Site icon Vistara News

Kamala Harris: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಹೆಸರು ಅಂತಿಮ

Kamala Harris

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ (US Presidential Election 2024) ಸ್ಥಾನಕ್ಕೆ ರಿಪಬ್ಲಿಕನ್‌ (Republican) ಪಕ್ಷದ ಡೊನಾಲ್ಡ್‌ ಟ್ರಂಪ್‌ (Donald Trump) ವಿರುದ್ಧ ಡೆಮಾಕ್ರಟಿಕ್ ಪಕ್ಷ (Democratic party)ದ ಅಭ್ಯರ್ಥಿಯಾಗಿ ಉಪಾಧ್ಯಕ್ಷೆ, ಭಾರತದ ಮೂಲದ ಕಮಲಾ ಹ್ಯಾರಿಸ್ (Kamala Harris) ಅವರ ಹೆಸರು ಅಂತಿಮವಾಗಿದೆ.

ಈ ತಿಂಗಳ ಕೊನೆಯಲ್ಲಿ ಚಿಕಾಗೋದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ 59 ವರ್ಷದ ಕಮಲಾ ಹ್ಯಾರಿಸ್ ಅವರು, “ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಲು ನನಗೆ ಹೆಮ್ಮೆ ಇದೆ” ಎಂದು ಹೇಳಿದ್ದಾರೆ.

ಮಹತ್ವದ ಬೆಳವಣಿಗೆಯೊಂದರಲ್ಲಿ ಕೆಲವು ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ, ಡೆಮಾಕ್ರಟಿಕ್‌ ಪಕ್ಷದ ಜೋ ಬೈಡೆನ್‌ (Joe Biden) ಅವರು ಚುನಾವಣೆ ರೇಸ್‌ನಿಂದಲೇ ಹಿಂದೆ ಸರಿದಿದ್ದರು. ಇದು ಅಮೆರಿಕ ಮಾತ್ರವಲ್ಲ, ಜಗತ್ತಿನಾದ್ಯಂತ ಸಂಚಲನ ಮೂಡಿಸಿತ್ತು. ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುವ ಕುರಿತು ಜೋ ಬೈಡೆನ್‌ ಅವರೇ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪತ್ರದ ಮೂಲಕ ಘೋಷಿಸಿದ್ದರು.

“ನಾನು ಕಳೆದ ಮೂರುವರೆ ವರ್ಷಗಳಿಂದ ಅಮೆರಿಕ ಅಧ್ಯಕ್ಷನಾಗಿ, ದೇಶದ ಏಳಿಗೆಗೆ ದುಡಿದಿದ್ದೇನೆ. ನಿಮ್ಮೆಲ್ಲರ ಅಧ್ಯಕ್ಷನಾಗಿ ಸೇವೆ ಮಾಡಿದ್ದು ನನಗೆ ಖುಷಿಯಾಗಿದೆ. ಎರಡನೇ ಬಾರಿ ಆಯ್ಕೆಗೂ ನಾನು ಮನಸ್ಸು ಮಾಡಿದ್ದೆ. ಆದರೆ ದೇಶ ಹಾಗೂ ಪಕ್ಷದ ಹಿತದೃಷ್ಟಿಯಿಂದಾಗಿ ನಾನು ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದಿದ್ದೇನೆ” ಎಂದು ಅವರು ಹೇಳಿದ್ದರು.

ಅಂದಿನಿಂದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರ ಹೆಸರು ಹೆಚ್ಚು ಚಾಲ್ತಿಗೆ ಬಂದಿತ್ತು. ಅವರೇ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಮಾತು ಕೇಳಿ ಬರತೊಡಗಿತ್ತು. ಕಮಲಾ ಹ್ಯಾರಿಸ್‌ ಆಯ್ಕೆಗೆ ಪಕ್ಷದ ಒಳಗೆ ಯಾವುದೇ ಆಕ್ಷೇಪ ವ್ಯಕ್ತವಾಗದಿದ್ದು ಕೂಡ ಪ್ಲಸ್‌ ಪಾಯಿಂಟ್ ಆಗಿತ್ತು. ಈಗಾಗಲೇ ಅವರು ಸಮಾವೇಶ ನಡೆಸಿ ಮತದಾರರ ಗಮನವನ್ನೂ ಸೆಳೆದಿದ್ದಾರೆ.

ಇದನ್ನೂ ಓದಿ: Kamala Harris: ಅಮೆರಿಕ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಹಿನ್ನೆಲೆ ಏನು? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಕಮಲಾ ಹ್ಯಾರಿಸ್‌ ಪರ ನಿಂತ ಬರಾಕ್‌ ಒಬಾಮಾ

ಈಗಾಗಲೇ ಕಮಲಾ ಹ್ಯಾರಿಸ್‌ ಅವರಿಗೆ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ (Barack Obama) ಹಾಗೂ ಅವರ ಪತ್ನಿ ಮಿಚೆಲ್‌ ಒಬಾಮಾ ಅವರು ಬೆಂಬಲ ಸೂಚಿಸಿದ್ದಾರೆ. ಇತ್ತೀಚೆಗೆ ಬರಾಕ್‌ ಒಬಾಮಾ ಹಾಗೂ ಅವರ ಪತ್ನಿ ಮಿಚೆಲ್‌ ಒಬಾಮಾ ಅವರು ಕಮಲಾ ಹ್ಯಾರಿಸ್‌ ಅವರಿಗೆ ಕರೆ ಮಾಡಿ, ಬೆಂಬಲ ಘೋಷಿಸಿದ್ದರು. “ಕೆಲ ದಿನಗಳ ಹಿಂದೆ ನಾನು ಹಾಗೂ ಮಿಚೆಲ್‌ ಅವರು ಗೆಳತಿ ಕಮಲಾ ಹ್ಯಾರಿಸ್‌ ಅವರಿಗೆ ಕರೆ ಮಾಡಿದ್ದೆವು. ನೀವು ಅಮೆರಿಕ ಅಧ್ಯಕ್ಷರಾದರೆ ಒಳ್ಳೆಯದಾಗುತ್ತದೆ. ನಿಮಗೆ ನಮ್ಮ ಬೆಂಬಲವಿದೆ ಎಂಬುದನ್ನು ತಿಳಿಸಿದೆವು. ದೇಶವು ಮಹತ್ವದ ಘಟ್ಟದಲ್ಲಿರುವ ಇಂತಹ ಹೊತ್ತಿನಲ್ಲಿ ಕಮಲಾ ಹ್ಯಾರಿಸ್‌ ಅವರು ಅಧ್ಯಕ್ಷೆಯಾಗಿ ಆಯ್ಕೆಯಾಗಲು ನಾವು ಎಲ್ಲ ರೀತಿಯ ಸಹಕಾರ, ಬೆಂಬಲ ನೀಡುತ್ತೇವೆ. ನೀವು ಕೂಡ ನಮ್ಮ ಜತೆಗೂಡಿ” ಎಂದು ಬರಾಕ್‌ ಒಬಾಮಾ ಪೋಸ್ಟ್‌ ಮಾಡಿದ್ದರು.

Exit mobile version