ವಾಷಿಂಗ್ಟನ್: ಅಮೆರಿಕದಲ್ಲಿ ಮತ್ತೊಂದು ಸಾಮೂಹಿಕ ಗುಂಡಿನ ದಾಳಿ (Mass Shooting)ಯ ಪ್ರಕರಣ ನಡೆದಿದ್ದು, 5 ಮಂದಿ ಮೃತಪಟ್ಟಿದ್ದಾರೆ. ಉತ್ತರ ಲಾಸ್ ವೇಗಾಸ್‌ನಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಎರಡು ಅಪಾರ್ಟ್‌ಮೆಂಟ್ ಸಂಕೀರ್ಣಗಳಲ್ಲಿ ಗುಂಡು ಹಾರಿಸಿ ನಾಲ್ವರನ್ನು ಕೊಂದು ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೃತ್ಯ ಎಸಗಿದವನನ್ನು 47 ವರ್ಷದ ಎರಿಕ್ ಆಡಮ್ಸ್ (Eric Adams) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ 13 ವರ್ಷದ ಬಾಲಕಿ ಗಂಭೀರ ಗಾಯಗೊಂಡಿದ್ದು ಆಕೆಯನ್ನು ಸ್ಥಳೀಯ ಆಸ್ಪತೆಗೆ ದಾಖಲಿಸಲಾಗಿದೆ.
ಘಟನೆ ವಿವರ
ಸೋಮವಾರ ರಾತ್ರಿ ಕಾಸಾ ನಾರ್ಟೆ ಡ್ರೈವ್‌ನ ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ಗುಂಡಿನ ದಾಳಿ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಕರೆಯೊಂದು ಬಂದಿತ್ತು. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಈ ವೇಳೆ ಗುಂಡೇಟಿನಿಂದ ಗಾಯಗೊಂಡ 40 ಮತ್ತು 50 ವರ್ಷ ಆಸುಪಾಸಿನ ಇಬ್ಬರು ಮಹಿಳೆಯರು ಕಂಡು ಬಂದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.
ʼʼಪಕ್ಕದ ಅಪಾರ್ಟ್‌ಮೆಂಟ್ ಆವರಣದಲ್ಲಿ ಇನ್ನೂ ಇಬ್ಬರ ಶವ ಪತ್ತೆಯಾಗಿದೆ. ಇದರಲ್ಲಿ 20-30 ವರ್ಷ ಆಸುಪಾಸಿನ ಮಹಿಳೆ ಮತ್ತು ಪುರುಷ ಸೇರಿದ್ದಾರೆ. ಗಂಭೀರವಾಗಿ ಗಾಯಗೊಂಡ 13 ವರ್ಷದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆʼʼ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಪೊಲೀಸರಿಗೆ ಕೃತ್ಯ ಎಸಗಿರುವುದು ಆಡಮ್ಸ್ ಎನ್ನುವ ವಿಚಾರ ತಿಳಿದು ಬಂತು ಮತ್ತು ಆತನ ಪತ್ತೆಗಾಗಿ ಯೋಧ ಕಾರ್ಯ ಆರಂಭಿಸಿದರು. ಕೊನೆಗೆ ಆತನನ್ನು ಸುತ್ತುವರಿದ ಪೊಲೀಸರು ಬಂದೂಕು ಕೆಳಗಿಳಿಸುವಂತೆ ಸೂಚನೆ ನೀಡಿದರು. ಆದರೆ ಆತ ಇದನ್ನು ನಿರ್ಲಕ್ಷಿಸಿ ಸ್ವತಃ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸುದ್ದಿ ಸಂಸ್ಥೆ ಸಿಎನ್‌ಎನ್ ತಿಳಿಸಿದೆ. ಈಸ್ಟ್ ಲೇಕ್ ಮೀಡ್ ಬೌಲೆವಾರ್ಡ್‌ನಲ್ಲಿ ವ್ಯಾಪಾರಿಯಾಗಿರುವ ಆಡಮ್ಸ್ ಯಾಕಾಗಿ ಈ ಕೃತ್ಯ ಎಸಗಿದ್ದಾನೆ ಎನ್ನುವುದು ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: Mass Shooting: ಗುಂಡಿನ ದಾಳಿ ನಡೆಸಿದ ಬಂಧೂಕುದಾರಿಯನ್ನೇ ನೆಲಕ್ಕೆ ಕೆಡವಿದರು; ವಿಡಿಯೊ ಇಲ್ಲಿದೆ
ಹಿಂದೆಯೂ ನಡೆದಿತ್ತು
ಅಮೆರಿಕದ ಮೈನ್ ಪ್ರದೇಶದ ಲೆವಿಸ್ಟನ್ ಎಂಬಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಅಪರಿಚಿತ ದುಷ್ಕರ್ಮಿಯೊಬ್ಬ ನಡೆಸಿದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದರು. ಸುಮಾರು 60 ಜನರು ಗಾಯಗೊಂಡಿದ್ದರು. ಈ ವೇಳೆ ಬಾರ್ ಮತ್ತು ರೆಸ್ಟೋರೆಂಟ್‌ನ ಎರಡು ಕಡೆ ದಾಳಿ ನಡೆದಿತ್ತು. ಬಂದೂಕು ಸಂಸ್ಕೃತಿ ವ್ಯಾಪಕವಾಗಿರುವ ಅಮೆರಿಕದಲ್ಲಿ ಕಳೆದ ವರ್ಷ 500ಕ್ಕೂ ಹೆಚ್ಚು ಸಾಮೂಹಿಕ ಗುಂಡಿನ ದಾಳಿ ನಡೆದಿತ್ತು.
ರಷ್ಯಾದ ಚರ್ಚ್‌ಗಳ ಮೇಲೆ ದಾಳಿ ನಡೆಸಿದ ಬಂಧೂಕುದಾರಿಗಳು
ಮಾಸ್ಕೋ: ಈ ಮಧ್ಯೆ ರಷ್ಯಾದ ಉತ್ತರ ಕಾಕಸಸ್ ಪ್ರದೇಶದ ಡಾಗೆಸ್ತಾನ್‌ನಲ್ಲಿ ಭಾನುವಾರ ಅಪರಿಚಿತ ಬಂಧೂಕುದಾರಿಗಳು ಅಪ್ರಚೋದಿತವಾಗಿ ಎರಡು ಚರ್ಚ್ ಮತ್ತು ಪೊಲೀಸ್ ಪೋಸ್ಟ್ ಮೇಲೆ ಗುಂಡು ಹಾರಿಸಿದ್ದು, ಪೊಲೀಸರು ಮತ್ತು ಪಾದ್ರಿ ಸೇರಿದಂತೆ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ. ದಾಳಿಯ ಹಿಂದೆ ಭಯೋತ್ಪಾದಕರ ಕೈವಾಡದ ಶಂಕೆ ವ್ಯಕ್ತವಾಗಿದೆ.