Site icon Vistara News

Lashkar-e-Islam: ಮತ್ತೊಬ್ಬ ಭಾರತ ವಿರೋಧಿ ಉಗ್ರ ಪಾಕಿಸ್ತಾನದಲ್ಲಿ ಅಪರಿಚಿತರ ಗುಂಡಿಗೆ ಖತಂ

Haji Akbar Afridi

Haji Akbar Afridi

ಇಸ್ಲಾಮಾಬಾದ್‌: ಕೆಲವು ದಿನಗಳಿಂದ ಭಾರತ ವಿರೋಧಿ ಭಯೋತ್ಪಾದಕರು ಪಾಕಿಸ್ತಾನದಲ್ಲಿ ಅಪರಿಚಿತ ವ್ಯಕ್ತಿಗಳ ಗುಂಡಿಗೆ ಬಲಿಯಾಗುತ್ತಿದ್ದಾರೆ. ಈ ಪಟ್ಟಿಗೆ ಮತ್ತೊಂದು ಘಟನೆ ಸೇರ್ಪಡೆಯಾಗಿದೆ. ಕುಖ್ಯಾತ ಲಷ್ಕರ್-ಇ-ಇಸ್ಲಾಂ (Lashkar-e-Islam) ಗುಂಪಿನ ಕಮಾಂಡರ್ ಎಂದು ಗುರುತಿಸ್ಪಡುತ್ತಿದ್ದ ಹಾಜಿ ಅಕ್ಬರ್ ಅಫ್ರಿದಿ (Haji Akbar Afridi)ಯನ್ನು ಪಾಕಿಸ್ತಾನದ ಖೈಬರ್ ಜಿಲ್ಲೆಯ ಬಾರಾದಲ್ಲಿ ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಗ್ರಗಾಮಿ ಚಟುವಟಿಕೆಗಳು ಮತ್ತು ಉಗ್ರಗಾಮಿ ಸಿದ್ಧಾಂತಕ್ಕೆ ಹೆಸರುವಾಸಿಯಾದ ಲಷ್ಕರ್-ಇ-ಇಸ್ಲಾಂ ಸಂಘಟನೆ ಕರಾಳ ಇತಿಹಾಸವನ್ನು ಹೊಂದಿದೆ. ಈ ಹಿಂದೆ ಈ ಗುಂಪು ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು, ಕಾಶ್ಮೀರದಿಂದ ಪಲಾಯನ ಮಾಡುವಂತೆ ಎಚ್ಚರಿಕೆ ನೀಡಿತ್ತು. ಇಲ್ಲದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸುವಂತೆ ಬೆದರಿಕೆ ಹಾಕಿತ್ತು. ಇದಲ್ಲದೆ 2014ರಿಂದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನೊಂದಿಗೆ ಅಕ್ಬರ್ ಸಂಪರ್ಕ ಹೊಂದಿದ್ದ ಎಂದು ವರದಿ ತಿಳಿಸಿದೆ.

ಕಾಶ್ಮೀರಿ ಪಂಡಿತರಿಗೆ ಬೆದರಿಕೆ

ಕಾಶ್ಮೀರಿ ಪಂಡಿತರು ವಾಸಿಸುತ್ತಿರುವ ಕಾಶ್ಮೀರದ ಬಾರಾಮುಲ್ಲಾದ ವೀರ್ವಾನ್‌ ಕಾಲೋನಿಗೆ ಉಗ್ರ ಸಂಘಟನೆ ಲಷ್ಕರ್-ಇ-ಇಸ್ಲಾಂ 2022ರಲ್ಲಿ ಬೆದರಿಕೆ ಪತ್ರ ರವಾನಿಸಿತ್ತು. ʼʼಪಂಡಿತರು ಮತ್ತು ಮುಸ್ಲಿಮರಲ್ಲದವರು (ಕಾಫಿರರು) ಇಸ್ಲಾಂಗೆ ಮತಾಂತರ ಆಗಬೇಕು. ಇಲ್ಲವೇ ಕಾಶ್ಮೀರ ಕಣಿವೆ ಬಿಡಬೇಕು. ಇಲ್ಲದೇ ಹೋದರೆ ಸಾವಿಗೆ ಸಿದ್ಧರಾಗಬೇಕು. ಕಾಶ್ಮೀರ ಇರುವುದು ಕೇವಲ ಅಲ್ಲಾನ ಅನುಯಾಯಿಗಳಿಗೆ ಮಾತ್ರ’ʼ ಎಂಬ ಬೆದರಿಕೆ ಒಡ್ಡಲಾಗಿತ್ತು.

ರಕ್ಷಣಾ ಪಡೆಗಳಿಗೆ ಈ ಪತ್ರ ಮೊದಲು ಪೋಸ್ಟ್‌ ಮೂಲಕ ಬಂದಿದ್ದು, ಅದನ್ನು ಅವರು ವೀರ್ವಾನ್‌ನಲ್ಲಿರುವ ಪಂಡಿತರ ಕಾಲೋನಿಯ ಅಧ್ಯಕ್ಷರಿಗೆ ನೀಡಿದ್ದರು. ಬಳಿಕ ಈ ಕುರಿತಾಗಿ ಬಾರಾಮುಲ್ಲಾದ ಎಸ್‌ಎಸ್‌ಪಿ ಅವರಿಗೆ ದೂರು ನೀಡಲಾಗಿತ್ತು. ಈ ಪಂಡಿತರ ಕಾಲೋನಿಯಲ್ಲಿ ಸುಮಾರು 350 ಪಂಡಿತರು ವಾಸವಾಗಿದ್ದಾರೆ. ಲಷ್ಕರ್‌-ಇ-ಇಸ್ಲಾಂ ಸಂಘಟನೆಯನ್ನು 2015ರಲ್ಲೇ ನಿರ್ನಾಮ ಮಾಡಲಾಗಿದೆ.

ಪಾಕ್‌ ಜೈಲಿನಲ್ಲಿ ಸರಬ್ಜಿತ್ ಸಿಂಗ್ ಹತ್ಯೆ ಮಾಡಿದ್ದ ವ್ಯಕ್ತಿ ಅಪರಿಚಿತರಿಂದ ಖತಂ!

ಬೇಹುಗಾರಿಕೆ ಆರೋಪ ಹೊತ್ತು ಪಾಕಿಸ್ತಾನದ ಜೈಲಿನಲ್ಲಿದ್ದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ (Sarabjit Singh) ಅವರನ್ನು ಹತ್ಯೆ ಮಾಡಿದ್ದ ಅಮೀರ್ ಸರ್ಫರಾಜ್ (Amir Sarfaraz) ಅಲಿಯಾಸ್ ತಾಂಬಾ (Tamba) ಎಂಬಾತನನ್ನು ಕೆಲವು ದಿನಗಳ ಹಿಂದೆ ಲಾಹೋರ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು. ಏಪ್ರಿಲ್‌ 14ರಂದು ಘಟನೆ ನಡೆದಿತ್ತು.

ಇದನ್ನೂ ಓದಿ: Amir Sarfaraz: ಪಾಕ್ ಜೈಲಿನಲ್ಲಿದ್ದ ಸರಬ್ಜಿತ್ ಸಿಂಗ್ ಕೊಂದವನ ಹತ್ಯೆ; ಇದು ಯಾರ ಕೈವಾಡ?

ಲಾಹೋರ್‌ನ ಇಸ್ಲಾಂಪುರ ಪ್ರದೇಶದಲ್ಲಿ ಈ ದಾಳಿ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅಮೀರ್ ಸರ್ಫರಾಜ್ ನನ್ನು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ತ್ವರಿತವಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದ. ಗುಪ್ತಚರ ಆರೋಪದ ಮೇಲೆ ಬಂಧಿಯಾಗಿದ್ದ ಸರಬ್ಜಿತ್ ಸಿಂಗ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಈ ಹಿಂದೆ ಭಾರತ ಧ್ವನಿ ಎತ್ತಿದ್ದರೂ ಪಾಕಿಸ್ತಾನ ಇದಕ್ಕೆ ಸೊಪ್ಪು ಹಾಕಿರಲಿಲ್ಲ. ಇದೀಗ ಸುಮಾರು 11 ವರ್ಷಗಳ ಬಳಿಕ ಅಂಡರ್‌ವರ್ಲ್ಡ್ ಡಾನ್ ಅಮೀರ್ ಸರ್ಫರಾಜ್‌ನನ್ನು ಅಪರಿಚಿತ ವ್ಯಕ್ತಿಯೊಬ್ಬ ಹತ್ಯೆ ಮಾಡಿರುವುದು ಕುತೂಹಲ ಮೂಡಿಸಿದೆ. ಸದ್ಯ ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಂದು ಅಮೀರ್ ಸರ್ಫರಾಜ್ ಐಎಸ್‌ಐ ಸೂಚನೆಯ ಮೇರೆಗೆ ಸರಬ್ಜಿತ್ ಸಿಂಗ್ ಅವರನ್ನು ಕೊಲೆ ಮಾಡಿದ್ದ ಎನ್ನಲಾಗಿದೆ.

Exit mobile version