Site icon Vistara News

Terror Attack: ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ; 11 ಜನರನ್ನು ಅಪಹರಿಸಿ ಬರ್ಬರ ಹತ್ಯೆ

Jammu Kashmir

Two civilians shot at by terrorists in Jammu and Kashmir’s Anantnag

ಇಸ್ಲಾಮಾಬಾದ್: ಉಗ್ರರಿಗೆ ಹಣಕಾಸು ನೆರವಿನ ಜತೆಗೆ ಅವರಿಗೆ ಆಶ್ರಯವನ್ನೂ ಕೊಡುತ್ತಿದ್ದ ಪಾಕಿಸ್ತಾನಕ್ಕೆ (Pakistan) ಈಗ ಉಗ್ರರೇ ಮುಳುವಾಗಿದ್ದಾರೆ. ಉಗ್ರ ಪೋಷಣೆಯಿಂದಲೇ ಪಾಕಿಸ್ತಾನವು ಜಾಗತಿಕವಾಗಿ ಹಣಕಾಸು ನೆರವು ಸಿಗದಂತಹ ಪರಿಸ್ಥಿತಿಗೆ ತಲುಪಿದೆ. ಇಷ್ಟಾದರೂ, ಪಾಕಿಸ್ತಾನದಲ್ಲಿ ಉಗ್ರರ (Terrorists) ಅಟ್ಟಹಾಸ ನಿಲ್ಲುತ್ತಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಉಗ್ರರು 11 ಮಂದಿಯನ್ನು ಅಪಹರಿಸಿ, ಅವರನ್ನು ಭೀಕರವಾಗಿ (Terror Attack) ಹತ್ಯೆ ಮಾಡಿದ್ದಾರೆ.

ಬಲೂಚಿಸ್ತಾನದ ಕ್ವೆಟ್ಟಾದಿಂದ ತಫ್ತಾನ್‌ಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ವಾಹನವೊಂದು ತೆರಳುತ್ತಿತ್ತು. ಇದೇ ವೇಳೆ ವಾಹನವನ್ನು ಅಡ್ಡಹಾಕಿದ ಅಪರಿಚಿತ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ವಾಹನದಿಂದ ಪ್ರಯಾಣಿಕರನ್ನು ಹೊರಗೆಳೆದ ಉಗ್ರರು, ಅವರ ಮೇಲೆ ನಿರಂತರವಾಗಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಪಂಜಾಬ್‌ ಪ್ರಾಂತ್ಯದ 9 ಮಂದಿ ಸೇರಿ ಒಟ್ಟು 11 ಜನ ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಎಲ್ಲೆಂದರಲ್ಲಿ ಬಿದ್ದಿದ್ದ ಹೆಣಗಳು

ಪ್ರಯಾಣಿಕರನ್ನು ವಾಹನದಿಂದ ಹೊರಗೆಳೆದು, ಅವರನ್ನು ಅಪಹರಿಸಿದ ಉಗ್ರರು ಎಲ್ಲೆಂದರಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. “ವಾಹನದಲ್ಲಿ ತೆರಳುತ್ತಿದ್ದ ಪ್ರಯಾಣಿಕರನ್ನು ಉಗ್ರರು ಅಪಹರಿಸಿದ್ದಾರೆ. ಇದಾದ ಬಳಿಕ ಎಲ್ಲೆಂದರಲ್ಲಿ ಪ್ರಯಾಣಿಕರನ್ನು ಕೊಲೆ ಮಾಡಿದ್ದಾರೆ. ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 11 ಜನರ ಹತ್ಯೆ ಮಾಡಲಾಗಿದೆ. 9 ಜನರ ಶವಗಳು ಬೆಟ್ಟ ಗುಡ್ಡಗಳು, ಸೇತುವೆಗಳ ಬಳಿ ಸಿಕ್ಕಿವೆ” ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಹತರನ್ನು ವಾಜಿರಾಬಾದ್‌, ಮಂಡಿ, ಬಹಾವುದ್ದೀನ್‌ ಹಾಗೂ ಗುಜ್ರನ್‌ವಾಲಾದವರು ಎಂಬುದಾಗಿ ಗುರುತಿಸಲಾಗಿದೆ. ಇದೇ ಪ್ರಾಂತ್ಯದಲ್ಲಿ ಮತ್ತೊಂದು ಕಡೆ ದಾಳಿ ನಡೆದಿದೆ. ದಾಳಿಯಲ್ಲಿ ಇಬ್ಬರನ್ನು ಉಗ್ರರು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಉಗ್ರರ ದಾಳಿಯನ್ನು ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ಖಂಡಿಸಿದ್ದಾರೆ. “ಉಗ್ರರ ದಾಳಿಯನ್ನು ನಾವು ಖಂಡಿಸುತ್ತೇವೆ. ಯಾವುದೇ ರೀತಿಯ ಉಗ್ರವಾದವನ್ನು ನಾವು ಸಹಿಸುವುದಿಲ್ಲ. ದಾಳಿಗೆ ಕಾರಣರಾದವರಿಗೆ ತಕ್ಕ ಶಾಸ್ತಿ ಮಾಡುತ್ತೇವೆ” ಎಂದಿದ್ದಾರೆ. ಗೃಹ ಸಚಿವ ಮೊಹ್ಸಿನ್‌ ನಖ್ವಿ ಅವರು ಕೂಡ ಘಟನೆಯನ್ನು ಖಂಡಿಸಿದ್ದಾರೆ. ದಾಳಿಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿಯನ್ನೂ ಕೋರಿದ್ದಾರೆ. ಉಗ್ರರ ದಾಳಿಯ ಬಳಿಕ ಯಾವುದೇ ಸಂಘಟನೆಯು ಹೊಣೆಯನ್ನು ಹೊತ್ತುಕೊಂಡಿಲ್ಲ. ಕಳೆದ ತಿಂಗಳು ಗ್ವಾದರ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 17 ಮಂದಿಯನ್ನು ಹತ್ಯೆ ಮಾಡಿದ್ದಾರೆ.

ಇದನ್ನೂ ಓದಿ: ISIS Threat : ಭಾರತಕ್ಕೆ ಎದುರಾಗಿದೆ ಐಸಿಸ್​ ಉಗ್ರರ ದಾಳಿಯ ಬೆದರಿಕೆ

Exit mobile version