ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರಿಗೆ ಬಂಧನದಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ತೋಷಾಖಾನಾ ಹಗರಣದಲ್ಲಿ ಸಿಲುಕಿರುವ ಇಮ್ರಾನ್ ಖಾನ್ ಅವರನ್ನು ಗುರುವಾರ (ಮಾರ್ಚ್ 16) ಬೆಳಗ್ಗೆ 10 ಗಂಟೆಯವರೆಗೆ ಬಂಧಿಸದಂತೆ ಪೊಲೀಸರಿಗೆ ಲಾಹೋರ್ ಹೈಕೋರ್ಟ್ ನಿರ್ದೇಶನ ನೀಡಿದೆ. ಹಾಗಾಗಿ, ಖಾನ್ ಅವರಿಗೆ ತುಸು ರಿಲೀಫ್ ಸಿಕ್ಕಿದೆ. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇಮ್ರಾನ್ ನಿವಾಸದಿಂದ ಪೊಲೀಸರು ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಇಮ್ರಾನ್ ಖಾನ್ ಅವರನ್ನು ಬಂಧಿಸಲು ಪೊಲೀಸರು ಬುಧವಾರ ಬೆಳಗ್ಗೆ ಮಾಜಿ ಪ್ರಧಾನಿಯ ನಿವಾಸಕ್ಕೆ ತೆರಳಿದ್ದಾಗ ಜಮಾನ್ ಪಾರ್ಕ್ ಎದುರು ಗಲಾಟೆ ನಡೆದಿದೆ. ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಸಂಘರ್ಷ ನಡೆದಿದೆ. ಜಮಾನ್ ಪಾರ್ಕ್ ಎದುರು ಪಿಟಿಐ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಇದಕ್ಕೆ ತಡೆ ನೀಡಬೇಕು ಎಂದು ಪಿಟಿಐ ನಾಯಕ ಫವಾದ್ ಚೌಧರಿಯು ಲಾಹೋರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ನ್ಯಾಯಾಲಯವು ಬಂಧಿಸದಂತೆ ಆದೇಶ ನೀಡಿದೆ.
ಇಮ್ರಾನ್ ಖಾನ್ ನಿವಾಸದ ಎದುರು ಗಲಾಟೆ ನಡೆಯುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯ ಭೀತಿ ಎದುರಾಗಿದೆ. ಹಾಗೆಯೇ, ಇಮ್ರಾನ್ ನಿವಾಸದಿಂದ ಕೆಲವೇ ಕಿ.ಮೀ ದೂರದಲ್ಲಿರುವ ಸ್ಟೇಡಿಯಂನಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಮ್ಯಾಚ್ ನಡೆಯುತ್ತಿದೆ. ಹಾಗಾಗಿ, ಬಂಧನಕ್ಕೆ ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡಲಾಗಿದೆ. ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದಾಗ ಪಾಕಿಸ್ತಾನದ ತೋಷಾಖಾನಾ (ಖಜಾನೆ)ಗೆ ಸೇರಬೇಕಾದ ಉಡುಗೊರೆಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದ ಪ್ರಕರಣ ಎದುರಿಸುತ್ತಿದ್ದಾರೆ. ಅವರ ವಿರುದ್ಧ ಕೋರ್ಟ್ ಜಾಮೀನು ರಹಿತ ಅರೆಸ್ಟ್ ವಾರಂಟ್ ಹೊರಡಿಸಿದೆ.
ಇದನ್ನೂ ಓದಿ: Imran Khan: ಪಾಕ್‌ನಲ್ಲಿ ಕೆ.ಜಿ ತುಪ್ಪದ ಬೆಲೆ 600 ಶತಕೋಟಿ ರೂ., ಇಮ್ರಾನ್ ಖಾನ್ ಹೇಳಿಕೆಯ ವಿಡಿಯೊ ವೈರಲ್