Site icon Vistara News

ಬಾಲ್ಟಿಮೋರ್‌ ಸೇತುವೆ ಕುಸಿತ ಪ್ರಕರಣ; ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯ ಸಮಯಪ್ರಜ್ಞೆಗೆ ಅಮೆರಿಕ ಅಧ್ಯಕ್ಷ ಬೈಡನ್ ಮೆಚ್ಚುಗೆ

Joe Biden

Joe Biden

ವಾಷಿಂಗ್ಟನ್‌: ಬೃಹತ್‌ ಗಾತ್ರದ ಸರಕು ಹಡಗೊಂದು ಡಿಕ್ಕಿಯಾಗಿ ಮಂಗಳವಾರ (ಮಾರ್ಚ್‌ 26) ಅಮೆರಿಕದ ಬಾಲ್ಟಿಮೋರ್‌ನ ಫ್ರಾನ್ಸಿಸ್‌ ಸ್ಟಾಟ್‌ ಕೀ ಸೇತುವೆ (Francis Scott Key Bridge in Baltimore) ಕುಸಿದ ಪ್ರಕರಣದ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡನ್‌ (Joe Biden) ಮಾತನಾಡಿದ್ದಾರೆ. ಈ ವೇಳೆ ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿ ತೋರಿದ ಸಮಯ ಪ್ರಜ್ಞೆ ಮತ್ತು ಕರ್ತವ್ಯ ಪ್ರಜ್ಞೆಗೆ ಜೋ ಬೈಡನ್‌ ಮೆಚ್ಚುಗೆ ಸೂಚಿಸಿದ್ದಾರೆ. ಜತೆಗೆ ತಕ್ಷಣ ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸಿದ ಸ್ಥಳೀಯ ಪ್ರಾಧಿಕಾರದ ಸಿಬ್ಬಂದಿಯನ್ನೂ ಶ್ಲಾಘಿಸಿದ್ದಾರೆ.

ಜೋ ಬೈಡನ್‌ ಹೇಳಿದ್ದೇನು?

ʼʼಹಡಗಿನ ಸಿಬ್ಬಂದಿ ಮೇರಿಲ್ಯಾಂಡ್‌ ಸಾರಿಗೆ ಇಲಾಖೆಗೆ ತಕ್ಷಣ ಕರೆ ಮಾಡಿ ಹಡಗಿನ ಮೇಲೆ ತಾವು ನಿಯಂತ್ರಣ ಕಳೆದುಕೊಂಡಿರುವುದಾಗಿ ತಿಳಿಸಿದ್ದರು. ಇದರಿಂದ ಸ್ಥಳೀಯ ಪ್ರಾಧಿಕಾರದ ಸಿಬ್ಬಂದಿಗೆ ತುರ್ತಾಗಿ ಕಾರ್ಯಾಚರಣೆ ನಡೆಸಲು ಸಾಧ್ಯವಾಯಿತು. ಅವರು ಸೇತುವೆಯಲ್ಲಿನ ವಾಹನ ಸಂಚಾರ ಸ್ಥಗಿತಗೊಳಿಸಿದ್ದರಿಂದ ಹೆಚ್ಚಿನ ಅಪಾಯ ಸಂಭವಿಸಲಿಲ್ಲʼʼ ಎಂದು ಬೈಡನ್‌ ವಿವರಿಸಿದ್ದಾರೆ. ವಿಶೇಷ ಎಂದರೆ ಹಡಗಿನಲ್ಲಿದ್ದ ಸಿಬ್ಬಂದಿಯೆಲ್ಲ ಭಾರತೀಯರಾಗಿದ್ದರು. ಇದೇ ವೇಳೆ ಸೇತುವೆಯನ್ನು ಪುನರ್‌ನಿರ್ಮಿಸಲು ಸರ್ಕಾರ ಬದ್ಧ ಎಂದು ಬೈಡನ್ ಘೋಷಿಸಿದ್ದಾರೆ.

ಏನಿದು ಘಟನೆ?

ಮಂಗಳವಾರ ಮುಂಜಾನೆ ಅಮೆರಿಕದ ಬಾಲ್ಟಿಮೋರ್‌ನಲ್ಲಿರುವ ಫ್ರಾನ್ಸಿಸ್ ಸ್ಕಾಟ್ ಕೀ ಉಕ್ಕಿನ ಸೇತುವೆಗೆ ಕಂಟೈನರ್‌ ನೌಕೆಯೊಂದು ಡಿಕ್ಕಿ ಹೊಡೆದ ಪರಿಣಾಮ, ಸೇತುವೆ ಸಂಪೂರ್ಣವಾಗಿ ನೀರುಗುರುಳಿತ್ತು. ನಡುರಾತ್ರಿ ಈ ಘಟನೆ ನಡೆದ ಕಾರಣ ಸೇತುವೆಯ ಮೇಲೆ ಹೆಚ್ಚಿನ ವಾಹನಗಳು ಇರಲಿಲ್ಲ. ಜನದಟ್ಟಣೆಯ ಸಮಯದಲ್ಲಿ ಈ ಘಟನೆ ಸಂಬಂಧಿಸಿದ್ದರೆ ನೂರಾರು ಜನರ ಸಾವುನೋವು ಸಂಭವಿಸುವ ಸಾಧ್ಯತೆಯಿತ್ತು.

ಬಾಲ್ಟಿಮೋರ್‌ ಮುನ್ಸಿಪಲ್ ನಗರದ ನೈಋತ್ಯಕ್ಕೆ ಇರುವ ಪಟಾಪ್ಸ್ಕೋ ನದಿಗೆ ಅಡ್ಡಲಾಗಿ ಈ ನಾಲ್ಕು-ಲೇನ್ ಸೇತುವೆಯನ್ನು ಕಟ್ಟಲಾಗಿದೆ. ಇದು 1.6 ಮೈಲಿ (2.6-ಕಿಲೋಮೀಟರ್) ಉದ್ದವಿದೆ. 1977ರಲ್ಲಿ ಕಟ್ಟಲಾಗಿದ್ದ ಇದರ ಮೇಲೆ ವರ್ಷಕ್ಕೆ 1.10 ಕೋಟಿ ವಾಹನಗಳು ಓಡಾಡುತ್ತವೆ. ಇದು ಬಾಲ್ಟಿಮೋರ್ ಸುತ್ತಮುತ್ತಲಿನ ರಸ್ತೆ ಜಾಲದ ಪ್ರಮುಖ ಭಾಗ. ಬಾಲ್ಟಿಮೋರ್‌, ರಾಜಧಾನಿ ವಾಷಿಂಗ್ಟನ್ ಡಿಸಿಯ ಪಕ್ಕದಲ್ಲಿರುವ ಅಮೆರಿಕದ ಪೂರ್ವ ಕರಾವಳಿಯ ಕೈಗಾರಿಕಾ ನಗರವಾಗಿದೆ.

ಇದನ್ನೂ ಓದಿ: Bridge Collapse: ನೌಕೆ ಡಿಕ್ಕಿಯಾಗಿ ಮಕ್ಕಳಾಟಿಕೆಯಂತೆ ಕುಸಿದ 2.5 ಕಿ.ಮೀ. ಉದ್ದದ ಸೇತುವೆ!

ಸಿಂಗಾಪುರ ಧ್ವಜ ಹೊಂದಿರುವ ಕಂಟೇನರ್ ಹಡಗು ʼಡಾಲಿʼ ಬಾಲ್ಟಿಮೋರ್​ನ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯ ಕಂಬಗಳಲ್ಲಿ ಒಂದಕ್ಕೆ ಡಿಕ್ಕಿ ಹೊಡೆದಿತ್ತು. ಇದಾಗಿ ಕೆಲವೇ ಕ್ಷಣಗಳಲ್ಲಿ ಸೇತುವೆ ಕುಸಿದಿತ್ತು. ಈ ವೇಳೆ ಸೇತುವೆಯ ದುರಸ್ತಿ ಕಾಮಗಾರಿ ನಡೆಸುತ್ತಿದ್ದ 6 ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ʼಡಾಲಿʼ 10,000 ಟಿಇಯು ಸಾಮರ್ಥ್ಯ ಹೊಂದಿತ್ತು. ಗ್ರೇಸ್ ಓಷನ್ ಪ್ರೈವೇಟ್ ಲಿಮಿಟೆಡ್ ಹಡಗಿನ ಮಾಲೀಕತ್ವವನ್ನು ಹೊಂದಿದೆ. ಹಡಗು ಬಾಲ್ಟಿಮೋರ್‌ನಿಂದ ಕೊಲಂಬೊಗೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ಸೇತುವೆ ಕುಸಿದಿರುವುದು ಈ ಪ್ರದೇಶದ ಮೇಲೆ ತೀವ್ರ ಪರಿಣಾಮ ಬೀರುವ ನಿರೀಕ್ಷೆಯಿದೆ. ಬಾಲ್ಟಿಮೋರ್ ಸುತ್ತಮುತ್ತಲಿನ ಸಂಚಾರ ವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version