Site icon Vistara News

ಒಂದೇ ಕಲ್ಲಿಗೆ 2 ಹಕ್ಕಿ ಹೊಡೆದ ಭಾರತ; ‘ಹಮಾಸ್’‌ ಹೆಸರಿರದ ವಿಶ್ವಸಂಸ್ಥೆ ನಿರ್ಣಯಕ್ಕೆ ಮತ ಇಲ್ಲ

Narendra Modi And Benjamin Netanyahu

ವಿಶ್ವಸಂಸ್ಥೆ: ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ದಾಳಿ-ಪ್ರತಿದಾಳಿ (Israel Palestine War) ಮುಂದುವರಿದಿದೆ. ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು (Hamas Terrorists), ಗಾಜಾ ನಗರದ ಮೇಲೆ ಇಸ್ರೇಲ್‌ ನಡೆಸುತ್ತಿರುವ ಪ್ರತಿದಾಳಿಗೆ ಇದುವರೆಗೆ 7 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಗಾಜಾ ನಗರದಲ್ಲಿ ಮಾನವೀಯ ನೆಲೆಯಲ್ಲಿ ಕದನವಿರಾಮ ಘೋಷಿಸುವ ದಿಸೆಯಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದೆ. ಆದರೆ, ನಿರ್ಣಯದಲ್ಲಿ ಹಮಾಸ್‌ ದಾಳಿಯ ಪ್ರಸ್ತಾ ಇರದ ಕಾರಣ ಭಾರತವು ಮತದಾನದಿಂದ ದೂರ ಉಳಿದಿದೆ. ಜೋರ್ಡಾನ್ ಪ್ರಸ್ತಾಪಿಸಿದ ನಿರ್ಣಯವು ಗಾಜಾ ಪಟ್ಟಿಯಲ್ಲಿ ಅಡೆತಡೆಯಿಲ್ಲದ ಮಾನವೀಯ ಪ್ರವೇಶಕ್ಕೆ ಕರೆ ನೀಡಿದೆ. ಆದರೆ ಹಮಾಸ್ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ಇದರಿಂದಾಗಿಯೇ ಭಾರತವು ನಿರ್ಣಯದ ಮತದಾನದಿಂದ ದೂರ ಉಳಿದಿದೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ, ಇದು ಪರೋಕ್ಷವಾಗಿ ಇಸ್ರೇಲ್‌ಗೆ ಬೆಂಬಲ ನೀಡಿದಂತಾಗಿದ್ದು, ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಂತಾಗಿದೆ.

ಜೋರ್ಡಾನ್ ಪ್ರಸ್ತಾವಿಸಿದ ‘ನಾಗರಿಕರ ರಕ್ಷಣೆ ಮತ್ತು ಕಾನೂನು ಮತ್ತು ಮಾನವೀಯ ಕಟ್ಟುಪಾಡುಗಳನ್ನು ಎತ್ತಿಹಿಡಿಯುವುದು’ ಎಂಬ ಶೀರ್ಷಿಕೆಯ ಕರಡು ನಿರ್ಣಯವನ್ನು ಅಂಗೀಕರಿಸಲಾಯಿತು. 120 ರಾಷ್ಟ್ರಗಳು ಅದರ ಪರವಾಗಿ, 14 ವಿರುದ್ಧವಾಗಿ ಮತ ಚಲಾಯಿಸಿದವು. ಭಾರತ, ಆಸ್ಟ್ರೇಲಿಯಾ, ಕೆನಡಾ, ಜರ್ಮನಿ, ಜಪಾನ್, ಉಕ್ರೇನ್, ಬ್ರಿಟನ್ ಸೇರಿ 45 ದೇಶಗಳು ಮತದಾನದಿಂದ ದೂರ ಉಳಿದವು.

ಎರಡು ಪ್ರಮುಖ ಪದಗಳಿಲ್ಲ

ನಿರ್ಣಯದಲ್ಲಿ ಹಮಾಸ್ ಮತ್ತು ಒತ್ತೆಯಾಳುಗಳು ಎರಡು ಪ್ರಮುಖ ಪದಗಳು ಕಾಣೆಯಾಗಿವೆ ಎಂದು ವಿಶ್ವಸಂಸ್ಥೆಯ ಯುಎಸ್ ರಾಯಭಾರಿ ಲಿಂಡಾ ಥಾಮಸ್-ಗ್ರೀನ್ಫೀಲ್ಡ್ ಮತದಾನಕ್ಕೆ ಮೊದಲು ತಿಳಿಸಿದರು. “ನಮ್ಮ ಮುಂದಿರುವ ನಿರ್ಣಯದಲ್ಲಿ ಎರಡು ಪ್ರಮುಖ ಪದಗಳು ಕಾಣೆಯಾಗಿವೆ. ಮೊದಲನೆಯದು ಹಮಾಸ್. ಅಕ್ಟೋಬರ್ 7ರ ಭಯೋತ್ಪಾದಕ ದಾಳಿಯ ದುಷ್ಕರ್ಮಿಗಳಾದ ಹಮಾಸ್ ಹೆಸರನ್ನು ಹೇಳಲು ಈ ನಿರ್ಣಯವು ವಿಫಲವಾಗಿದೆ” ಎಂದು ಅವರು ಹೇಳಿದ್ದಾರೆ.

“ಈ ನಿರ್ಣಯವು ಮುಗ್ಧ ಜನರ ಬಗ್ಗೆ ಉಲ್ಲೇಖವನ್ನು ಹೊಂದಿಲ್ಲ. ಇವು ಗಂಭೀರ ಲೋಪಗಳು. ಇದು ಹಮಾಸ್‌ನ ಕ್ರೌರ್ಯಕ್ಕೆ ರಕ್ಷಣೆ ನೀಡುವಂತಾಗುತ್ತದೆ. ಯಾವುದೇ ಸದಸ್ಯ ರಾಷ್ಟ್ರ ಇದಕ್ಕೆ ಅವಕಾಶ ನೀಡಬಾರದು” ಎಂದು ಅವರು ಎಚ್ಚರಿಸಿದ್ದಾರೆ.

ಭಾರತದ ಪ್ರತಿನಿಧಿ ಹೇಳಿದ್ದೇನು?

ಮತದಾನದ ನಂತರ ಮಾತನಾಡಿದ ಭಾರತದ ಪ್ರತಿನಿಧಿ ಯೋಜ್ನಾ ಪಟೇಲ್, “ಅಕ್ಟೋಬರ್ 7ರಂದು ಇಸ್ರೇಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಆಘಾತಕಾರಿ ಮತ್ತು ಖಂಡನಾರ್ಹ. ಭಯೋತ್ಪಾದಕ ಕೃತ್ಯಗಳ ಯಾವುದೇ ಸಮರ್ಥನೆಯನ್ನು ಜಗತ್ತು ಅಂಗೀಕರಿಸಬಾರದು. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಒಗ್ಗೂಡೋಣ ಮತ್ತು ಭಯೋತ್ಪಾದಕರ ವಿರುದ್ಧ ಶೂನ್ಯ ಸಹಿಷ್ಣುತೆಯ ವಿಧಾನವನ್ನು ಅಳವಡಿಸಿಕೊಳ್ಳೋಣ” ಎಂದು ಅವರು ಹೇಳಿದ್ದಾರೆ. ʼʼಹಮಾಸ್ ದಾಳಿಗಳು ಮೂಲಭೂತ ಮಾನವೀಯ ಮೌಲ್ಯಗಳಿಗೆ ಅವಮಾನಕರವಾದ ಪ್ರಮಾಣ ಮತ್ತು ತೀವ್ರತೆಯಲ್ಲಿವೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Sponge Bomb: ಇಸ್ರೇಲಿ ಪಡೆಗಳಿಗೆ ಹೊಸ ಶಸ್ತ್ರ! ಏನಿದು ‘ಸ್ಪಾಂಜ್ ಬಾಂಬ್’?

“ಉದ್ವಿಗ್ನತೆಯನ್ನು ಕಡಿಮೆ ಮಾಡಲು, ಹಿಂಸಾಚಾರವನ್ನು ತ್ಯಜಿಸಲು ಮತ್ತು ನೇರ ಶಾಂತಿ ಮಾತುಕತೆಗಳನ್ನು ಶೀಘ್ರವಾಗಿ ಪುನರಾರಂಭಿಸಲು ನಾವು ಆಗ್ರಹಿಸುತ್ತೇವೆ. ಈ ಸಭೆಯ ಚರ್ಚೆಗಳು ಭಯೋತ್ಪಾದನೆ ಮತ್ತು ಹಿಂಸಾಚಾರದ ವಿರುದ್ಧ ಸ್ಪಷ್ಟ ಸಂದೇಶವನ್ನು ಕಳುಹಿಸುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮೊದಲು ‘ಹಮಾಸ್‌ನ ಭಯೋತ್ಪಾದಕ ದಾಳಿಗಳನ್ನು’ ಖಂಡಿಸುವ ವಿಚಾರವನ್ನು ಸೇರಿಸುವ ತಿದ್ದುಪಡಿಯನ್ನು ಕೆನಡಾ ಪ್ರಸ್ತಾಪಿಸಿತ್ತು. ಕೆನಡಾದ ಪ್ರಸ್ತಾವಿತ ತಿದ್ದುಪಡಿಯ ಪರವಾಗಿ ಭಾರತವು ಇತರ 87 ರಾಷ್ಟ್ರಗಳೊಂದಿಗೆ ಮತ ಚಲಾಯಿಸಿತು. ಆದರೆ ಅದು ಮೂರನೇ ಎರಡರಷ್ಟು ಬಹುಮತವನ್ನು ಹೊಂದಿಲ್ಲದ ಕಾರಣ ಅದನ್ನು ಅಂಗೀಕರಿಸಲು ಸಾಧ್ಯವಾಗಲಿಲ್ಲ.

Exit mobile version