ಪ್ರಮುಖ ಸುದ್ದಿ
Imran Khan: ಇಮ್ರಾನ್ ಖಾನ್‌ಗೆ ತಾತ್ಕಾಲಿಕ ರಿಲೀಫ್, ಗುರುವಾರದವರೆಗೆ ಬಂಧನಕ್ಕೆ ತಡೆ
Imran Khan: ತೋಷಾಖಾನಾ ಹಗರಣದಲ್ಲಿ ಸಿಲುಕಿರುವ ಇಮ್ರಾನ್ ಖಾನ್ ಅವರಿಗೆ ಹಲವು ದಿನಗಳಿಂದ ಬಂಧನದ ಭೀತಿ ಇದೆ. ಆದರೀಗ, ಕೋರ್ಟ್ ಗುರುವಾರದವರೆಗೆ ಬಂಧನದಿಂದ ತಡೆ ನೀಡಿದೆ.
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರಿಗೆ ಬಂಧನದಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ತೋಷಾಖಾನಾ ಹಗರಣದಲ್ಲಿ ಸಿಲುಕಿರುವ ಇಮ್ರಾನ್ ಖಾನ್ ಅವರನ್ನು ಗುರುವಾರ (ಮಾರ್ಚ್ 16) ಬೆಳಗ್ಗೆ 10 ಗಂಟೆಯವರೆಗೆ ಬಂಧಿಸದಂತೆ ಪೊಲೀಸರಿಗೆ ಲಾಹೋರ್ ಹೈಕೋರ್ಟ್ ನಿರ್ದೇಶನ ನೀಡಿದೆ. ಹಾಗಾಗಿ, ಖಾನ್ ಅವರಿಗೆ ತುಸು ರಿಲೀಫ್ ಸಿಕ್ಕಿದೆ. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇಮ್ರಾನ್ ನಿವಾಸದಿಂದ ಪೊಲೀಸರು ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಇಮ್ರಾನ್ ಖಾನ್ ಅವರನ್ನು ಬಂಧಿಸಲು ಪೊಲೀಸರು ಬುಧವಾರ ಬೆಳಗ್ಗೆ ಮಾಜಿ ಪ್ರಧಾನಿಯ ನಿವಾಸಕ್ಕೆ ತೆರಳಿದ್ದಾಗ ಜಮಾನ್ ಪಾರ್ಕ್ ಎದುರು ಗಲಾಟೆ ನಡೆದಿದೆ. ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಸಂಘರ್ಷ ನಡೆದಿದೆ. ಜಮಾನ್ ಪಾರ್ಕ್ ಎದುರು ಪಿಟಿಐ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಇದಕ್ಕೆ ತಡೆ ನೀಡಬೇಕು ಎಂದು ಪಿಟಿಐ ನಾಯಕ ಫವಾದ್ ಚೌಧರಿಯು ಲಾಹೋರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ನ್ಯಾಯಾಲಯವು ಬಂಧಿಸದಂತೆ ಆದೇಶ ನೀಡಿದೆ.
ಇಮ್ರಾನ್ ಖಾನ್ ನಿವಾಸದ ಎದುರು ಗಲಾಟೆ ನಡೆಯುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯ ಭೀತಿ ಎದುರಾಗಿದೆ. ಹಾಗೆಯೇ, ಇಮ್ರಾನ್ ನಿವಾಸದಿಂದ ಕೆಲವೇ ಕಿ.ಮೀ ದೂರದಲ್ಲಿರುವ ಸ್ಟೇಡಿಯಂನಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಮ್ಯಾಚ್ ನಡೆಯುತ್ತಿದೆ. ಹಾಗಾಗಿ, ಬಂಧನಕ್ಕೆ ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡಲಾಗಿದೆ. ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದಾಗ ಪಾಕಿಸ್ತಾನದ ತೋಷಾಖಾನಾ (ಖಜಾನೆ)ಗೆ ಸೇರಬೇಕಾದ ಉಡುಗೊರೆಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದ ಪ್ರಕರಣ ಎದುರಿಸುತ್ತಿದ್ದಾರೆ. ಅವರ ವಿರುದ್ಧ ಕೋರ್ಟ್ ಜಾಮೀನು ರಹಿತ ಅರೆಸ್ಟ್ ವಾರಂಟ್ ಹೊರಡಿಸಿದೆ.
ಇದನ್ನೂ ಓದಿ: Imran Khan: ಪಾಕ್‌ನಲ್ಲಿ ಕೆ.ಜಿ ತುಪ್ಪದ ಬೆಲೆ 600 ಶತಕೋಟಿ ರೂ., ಇಮ್ರಾನ್ ಖಾನ್ ಹೇಳಿಕೆಯ ವಿಡಿಯೊ ವೈರಲ್
ಅಂಕಣ
ಮೊಗಸಾಲೆ ಅಂಕಣ: ಮೋದಿ, ಖರ್ಗೆ ಹಣಾಹಣಿಗೆ ವೇದಿಕೆ ಸಜ್ಜು
ಮೊಗಸಾಲೆ ಅಂಕಣ
ಮೋದಿ, ಖರ್ಗೆ ಹಣಾಹಣಿಗೆ ವೇದಿಕೆ ಸಜ್ಜು
ಅತ್ತ ಮೋದಿಯವರಿಗೆ ಈ ಕರ್ನಾಟಕ ಚುನಾವಣೆ ಗೆಲುವು ಎಷ್ಟು ಮುಖ್ಯವೋ, ಅದಕ್ಕಿಂತ ಹತ್ತು ಪಟ್ಟು ಖರ್ಗೆಯವರಿಗೆ ಮುಖ್ಯವಾಗಿದೆ. ಎಸ್.ನಿಜಲಿಂಗಪ್ಪ ಬಳಿಕ ಏಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಏರಿರುವ ಕನ್ನಡಿಗ ಖರ್ಗೆಯವರಿಗೆ ಕರ್ನಾಟಕವನ್ನು ಜೈಸಲೇಬೇಕಾಗಿದೆ. ಆದರೆ ಹೇಗೆ?
ಕರ್ನಾಟಕ ವಿಧಾನಸಭೆ ಚುನಾವಣೆ ಕಣ
ಬರಲಿರುವ ಮೇ ಮಾಹೆಯ ಹತ್ತನೇ ದಿವಸ ಕರ್ನಾಟಕ ವಿಧಾನ ಸಭಾ ಚುನಾವಣೆಯ (karnataka election 2023) ಮತದಾನದ ದಿನ ಮಾತ್ರವೇ ಆಗಿರದೆ ಜನಮಾನಸದ ಐತೀರ್ಪಿನ ಮುಹೂರ್ತವೂ ಆಗಿದೆ. ಜಡ್ಜ್‌ಮೆಂಟ್ ಡೇ ಎಂದು ಅದನ್ನು ಕರೆಯಬಹುದು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹೆಸರನ್ನು ಮುಂದಿಟ್ಟು ಯಾರು ಹಿತವರು ನಿಮಗೆ ಈ ಮೂರರೊಳಗೆ ಎಂದು ಕೇಳಿದರೆ ಯಾವುದೂ ಹಿತವಲ್ಲ ಎಂದು ಜನ ಹೇಳಿಯಾರು. ಆದರೆ ನಮ್ಮದು ಚುನಾಯಿತ ಪ್ರಜಾಪ್ರಭುತ್ವ. ಇಲ್ಲಿ ಅದಕ್ಕೆಲ್ಲ ಸೀಮಿತ ಅವಕಾಶವಷ್ಟೇ ಇರುತ್ತದೆ. ಕರ್ನಾಟಕದ ಜನರಿಗೆ ಸದ್ಯಕ್ಕೆ ಈ ಮೂರೂ ಪಕ್ಷಗಳ ಆಚೆಗೆ ಪ್ರಬಲವಾದ ನಾಲ್ಕನೇ ಆಯ್ಕೆಗೆ ಅವಕಾಶ ಇಲ್ಲ.
ಒಂದೇ ಹಂತದಲ್ಲಿ ಚುನಾವಣೆ ನಡೆಯುವುದೆಂದು ಚುನಾವಣಾ ಆಯೋಗ ಪ್ರಕಟಿಸಿದೆ. ಕಾನೂನು ಸುರಕ್ಷತೆ ಮತ್ತು ಕಾಯ್ದೆಯನ್ನು ವ್ಯವಸ್ಥಿತವಾಗಿ ಕಾಯ್ದುಕೊಂಡು ಬರುವ ಭರವಸೆಯನ್ನು ಮುಖ್ಯ ಕಾರ್ಯದರ್ಶಿ ವಂದನಾ ಶರ್ಮ ಮತ್ತು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ನೀಡಿರುವುದು ಈ ನಿರ್ಧಾರಕ್ಕೆ ಆಧಾರವೆಂದು ಮೇಲು ನೋಟಕ್ಕೇ ಅರ್ಥವಾಗುತ್ತದೆ. ಈ ಇಬ್ಬರು ವರಿಷ್ಠ ಅಧಿಕಾರಿಗಳೊಂದಿಗೆ ನಡೆಸಿದ ಸಮಾಲೋಚನೆ ಸಮಾಧಾನಕರವೆಂದು ಆಯೋಗಕ್ಕೆ ಮನವರಿಕೆಯಾಗಿರುವುದು ರಾಜ್ಯದಲ್ಲಿ ನೆಲೆಸಿರುವ ಶಾಂತಿಯುತ ವಾತಾವರಣಕ್ಕೆ ಕೋಡು ಮೂಡಿಸಿರುವ ಬೆಳವಣಿಗೆ. 31 ಜಿಲ್ಲೆಗಳಲ್ಲಿ ಹರಡಿರುವ 224 ಕ್ಷೇತ್ರಗಳಿಗೆ ಒಂದೇ ಹಂತ/ಒಂದೇ ದಿವಸ ಚುನಾವಣೆ ನಡೆಸುವುದು ಹುಡುಗಾಟಿಕೆಯ ಮಾತಲ್ಲ. ಶಾಸಕ ಬಲಕ್ಕೆ ಹೋಲಿಸಿದರೆ ಕರ್ನಾಟಕದ ಅರ್ಧವೂ ಇರದ ಚಿಕ್ಕಪುಟ್ಟ ರಾಜ್ಯಗಳಲ್ಲಿ ಎರಡು ಮೂರು ಹಂತದ ಚುನಾವಣೆ ನಡೆದಿದ್ದಕ್ಕೆ ದೇಶ ಸಾಕ್ಷಿಯಾಗಿದೆ. ಇಲ್ಲಿ ಎಲ್ಲವೂ ಸುಗಮ ಸುರಕ್ಷಿತ ಎಂದು ಆಯೋಗ ಭಾವಿಸಿದ್ದರೆ ಅದಕ್ಕಾಗಿ ನಮ್ಮ ಬೆನ್ನನ್ನು ನಾವೇ ತಟ್ಟಿಕೊಂಡು ಸುಖಿಸಬಹುದು.
ಎಚ್.ಡಿ. ದೇವೇಗೌಡ ನೇತೃತ್ವದ ಜಾತ್ಯತೀತ ಜನತಾ ದಳದ ಮುಖ್ಯಮಂತ್ರಿ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿಯವರು ಸ್ವತಂತ್ರ ಬಲದ ಮೇಲೆ ಅಧಿಕಾರಕ್ಕೆ ಬರುವ, 123 ಸ್ಥಾನ ಗೆಲ್ಲುವ ಛಲದಲ್ಲಿ ಪ್ರಚಾರ ಪ್ರವಾಸ ನಡೆಸಿದ್ದಾರೆ. ಚುನಾವಣಾ ರಾಜಕೀಯಕ್ಕೆ ಇಳಿಯುವ ಪ್ರತಿಯೊಂದೂ ಪಕ್ಷ ತಾನೇ ಅಧಿಕಾರಕ್ಕೆ ಬರುವುದಾಗಿ ಜನರ ಮುಂದೆ ಹೇಳಬೇಕು; ಜನರು ಅದನ್ನು ನಂಬುವಂತೆ ಮಾಡಬೇಕು. ಕುಮಾರಸ್ವಾಮಿಯವರಿಗೆ ಪ್ರವಾಹದ ವಿರುದ್ಧ ಈಜುತ್ತಿರುವ ಅನುಭವ ಈಗಾಗಲೇ ಮನವರಿಕೆಯಾಗಿದೆ. ಹಾಸನ ಜಿಲ್ಲೆಯಲ್ಲಿ ನಡೆದಿರುವ ಟಿಕೆಟ್ ಹಂಚಿಕೆ ಯಾದವೀ ಕಲಹ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ ಎನ್ನಲು ಹೇರಳ ಸಾಂದರ್ಭಿಕ ಸಾಕ್ಷ್ಯಗಳಿವೆ. ಮಾರು ಗೆದ್ದು ಊರು ಗೆಲ್ಲು ಎಂಬ ಮಾತಿದೆ. ಕುಮಾರಸ್ವಾಮಿಯವರು ಮೊದಲಿಗೆ ಹಾಸನವನ್ನು ಗೆಲ್ಲಬೇಕಿದೆ; ನಂತರದಲ್ಲಿ ರಾಜ್ಯದ ಮಾತು.
2004ರ ಚುನಾವಣೆಯಲ್ಲಿ ಜೆಡಿಎಸ್ 58 ಸ್ಥಾನ ಗೆದ್ದಿತ್ತು. ಅದು ಆ ಪಕ್ಷದ ಹೆಸರಿನಲ್ಲಿರುವ ದಾಖಲೆ. ನಂತರದ 2009ರ ಚುನಾವಣೆಯಲ್ಲಿ ಅದು 30 ಸೀಟು ಗೆದ್ದು 28 ಸೀಟು ಕಳೆದುಕೊಂಡಿತ್ತು. 2013ರ ಚುನಾವಣೆಯಲ್ಲಿ 40 ಸ್ಥಾನ ಅದಕ್ಕೆ ಒಲಿದಿತ್ತು. ವಿಶೇಷವೆಂದರೆ ಚುನಾವಣೆ ಪೂರ್ವದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯೂ ನಲವತ್ತು ಸ್ಥಾನ ಜೈಸಿ ಮೂರನೇ ಸ್ಥಾನದಲ್ಲಿ ಕೂರುವಂತಾಗಿತ್ತು. ಎರಡೂ ಪಕ್ಷಗಳು ತಲಾ ನಲವತ್ತು ಸ್ಥಾನ ಗಳಿಸಿದಾಗ ಯಾವ ಪಕ್ಷಕ್ಕೆ ವಿಧಾನ ಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ನೀಡಬೇಕು ಎಂಬ ಜಿಜ್ಞಾಸೆ ಉದ್ಭವಿಸಿತ್ತು. ಆಡಳಿತ ನಡೆಸಿರುವ ಪಕ್ಷ ತಾನಾಗಿರುವ ಕಾರಣ ಆ ಸ್ಥಾನಮಾನ ತನಗೇ ಎಂದು ಬಿಜೆಪಿ ಪ್ರತಿಪಾದಿಸಿತ್ತು. ಇಕ್ಕಟ್ಟಿನ ಪರಿಸ್ಥಿತಿ ಎದುರಾದ ಅಂಥ ಸಂದರ್ಭದಲ್ಲಿ ಕಾನೂನು ಪರಿಹಾರವೂ ಇದೆ. ಯಾವ ಪಕ್ಷಕ್ಕೆ ಜಾಸ್ತಿ ಮತಗಳು ಸಿಕ್ಕಿವೆ ಎನ್ನುವುದರ ಆಧಾರದಲ್ಲಿ ತೀರ್ಮಾನ ಆಗುತ್ತದೆ. ಅದರಂತೆ ಜೆಡಿಎಸ್‍ನ ಕುಮಾರಸ್ವಾಮಿ ವಿಪಕ್ಷ ನಾಯಕರಾದರು.
ಆ ತರುವಾಯದ ಚುನಾವಣೆಗಳಲ್ಲಿ ಜೆಡಿಎಸ್ 40 ಶಾಸಕರ ಗಡಿ ಮುಟ್ಟಲಿಲ್ಲ. ಹಾಗಂತ ಆ ಪಕ್ಷ ತನ್ನ ವಿಶ್ವಾಸ ಕಳೆದುಕೊಂಡಿಲ್ಲ. ಛಲಬಿಡದ ತ್ರಿವಿಕ್ರಮನಂತೆ ಹೋರಾಟ ನಡೆಸಿರುವ ಕುಮಾರಸ್ವಾಮಿಯವರು 123 ಸ್ಥಾನ ಗೆಲ್ಲುವ, ಯಾರ ಹಂಗೂ ಇಲ್ಲದೆ ಸರ್ಕಾರ ನಡೆಸುವ ಕನಸನ್ನು ಜನರಲ್ಲಿ ಬಿತ್ತುತ್ತ ಸಾಗಿದ್ದಾರೆ. ಏತನ್ಮಧ್ಯೆ ಯಾವುದೇ ಪಕ್ಷಕ್ಕೂ ಸರಳ ಬಹುಮತ ಸಿಗಲಾರದು ಎಂಬ ಮಾಹಿತಿ ಅವರಿಗೆ ಸಿಕ್ಕಿದೆ ಎನ್ನುವುದು ಅವರ ಮಾತಿನಿಂದಲೇ ವೇದ್ಯವಾಗಿದೆ. ಬಿಜೆಪಿ, ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳ ದೆಹಲಿ ಮಟ್ಟದ ನಾಯಕರು ಭವಿಷ್ಯದ ಸರ್ಕಾರ ರಚಿಸುವ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆಂಬ ಅವರ ಮಾತನ್ನು ಸೀಳಿ ನೋಡಿದರೆ ಮತ್ತೊಮ್ಮೆ ಅತಂತ್ರ ವಿಧಾನ ಸಭೆ, ಮತ್ತೊಮ್ಮೆ ಸಮ್ಮಿಶ್ರ ಸರ್ಕಾರ ಎಂಬ ಭಾವನೆ ಬರುತ್ತದೆ. ಈ ನಿಟ್ಟಿನಲ್ಲಿ ಮಾತುಕತೆ ನಡೆದಿರುವುದು ಅಸಲಿಗೆ ಎಷ್ಟು ನಿಜ ಅಥವಾ ಅಲ್ಲ ಎನ್ನುವುದು ಕುಮಾರಸ್ವಾಮಿ ಮತ್ತು ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿರುವ ಕಾಂಗ್ರೆಸ್, ಬಿಜೆಪಿ ವರಿಷ್ಠರಿಗೆ ಮಾತ್ರ ಗೊತ್ತಿದೆ. ನಮಗೆ ಗೊತ್ತಾಗುವ ಅಂಶವೆಂದರೆ ರಾಷ್ಟ್ರೀಯ ಪಕ್ಷಗಳೂ ಅಭದ್ರತೆಯ ಕರಿನೆರಳ ಕೆಳಗಿವೆ ಎನ್ನುವುದು. ಈ ಮಾತಿಗೆ ಪೂರಕವಾಗಿ ಬಂದಿರುವ ವಿವಿಧ ಸಮೀಕ್ಷೆಗಳನ್ನು ಗಮನಿಸಬಹುದಾಗಿದೆ.
ಒಂದೆರಡು ಸಮೀಕ್ಷೆ ಹೊರತಾಗಿಸಿದರೆ ಅತಂತ್ರ ವಿಧಾನ ಸಭೆಯೇ ನಿಕ್ಕಿ ಎನ್ನುವುದು ಬಹುತೇಕ ಸಮೀಕ್ಷೆಗಳ ಫಲಶ್ರುತಿ. ಆ ಒಂದೆರಡು ಸಮೀಕ್ಷಾ ಭವಿಷ್ಯವಾದರೂ ಒಂದೇ ಪಕ್ಷದತ್ತ ಬೆರಳು ಮಾಡಿವೆಯೇ…? ಇಲ್ಲ. ಅತ್ತ ಕಾಂಗ್ರೆಸ್ಸನ್ನು ಒಂದೆರಡು ಸಮೀಕ್ಷೆ ಸರಳ ಬಹುಮತದ (113) ಗಡಿಯನ್ನು ದಾಟಿಸಿದ್ದರೆ, ಒಂದೆರಡು ಸಮೀಕ್ಷೆ ಬಿಜೆಪಿಯನ್ನು ಅತ್ಯಧಿಕ ಸ್ಥಾನಬಲದ ಆದರೆ ಸರಳ ಬಹುಮತ ಪಡೆಯದ ಪಕ್ಷವಾಗಲಿದೆ ಎಂದಿವೆ. ಈ ಹಿಂದೆ 2008ರಲ್ಲಿ ಬಿಜೆಪಿ ಅಧಿಕಾರ ನಡೆಸಿತ್ತು. ಆದರೆ ಅದು ಗೆದ್ದುದು 110 ಸ್ಥಾನ ಮಾತ್ರ. ಮತ್ತೆ ಅದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು 2018ರಲ್ಲಿ. ಅಂದರೆ ಕಳೆದ ಚುನಾವಣೆಯಲ್ಲಿ. ಆಗ ಅದು ಗೆದ್ದುದು 104 ಸೀಟು ಮಾತ್ರ. ಎರಡೂ ಸಂದರ್ಭದಲ್ಲಿ ಅದರ ಕೈಗೆ ಅಧಿಕಾರ ಬಂದುದು ಆಪರೇಷನ್ ಕಮಲದ ಕಾರಣವಾಗಿ.
ಇದನ್ನೂ ಓದಿ:ಮೊಗಸಾಲೆ ಅಂಕಣ: ರಾಜ್ಯ ಬಿಜೆಪಿ ಕಲಿಯಲೊಲ್ಲದ ಪಾಠ
2008ರಲ್ಲಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ರಾಷ್ಟ್ರೀಯ ಮಟ್ಟದಲ್ಲಿ ಅವರ ಹೆಸರು ಇಷ್ಟೆಲ್ಲ ಮಹತ್ವಕ್ಕೆ ಬಂದಿರಲಿಲ್ಲ. ಆ ವರ್ಷ ಕರ್ನಾಟಕ ವಿಧಾನ ಸಭೆ ಚುನಾವಣೆ ನಡೆದುದು ಬಿ.ಎಸ್.ಯಡಿಯೂರಪ್ಪ ಹೆಗಲ ಮೇಲೆ. ಆಗ ಆ ಪಕ್ಷ ಗೆದ್ದಿದ್ದು 110 ಸೀಟನ್ನು. 2018ರ ಹೊತ್ತಿಗೆ ದೇಶದಾದ್ಯಂತ ಮೋದಿ ಅಲೆ. ಅದು ಕೇವಲ ಅಲೆಯಲ್ಲ ಸುನಾಮಿ ಎಂಬ ಮಾತೂ ಚಾಲ್ತಿಯಲ್ಲಿತ್ತು. ಅವರದೇ ಸಾರಥ್ಯದಲ್ಲಿ ನಡೆದ 2018ರ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು 104 ಸೀಟನ್ನಷ್ಟೆ. ಅಂದರೆ ಆರು ಸ್ಥಾನ ಕಡಿಮೆ. ಕರ್ನಾಟಕದ ಮತದಾರರು ಮೋದಿ ಎಂದ ಮಾತ್ರಕ್ಕೇ ಮೋಡಿಗೆ ಒಳಗಾಗುವವರಲ್ಲ ಎಂಬ ಸಂದೇಶ ಐದು ವರ್ಷದ ಹಿಂದೆಯೇ ರವಾನೆ ಆಗಿದೆ.
ಹೀಗೆಂದ ಮಾತ್ರಕ್ಕೆ ಕಾಂಗ್ರೆಸ್‍ಗೆ ಸರಳ ಬಹುಮತ ಶತಸ್ಸಿದ್ಧ ಎಂದೇನೂ ಅಲ್ಲ. ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಸಾಗಿದ್ದು 22 ದಿವಸ. ವಿಚಿತ್ರ ಆದರೂ ಸತ್ಯ ಎನ್ನುತ್ತಾರಲ್ಲ ಹಾಗಿದೆ ಯಾತ್ರೆಯ ಫಲಶ್ರುತಿ ಈ ರಾಜ್ಯದಲ್ಲಿ. ಈಗ ಜನ ಹಾಗಿರಲಿ, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಕೂಡಾ ಅದನ್ನು ಪ್ರಸ್ತಾಪಿಸಿ ಮಾತಾಡುತ್ತಿಲ್ಲ. ಭಾರತ್ ಜೋಡೋ, ಬಿರುಕು ಬಿಡಲಿದ್ದ ಜನರ ಮನಸ್ಸನ್ನು ಪುನಃ ಬೆಸೆಯುವುದಕ್ಕೆ ಹೇಗೆ ನೆರವಾಯಿತು ಎಂದು ಅವರಲ್ಲದೆ ಇನ್ಯಾರು ಹೇಳಬೇಕು. ಆದರೆ ಪ್ರಚಾರದ ರ್ಯಾಲಿಗಳಲ್ಲಿ ಇದರ ಪ್ರಸ್ತಾಪವೇ ಆಗುತ್ತಿಲ್ಲ. ಏನಿರಬಹುದು ಒಳಗುಟ್ಟು…? ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಲ್ಲವೇ ಸಿದ್ದರಾಮಯ್ಯ ಹೇಳಬೇಕು. ಯಾಕೆ ಅವರು ಮೌನಕ್ಕೆ ಜಾರಿದ್ದಾರೋ ಗೊತ್ತಿಲ್ಲ.
ಸೂರತ್ ನ್ಯಾಯಾಲಯದ ತೀರ್ಪನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಕಾಂಗ್ರೆಸ್ ಇರಾದೆ ನಿಚ್ಚಳವಾಗಿದೆ. ಇದರಲ್ಲಿ ತಪ್ಪು ಹುಡುಕಲು ಏನೂ ಇಲ್ಲ. ಲೋಕಸಭಾ ಸದಸ್ಯತ್ವ ರದ್ದಾಗಿರುವುದು, ತಾವು ವಾಸವಿದ್ದ ಮನೆಯನ್ನು ರಾಹುಲ್‍ರು ತೆರವು ಮಾಡಬೇಕಾಗಿರುವುದು; ಮೇಲಿನ ಕೋರ್ಟ್‍ಗೆ ಹೋಗಿ ತಡೆಯಾಜ್ಞೆ ತಾರದ ಪಕ್ಷದಲ್ಲಿ ಅನುಭವಿಸಲೇ ಬೇಕಿರುವ ಎರಡು ವರ್ಷದ ಜೈಲು ಶಿಕ್ಷೆ..ಇವುಗಳು ಕಾಂಗ್ರೆಸ್‍ಗೆ ಚುನಾವಣಾ ಬಲ ತರುವ ಸಂಗತಿಗಳಾಗಲಿವೆ. ಸೂರತ್ ಕೋರ್ಟ್‍ನ ಆದೇಶಕ್ಕೆ ತಡೆ ತರಬೇಕೇ ಬೇಡವೇ ಎಂಬುದು ಕಾಂಗ್ರೆಸ್‍ನ ಉನ್ನತ ಸ್ತರದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವೊದಗಿಸಿದೆ. ಈವರೆಗಿನ ಬೆಳವಣಿಗೆಗಳನ್ನು ಗಮನಿಸಿ ಹೇಳುವುದಾದರೆ ರಾಹುಲ್‍ರು ಜೈಲಿಗೆ ಹೋಗುವ ತಯಾರಿಯಲ್ಲಿದ್ದಾರೆ. ಹಾಗೆ ಹೋಗುವುದರಿಂದ ಪಕ್ಷಕ್ಕೆ ಅದು ಒಂದಾನೊಂದು ಕಾಲದಲ್ಲಿ ಹೊಂದಿದ್ದ ಬಲ ಮರಳುತ್ತದೆ ಎನ್ನುವುದು ಈ ತಯಾರಿ ಹಿಂದಿರುವ ಮನಃಸ್ಥಿತಿ. 2024ರ ಲೋಕಸಭಾ ಚುನಾವಣೆ ಗೆದ್ದರೆ ಯುಪಿಎ ಬಹುಮತದಲ್ಲಿ ಅಧಿಕಾರಕ್ಕೆ ಬಂದರೆ ಸಂಬಂಧಿಸಿದ ಕಾಯಿದೆಗೆ ತಿದ್ದುಪಡಿ ತಂದು ರಾಹುಲ್‍ರನ್ನು ಬಂಧಮುಕ್ತರನ್ನಾಗಿಸಬಹುದು ಎಂಬ ದೂರಗಾಮೀ ಲೆಕ್ಕಾಚಾರದ ಭಾಗಾಕಾರ, ಗುಣಾಕಾರ ನಡೆದಿದೆ ಎಂಬ ವದಂತಿ ತೇಲುತ್ತಿದೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಆಯಾರಾಂ ಗಯಾರಾಂ ಮರಕೋತಿ ಆಟ
ಲೋಕಸಭಾ ಚುನಾವಣೆಗೂ ಪೂರ್ವದಲ್ಲಿ ನಡೆಯುತ್ತಿರುವ ಈ ಚುನಾವಣೆಯಲ್ಲಿ ಕರ್ನಾಟಕವನ್ನು ಗೆಲ್ಲುವ, ಬಿಜೆಪಿಯಿಂದ ಅದನ್ನು ಕಸಿಯುವ ಅನಿವಾರ್ಯ ಕಾಂಗ್ರೆಸ್‍ಗೆ, ಕೈಯಲ್ಲಿರುವ ಕರ್ನಾಟಕವನ್ನು ಕೈಯಲ್ಲೇ ಉಳಿಸಿಕೊಳ್ಳುವ ಅನಿವಾರ್ಯ ಬಿಜೆಪಿಗೆ ಎದುರಾಗಿದೆ. ಕೇಂದ್ರಾಡಳಿತ ಪುದುಚೆರಿಯ ಆಡಳಿತ ಬಿಜೆಪಿ ಕೈಲಿದೆ. ಅದು ಲೆಕ್ಕಕ್ಕೆ ಉಂಟು ಆಟಕ್ಕೆ ಇಲ್ಲ ಎಂಬಂತಿರುವ ಸಣ್ಣ ಲಂಗೋಟಿಯಂತಿರುವ ರಾಜ್ಯ. ದಕ್ಷಿಣದಲ್ಲಿ ಬಿಜೆಪಿಯ ಹೆಬ್ಬಾಗಿಲು ಕರ್ನಾಟಕ. ಈ ರಾಜ್ಯ 2019ರಲ್ಲಿ ಲೋಕಸಭೆಗೆ 26 ಸಂಸದರನ್ನು ಆಯ್ಕೆ ಮಾಡಿ ಕಳಿಸಿದೆ. ಆ ದಾಖಲೆಯ ಪುನರಾವರ್ತನೆ ಆಗಬೇಕೆಂದಾದರೆ ವಿಧಾನ ಸಭಾ ಚುನಾವಣೆಯನ್ನು ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಗೆಲ್ಲಬೇಕಿದೆ. 2018ರ ವಿಧಾನ ಸಭಾ ಚುನಾವಣೆಯಲ್ಲಿ 104 ಕ್ಷೇತ್ರ ಬಿಜೆಪಿ ತೆಕ್ಕೆಗೆ ಬಂತು. ಮರುವರ್ಷ 2019ರಲ್ಲಿ ಲೋಕಸಭೆಗೆ ಚುನಾವಣೆ ನಡೆದಾಗ 140ಕ್ಕೂ ಅಧಿಕ ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಲೀಡ್ ಸಿಕ್ಕಿತ್ತು. ಇದನ್ನು ಬಲ್ಲ ಪ್ರಧಾನಿ ಮೋದಿಯವರು ಕರ್ನಾಟಕವನ್ನು ಶತಾಯಗತಾಯ ಉಳಿಸಿಕೊಳ್ಳುವ ಛಲದಲ್ಲಿ ಚುನಾವಣಾ ತಯಾರಿ ನಡೆಸಿದ್ದಾರೆ. ಪಕ್ಷವನ್ನು ಸರ್ವ ಸನ್ನದ್ಧ ಸ್ಥಿತಿಯಲ್ಲಿ ಹೋರಾಟಕ್ಕೆ ಅಣಿಗೊಳಿಸುತ್ತಿದ್ದಾರೆ.
ಕಾಂಗ್ರೆಸ್‍ನ ಅಖಿಲ ಭಾರತ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಕರ್ನಾಟಕ ಚುನಾವಣೆ ಅಕ್ಷರಶಃ ಅಗ್ನಿಪರೀಕ್ಷೆಯ ಕಣವಾಗಿದೆ. ಎಸ್.ನಿಜಲಿಂಗಪ್ಪ ಬಳಿಕ ಏಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಏರಿರುವ ಕನ್ನಡಿಗ ಖರ್ಗೆಯವರಿಗೆ ಕರ್ನಾಟಕವನ್ನು ಜೈಸಲೇಬೇಕಾಗಿದೆ. ಐದು ವರ್ಷದ ಹಿಂದೆ ಕಳೆದುಕೊಂಡ ಅಧಿಕಾರವನ್ನು ಮರಳಿ ಪಡೆಯುವುದಕ್ಕಷ್ಟೇ ಖರ್ಗೆ ಆಶಯ ಉದ್ದೇಶವಲ್ಲ. ಕಾಂಗ್ರೆಸ್ ಈ ಚುನಾವಣೆಯನ್ನೂ ಸೋತರೆ ಅದರ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗಲಿದೆ. ಕಾಂಗ್ರೆಸ್ ಸೋತರೆ ಆ ಪಕ್ಷದ ಮುಖಂಡರು ಅದನ್ನು ಖರ್ಗೆಯವರ ತಲೆಗೆ ಕಟ್ಟುತ್ತಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಹತ್ತಾರು ಚುನಾವಣೆ ಸೋತರೂ ಅವರೊಂದಿಗೇ ನಿಂತಿರುವ ಕಾಂಗ್ರೆಸ್‍ನ ನಾಯಕರನೇಕರು ಖರ್ಗೆಯವರಿಗೆ ಅಷ್ಟೆಲ್ಲ ಅವಕಾಶ ಕೊಡಲಾರರು. ಖರ್ಗೆಯವರ ತಲೆದಂಡ ಪಡೆಯುವ ಕೆಲಸಕ್ಕೆ ಅವರೆಲ್ಲ ಒಂದುಗೂಡಿ ಮುಂದಾಗುವುದು ಶತಃಸ್ಸಿದ್ಧ. ಅತ್ತ ಮೋದಿಯವರಿಗೆ ಈ ಚುನಾವಣೆ ಗೆಲುವು ಎಷ್ಟು ಮುಖ್ಯವೋ ಅದಕ್ಕಿಂತ ಹತ್ತು ಪಟ್ಟು ಖರ್ಗೆಯವರಿಗೆ ಮುಖ್ಯವಾಗಿದೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಮತ್ತೆ ಮಧ್ಯರಂಗಕ್ಕೆ ಬಂದ ಬಿಎಸ್ ಯಡಿಯೂರಪ್ಪ
ಆರೋಗ್ಯ
New Virus: ಕೊರೊನಾ ಬೆನ್ನಲ್ಲೇ ಪತ್ತೆಯಾಯ್ತು ಮತ್ತೊಂಡು ಡೆಡ್ಲಿ ವೈರಸ್! ಭಾರತದಲ್ಲೇ ಮೊದಲ ಕೇಸ್!
ಕೊರೊನಾ ಸೋಂಕಿನ ಬೆನ್ನಲ್ಲೇ ಮತ್ತೊಂದು ಸೋಂಕಿನ (New Virus) ಸುದ್ದಿ ಎಲ್ಲೆಡೆ ಹರಿದಾಡಿದೆ. ಸಿಲ್ವರ್ ಲೀಫ್ ಡಿಸೀಸ್ ಹೆಸರಿನ ಕಾಯಿಲೆ ಭಾರತದಲ್ಲಿ ಮೊದಲನೆಯದಾಗಿ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ನವದೆಹಲಿ: ಕೊರೊನಾ ಸೋಂಕು ವಿಶ್ವಾದ್ಯಂತ ಭಾರೀ ತಲ್ಲಣವನ್ನೇ ಉಂಟುಮಾಡಿತ್ತು. ಲಕ್ಷಾಂತರ ಜೀವಗಳು ಈ ಸೋಂಕಿನಿಂದಾಗಿ ಸಾವನ್ನಪ್ಪಿವೆ. ಅದರ ಬೆನ್ನಲ್ಲೇ ಇದೀಗ ಮತ್ತೊಂದು ವೈರಸ್ (New Virus) ಬಂದಿರುವ ಬಗ್ಗೆ ಸುದ್ದಿ ಹರಿದಾಡಲಾರಂಭಿಸಿದೆ. ಅದರಲ್ಲೂ ಭಾರತದಲ್ಲಿಯೇ ಮೊದಲನೆಯದಾಗಿ ಸೋಂಕು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Covid-19 Cases: ಕೊರೊನಾ ಸೋಂಕಿನ ಕೇಸ್ನಲ್ಲಿ 24ಗಂಟೆಯಲ್ಲಿ ಶೇ.40 ಏರಿಕೆ; ಇಂದು 3ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು
ಹೌದು. ಭಾರತದಲ್ಲಿ ಸಸ್ಯಗಳಿಗೆ ಹೆಚ್ಚಾಗಿ ಕಾಡುವ ರೋಗವೆಂದರೆ ಅದು ಸಿಲ್ವರ್ ಲೀಫ್ ರೋಗ. ಈ ರೋಗದ ವೈರಸ್ ಇದೀಗ ಮಾನವನ ದೇಹಕ್ಕೂ ಹೊಗ್ಗಿರುವುದಾಗಿ ವರದಿಯಾಗಿದೆ. ಭಾರತದ ರೈತನೊಬ್ಬನಿಗೆ ಈ ಸೋಂಕು ತಗುಲಿದ್ದು, ಆತನಲ್ಲಿ ಜ್ವರ, ಕೆಮ್ಮುವಿನಂತಹ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ. ಇದುವರೆಗೆ ಈ ಸೋಂಕು ಯಾವುದೇ ದೇಶದಲ್ಲಿಯೂ ಮನುಷ್ಯರಿಗೆ ಹಬ್ಬಿರಲಿಲ್ಲ. ಇದೇ ಮೊದಲನೇ ಬಾರಿಗೆ ಇಂತದ್ದೊಂದು ಪ್ರಕರಣ ವರದಿಯಾಗಿದೆ.
ಅಂದ ಹಾಗೆ ಈ ಸೋಂಕು ಯಾವಾಗ ರೈತನಿಗೆ ತಗುಲಿದ್ದು ಎನ್ನುವ ವಿಚಾರದಲ್ಲಿ ಸ್ಪಷ್ಟ ಮಾಹಿತಿಯಿಲ್ಲ. ಆದರೆ ಈ ಕುರಿತಾದ ವರದಿಯೊಂದು ʼಮೆಡಿಕಲ್ ಮೈಕೋಲಜಿ ಕೇಸ್ ರಿಪೋರ್ಟ್ಸ್ʼ ಜರ್ನಲ್‌ನಲ್ಲಿ ದಾಖಲಾಗಿದೆ.
ಇದನ್ನೂ ಓದಿ: Coronavirus: ಇಂದು 1800ಕ್ಕೂ ಅಧಿಕ ಕೊರೊನಾ ಕೇಸ್ಗಳು ಪತ್ತೆ; ಏಪ್ರಿಲ್ನಲ್ಲಿ 2 ದಿನ ಆಸ್ಪತ್ರೆಗಳಲ್ಲಿ ಅಣುಕು ಕಾರ್ಯಾಚರಣೆ
ಇತ್ತೀಚೆಗೆ ಅಮೆರಿಕದ ಆರೋಗ್ಯ ಅಧಿಕಾರಿಗಳು ವೈರಸ್ ಒಂದರ ಬಗ್ಗೆ ಎಚ್ಚರಿಕೆ ಕೊಟ್ಟಿದ್ದರು. ಕ್ಯಾಂಡಿಡಾ ಔರಿಸ್ ಫಂಗಸ್ ಹೆಸರಿನ ಸೋಂಕು ಇತ್ತೀಚಿನ ದಿನಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದ್ದರು. ಹಾಗೆಯೇ ಈ ಸೋಂಕಿಗೆ ತುತ್ತಾಗುವವರಲ್ಲಿ ಶೇ.60 ಮಂದಿ ಸಾವನ್ನಪ್ಪುವ ಸಾಧ್ಯತೆಯಿದೆ ಎಂದೂ ಅವರು ತಿಳಿಸಿದ್ದರು. ಅದರ ಬೆನ್ನಲ್ಲೇ ಇದೀಗ ಭಾರತದಲ್ಲಿ ಮತ್ತೊಂದು ಸೋಂಕಿನ ವಿಚಾರ ಸುದ್ದಿಯಾಗಿದೆ. ಇದರ ಬಗ್ಗೆ ಭಾರತೀಯ ಆರೋಗ್ಯ ಇಲಾಖೆಯಿಂದ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ.
ಕರ್ನಾಟಕ
Fire tragedy : ಹೊಸಕೋಟೆಯಲ್ಲಿ ಭೀಕರ ದುರಂತ; ಗ್ಯಾಸ್ ಸಿಲಿಂಡರ್ ಲೀಕ್ ಆಗಿ 7 ಕಾರ್ಮಿಕರ ದಾರುಣ ಸಾವು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೇಡಹಳ್ಳಿಯಲ್ಲಿ ವಾರದ ಹಿಂದೆ ಸಂಭವಿಸಿದ ಗ್ಯಾಸ್ ಲೀಕೇಜ್ ಪ್ರಕರಣದಲ್ಲಿ ಗಾಯಗೊಂಡಿದ್ದವರು ದಿನಕ್ಕೊಬ್ಬರಂತೆ ಸಾಯುತ್ತಿದ್ದು, ಈಗ ಸಾವಿನ ಸಂಖ್ಯೆ ಏಳಕ್ಕೇರಿದೆ.
ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಕಳೆದ ಭಾನುವಾರ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸೋರಿಕೆ (Fire tragedy) ಪ್ರಕರಣವೊಂದು ಏಳು ಮಂದಿಯ ಪ್ರಾಣವನ್ನೇ ಕಸಿದಿದೆ. ಸಾವನ್ನಪ್ಪಿದವರೆಲ್ಲರೂ ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ಕಾರ್ಮಿಕರಾಗಿರುವುದರಿಂದ ಆರು ದಿನಗಳ ಕಳೆದರೂ ಇದರ ಸ್ಪಷ್ಟ ಮಾಹಿತಿ ಹೊರಬಿದ್ದಿರಲಿಲ್ಲ.
ಹೊಸಕೋಟೆ ತಾಲೂಕಿನ ಮೇಡಹಳ್ಳಿಯಲ್ಲಿ ಕಳೆದ ಭಾನುವಾರ ಶೆಡ್ ಒಂದರಲ್ಲಿ ರಾತ್ರಿ ಅನಿಲ ಸೋರಿಕೆ ಆಗಿದ್ದು, ರಾತ್ರಿ ಯಾರೋ ಕರೆಂಟ್ ಹಾಕಿದಾಗ ಬೆಂಕಿ ಹತ್ತಿಕೊಂಡು ಎಂಟು ಮಂದಿಗೆ ಬೆಂಕಿಯ ಗಾಯಗಳಾಗಿದ್ದವು. ಆರಂಭಿಕ ಹಂತದಲ್ಲಿ ಇದೇನೂ ತುಂಬ ದೊಡ್ಡ ಅವಘಡದಂತೆ ಕಾಣಿಸಿರಲಿಲ್ಲ. ಆದರೆ, ದಿನ ಕಳೆದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಒಬ್ಬೊಬ್ಬರಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದ ಈಗ ಎಂಟು ಮಂದಿಯಲ್ಲಿ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ಕಾರ್ಮಿಕರನ್ನು ಕರೆದುಕೊಂಡು ಬಂದು ಇಲ್ಲಿ ಕಾಮಗಾರಿಗಳಲ್ಲಿ ದುಡಿಸಿಕೊಳ್ಳಲಾಗುತ್ತಿತ್ತು. ಅವರಿಗೆ ಒಂದು ಶೆಡ್‌ನಲ್ಲಿ ವಾಸವಾಗಿರಲು ವ್ಯವಸ್ಥೆ ಮಾಡಲಾಗಿತ್ತು. ಕಳೆದ ಭಾನುವಾರ ರಾತ್ರಿಯೂ ಈ ಕಾರ್ಮಿಕರು ಮೇಡಹಳ್ಳಿಯ ಅಂತಹುದೇ ಒಂದು ಶೆಡ್‌ನಲ್ಲಿ ಮಲಗಿದ್ದರು. ಹೊರಗಡೆ ಊಟ ಮಾಡಿಕೊಂಡು ಬಂದು ಅವರು ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆಗ ಯಾವುದೋ ಕಾರಣದಿಂದ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿತ್ತು.
ನಡುವೆ ರಾತ್ರಿ ಯಾರೋ ಲೈಟ್ ಆನ್ ಮಾಡಿದಾಗ ಸೋರಿಕೆಯಾದ ಅನಿಲದಿಂದಾಗಿ ಬೆಂಕಿ ಹತ್ತಿಕೊಂಡಿತ್ತು. ಇದರಿಂದ ಮಲಗಿದ್ದವರಿಗೆಲ್ಲ ಸುಟ್ಟ ಗಾಯಗಳಾಗಿತ್ತು. ಅವರನ್ನು ಕೂಡಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ಆರೋಗ್ಯವಾಗಿದ್ದಾರೆ ಎಂಬಂತೆ ಕಂಡುಬಂದ ಇವರ ದೇಹದ ಒಳಗೆ ಬೆಂದ ಗಾಯಗಳು ಘಾಸಿಗೊಳಿಸಿತ್ತು. ಹೀಗಾಗಿ ದಿನ ಕಳೆದಂತೆ ಒಬ್ಬೊಬ್ಬರೇ ಪ್ರಾಣ ಕಳೆದುಕೊಳ್ಳಲಾರಂಭಿಸಿದ್ದಾರೆ. ಶುಕ್ರವಾರ ಏಳನೇ ಸಾವು ಸಂಭವಿಸಿದೆ.
ಅಮಿತ್, ಸನೋಜ್, ನೀರಜ್, ಸೋಮಯ್ ಗುಪ್ತಾ, ತಿಲಕ್ ರಾಮ್, ಲಕ್ಷ್ಮಣ್ ಮತ್ತು ಚಂದ್ರಭಾನ್ ಮೃತ ಕಾರ್ಮಿಕರು. ಈ ಘಟನೆಗೆ ಸಂಬಂಧಿಸಿ ಅರವಿಂದ ಗುಪ್ತಾ, ಮತ್ತು ಬಾಸ್ಕರ್ ಎಂಬುವವರ ವಿರುದ್ದ ಪ್ರಕರಣ ದಾಖಲಾಗಿದೆ. ಉತ್ತರ ಪ್ರದೇಶದಿಂದ, ಬಿಹಾರದಿಂದ ಕಾರ್ಮಿಕರನ್ನು ಕರೆತರುವ ಲೇಬರ್ ಕಂಟ್ರಾಕ್ಟರ್‌ಗಳು ಮತ್ತು ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಕೆಲಸಕ್ಕಾಗಿ ಕರೆತಂದು ಸೂಕ್ತ ಮೂಲ ಸೌಕರ್ಯ ನೀಡದ ಕಾರಣ ಅವಘಡ ಸಂಭವಿಸಿದೆ. ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Road Accident: ನೆಲಮಂಗಲದ ಬಳಿ ಲಾರಿ ಹರಿದು ಯುವತಿ ಸ್ಥಳದಲ್ಲೇ ಸಾವು
ಕೋರ್ಟ್
Supreme Court: ದ್ವೇಷ ಭಾಷಣ ತಡೆಗೆ ಸರ್ಕಾರಕ್ಕೆ ಶಕ್ತಿ ಇಲ್ಲವೇ?: ಕೇಂದ್ರ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Supreme Court: ದ್ವೇಷ ಭಾಷಣ ತಡೆಗೆ ವ್ಯವಸ್ಥೆಯನ್ನು ರೂಪಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರ ವಿರುದ್ದ ಸುಪ್ರೀಂ ಕೋರ್ಟ್ ಗರಂ ಆಗಿದೆ. ಈ ವಿಷಯದಲ್ಲಿ ಸರ್ಕಾರವು ಶಕ್ತಿಹೀನವಾಗಿದೆ ಎಂದು ಆರೋಪಿಸಿದೆ.
ನವದೆಹಲಿ: ಕಾಲಮಿತಿಯೊಳಗೇ ದೇಶಾದ್ಯಂತ ದ್ವೇಷ ಭಾಷಣವನ್ನು ಹತ್ತಿಕ್ಕಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಈ ವಿಷಯದಲ್ಲಿ ಸರ್ಕಾರವು ಶಕ್ತಿಹೀನವಾಗಿದೆ(State is Impotent) ಎಂದು ಸುಪ್ರೀಂ ಕೋರ್ಟ್ (Supreme Court) ನ್ಯಾಯಮೂರ್ತಿ ಕೆ ಎಂ ಜೋಸೆಫ್ ಅಭಿಪ್ರಾಯಪಟ್ಟಿದ್ದಾರೆ. ರ್ಯಾಲಿಗಳಲ್ಲಿ ದ್ವೇಷದ ಭಾಷಣಗಳ ವಿರುದ್ಧ ಕ್ರಮಕೈಗೊಳ್ಳಲು ವಿಫಲವಾದ ಆರೋಪದ ಮೇಲೆ ಮಹಾರಾಷ್ಟ್ರದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಜಸ್ಟೀಸ್ ಜೋಸಫ್ ಅವರು, ಈ ವಿಷಯದಲ್ಲಿ ಮೌನವಾಗಿರುವುದಾದರೆ ನಮಗೆ ಸರ್ಕಾರವೇಕೆ ಬೇಕು ಎಂದು ಪ್ರಶ್ನಿಸಿದರು.
ಭಾತೃತ್ವ ಮತ್ತು ಸಹಿಷ್ಣುತೆಯ ಮಹತ್ವದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಜಸ್ಟೀಸ್ ಜೋಸೆಫ್,
ಪ್ರತಿದಿನ ನೀವು ನ್ಯಾಯಾಲಯದಲ್ಲಿ ಕುಳಿತುಕೊಳ್ಳುತ್ತೀರಿ ಮತ್ತು ಸುತ್ತಮುತ್ತಲಿನ ಪ್ರತಿಯೊಬ್ಬರೂ ನಿಮ್ಮ ಬಗ್ಗೆ ಕೆಟ್ಟದ್ದನ್ನು ಹೇಳುತ್ತಾರೆಂದು ಭಾವಿಸೋಣ, ಮನುಷ್ಯನಿಗೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಘನತೆ. ನಿತ್ಯವೂ ಅದನ್ನು ಹಾಳುಮಾಡುತ್ತಿದ್ದರೆ, ಪಾಕಿಸ್ತಾನಕ್ಕೆ ಹೋಗು ಎಂಬಂತೆ ಕೆಲವು ಹೇಳಿಕೆಗಳನ್ನು ನೀಡಲಾಗುತ್ತಿದೆ. ಈ ವ್ಯಕ್ತಿಗಳು ನಿಜವಾಗಿಯೂ ಈ ದೇಶವನ್ನು ಆರಿಸಿಕೊಂಡರು. ಅವರು ನಮ್ಮ ಸಹೋದರ ಮತ್ತು ಸಹೋದರಿಯರಂತೆ. ಒಂದೊಮ್ಮೆ ನಾವು ಸೂಪರ್ ಪವರ್ ಆಗಲು ಬಯಸಿದರೆ, ಮೊದಲು ದೇಶದಲ್ಲಿ ಕಾನೂನು ಅನುಷ್ಠಾನ ನಡೆಯಬೇಕು ಎಂದು ಅವರು ಹೇಳಿದರು.
ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮಹ್ತಾ ಅವರು, ಅರ್ಜಿದಾರರು ಈ ಪ್ರಕರಣದಲ್ಲಿ ಸೆಲೆಕ್ಟಿವ್ ಆಗಿ ನಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿದರು. ಅರ್ಜಿದಾರರಾಗಿರುವ ವ್ಯಕ್ತಿ ತನ್ನ ಸ್ವಂತ ರಾಜ್ಯದ (ಕೇರಳ) ನ್ಯಾಯಾಲಯದ ಮುಂದೆ ನಿದರ್ಶನಗಳನ್ನು ಕೋರುತ್ತಿಲ್ಲ ಎಂದು ಹೇಳಿದರು. ಮಹಾರಾಷ್ಟ್ರದಲ್ಲಿ ಮಾತ್ರ ದ್ವೇಷ ಭಾಷಣಗಳ ಪ್ರಕರಣಗಳನ್ನು ಪರಿಗಣಿಸಬಾರದು. ಆದರೆ ಕೇರಳ ಮತ್ತು ತಮಿಳುನಾಡಿನಂತಹ ರಾಜ್ಯಗಳಲ್ಲಿ ಇದೇ ರೀತಿಯ ನಿದರ್ಶನಗಳನ್ನು ನೋಡಬೇಕು ಎಂಬ ಸಂಗತಿಯನ್ನು ಕೋರ್ಟ್ ಗಮನಕ್ಕೆ ತರಲಾಯಿತು.
ಇದನ್ನೂ ಓದಿ: Supreme Court: ದ್ವೇಷ ಭಾಷಣದ ಆರೋಪ, ಹಿಂದೂ ಜನ್ ಆಕ್ರೋಶ್ ಸಭೆ ಚಿತ್ರೀಕರಿಸಲು ಕೋರ್ಟ್ ಸೂಚನೆ
ಕೇರಳದಲ್ಲಿ ಹಿಂದೂಗಳ ವಿರುದ್ಧ ದ್ವೇಷ ಭಾಷಣಗಳನ್ನು ಮಾಡಲಾಗುತ್ತಿದೆ ಎಂದು ಸಂಗತಿಯನ್ನು ಹೈಲೈಟ್ ಮಾಡಿದ ತುಷಾರ್ ಮಹ್ತಾ ಅವರು, ನ್ಯಾಯಾಲಯವು ಈ ಬಗ್ಗೆ ಯಾಕೆ ಸ್ವಯಂ ಆಗಿ ಪ್ರಕರಣವನ್ನು ಕೈಗೆತ್ತಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು. ಫೆಬ್ರವರಿ 5 ರಂದು ಮುಂಬೈನಲ್ಲಿ ಹಿಂದೂ ಜನ ಆಕ್ರೋಶ್ ಸಭಾ ಆಯೋಜಿಸಿದ್ದ ಕಾರ್ಯಕ್ರಮವನ್ನು ವಿಡಿಯೋಗ್ರಾಫ್ ಮಾಡಿ ವರದಿ ಸಲ್ಲಿಸುವಂತೆ ಫೆಬ್ರವರಿ ಮೊದಲ ವಾರದಲ್ಲಿ ಸುಪ್ರೀಂ ಕೋರ್ಟ್ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.
-
ಸುವಚನ10 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ7 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಪ್ರಮುಖ ಸುದ್ದಿ16 hours ago
ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
-
ಕರ್ನಾಟಕ8 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಕ್ರಿಕೆಟ್23 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ವೈರಲ್ ನ್ಯೂಸ್23 hours ago
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
-
ಕರ್ನಾಟಕ19 hours ago
ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
-
ಕ್ರಿಕೆಟ್20 hours ago
IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ