹೋದರು, ರಾಯಲ್ ಫ್ಯಾಮಿಲಿಯ ಎಲ್ಲ ಕರ್ತವ್ಯ, ಜವಾಬ್ದಾರಿಗಳಿಂದ ಕಳಚಿಕೊಂಡರು.
ಟಾಪ್‌ಲೆಸ್ ಆಗಿದ್ದ ವಿಲಿಯಂ ಪತ್ನಿ
ಪ್ರಿನ್ಸ್ ವಿಲಿಯಂ. ಡಯಾನಾ-ಚಾರ್ಲ್ಸ್ ಅವರ ಹಿರಿಯ ಪುತ್ರ. ಮುಂದಿನ ಉತ್ತರಾಧಿಕಾರಿಯೂ ಹೌದು. 2012ರಲ್ಲಿ ವಿಚಿತ್ರ ಕಾರಣಕ್ಕೆ ವಿಲಿಯಂ ಮತ್ತು ಪತ್ನಿ ಕೇಟ್ ಮಿಡ್ಲಟನ್ ಸುದ್ದಿಯಲ್ಲಿದ್ದರು. ಕೇಟ್ ಮಿಡ್ಲಟನ್ ಅವರ ಟಾಪ್‌ಲೆಸ್ ಫೋಟೊ ಫ್ರೆಂಚ್ ಮ್ಯಾಗ್‌ಜಿನ್‌ನಲ್ಲಿ ಪ್ರಕಟವಾಗಿತ್ತು. ರಾಯಲ್ ಫ್ಯಾಮಿಲಿಗೆ ಇದು ಇರಿಸುಮುರಿಸು ತಂದಿತು. ಪ್ರಿನ್ಸ್ ವಿಲಿಯಂ ಕೆಂಡಾಮಂಡಲವಾದರು. ಮ್ಯಾಗ್‌ಜಿನ್ ವಿರುದ್ಧ ದೂರು ಕೂಡ ದಾಖಲಿಸಲಾಯಿತು.
ಮೈದುನ ಹ್ಯಾರಿ ಮತ್ತು ಅವರ ಪತ್ನಿ ಮೇಘನ್ ಜತೆ ಕೇಟ್ ಮಿಡ್ಲಟನ್ ಅವರ ಸಂಬಂಧಗಳು ಚೆನ್ನಾಗಿಲ್ಲ ಎಂಬ ಗುಸು ಗುಸುಗಳಿದ್ದವು. ಆದರೆ, ಈ ಬಗ್ಗೆ ರಾಯಲ್ ಫ್ಯಾಮಿಲಿಯೇನೂ ಸ್ಪಷ್ಟನೆ ಕೊಡಲು ಹೋಗಲಿಲ್ಲ. ಕೇಟ್ ಮಿಡ್ಲಟನ್ ಚೊಚ್ಚಲು ಬಸುರಿಯಾಗಿದ್ದಾಗ ಅವರನ್ನು ನೋಡಿಕೊಳ್ಳಲು ನರ್ಸ್ ಒಬ್ಬರನ್ನು ನೇಮಿಸಲಾಗಿತ್ತು. ಆಕೆ ಆತ್ಮಹತ್ಯೆ ಮಾಡಿಕೊಂಡಳು. ಆ ಬಗ್ಗೆ ಸಾಕಷ್ಟು ಪುಕಾರುಗಳೆದ್ದವು.
ಬಾಲಕಿ ಮೇಲೆ ಪ್ರಿನ್ಸ್ ಆ್ಯಂಡ್ರೋ ರೇಪ್?
ಕ್ವೀನ್ ಎಲಿಜಬೆತ್ ಅವರ ಎರಡನೇ ಪುತ್ರ ಆ್ಯಂಡ್ರೋ ಅವರಿಂದಾಗಿ ಇಡೀ ರಾಜಮನೆತನವು ತಲೆ ತಗ್ಗಿಸುವಂತಾಯಿತು. ಪ್ರಿನ್ಸ್ ಆ್ಯಂಡ್ರೋ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವು 2019ರಲ್ಲಿ ಕೇಳಿ ಬಂತು. ಇದರಿಂದಾಗಿ ಅವರಿಗೆ ನೀಡಲಾಗಿದ್ದ ಡ್ಯೂಕ್ ಆಫ್ ಯಾರ್ಕ್ ಪದವಿಯನ್ನು ಕಿತ್ತುಕೊಳ್ಳಲಾಯಿತು, ಜತೆಗೇ ರಾಯಲ್ ಹೈನೆಸ್ ಬಳಸುವುದನ್ನು ನಿರ್ಬಂಧಿಸಲಾಯಿತು. ಈ ಆರೋಪದಿಂದಾಗಿ ಅವರು ಸಿಂಹಾಸನಕ್ಕೇರುವ ಹಕ್ಕನ್ನು ಕಳೆದುಕೊಂಡರು.
ರಾಜ ಶುದ್ಧಾನುಶುದ್ಧನಾಗರಿಬೇಕು!
ಬ್ರಿಟನ್ ಮಾತ್ರವಲ್ಲ, ಬಹುತೇಕ ಪಶ್ಚಿಮ ರಾಷ್ಟ್ರಗಳು ಮುಕ್ತ ಸಮಾಜ, ಸಂಸ್ಕೃತಿಯನ್ನು ಹೊಂದಿವೆ. ಮದುವೆ, ಸೆಕ್ಸ್‌ಗೆ ಸಂಬಂಧಿಸಿದಂತೆ ಜನರು ಮುಕ್ತ ಮನಸ್ಸು ಹೊಂದಿರುತ್ತಾರೆ. ಆದರೆ, ಅದೇ ತಮ್ಮನ್ನಾಳುವ ರಾಜ ಅಥವಾ ಸರ್ಕಾರದ ಮುಖ್ಯಸ್ಥರು ಮಾತ್ರ ಈ ವಿಷಯದಲ್ಲಿ ಶುದ್ಧ ಚಾರಿತ್ರ್ಯವನ್ನು ಹೊಂದಿರಬೇಕು ಎಂದು ಬಯಸುತ್ತಾರೆ. ಇದಕ್ಕೆ ಬ್ರಿಟನ್ ರಾಜಮನೆತನವೂ ಹೊರತಲ್ಲ. ಸಂಪ್ರದಾಯಗಳು, ಪದ್ಧತಿಗಳ ಅಡಿಯಲ್ಲಿ ರಾಯಲ್ ಫ್ಯಾಮಿಲಿಯ ಸದಸ್ಯರು ಇರಬೇಕಾಗುತ್ತದೆ.
ಸಂಪ್ರದಾಯಬದ್ಧವಾಗಿ ನಡೆದುಕೊಳ್ಳದೇ ಹೋದರೆ ಜನರ ಬಾಯಿಗೆ ಆಹಾರವಾಗಬೇಕಾಗುತ್ತದೆ. ಬಹುಶಃ ಇದಕ್ಕೆ ಡಯಾನಾಗಿಂತಲೂ ದೊಡ್ಡ ಉದಾಹರಣೆ ಮತ್ತೊಬ್ಬರಿಲ್ಲ. ಚೆಂದುಳ್ಳ ಚೆಲುವೆ ಡಯನಾ ತಾನೆಷ್ಟು ಸುಂದರಿಯೋ ಅಷ್ಟೇ ಹೃದಯವಂತಳು ಹೌದು. ರಾಯಲ್ ಫ್ಯಾಮಿಲಿಯ ಪದ್ಧತಿಗಳನ್ನು ಮೀರಿ ಆಕೆ, ಜನರನ್ನು ತಲುಪಲು ಪ್ರಯತ್ನಿಸಿದಳು. ಅದೇ ಅವಳಿಗೆ ಮುಳುವಾಯಿತು. ಆಕೆಯ ಇಷ್ಟ, ಕಷ್ಟಗಳಿಗೆ ಬೆಲೆ ಇರಲಿಲ್ಲ. ಅಂತಿಮವಾಗಿ ಟ್ಯಾಬ್ಲಾಯ್ಡ್ ಪತ್ರಿಕೆಗಳಿಗೆ ಆಕೆಯ ಪ್ರತಿಯೊಂದು ಚಲನ ವಲನವು ಆಹಾರವಾಯಿತು.
ಅದೇ ರೀತಿಯ ಸ್ಥಿತಿಯು ಪ್ರಿನ್ಸ್ ಹ್ಯಾರಿ ಅವರ ಪತ್ನಿ ಮತ್ತು ನಟಿ ಮೇಘನ್ ಕೂಡ ಎದುರಿಸುವಂತಾಯಿತು. ಇವರೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ರಾಯಲ್ ಫ್ಯಾಮಿಲಿಗೆ ಎಂಟ್ರಿ ಕೊಟ್ಟ ಮೇಲೆ ಅಲ್ಲಿನ ರೀತಿ ರಿವಾಜುಗಳಂತೆಯೇ ಎಲ್ಲವನ್ನು ಮಾಡಬೇಕಿತ್ತು. ಅಂತಿಮವಾಗಿ ತನ್ನ ತಾಯಿಗೆ ಬಂದ ಸ್ಥಿತಿ ತನ್ನ ಹೆಂಡತಿಗೂ ಬರಬಾರದು ಎಂದು ನಿರ್ಧರಿಸಿದ ಪ್ರಿನ್ಸ್ ಹ್ಯಾರಿ ಹೆಂಡತಿಯೊಂದಿಗೆ ಲಂಡನ್ ತೊರೆದು ಅಮೆರಿಕಕ್ಕೆ ಹೋಗಿ ನೆಲೆಸಿದರು.
ನೆಕ್ಸ್ಟ್ ಕಿಂಗ್/ಕ್ವೀನ್ ಆಗುವ ಸಾಲಿನಲ್ಲಿ ಯಾರು?
73 ವರ್ಷದ ಮೂರನೇ ಕಿಂಗ್ ಚಾರ್ಲ್ಸ್ ರಾಜನಾಗಿದ್ದಾರೆ. ಅವರ ನಂತರ ಅವರ ಹಿರಿಯ ಪುತ್ರ ಪ್ರಿನ್ಸ್ ವಿಲಿಯಂ ರಾಜನಾಗುತ್ತಾರೆ. ಒಂದೊಮ್ಮೆ ಅವರು ಸಿಂಹಾಸನ ಏರದಿದ್ದರೆ ಅವರ ಮೂವರ ಮಕ್ಕಳ ಪೈಕಿ ಹಿರಿಯ ಮಗ ಪ್ರಿನ್ಸ್ ಜಾರ್ಜ್(9 ವರ್ಷ) ಆಗಬಹುದು. ಮುಂದಿನ ತಲೆಮಾರಿನ ಪಟ್ಟಿಯಲ್ಲಿ ಪ್ರಿನ್ಸೆಸ್ ಷಾರ್ಲೆಟ್(7 ವರ್ಷ), ಪ್ರಿನ್ಸ್ ಲೂಯಿಸ್(4 ವರ್ಷ) ಹಾಗೂ ಪ್ರಿನ್ಸ್ ಹ್ಯಾರಿ ಮತ್ತು ಪ್ರಿನ್ಸೆಸ್ ಮೇಘನ್ ಅವರ ಮಕ್ಕಳಾದ ಆರ್ಚಿ ಹ್ಯಾರಿಸನ್ ಮೌಂಟ್‌ಬ್ಯಾಟನ್ (3 ವರ್ಷ) ಮತ್ತು ಲಿಲೆಬೆಟ್ ‘ಲಿಲ್’ ಡಯಾನಾ(1 ವರ್ಷ) ಇದ್ದಾರೆ.
ಇದನ್ನೂ ಓದಿ | Queen Elizabeth Death | ಬ್ರಿಟನ್ ರಾಣಿ ಎಲಿಜಬೆತ್ ಬಗ್ಗೆ ತೆರೆಕಂಡ ಸಿನಿಮಾಗಳಿವು!