Site icon Vistara News

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ Covid-19 ಪಾಸಿಟಿವ್‌: ಎರಡೂ ಡೋಸ್‌ ಲಸಿಕೆ ಪಡೆದಿದ್ದ ನಂ-2

ವಾಷಿಂಗ್ಟನ್‌ ಡಿಸಿ: ಅಮೆರಿಕ ಉಪಾಧ್ಯಕ್ಷೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಕೋವಿಡ್‌-19 (Covid-19) ಸೋಂಕಿಗೆ ಒಳಗಾಗಿದ್ದಾರೆ. ಹ್ಯಾರಿಸ್‌ಗೆ ಸೋಂಕು ದೃಢಪಟ್ಟಿರುವುದನ್ನು ಶ್ವೇತ ಭವನ ಖಚಿತಪಡಿಸಿದ್ದು, ಸದ್ಯ ಕ್ವಾರಂಟೈನ್‌ನಲ್ಲಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ಸೇರಿ ಅನೇಕ ಪ್ರವಾಸ ಮಾಡಿದರೂ ಕಮಲಾ ಕೋವಿಡ್‌ ಸೋಂಕಿಗೆ ಒಳಗಾಗಿರಲಿಲ್ಲ. ಆದರೆ ಇತ್ತೀಚೆಗೆ ಭಾರತದಂತೆಯೇ ಅಮೆರಿಕದಲ್ಲಿ ಸೋಂಕು ಏರುಗತಿಯಲ್ಲಿ ಸಾಗಿದೆ. ಹ್ಯಾರಿಸ್‌ ಸುತ್ತಮುತ್ತಲಿರುವ, ಪತಿ ಡೌಗ್‌ ಎಮೋಫ್‌, ಕಮಲಾ ಅವರ ಸಂವಹನ ನಿರ್ದೇಶಕ, ಶ್ವೇತ ಭವನ ಕಾರ್ಯದರ್ಶಿ ಹಾಗೂ ಕಮಲಾ ಅವರ ಮಾಧ್ಯಮ ಕಾರ್ಯದರ್ಶಿಗೆ ಈಗಾಗಲೆ ಸೋಂಕು ದೃಢಪಟ್ಟಿದೆ. ಮಾಡರ್ನಾ ಕಂಪನಿಯ ಕೊರೋನಾ ಲಸಿಕೆಯ ಎರಡು ಡೋಸ್‌ ಹಾಅಗೂ ಒಂದು ಬೂಸ್ಟರ್‌ ಡೋಸ್‌ ಪಡೆದಿದ್ದರೂ ಕಮಲಾ ಅವರಿಗೆ ಮಂಗಳವಾರ ಸೋಂಕು ದೃಢಪಟ್ಟಿದೆ ಎಂದು ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ | Explainer: ಏನಿದು ಕೋವಿಡ್‌ R Value? ಇದೇಕೆ ಮುಖ್ಯ?

“ಕೋವಿಡ್‌ ಮಾರ್ಗಸೂಚಿಗಳನ್ನು ಕಮಲಾ ಪಾಲನೆ ಮಾಡುತ್ತಾರೆ. ಅದರಂತೆ ಅವರ ಕೋವಿಡ್‌ ವರದಿ ನೆಗೆಟಿವ್‌ ಬರುವವರೆಗೂ ಪ್ರತ್ಯೇವಾಗಿರಲಿದ್ದಾರೆ. ವೈದ್ಯರ ಮಾರ್ಗದರ್ಶನದಲ್ಲಿ ಗುಣಮುಖರಾದ ನಂತರವಷ್ಟೆ ಶ್ವೇತಭವನಕ್ಕೆ ವಾಪಸಾಗಲಿದ್ದಾರೆ” ಎಂದು ಕಮಲಾ ಹ್ಯಾರಿಸ್‌ ಮಾಧ್ಯಮ ಕಾರ್ಯದರ್ಶಿ ಕಿರ್ಸ್ಟೆನ್‌ ಅಲನ್‌ ಮಾಹಿತಿ ನೀಡಿದ್ದಾರೆ.

ಸದನದ ಸ್ಪೀಕರ್‌ ನ್ಯಾನ್ಸಿ ಪೆಲೋಸಿ, ಅಟಾರ್ನಿ ಜನರಲ್‌ ಮೆರಿಕ್‌ ಗಾರ್ಲೆಂಡ್‌, ವಾಣಿಜ್ಯ ಕಾರ್ಯದರ್ಶಿ ಗೀನಾ ರೈಮಂಡೊ ಹಾಗೂ ಸದನ ಸದಸ್ಯರುಗಳಾದ ಆಡಮ್‌ ಷಿಫ್‌ ಮತ್ತು ಜಾಕ್ವಿನ್‌ ಕ್ಯಾಸ್ಟ್ರೊ ಸೇರಿ ಅಮೆರಿಕದಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್‌ ಪಾಸಿಟಿವ್‌ ಎಂದು ವರದಿಯಾದ ಗಣ್ಯ ವ್ಯಕ್ತಿಗಳ ಪಟ್ಟಿಗೆ ಇದೀಗ ಕಮಲಾ ಹ್ಯಾರಿಸ್‌ ಸಹ ಸೇರಿದ್ದಾರೆ.

ವೈದ್ಯರನ್ನು ಸಂಪರ್ಕಿಸಿದ ನಂತರ ಹ್ಯಾರಿಸ್‌ ಅವರು ಕೋವಿಡ್‌ ಚಿಕಿತ್ಸೆಗೆ ನಿಗದಿಪಡಿಸಿರುವ ಚಿಕಿತ್ಸಾ ವಿಧಾನವನ್ನು ಪಡೆಯುತ್ತಿದ್ದಾರೆ. ರಾಷ್ಟ್ರಪತಿ ಜೋ ಬೈಡೆನ್‌ ಹಾಗೂ ಅವರ ಪತ್ನಿ ಇತ್ತೀಚೆಗೆ ವಿವಿಧ ದೇಶಗಳ ಪ್ರವಾಸದಲ್ಲಿ ಇದ್ದ ಕಾರಣದಿಂದ ಇವರುಗಳೊಂದಿಗೆ ಕಮಲಾ ಹ್ಯಾರಿಸ್‌ ಸಂಪರ್ಕಕ್ಕೆ ಬಂದಿರಲಿಲ್ಲ. ಕಮಲಾ ಹ್ಯಾರಿಸ್‌ ಸಹ ಇತ್ತೀಚೆಗಷ್ಟೆ ಕ್ಯಾಲಿಫೋರ್ನಿಯಾ ಪ್ರವಾಸ ಮುಗಿಸಿ ವಾಪಸಾಗಿದ್ದರು ಎಂದು ಅಲೆನ್‌ ತಿಳಿಸಿದ್ದಾರೆ.

ಕಮಲಾ ಹ್ಯಾರಿಸ್‌ ಸಹ ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ. “ನನಗೆ ಕೋವಿಡ್‌-19 ಪಾಸಿಟಿವ್‌ ಎಂದು ದೃಢಪಟ್ಟಿದೆ. ನನಗೆ ಸೋಂಕಿನ ಯಾವುದೇ ಲಕ್ಷಣಗಳಿಲ್ಲ ಹಾಗೂ ನಾನು ಪ್ರತ್ಯೇಕವಾಗಿದ್ದು ಎಲ್ಲ ಕೋವಿಡ್‌ ನಿಯಮಾವಳಿಗಳನ್ನು ಪಾಲನೆ ಮಾಡುತ್ತೇನೆ. ನಾನು ಪ್ರಾರಂಭಿಕ ಲಸಿಕೆ ಹಾಗೂ ಬೂಸ್ಟರ್‌ ಡೋಸ್‌ ಲಸಿಕೆ ಪಡೆದಿದ್ದಕ್ಕೆ ಸಂತೋಷವಾಗುತ್ತಿದೆ” ಎಂದು ತಿಳಿಸಿದ್ದಾರೆ. ಲಸಿಕೆ ಪಡೆದಿದ್ದರೂ ಕೋವಿಡ್‌ ಸೋಮಕಿಗೆ ಒಳಗಾಗಿದ್ದಾರೆ ಎಂದು ಅಮೆರಿಕದಲ್ಲಿ ಕೆಲವರು ಮಾತಾಡಿಕೊಳ್ಳುತ್ತಾರೆ ಎಂಬ ಕಾರಣಕ್ಕೆ, ಲಸಿಕೆ ಪಡೆದಿದ್ದರಿಂದಲೇ ತಮಗೆ ಸೋಂಕಿನ ಗುಣಲಕ್ಷಣಗಳಿಲ್ಲದೆ ಆರಾಮಾಗಿದ್ದೇನೆ ಎಂದು ಪರೋಕ್ಷವಾಗಿ ಕಮಲಾ ತಿಳಿಸಿದ್ದಾರೆ.

ಕೋವಿಡ್‌ ರೂಪಾಂತರಿ ಬಿಎ.2 ಅಮೆರಿಕದಲ್ಲಿ ಹೆಚ್ಚಾಗಿ ಪ್ರಸಾರವಾಗುತ್ತಿದೆ. ಅಮೆರಿಕದಲ್ಲಿ ಸೋಂಕಿಗೆ ಒಳಗಾಗುತ್ತಿರುವ ಬಹುತೇಕರಂತೆಯೇ, ಕಮಲಾ ಹ್ಯಾರಿಸ್‌ ಅವರಿಗೂ ಸೋಂಕಿನ ಲಕ್ಷಣಗಳಿಲ್ಲ. ಇಷ್ಟೆಲ್ಲ ಪ್ರವಾಸ ಮಾಡಿರುವ ಉಪಾಧ್ಯಕ್ಷೆಗೆ ಸೋಂಕು ಎಲ್ಲಿಂದ ತಗುಲಿದೆ ಎನ್ನುವುದು ಇನ್ನೂ ಪತ್ತೆ ಆಗಿಲ್ಲ. ಆದರೆ ಇತ್ತೀಚೆಗಷ್ಟೆ ಈಸ್ಟರ್‌ ಎಗ್‌ ರೋಲ್‌ ಕಾರ್ಯಕ್ರಮ ಸೇರಿ, ಸಾವಿರಾರು ಜನರು ಸೇರುವ ಅನೇಕ ಕಾರ್ಯಕ್ರಮಗಳಲ್ಲಿ ಕಮಲಾ ಭಾಗಿಯಾಗಿದ್ದರು. ಕಮಲಾ ಅವರೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರನ್ನೂ ಹುಡುಕಿ ಎಲ್ಲರಿಗೂ ಈ ಕುರಿತು ಮುಂಜಾಗ್ರತಾ ಸೂಚನೆ ನೀಡಲಾಗುತ್ತದೆ ಎಂದು ಶ್ವೇತಭವನ ತಿಳಿಸಿದೆ.

ಇದನ್ನೂ ಓದಿ | Covid Lockdown ಎಫೆಕ್ಟ್: ರಾಷ್ಟ್ರ‌ಗೀತೆಯನ್ನೇ ಸೆನ್ಸಾರ್‌ ಮಾಡಿದ ಚೀನಾ!

Exit mobile version