Site icon Vistara News

Joe Biden: ಜೋ ಬೈಡೆನ್‌ ಮತ್ತೊಂದು ಎಡವಟ್ಟು; ಜೆಲೆನ್‌ಸ್ಕಿ ಬದಲು ಪುಟಿನ್‌ ಹೆಸರು ಹೇಳಿ ಪ್ರಮಾದ!

Joe Biden

Joe Biden mistakenly addresses Zelenskyy as President Putin, Ukraine leader’s reaction goes viral

ವಾಷಿಂಗ್ಟನ್:‌ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ (US Presidential Election 2024) ದಿನಗಣನೆ ಆರಂಭವಾಗಿದೆ. ಜೋ ಬೈಡೆನ್‌ ಅವರು ಎರಡನೇ ಅವಧಿಗೆ ಸ್ಪರ್ಧಿಸಲು ಮುಂದಾಗಿದ್ದು, ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಇತ್ತೀಚೆಗೆ, 81 ವರ್ಷದ ಜೋ ಬೈಡೆನ್‌ (Joe Biden) ಅವರು ಹೆಚ್ಚು ಮರೆಯುತ್ತಿರುವುದು, ವೇದಿಕೆ ಮೇಲೆ ಒಬ್ಬರ ಹೆಸರಿನ ಬದಲಾಗಿ ಮತ್ತೊಬ್ಬರ ಹೆಸರು ಕರೆಯುವುದು ಸೇರಿ ಹಲವು ರೀತಿಯ ಪ್ರಮಾದಗಳು ಅವರನ್ನು ಪೇಚಿಗೆ ಸಿಲುಕಿಸುತ್ತಿವೆ. ಇದರ ಬೆನ್ನಲ್ಲೇ ಅವರು, ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್‌ಸ್ಕಿ (Volodymyr Zelenskyy) ಬದಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಅವರ ಹೆಸರನ್ನು ಕರೆದು ಮುಜುಗರ ಅನುಭವಿಸಿದ್ದಾರೆ.

ಇತ್ತೀಚೆಗೆ ನ್ಯಾಟೋ ಶೃಂಗಸಭೆ ನಡೆದಿದ್ದು, ಜಾಗತಿಕ ನಾಯಕರು ಭಾಗವಹಿಸಿದ್ದರು. ವೇದಿಕೆ ಮೇಲೆ ಭಾಷಣ ಮಾಡಿದ ಜೋ ಬೈಡೆನ್‌ ಅವರು ವೊಲೊಡಿಮಿರ್‌ ಜೆಲೆನ್‌ಸ್ಕಿ ಅವರನ್ನು ಸ್ವಾಗತಿಸಬೇಕಿತ್ತು. “ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್‌ಸ್ಕಿ ಅವರು ತುಂಬ ಧೈರ್ಯಶಾಲಿ” ಎಂದು ಇದೇ ವೇಳೆ ಬೈಡೆನ್‌ ಬಣ್ಣಿಸಿದರು. ಆದರೆ, ವೇದಿಕೆಗೆ ಆಹ್ವಾನಿಸುವ ವೇಳೆ ಅವರು ಪ್ರೆಸಿಡೆಂಟ್‌ ಪುಡಿನ್‌ ಅವರಿಗೆ ಸ್ವಾಗತ ಎಂದು ಹೇಳಿದ್ದು ಪ್ರಮಾದಕ್ಕೆ ಕಾರಣವಾಯಿತು. ಕೂಡಲೇ ಅವರು ಪ್ರಮಾದವನ್ನು ಸರಿಪಡಿಸಿಕೊಂಡರು. ವೇದಿಕೆ ಮೇಲೆಯೇ ಇದ್ದ ವೊಲೊಡಿಮಿರ್‌ ಜೆಲೆನ್‌ಸ್ಕಿ ಅವರು ಜೋ ಬೈಡೆನ್‌ ಪ್ರಮಾದದಿಂದ ನಕ್ಕು, ಮಾತನಾಡಿದರು. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಕಮಲಾ ಹ್ಯಾರಿಸ್‌ ಬದಲು ಟ್ರಂಪ್‌ ಹೆಸರು ಉಲ್ಲೇಖ

ಕಮಲಾ ಹ್ಯಾರಿಸ್‌ ಅವರ ಹೆಸರು ಪ್ರಸ್ತಾಪಿಸುವ ವೇಳೆಯೂ ಜೋ ಬೈಡೆನ್‌ ನಗೆಪಾಟಲಿಗೀಡಾಗಿದ್ದಾರೆ. ವಾಷಿಂಗ್ಟನ್‌ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುವಾಗ, ಉಪಾಧ್ಯಕ್ಷೆ ಕಮಲಾ ಹ್ಯಾರೀಸ್‌ ಹೆಸರಿಗೆ ಬದಲಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೆಸರು ಪ್ರಸ್ತಾಪಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಬೈಡೆನ್‌, ಕಮಲಾ ಹ್ಯಾರೀಸ್‌ ಪರ ಪ್ರಚಾರ ಮಾಡಿದರು. ಈ ವೇಳೆ ಮಾತನಾಡುತ್ತಾ ಉಪಾಧ್ಯಕ್ಷ ಟ್ರಂಪ್‌ ಅವರು ಅಧ್ಯಕ್ಷರಾಗಲು ಅರ್ಹರಲ್ಲ ಎಂದು ನಾನು ಭಾವಿಸದಿದ್ದರೆ ನಾನು ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ. ತಕ್ಷಣ ಪತ್ರಕರ್ತರೊಬ್ಬರು ಈ ತಪ್ಪನ್ನು ಪ್ರಸ್ತಾಪಿಸಿದಾಗ ಅದನ್ನು ಏನೂ ಮಾತನಾಡದೇ ಸುಮ್ಮನೆ ನಗಾಡಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಸತತ ಎರಡನೇ ಅವಧಿಗೆ ಆಯ್ಕೆ ಬಯಸಿರುವ ಹಾಲಿ ಅಧ್ಯಕ್ಷ ಜೋ ಬೈಡನ್ ಅವರಿಗೆ ಒಂದರ ಹಿಂದೊಂದರಂತೆ ಅಡೆತಡೆಗಳು ಎದುರಾಗುತ್ತಿವೆ. ಸ್ವಪಕ್ಷದಲ್ಲಿಯೇ ಬೈಡನ್ ಸ್ಪರ್ಧೆಗೆ ವಿರೋಧ ವ್ಯಕ್ತವಾಗುತ್ತಿದೆ. ಡೆಮಾಕ್ರಟಿಕ್ ಪಕ್ಷದ ಮುಂಚೂಣಿ ದೇಣಿಗೆದಾರರಲ್ಲಿ ಒಬ್ಬರಾದ ನಟ ಜಾರ್ಜ್ ಕ್ಲೂನಿ, ಚುನಾವಣೆಯಿಂದ ಹಿಂದೆ ಸರಿಯುವಂತೆ ಬೈಡನ್‌ಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: US Presidential Election: ಬಹಿರಂಗ ಚರ್ಚೆ ಬಳಿಕ ಅಭ್ಯರ್ಥಿಯ ಬದಲಾವಣೆ? ಬೈಡೆನ್‌ ಬದಲಿಗೆ ಮಿಶೆಲ್‌ ಒಬಾಮಾ ಕಣಕ್ಕೆ?

Exit mobile version