ಟೋಕಿಯೋ: ನಮ್ಮಲ್ಲಿ ದೇಹದ ಅಂಗಾಂಗಗಳ ಆಕಾರವನ್ನು ಬದಲಿಸಿಕೊಳ್ಳುವ ಜನರು ಅನೇಕರಿದ್ದಾರೆ. ಮೂಗು, ತುಟಿ, ಕೆನ್ನೆ, ಗಲ್ಲ, ಸ್ತನದ ಆಕಾರ ಮಾರ್ಪಾಡು ಸರ್ಜರಿ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕೂ ಮಿಗಿಲಾಗಿ ಕೆಲವರಂತೂ ಇಡೀ ಮುಖ, ದೇಹವನ್ನೇ ಮಾರ್ಪಾಡು ಮಾಡಿಕೊಂಡಿದ್ದರ ಬಗ್ಗೆಯೂ ಓದಿದ್ದೇವೆ. ಆದರೆ ಜಪಾನ್‌ನ ಈ ವ್ಯಕ್ತಿ ಎಲ್ಲರಿಗಿಂತ ವಿಭಿನ್ನ. ತಾವು ನಾಯಿಯಾಗಲು ಅಥವಾ ನಾಯಿಯಂತೆ ಕಾಣಲು (Japanese Man Becomes Dog) ಬರೋಬ್ಬರಿ 2 ಮಿಲಿಯ್ ಯೆನ್( 12 ಲಕ್ಷ ರೂಪಾಯಿ) ಖರ್ಚು ಮಾಡಿದ್ದಾರೆ. ಬಳಿಕ ತಾವು ಥೇಟ್ ಶ್ವಾನದಂತೆ ಕಾಣುವ ಫೋಟೋವನ್ನು ಟ್ವಿಟರ್ ಅಕೌಂಟ್ @toco_eevee ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಅದನ್ನು ನೋಡಿದ ನೆಟ್ಟಿಗರು ದಂಗುಬಡಿದಿದ್ದಾರೆ !
ಇದು ಯಾರಿಗಾದರೂ ವಿಚಿತ್ರ ಅನ್ನಿಸುವ ವಿಷಯವೇ ಹೌದು. ವ್ಯಕ್ತಿಯ ಹೆಸರು ಟೋಕೋ. ಇವರಿಗೆ ತಾವು ನಾಯಿಯಂತೆ ಕಾಣಿಸಬೇಕು. ಅದರಂತೆ ವರ್ತಿಸಬೇಕು ಎಂಬುದು ಬಹುದೊಡ್ಡ ಆಸೆ. ಆದರೆ ಇಲ್ಲೊಂದು ಸಣ್ಣ ಟ್ವಿಸ್ಟ್ ಎಂದರೆ ಟೋಕೋ ಅದಕ್ಕಾಗಿ ಯಾವುದೇ ಸರ್ಜರಿಗೆ ಒಳಗಾಗಿಲ್ಲ. ವೈದ್ಯಕೀಯ ಚಿಕಿತ್ಸೆಯನ್ನೂ ಪಡೆದುಕೊಂಡಿಲ್ಲ. ಬದಲಿಗೆ ಜೆಪ್ಪೆಟ್ ಎಂಬ ಒಂದು ಪ್ರೊಫೆಶನಲ್ ಏಜೆನ್ಸಿ ಸಹಾಯದಿಂದ ಶ್ವಾನವಾಗಿ ಬದಲಾಗಿದ್ದಾರೆ. ಜೆಪ್ಪೆಟ್ ಎಂಬುದು ಮನರಂಜನೆ, ಚಲನಚಿತ್ರ, ಜಾಹೀರಾತು ಕ್ಷೇತ್ರಗಳಿಗೆ, ಅವರಿಗೆ ಅಗತ್ಯವಿರುವ ವಿನ್ಯಾಸದ ವೇಷಭೂಷಣಗಳು, ಶಿಲ್ಪಾಕೃತಿಗಳನ್ನು ಒದಗಿಸುವ ಸಂಸ್ಥೆ. ಹಲವು ಟಿವಿ ಕಾರ್ಯಕ್ರಮಗಳಿಗೂ ವಿಶೇಷ ಕಾಸ್ಟ್ಯೂಮ್‌ಗಳನ್ನು ಇದು ನೀಡುತ್ತದೆ. ಇದೇ ಜಿಪ್ಪೆಟ್ ಟೋಕೋ ಆಸೆಯನ್ನೂ ನೆರವೇರಿಸಿಕೊಟ್ಟಿದೆ.
ಇದನ್ನೂ ಓದಿ: ಪ್ರೀತಿಯ ಶ್ವಾನದ ಜತೆಗೊಂದು ಹ್ಯಾಪಿ ಜರ್ನಿ ..!
ಟೋಕೋಗೆ ತಾವು ಶ್ವಾನದಂತೆ ಕಾಣಬೇಕು ಎಂಬುದು ಒಂದು ಆಸೆಯಾಗಿದ್ದರೆ, ಕೋಲಿ ತಳಿಯ ನಾಯಿಯಂತೇ ಕಾಣಿಸಬೇಕು ಎಂಬುದು ಮತ್ತೊಂದು ಬಯಕೆ. ಹೀಗಾಗಿ ಜೆಪ್ಪೆಟ್ ಕೋಲಿ ತಳಿ ಶ್ವಾನಗಳಿಗೆ ಚರ್ಮ, ಕಾಲು, ಮುಖ, ಬಾಲವೆಲ್ಲ ಹೇಗಿರುತ್ತದೆಯೋ ಯಥಾಪ್ರಕಾರವಾಗಿಯೇ ಕಾಸ್ಟ್ಯೂಮ್ ಡಿಸೈನ್ ಮಾಡಿ ಕೊಟ್ಟಿತ್ತು. ಈ ಕಾಸ್ಟ್ಯೂಮ್ ತಯಾರಿಸಲು 40 ದಿನ ತೆಗೆದುಕೊಂಡಿದೆ. ಇದರ ಬೆಲೆ ಬರೋಬ್ಬರಿ 12 ಲಕ್ಷ ರೂಪಾಯಿ. ಜಪಾನ್ ಕರೆನ್ಸಿ ಯೆನ್‌ನಲ್ಲಿ ಹೇಳುವುದಾರೆ 2 ಮಿಲಿಯನ್ ಯೆನ್.
ಟೋಕೋ ತನ್ನ ಆಸೆಯ ಬಗ್ಗೆ ಮಾತನಾಡಿ, ನಾನು ಕೋಲಿ ನನ್ನ ನೆಚ್ಚಿನ ತಳಿ. ಹಾಗಾಗಿ ಇದನ್ನೆ ಆಯ್ಕೆ ಮಾಡಿಕೊಂಡೆ. ಇನ್ನು ನಾಯಿಯ ಕಾಸ್ಟ್ಯೂಮ್ ಹಾಕಿಕೊಂಡಾಗ ನನ್ನ ಕೃತಿ ನಾಜೂಕಾಗಿ ಇರಬೇಕು. ನಾನು ಮಾನಸಿಕವಾಗಿಯೂ ಶ್ವಾನವೇ ಆಗಬೇಕು. ಚೂರೇಚೂರು ಅತಿರೇಕ ವರ್ತನೆ ಮಾಡಿದರೂ ವೇಷಕ್ಕೂ-ಕೃತಿಗೂ ಸಂಬಂಧವಿಲ್ಲ ಎನ್ನಿಸುತ್ತದೆ. ನಾಯಿಯ ವೇಷ ಹಾಕಿದಾಗ ನಾನು ಮನುಷ್ಯ ಎಂಬುದನ್ನೇ ಸಂಪೂರ್ಣವಾಗಿ ಮರೆಯಬೇಕು ಎಂದು ಹೇಳಿದ್ದಾರೆ ಎಂದು ಜಪಾನ್‌ನ ಮಾಧ್ಯಮವೊಂದು ವರದಿ ಮಾಡಿದೆ. ಇನ್ನು ಟೋಕೋ ಸ್ವಂತ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಅದರಲ್ಲೂ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Viral Video: ಪತ್ನಿಗಾಗಿ 90 ಸಾವಿರ ರೂ. ಮೌಲ್ಯದ ಹೊಸ ಸ್ಕೂಟರ್ ಖರೀದಿಸಿದ ಭಿಕ್ಷುಕ