ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ (Pakistan Former PM Nawaz Sharif) ಅವರ ರಾಜಕೀಯ ಹಾದಿ ಸುಗಮವಾಗಿದೆ. ಇಸ್ಲಾಮಾಬಾದ್ ಹೈಕೋರ್ಟ್ (Islamabad High Court) ಮಂಗಳವಾರ ನವಾಜ್ ಷರೀಫ್ ಅವರನ್ನು ಅಲ್ ಅಜೀಜಿಯಾ ಉಲ್ಲೇಖ(Al Aziziya Reference Case) ಪ್ರಕರಣದಲ್ಲಿ ಖುಲಾಸೆಗೊಳಿಸಿದೆ(Nawaz acquits). ಪಿಎಂಎಲ್-ಎನ್ ಮುಖ್ಯಸ್ಥರ ವಿರುದ್ಧದ ಎಲ್ಲಾ ಆರೋಪಗಳು, ಶಿಕ್ಷೆಗಳನ್ನು ಕೈಬಿಡಲಾಯಿತು.ಈ ತೀರ್ಪು ನವಾಜ್ ಷರೀಫ್ ವಿರುದ್ಧ ಪಿತೂರಿ ನಡೆಸಿದ ಎಲ್ಲರಿಗೂ ಸೋಲು. ಯಾರಾದರೂ ಯಾರಿಗಾದರೂ ಈ ಮಟ್ಟಿಗೆ ತೊಂದರೆ ನೀಡುವುದು ನಾಚಿಕೆಗೇಡಿನ ಸಂಗತಿ ಎಂದು ನವಾಜ್ ಷರೀಫ್ ಅವರ ಬೆಂಬಲಿಗರು ಹೇಳಿದ್ದಾರೆ.
ನವಾಜ್ ಷರೀಫ್ ಅವರು ಎದುರಿಸುತ್ತಿದ್ದ ಎರಡು ಭ್ರಷ್ಟಾಚಾರ ಪ್ರಕರಣಗಳ ಪೈಕಿ ಅಲ್-ಅಜೀಜಿಯಾ ಉಲ್ಲೇಖ ಪ್ರಕರಣವೂ ಒಂದಾಗಿದೆ. ಈ ಪ್ರಕರಣದಲ್ಲಿ ಅವರಿಗೆ ಒಟ್ಟು ಏಳು ವರ್ಷ ಜೈಲು ಶಿಕ್ಷೆ ಮತ್ತು 1.5 ಶತಕೋಟಿ ಪಾಕ್ ರೂಪಾಯಿ ದಂಡವನ್ನು ವಿಧಿಸಲಾಗಿತ್ತು. ಸೌದಿ ಅರೆಬಿಯಾದಲ್ಲಿ ಅಲ್-ಅಜೀಜಿಯಾ ಸ್ಟೀಲ್ ಮಿಲ್ಸ್ ಮತ್ತು ಹಿಲ್ ಮೆಟಲ್ ಎಷ್ಟಾಬ್ಲಿಷ್ಮೆಂಟ್ ಸ್ಥಾಪನೆಗೆ ಬಳಸಲಾದ ಹಣದ ಮೂಲವನ್ನು ಕುರಿತು ಸ್ಪಷನೆ ನೀಡಲು ಷರೀಫ್ ಕುಟುಂಬವು ವಿಫಲವಾದದ್ದೇ ಈ ಪ್ರಕರಣಕ್ಕೆ ಕಾರಣವಾಗಿದೆ.
ಇದಕ್ಕೂ ಮೊದಲು, 2020ರಲ್ಲಿ ನವಾಜ್ ಷರೀಫ್ ಅವರನ್ನು ಘೋಷಿತ ಅಪರಾಧಿ ಎಂದು ಘೋಷಣೆ ಮಾಡಲಾಗಿತ್ತು. ನವಾಜ್ ವೈದ್ಯಕೀಯ ಕಾರಣಗಳಿಗಾಗಿ ಲಂಡನ್‌ನಲ್ಲಿ ಆಶ್ರಯ ಪಡೆದಿದ್ದರು ಮತ್ತು ಈ ವರ್ಷದ ಅಕ್ಟೋಬರ್‌ನಲ್ಲಿ ಪಾಕಿಸ್ತಾನಕ್ಕೆ ಮರಳಿದ್ದರು. ಅಲ್-ಅಜೀಜಿಯಾ ಮತ್ತು ಅವೆನ್‌ಫೀಲ್ಡ್ ಉಲ್ಲೇಖ ಪ್ರಕರಣಗಳಿಗೆ ಸಂಬಂಧಿಸಿದಂತೆ ನವಾಜ್ ಷರೀಫ್ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಗಳ ವಿಚಾರಣೆಗಳಿಗೆ ಕೋರ್ಟ್ ಒಪ್ಪಿಗೆ ನೀಡಿತ್ತು.
ಮಂಗಳವಾರದ ವಿಚಾರಣೆಯ ವೇಳೆ ನವಾಜ್ ಪರ ವಕೀಲ ಅಮ್ಜದ್ ಪರ್ವೈಜ್ ಅವರು ಬೇನಾಮಿ ಪ್ರಕರಣಗಳಲ್ಲಿ 13 ಪ್ರತ್ಯೇಕ ತೀರ್ಪುಗಳನ್ನು ಉಲ್ಲೇಖಿಸಿ ನವಾಜ್ ಅವಲಂಬಿತರಿಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳ ಕೊರತೆಯ ಬಗ್ಗೆ ವಾದಿಸಿದರು. ವಿಚಾರಣಾ ನ್ಯಾಯಾಲಯವು ತನ್ನ ತೀರ್ಪನ್ನು ಮರ್ಯಮ್ ನವಾಜ್, ಹಸನ್ ನವಾಜ್ ಮತ್ತು ಹುಸೇನ್ ನವಾಜ್ ಅವರು ಸಲ್ಲಿಸಿದ ಸಿವಿಲ್ ವಿವಿಧ ಅರ್ಜಿಗಳನ್ನು ಆಧರಿಸಿದೆ, ನವಾಜ್ ಅಲ್ಲ ಎಂದು ಪರ್ವೈಜ್ ಒತ್ತಿ ಹೇಳಿದರು. ಅಂತಿಮವಾಗಿ ಕೋರ್ಟ್ ನವಾಜ್ ಷರೀಫ್ ಅವರನ್ನು ಎಲ್ಲ ಆರೋಪ ಮತ್ತು ಶಿಕ್ಷೆಗಳಿಂದ ಖುಲಾಸೆಗೊಳಿಸಿತು.
ಈ ಸುದ್ದಿಯನ್ನೂ ಓದಿ: Nawaz Sharif: 4 ವರ್ಷ ವನವಾಸದ ಬಳಿಕ ಪಾಕ್‌ಗೆ ಆಗಮಿಸಿದ ನವಾಜ್ ಷರೀಫ್