Site icon Vistara News

Joe Biden: ಅಮೆರಿಕ ಅಧ್ಯಕ್ಷ ಜೋ ಬೈಡನ್​ಗೆ ಕೊರೊನಾ ಸೋಂಕು; ಪ್ರಚಾರಕ್ಕೆ ಬ್ರೇಕ್‌

Joe Biden

Joe Biden

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ (US Presidential Election 2024) ಕೆಲವೇ ತಿಂಗಳು ಬಾಕಿ ಉಳಿದಿವೆ. ಹೀಗಾಗಿ ರಾಜಕೀಯ ಚಟುವಟಿಕೆ ಬಿರುಸು ಪಡೆದುಕೊಂಡಿದೆ. ಈ ಮಧ್ಯೆ ಮತ್ತೊಮ್ಮೆ ಕಣಕ್ಕಿಳಿದಿರುವ ಅಧ್ಯಕ್ಷ ಜೋ ಬೈಡನ್ (Joe Biden) ಅವರಿಗೆ ಕೋವಿಡ್‌ (Covid-19) ಬಾಧಿಸಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರಿನ್ ಜೀನ್-ಪಿಯರೆ ಬುಧವಾರ ತಿಳಿಸಿದ್ದಾರೆ.

ಲಾಸ್ ವೇಗಾಸ್‌ನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಜೋ ಬೈಡನ್ ಅವರಿಗೆ ಕೋವಿಡ್ ಬಾಧಿಸಿದೆ. ಅವರಿಗೆ ಕೊರೊನಾದ ಸೌಮ್ಯ ಲಕ್ಷಣಗಳು ಕಂಡುಬಂದಿವೆ. ಸದ್ಯ ಪ್ರಚಾರ ಕಾರ್ಯಕ್ಕೆ ಸ್ವಲ್ಪ ವಿರಾಮ ನೀಡಿ ಅವರು ಪ್ರತ್ಯೇಕವಾಗಿರಲು ಅವರು ಡೆಲಾವೇರ್‌ಗೆ ಮರಳಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ʼʼಸೌಮ್ಯ ರೋಗಲಕ್ಷಣಗಳ ಹೊರತಾಗಿಯೂ 81 ವರ್ಷದ ಜೋ ಬೈಡನ್ ಆರೋಗ್ಯವಂತರಾಗಿದ್ದಾರೆ. ಭಯ ಪಡುವ ಅಗತ್ಯವಿಲ್ಲʼʼ ಎಂದು ಜೀನ್-ಪಿಯರೆ ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ. ಜೋ ಬೈಡನ್‌ ಅವರಿಗೆ ಹಿಂದೆಯೂ ಕೋವಿಡ್‌ ಬಾಧಿಸಿತ್ತು. 2022ರ ಜುಲೈಯಲ್ಲಿ ಅವರು ಕೋವಿಡ್ ಸೋಂಕಿಗೆ ಒಳಗಾಗಿದ್ದರು.

ಜೋ ಬೈಡನ್ ಅವರುಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ಕೆವಿನ್ ಒ’ಕಾನರ್ ಈ ಬಗ್ಗೆ ಮಾಹಿತಿ ನೀಡಿ, ʼʼಬೈಡನ್ ಅವರಲ್ಲಿ ಕೊರೊನಾದ ಸೌಮ್ಯ ಲಕ್ಷಣಗಳು ಕಂಡುಬಂದಿವೆ. ಮೂಗು ಸೋರುತ್ತಿದೆ ಮತ್ತು ಸ್ವಲ್ಪ ಪ್ರಮಾಣ ಕೆಮ್ಮು ಕಂಡು ಬಂದಿದೆʼʼ ಎಂದು ತಿಳಿಸಿದ್ದಾರೆ. ಬೈಡನ್ ಡೆಲಾವೇತ್‌ನ ರೆಹೋಬೋತ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸ್ವಯಂ ಪ್ರತ್ಯೇಕಗೊಳ್ಳಲಿದ್ದಾರೆ. ಪಿಸಿಆರ್ ದೃಢೀಕರಣ ಪರೀಕ್ಷೆ ಬಾಕಿ ಇದೆ.

ಕಪ್ಪು ವರ್ಣದ ಮಹಿಳೆಗೆ ಜೋ ಬೈಡನ್ ಅವಮಾನ?

ಕೆಲವು ದಿನಗಳ ಹಿಂದೆ ಸ್ವಾಗತಿಸಲು ಖುಷಿಯಿಂದ ಕಾಯುತ್ತಿದ್ದ ಕಪ್ಪು ವರ್ಣದ ಮಹಿಳೆಗೆ ಜೋ ಬೈಡನ್ ಅವಮಾನ ಮಾಡಿದ್ದಾರೆ ಎನ್ನುವ ವಿಚಾರ ಭಾರಿ ಸುದ್ದಿಯಾಗಿತ್ತು. ವಿಸ್ಕಾನ್ಸಿನ್‍ನ ಮ್ಯಾಡಿಸನ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಜೋ ಬೈಡನ್ ಜನರನ್ನು ಭೇಟಿ ಮಾಡಲು ಮುಂದಾಗಿದ್ದರು. ಆ ವೇಳೆ ಅಲ್ಲಿ ಇವರಿಗಾಗಿ ಕಾತುರದಿಂದ ಕಾಯುತ್ತಿದ್ದ ಕಪ್ಪು ವರ್ಣದ ಅಮೆರಿಕನ್ ಮಹಿಳೆಯನ್ನು ಅವರು ನಿರ್ಲಕ್ಷ್ಯ ಮಾಡಿದ್ದರು ಎನ್ನಲಾಗಿದೆ. ಈ ಘಟನೆಯ ವಿಡಯೊ ವೈರಲ್‌ ಅಗಿದೆ.

ಈ ವಿಡಿಯೊದಲ್ಲಿ, ಕಪ್ಪು ಅಮೆರಿಕನ್ ಮಹಿಳೆ ಕೈಯಲ್ಲಿ ಬೈಡನ್‌-ಹ್ಯಾರಿಸ್ ಬೋರ್ಡ್‌ ಹಿಡಿದು ಕಾಯುತ್ತಿದ್ದಳು. ಆದರೆ ಬೈಡನ್ ಆಕೆಯನ್ನು ಕಡೆಗಣಿಸಿದ್ದರು. ಆಕೆಯ ಮೊದಲು ನಿಂತಿದ್ದ ಬಿಳಿ ವರ್ಣದ ಮಹಿಳೆಯರನ್ನು ತಬ್ಬಿಕೊಂಡ ಅವರು ಆಕೆಯನ್ನು ಬಿಟ್ಟು ಆಕೆಯ ನಂತರ ನಿಂತ ಬಿಳಿ ವರ್ಣದ ಮತ್ತೊಬ್ಬ ಮಹಿಳೆಯನ್ನು ಹಗ್ ಮಾಡಿದ್ದರು. ಕಪ್ಪು ಅಮೆರಿಕನ್ ಮಹಿಳೆಯತ್ತ ಕಣ್ಣೆತ್ತಿ ನೋಡದ ಅಧ್ಯಕ್ಷರನ್ನು ಕಂಡು ಬೇಸರಗೊಂಡಿದ್ದು ಆಕೆಯ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಇದನ್ನೂ ಓದಿ: Trump Assassination Bid: ಟ್ರಂಪ್‌ ಮೇಲೆ ಗುಂಡಿನ ದಾಳಿ; ಶೂಟರ್‌ ಫೋಟೋ ರಿಲೀಸ್‌- ಆತನ ಸ್ನೇಹಿತರು ಹೇಳಿದ್ದೇನು?

ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬೈಡನ್ ಪ್ರಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗಿದೆ. ಯಾಕೆಂದರೆ ಬೈಡನ್ ಅವರನ್ನು ಶ್ವೇತಭವನಕ್ಕೆ ಕರೆದೊಯ್ದ ಕಪ್ಪು ವರ್ಣದ ಮತದಾರ ಬೆಂಬಲ ಕಳೆದುಕೊಳ್ಳುತ್ತಿದ್ದಾರೆ ಎಂದು ಹಲವಾರು ಸಮೀಕ್ಷೆಗಳು ಈಗಾಗಲೇ ಭವಿಷ್ಯ ನುಡಿದಿವೆ. ಅಲ್ಲದೇ ಯುವಕರ ಆರ್ಥಿಕತೆ ಮತ್ತು ಮತದಾರರ ಹಕ್ಕುಗಳ ಆದ್ಯತೆಗಳನ್ನು ನಿಭಾಯಿಸುವಲ್ಲಿ ಬೈಡನ್ ವಿಫಲರಾಗಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

Exit mobile version