ವಾಷಿಂಗ್ಟನ್: ಕ್ಯಾನ್ಸರ್ ಉಂಟು ಮಾಡುವ ಕೀಟ ನಾಶಕವನ್ನು ಒಳಗೊಂಡಿದೆ ಎಂಬ ಆರೋಪದ ನಂತರ ಜನಪ್ರಿಯ ಭಾರತೀಯ ಮಸಾಲೆ ಬ್ರ್ಯಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಗ್ರೂಪ್‌ನ ಉತ್ಪನ್ನ (MDH, Everest Spices)ಗಳ ಮಾರಾಟವನ್ನು ಸಿಂಗಾಪುರ, ಹಾಂಗ್ ಕಾಂಗ್ ನಿಷೇಧಿಸಿದ್ದು, ಇದೀಗ ಅಮೆರಿಕವೂ ಕ್ರಮಕ್ಕೆ ಮುಂದಾಗಿದೆ. ಅಮೆರಿಕದ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (Food and Drug Administration) ಎಂಡಿಎಚ್ ಮತ್ತು ಎವರೆಸ್ಟ್ ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದೆ.
“ಎಫ್‌ಡಿಎ ಪರಿಸ್ಥಿತಿಯ ಬಗ್ಗೆ ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸುತ್ತಿದೆ” ಎಂದು ವಕ್ತಾರರು ತಿಳಿಸಿದ್ದಾರೆ. ಭಾರತ ಸೇರಿ ಜಗತ್ತಿನೆಲ್ಲೆಡೆ ಖ್ಯಾತಿ ಗಳಿಸಿರುವ ಎಂಡಿಎಚ್‌ನ ಮೂರು ಮಸಾಲಾ ಪದಾರ್ಥಗಳು ಹಾಗೂ ಎವರೆಸ್ಟ್‌ನ ಒಂದು ಮಸಾಲಾ ಪದಾರ್ಥದಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಕಾರ್ಸಿನೋಜೆನಿಕ್ ರಾಸಾಯನಿಕ ಇರುವ ಕಾರಣ ಹಾಂಕಾಂಗ್ ಆಹಾರ ನಿಯಂತ್ರಣ ಪ್ರಾಧಿಕಾರವು ನಾಲ್ಕೂ ಉತ್ಪನ್ನಗಳ ಮಾರಾಟವನ್ನು ಇತ್ತೀಚೆಗೆ ನಿಷೇಧಿಸಿತ್ತು. ಎಂಡಿಎಚ್‌ನ ಕರಿ ಪೌಡರ್, ಮಿಕ್ಸ್ಡ್ ಮಸಾಲಾ ಪೌಡರ್ ಹಾಗೂ ಸಾಂಬಾರ್ ಮಸಾಲಾ ಮತ್ತು ಎವರೆಸ್ಟ್‌ನ ಫಿಶ್ ಕರಿ ಮಸಾಲಾವನ್ನು ನಿಷೇಧಿತ ಉತ್ಪನ್ನಗಳು.
ವಿವಾದದ ಬಳಿಕ ಎವರೆಸ್ಟ್ ಸಂಸ್ಥೆ ಪ್ರತಿಕ್ರಿಯಿಸಿ, ʼʼತನ್ನ ಮಸಾಲೆಗಳು ಸೇವನೆಗೆ ಸುರಕ್ಷಿತʼʼ ಎಂದು ಹೇಳಿದೆ. ಆದರೆ ಎಂಡಿಎಚ್ ಇದುವರೆಗೆ ತನ್ನ ಉತ್ಪನ್ನಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಕಂಪನಿಗಳ ಉತ್ಪನ್ನಗಳನ್ನು ಅಮೆರಿಕ, ಯುರೋಪ್, ಇಂಗ್ಲೆಂಡ್ ಮತ್ತು ಮಧ್ಯಪ್ರಾಚ್ಯ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಇತ್ತ ಎಂಡಿಎಚ್ ಮತ್ತು ಎವರೆಸ್ಟ್ ಗ್ರೂಪ್‌ನ ಉತ್ಪನ್ನಗಳ ಗುಣಮಟ್ಟ ತಪಾಸಣೆಗೆ ಭಾರತೀಯ ಆಹಾರ ಸುರಕ್ಷತಾ ನಿಯಂತ್ರಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಸೋಮವಾರ ಆದೇಶ ಹೊರಡಿಸಿದೆ.
ʼʼಹಾಂಕಾಂಗ್ ಮತ್ತು ಸಿಂಗಾಪುರದ ಅಧಿಕಾರಿಗಳಿಂದ ಎಂಡಿಎಚ್ ಮತ್ತು ಎವರೆಸ್ಟ್ ಉತ್ಪನ್ನಗಳ ರಫ್ತು ಬಗ್ಗೆ ಮಾಹಿತಿ ಕೋರಲಾಗಿದೆ. ಗುಣಮಟ್ಟದ ಸಮಸ್ಯೆಗಳ ಮೂಲ ಕಾರಣವನ್ನು ಕಂಡುಹಿಡಿಯಲು ಕಂಪನಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆʼʼ ಎಂದು ಭಾರತದ ಮಸಾಲೆ ಮಂಡಳಿ ಬುಧವಾರ ತಿಳಿಸಿದೆ.
ಇದನ್ನೂ ಓದಿ: Pesticide: ಎವರೆಸ್ಟ್ ಫಿಶ್ ಕರಿ ಮಸಾಲೆಯಲ್ಲಿ ಕೀಟನಾಶಕ; ಬ್ಯಾನ್ ಮಾಡಿದ ಸಿಂಗಾಪುರ
ಏನಿದು ವಿವಾದ?
ಕೆಲವು ದಿನಗಳ ಹಿಂದೆ ಭಾರತದ ಜನಪ್ರಿಯ ಉತ್ಪನ್ನವಾದ ಮಸಾಲೆ ತಯಾರಕ ಎವರೆಸ್ಟ್‌ನ ಫಿಶ್ ಕರಿ ಮಸಾಲಾವನ್ನು ಹಿಂಪಡೆಯಲು ಸಿಂಗಾಪುರ ಆದೇಶಿಸಿತ್ತು. ಇದರಲ್ಲಿ ಸುರಕ್ಷಿತ ಮಿತಿಯನ್ನು ಮೀರಿ ಕೀಟನಾಶಕ ಎಥಿಲೀನ್ ಆಕ್ಸೈಡ್ ಇದೆ ಎಂದು ಅದು ಆರೋಪಿಸಿತ್ತು. ಅನುಮತಿಸಲಾದ ಮಿತಿಯನ್ನು ಮೀರಿದ ಮಟ್ಟದಲ್ಲಿ ಫಿಶ್ ಕರಿ ಮಸಾಲಾದಲ್ಲಿ ಎಥಿಲೀನ್ ಆಕ್ಸೈಡ್ ಕೀಟನಾಶಕವಿದೆ. ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ. ಕೃಷಿ ಉತ್ಪನ್ನಗಳ ಫ್ಯುಮಿಗೇಶನ್ ವೇಳೆ ಸೂಕ್ಷ್ಮಜೀವಿ ಮಾಲಿನ್ಯವನ್ನು ತಡೆಗಟ್ಟಲು ಮಾತ್ರ ಅದನ್ನು ಬಳಸಲಾಗುತ್ತದೆ ಎಂದು ಕಾರಣ ತಿಳಿಸಿತ್ತು. ಅದಾದ ಬಳಿಕ ಹಾಂಕಾಂಗ್‌ನಲ್ಲೂ ಎಂಡಿಎಚ್ ಹಾಗೂ ಎವರೆಸ್ಟ್ ಮಸಾಲಾ ಪದಾರ್ಥಗಳ ಮಾರಾಟವನ್ನು ನಿಷೇಧಿಸಲಾಗಿತ್ತು. ಹಾಗಾಗಿ ಜಾಗತಿಕವಾಗಿ ಭಾರತದ ಎರಡು ಮಸಾಲಾ ಬ್ರ್ಯಾಂಡ್‌ಗಳು ನಕಾರಾತ್ಮಕ ಕಾರಣಕ್ಕಾಗಿ ಸುದ್ದಿಯಾಗಿವೆ.