Site icon Vistara News

New York Flood: ಶತಮಾನದ ಮಳೆಗೆ ತತ್ತರಿಸಿದ ನ್ಯೂಯಾರ್ಕ್;‌ ಕೆರೆಯಂತಾಗಿವೆ ಊರುಗಳು!

newyork

newyork

ನ್ಯಾಯಾರ್ಕ್‌: ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿ ದಾಖಲೆಯ ಪ್ರಮಾಣದ ಮಳೆ ಸುರಿದಿದ್ದು, ಪ್ರವಾಹದಿಂದ ರಸ್ತೆಗಳಿಗೆ ನೀರು ನುಗ್ಗಿದೆ (New York Flood). ಶುಕ್ರವಾರ ಅಧಿಕಾರಿಗಳು ತುರ್ತು ಪರಿಸ್ಥಿತಿ (emergency) ಘೋಷಿಸಿದ್ದಾರೆ. ದೇಶದಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಮಹಾನಗರದ ಬೀದಿಗಳು, ನೆಲಮಾಳಿಗೆಗಳು, ಶಾಲೆಗಳು, ಸುರಂಗ ಮಾರ್ಗಗಳಲ್ಲಿ ಪ್ರವಾಹ ತುಂಬಿ ಹರಿಯುತ್ತಿರುವ ದೃಶ್ಯಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ವೈರಲ್‌ ಆಗಿದೆ.

ನ್ಯಾಷನಲ್‌ ವೆದರ್‌ ಸರ್ವಿಸ್ (NWS) ಸುಮಾರು 85 ಲಕ್ಷ ಮಂದಿಗೆ ಪ್ರವಾಹದ ಎಚ್ಚರಿಕೆಯನ್ನು ನೀಡಿದೆ. ನಿರಂತರ ಭಾರೀ ಮಳೆಯಿಂದಾಗಿ ಚರಂಡಿಗಳು ತುಂಬಿದ್ದು, ಪರಿಣಾಮವಾಗಿ ನ್ಯೂಯಾರ್ಕ್‌ ನಗರದ ಕಾಂಕ್ರೀಟ್‌ ಮತ್ತು ಪಾದಚಾರಿ ಮಾರ್ಗಗಳು ನೀರಿನಿಂದ ಆವೃತ್ತವಾಗಿದೆ. ಪ್ರವಾಹದಿಂದಾಗಿ ಬ್ರೂಕ್ಲಿನ್‌ನಲ್ಲಿ ಹಲವು ಸುರಂಗ ಮಾರ್ಗಗಳನ್ನು ಮುಚ್ಚಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಪ್ರವಾಹದ ಭೀಕರತೆ ತೆರೆದಿಟ್ಟ ವಿಡಿಯೊಗಳು

ನ್ಯೂಯಾರ್ಕ್ ನಗರದ ವಿವಿಧ ಕಡೆಗಳ ವಿಡಿಯೊಗಳು ಪ್ರವಾಹದ ಭೀಕರತೆಯನ್ನು ತೆರೆದಿಟ್ಟಿವೆ. ಮುಳುಗಿದ ಪ್ರಮುಖ ರಸ್ತೆ, ಕಾರು, ಇತರ ವಾಹನಗಳ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ.

ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಶುಕ್ರವಾರ ಎಕ್ಸ್ ನಲ್ಲಿ, “ಇಂದು ಭಾರಿ ಮಳೆ ಮತ್ತು ಪ್ರವಾಹ ಮುಂದುವರಿಯಲಿದೆ ಮತ್ತು ಪ್ರಯಾಣ ಮಾಡುವುದು ಅಪಾಯಕಾರಿ. ನ್ಯೂಯಾರ್ಕ್ ನಿವಾಸಿಗಳ ಸುರಕ್ಷತೆಗೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಪ್ರವಾಹದ ಸಮಯದಲ್ಲಿ ಅಪಾಯಕಾರಿ ಸ್ಥಳಗಳಲ್ಲಿ ನಡೆಯುವುದನ್ನು ಅಥವಾ ವಾಹನ ಚಲಾಯಿಸುವುದನ್ನು ತಪ್ಪಿಸಿʼʼ ಎಂದು ಬರೆದುಕೊಂಡಿದ್ದಾರೆ. ಇತ್ತ ನಗರದ ಅವ್ಯವಸ್ಥೆಗೆ ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.

“ಇದು ಲಘುವಾಗಿ ತೆಗೆದುಕೊಳ್ಳಬೇಕಾದ ಅಂಕಿ-ಅಂಶವಲ್ಲ” ಎಂದು ನಗರದ ತುರ್ತು ನಿರ್ವಹಣಾ ಆಯುಕ್ತ ಜಕಾರಿ ಇಸ್ಕೋಲ್ ಒತ್ತಿ ಹೇಳಿದ್ದಾರೆ. ʼʼಇದು ಎರಡು ವರ್ಷಗಳಲ್ಲಿ ಅತ್ಯಂತ ತೇವಭರಿತ ದಿನವಾಗಿದೆ. ಹವಾಮಾನ ಸಲಹೆಗಳಿಗೆ ನಾವೆಲ್ಲರೂ ಹೆಚ್ಚು ಗಮನ ಹರಿಸಬೇಕು ಎನ್ನುವುದನ್ನು ಒತ್ತಿ ಹೇಳುತ್ತದೆʼʼ ಎಂದಿದ್ದಾರೆ.

ಭಾರಿ ಮಳೆ ಮತ್ತು ಪ್ರವಾಹವು ಮುಂದುವರಿಯುವ ನಿರೀಕ್ಷೆಯಿದ್ದು, ತೀವ್ರಾ ಕಣ್ಗಾವಲು ಇರಿಸಲಾಗಿದೆ. ಗಂಟೆಗೆ 1-2 ಇಂಚುಗಳಷ್ಟು ಮಳೆಯಾಗುವ ಸಾಧ್ಯತೆ ಇದ್ದು, ಹಿಂದಿನ ಮಳೆಯನ್ನು ಗಮನಿಸಿದರೆ, ಗಂಭೀರ ಪ್ರವಾಹ ಮತ್ತು ಹಠಾತ್ ಪ್ರವಾಹ ಪರಿಸ್ಥಿತಿಗಳು ನಿರೀಕ್ಷಿತ ಎಂದು ಮೂಲಗಳು ತಿಳಿಸಿವೆ.

ಶತಮಾನದ ಮಳೆ

ನ್ಯೂಯಾರ್ಕ್ ನಗರದಲ್ಲಿ ಈ ತಿಂಗಳು ಕನಿಷ್ಠ 14 ಇಂಚು ಮಳೆಯಾಗಿದೆ. ಇದು 1882ರ ನಂತರ ದಾಖಲಾದ ಅತ್ಯಂತ ತೇವಾಂಶ ಭರಿತ ಸೆಪ್ಟಂಬರ್‌ ಎಂದು ಹವಾಮಾನ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ. ನ್ಯೂಯಾರ್ಕ್ ನ ಜಾನ್ ಎಫ್. ಕೆನಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದೇ ದಿನದಲ್ಲಿ ಸುಮಾರು 8 ಇಂಚುಗಳಷ್ಟು ಮಳೆಯಾಗಿದೆ. ಶುಕ್ರವಾರ ಬೆಳಗ್ಗೆ ಬ್ರೂಕ್ಲಿನ್ ನಲ್ಲಿ ಕೇವಲ ಮೂರು ಗಂಟೆಗಳಲ್ಲಿ ಒಂದು ತಿಂಗಳಿನಲ್ಲಿ ಸುರಿಯುವಷ್ಟು ಮಳೆಯಾಗಿದೆ. ʼʼಬೆಚ್ಚಗಿನ ವಾತಾವರಣವು ಬೃಹತ್ ಸ್ಪಾಂಜ್‌ನಂತೆ ಕಾರ್ಯ ನಿರ್ವಹಿಸುತ್ತದೆ. ಇದು ಹೆಚ್ಚಿನ ನೀರಿನ ಆವಿಯನ್ನು ಹೀರಿಕೊಳ್ಳುತ್ತದೆ. ನಂತರ ಅದನ್ನು ತೀವ್ರವಾದ ವೇಗದಲ್ಲಿ ಹೊರ ಚೆಲ್ಲುತ್ತದೆ ಇದು ಬೀಕರ ಪ್ರವಾಹಕ್ಕೆ ಕಾರಣವಾಗುತ್ತದೆʼʼ ಎಂದು ವಿಜ್ಞಾನಿಗಳು ವಿವರಿಸುತ್ತಾರೆ.

ಇದನ್ನೂ ಓದಿ: Khalistan Row: ಸ್ಕಾಟ್ಲೆಂಡ್‌ನಲ್ಲಿ ಗುರುದ್ವಾರ ಪ್ರವೇಶಿಸದಂತೆ ಭಾರತೀಯ ರಾಯಭಾರಿಯನ್ನು ತಡೆದ ಖಲಿಸ್ತಾನಿಗಳು

Exit mobile version