Site icon Vistara News

Muhammad Yunus: ಬಾಂಗ್ಲಾ ಮಧ್ಯಂತರ ಸರ್ಕಾರಕ್ಕೆ ಮಹಮ್ಮದ್ ಯೂನಸ್‌ರನ್ನು ಮುಖ್ಯಸ್ಥರಾಗಿ ಮಾಡಿದ್ದೇಕೆ? ಏನಿವರ ಹಿನ್ನೆಲೆ?

Muhammad Yunus

ಪ್ರಧಾನಮಂತ್ರಿ ಶೇಖ್ ಹಸೀನಾ (PM  Sheikh Hasina) ಅವರು ರಾಜೀನಾಮೆ ಕೊಟ್ಟು ದೇಶ ಬಿಟ್ಟು ಪಲಾಯನ ಮಾಡಿರುವುದರಿಂದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವನ್ನು ( Bangladesh interim govt) ಮುನ್ನಡೆಸಲು ಬಡ ಸಮುದಾಯಗಳೊಂದಿಗಿನ ಕೆಲಸಕ್ಕೆ ಹೆಸರುವಾಸಿಯಾಗಿರುವ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ (Nobel Peace Prize winner) ಮುಹಮ್ಮದ್ ಯೂನಸ್ (Muhammad Yunus) ಅವರನ್ನು ನೇಮಕಗೊಳಿಸಲಾಗಿದೆ.

ಶೇಖ್ ಹಸೀನಾ ಅವರ ಆಡಳಿತದ ವಿರುದ್ಧ ವ್ಯಾಪಕ ವಿರೋಧ, ದೇಶಾದ್ಯಂತ ಹಿಂಸಾತ್ಮಕ ಹೋರಾಟ ಆರಂಭವಾದ ಬಳಿಕ ಅವರು ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ಬಳಿಕ ಈ ಬೆಳವಣಿಗೆ ನಡೆದಿದೆ. ದೇಶದಲ್ಲಿ ಹೊಸ ಚುನಾವಣೆಗಳನ್ನು ಆಯೋಜಿಸುವವರೆಗೆ ಯೂನಸ್ ಹಂಗಾಮಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮಂಗಳವಾರ ರಾತ್ರಿ ನಡೆದ ಸಭೆಯಲ್ಲಿ ಈ ನೇಮಕಾತಿಯನ್ನು ನಿರ್ಧರಿಸಲಾಯಿತು.

ಹಸೀನಾ ಅವರ ನಿರ್ಗಮನವು ಬಾಂಗ್ಲಾದೇಶವನ್ನು ರಾಜಕೀಯ ಬಿಕ್ಕಟ್ಟಿಗೆ ತಳ್ಳಿದೆ. ಮಿಲಿಟರಿಯು ತಾತ್ಕಾಲಿಕವಾಗಿ ಆಡಳಿತದ ನಿಯಂತ್ರಣವನ್ನು ಪಡೆದುಕೊಂಡಿದೆ.


ಮುಹಮ್ಮದ್ ಯೂನಸ್‌ ಎಲ್ಲಿದ್ದಾರೆ?

ಪ್ರಸ್ತುತ ಪ್ಯಾರಿಸ್‌ನಲ್ಲಿ ಒಲಿಂಪಿಕ್ ಸಂಘಟಕರಿಗೆ ಸಲಹೆ ನೀಡುತ್ತಿರುವ ಮುಹಮ್ಮದ್ ಯೂನಸ್‌ ಅವರಿಗೆ ಮಧ್ಯಂತರ ಸರ್ಕಾರವನ್ನು ಮುನ್ನಡೆಸುವಂತೆ ಪ್ರತಿಭಟನೆಯ ಹಿಂದಿರುವ ವಿದ್ಯಾರ್ಥಿ ಮುಖಂಡರು ಕರೆ ಕಳುಹಿಸಿದ್ದಾರೆ. ಶೇಖ್ ಹಸೀನಾ ಅವರ ರಾಜಿನಾಮೆಯನ್ನು ದೇಶದ ಎರಡನೇ ವಿಮೋಚನಾ ದಿನ ಎಂದು ಕರೆದಿರುವ ಯೂನಸ್ ಅವರನ್ನು ಶೇಖ್ ಹಸೀನಾ ಹಿಂದೊಮ್ಮೆ ʼರಕ್ತ ಹೀರುವ ಪ್ರಾಣಿʼ ಎಂದು ಕರೆದಿದ್ದರು.

ಮಹಮ್ಮದ್ ಯೂನಸ್ ಹಿನ್ನೆಲೆ ಏನು?

83 ವರ್ಷದ ಮುಹಮ್ಮದ್ ಯೂನಸ್ ಅವರು ಶೇಖ್‌ ಹಸೀನಾ ಅವರ ಪ್ರಮುಖ ಟೀಕಾಕಾರರು ಮತ್ತು ರಾಜಕೀಯ ವಿರೋಧಿಯೂ ಆಗಿದ್ದಾರೆ. ಅರ್ಥಶಾಸ್ತ್ರಜ್ಞರು ಆಗಿರುವ ಯೂನಸ್ 2006ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಡ ವ್ಯಕ್ತಿಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಮೈಕ್ರೋಕ್ರೆಡಿಟ್‌ನೊಂದಿಗೆ ಅವರ ಅದ್ಭುತ ಕೆಲಸಕ್ಕಾಗಿ ನೊಬೆಲ್ ಸಮಿತಿಯು ಯೂನಸ್ ಮತ್ತು ಅವರ ಗ್ರಾಮೀಣ ಬ್ಯಾಂಕ್ ಅನ್ನು ಗುರುತಿಸಿದೆ. ತಳಮಟ್ಟದಿಂದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಅವರ ಕಾರ್ಯವನ್ನು ಗೌರವಿಸುವ ಸಲುವಾಗಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.


ಸಾಂಪ್ರದಾಯಿಕ ಸಾಲಕ್ಕೆ ಸಾಮಾನ್ಯವಾಗಿ ಅನರ್ಹರಾಗಿರುವ ಉದ್ಯಮಿಗಳಿಗೆ ಕಿರು ಸಾಲಗಳನ್ನು ನೀಡಲು ಯೂನಸ್ 1983ರಲ್ಲಿ ಗ್ರಾಮೀಣ ಬ್ಯಾಂಕ್ ಅನ್ನು ಸ್ಥಾಪಿಸಿದರು. ಬಡತನವನ್ನು ನಿವಾರಿಸುವಲ್ಲಿ ಬ್ಯಾಂಕಿನ ಯಶಸ್ಸು ಜಾಗತಿಕವಾಗಿ ಇದೇ ರೀತಿಯ ಕಿರುಬಂಡವಾಳ ಉಪಕ್ರಮಗಳನ್ನು ಪ್ರೇರೇಪಿಸಿತು.


ಹಸೀನಾ ಅವರೊಂದಿಗೆ ವಿರೋಧ ಯಾಕೆ?

2008ರಲ್ಲಿ ಶೇಖ್ ಹಸೀನಾ ಅವರ ಸರ್ಕಾರವು ಯುನಸ್ ಅವರ ವಹಿವಾಟಿನ ಬಗ್ಗೆ ತನಿಖೆ ಪ್ರಾರಂಭಿಸಿತು. ಆಗ ಹಸೀನಾ ಅವರೊಂದಿಗೆ ಯೂನಸ್ ಅವರ ಸಂಬಂಧವು ಹದಗೆಟ್ಟಿತು. 2007ರಲ್ಲಿ ಯೂನಸ್ ರಾಜಕೀಯ ಪಕ್ಷವನ್ನು ರಚಿಸುವ ಯೋಜನೆಯನ್ನು ಘೋಷಿಸಿದ ಅನಂತರ ಇದು ಮತ್ತಷ್ಟು ಉದ್ವಿಗ್ನವಾಯಿತು.

ತನಿಖೆಯ ಸಮಯದಲ್ಲಿ ಶೇಖ್ ಹಸೀನಾ ಅವರು ಗ್ರಾಮೀಣ ಬ್ಯಾಂಕ್‌ನ ಚುಕ್ಕಾಣಿ ಹಿಡಿದಿರುವಾಗ ಬಡ ಗ್ರಾಮೀಣ ಮಹಿಳೆಯರಿಂದ ಸಾಲ ವಸೂಲಿ ಮಾಡಲು ಮುಹಮ್ಮದ್ ಯೂನಸ್ ಬಲವಂತ ಮತ್ತು ಇತರ ವಿಧಾನಗಳನ್ನು ಬಳಸುತ್ತಿದ್ದರು ಎಂದು ಆರೋಪಿಸಿದ್ದರು. ಯೂನಸ್ ಇದನ್ನು ನಿರಾಕರಿಸಿದ್ದರು.

2011ರಲ್ಲಿ ಹಸೀನಾ ಅವರ ಸರ್ಕಾರವು ಬ್ಯಾಂಕಿನ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಲು ಪ್ರಾರಂಭಿಸಿತು. ಇದು ನಿವೃತ್ತಿ ನಿಯಮಗಳನ್ನು ಉಲ್ಲಂಘಿಸಿದ ಆಧಾರದ ಮೇಲೆ ವ್ಯವಸ್ಥಾಪಕ ನಿರ್ದೇಶಕರಾಗಿರುವ ಯೂನಸ್ ಅವರನ್ನು ವಜಾಗೊಳಿಸಲು ಕಾರಣವಾಯಿತು. 2013ರಲ್ಲಿ ಯೂನಸ್ ಅವರ ನೊಬೆಲ್ ಪ್ರಶಸ್ತಿ ಮತ್ತು ಪುಸ್ತಕದಿಂದ ರಾಯಧನ ಸೇರಿದಂತೆ ಸರ್ಕಾರದ ಅನುಮೋದನೆಯಿಲ್ಲದೆ ಹಣವನ್ನು ಸ್ವೀಕರಿಸಿದ ಆರೋಪದ ಮೇಲೆ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು.

ಬಾಂಗ್ಲಾದೇಶದ ಅತಿದೊಡ್ಡ ಮೊಬೈಲ್ ನೆಟ್‌ವರ್ಕ್‌ನ ಭಾಗವಾಗಿರುವ ಗ್ರಾಮೀಣ ಟೆಲಿಕಾಂ, ನಾರ್ವೇಜಿಯನ್ ಟೆಲಿಕಾಂ ದೈತ್ಯ ಟೆಲಿನಾರ್‌ನ ಅಂಗಸಂಸ್ಥೆಯಾದ ಗ್ರಾಮೀಣ್‌ಫೋನ್‌ ಸೇರಿದಂತೆ ಇತರ ಉದ್ಯಮಗಳಿಗೆ ಸಂಬಂಧಿಸಿದ ಆರೋಪಗಳಿಂದ ಯೂನಸ್‌ ಮತ್ತಷ್ಟು ತೊಂದರೆಗಳನ್ನು ಎದುರಿಸಿದರು. ಯೂನಸ್ ಅವರ ವಿರುದ್ಧ 2023ರಲ್ಲಿ ಉದ್ಯೋಗದ ಪ್ರಯೋಜನಗಳನ್ನು ದುರುಪಯೋಗಪಡಿಸಿಕೊಂಡ ಬಗ್ಗೆ ಮೊಕದ್ದಮೆ ಹೂಡಲಾಯಿತು. ಆದರೆ ಇದನ್ನೂ ಯೂನಸ್ ಅವರು ಇದನ್ನು ನಿರಾಕರಿಸಿದರು.


ಈ ವರ್ಷದ ಆರಂಭದಲ್ಲಿ ಯೂನಸ್ ಮತ್ತು ಇತರ 13 ಮಂದಿಯ ವಿರುದ್ಧ ಬಾಂಗ್ಲಾದೇಶದ ವಿಶೇಷ ನ್ಯಾಯಾಲಯವು 2 ಮಿಲಿಯನ್ ಡಾಲರ್ ದುರುಪಯೋಗ ಪ್ರಕರಣ ಆರೋಪದ ಮೇಲೆ ದೋಷಾರೋಪಣೆ ಮಾಡಿತ್ತು. ಇದನ್ನು ಯೂನಸ್ ನಿರಾಕರಿಸಿದ್ದು, ಸದ್ಯ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ಶೇಖ್ ಹಸೀನಾ ಅವರೊಂದಿಗಿನ ಹಳಸಿದ ಸಂಬಂಧದಿಂದಾಗಿ ಮುಹಮ್ಮದ್ ಯೂನಸ್ ಅವರನ್ನು ಗುರಿಯಾಗಿಸಲಾಗಿದೆ ಎಂದು ಅವರ ಬೆಂಬಲಿಗರು ವಾದಿಸುತ್ತಾರೆ.

ಇದನ್ನೂ ಓದಿ: Bangladesh Unrest: ಬಾಂಗ್ಲಾದಲ್ಲಿ ಹಿಂದೂಗಳ ಬರ್ಬರ ಹತ್ಯೆ, ದೇಗುಲಗಳಿಗೆ ಬೆಂಕಿ, ಮಹಿಳೆಯರ ಮೇಲೂ ದೌರ್ಜನ್ಯ; ಇಲ್ಲಿವೆ ವಿಡಿಯೊಗಳು


1940ರಲ್ಲಿ ಬಾಂಗ್ಲಾದೇಶದ ಬಂದರು ನಗರವಾದ ಚಿತ್ತಗಾಂಗ್‌ನಲ್ಲಿ ಜನಿಸಿದ ಯೂನಸ್ ಅವರು ಅಮೆರಿಕದ ವಂಡೆರ್‌ಬಿಲ್ಟ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಗಳಿಸಿದ್ದಾರೆ. ಅನಂತರ ಅವರು ಬಾಂಗ್ಲಾದೇಶಕ್ಕೆ ಮರಳಿದರು. ಬಿದಿರಿನ ಕುರ್ಚಿ ನೇಯುತ್ತಿದ್ದ ಬಡ ಮಹಿಳೆಯೊಬ್ಬರು ಪಡೆದ ಸಾಲವನ್ನು ಮರುಪಾವತಿಸಲು ಹೆಣಗಾಡುತ್ತಿದ್ದುದು ಯುನಸ್‌ ಅವರ ಗಮನ ಸೆಳೆದು ಅದು ಅವರಿಗೆ ಕಿರು ಸಾಲ ಯೋಜನೆ ರೂಪಿಸಲು ಪ್ರೇರೇಪಿಸಿತು. ಮುಂದೆ ಇದು ಗ್ರಾಮೀಣ ಬ್ಯಾಂಕ್ ಸ್ಥಾಪಿಸಬೇಕು ಎನ್ನುವ ಚಿಂತನೆ ಮೂಡಿಸಿತು ಎಂದು ಯೂನಸ್ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

Exit mobile version