Site icon Vistara News

Nikhil Gupta: ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಹತ್ಯೆಗೆ ಸಂಚು ಆರೋಪ; ಜೆಕ್‌ ಗಣರಾಜ್ಯದಿಂದ ನಿಖಿಲ್‌ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

Nikhil Gupta

Nikhil Gupta

ವಾಷಿಂಗ್ಟನ್‌: ಖಲಿಸ್ತಾನ್‌ ಉಗ್ರ (Khalistan Terrorist) ಗುರುಪತ್ವಂತ್‌ ಸಿಂಗ್‌ ಪನ್ನುನ್‌ (Gurpatwant Singh Pannun) ಹತ್ಯೆ ಸಂಚು (Murder plot) ಆರೋಪದಲ್ಲಿ ಬಂಧಿತನಾಗಿರುವ ಭಾರತೀಯ ಉದ್ಯಮಿ ನಿಖಿಲ್‌ ಗುಪ್ತಾ (Nikhil Gupta)ನನ್ನು ಜೆಕ್‌ ಗಣರಾಜ್ಯದಿಂದ ಅಮೆರಿಕಕ್ಕೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಮರಿಕದ ನ್ಯೂಯಾರ್ಕ್‌ನಲ್ಲಿರುವ ಖಲಿಸ್ತಾನ್ ಭಯೋತ್ಪಾದಕ ಗುರುಪತ್ವಂತ್‌ ಸಿಂಗ್‌ ಪನ್ನುನ್‌ನ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ 52 ವರ್ಷದ ನಿಖಿಲ್‌ ಗುಪ್ತಾನನ್ನು ಅಮೆರಿಕ ಸರ್ಕಾರದ ಕೋರಿಕೆಯ ಮೇರೆಗೆ ಕಳೆದ ವರ್ಷ ಜೆಕ್ ಗಣರಾಜ್ಯದಲ್ಲಿ ಬಂಧಿಸಲಾಗಿತ್ತು. ಆತನನ್ನು ಸೋಮವಾರ (ಜೂನ್‌ 17) ನ್ಯೂಯಾರ್ಕ್‌ನ ಫೆಡರಲ್ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ನಿಖಿಲ್‌ ಗುಪ್ತಾನನ್ನು ಪ್ರಸ್ತುತ ಬ್ರೂಕ್ಲಿನ್‌ನ ಫೆಡರಲ್ ಮೆಟ್ರೋಪಾಲಿಟನ್ ಡಿಟೆನ್ಷನ್ ಸೆಂಟರ್‌ಗೆ ದಾಖಲಿಸಲಾಗಿದೆ. “ಜೆಕ್ ಗಣರಾಜ್ಯದಲ್ಲಿ ಬಂಧನಕ್ಕೊಳಗಾಗಿದ್ದ ನಿಖಿಲ್‌ ಗುಪ್ತಾನನ್ನು ಭಾನುವಾರ ನ್ಯೂಯಾರ್ಕ್‌ಗೆ ಕರೆ ತರಲಾಗಿದೆ. ಸಾಮಾನ್ಯವಾಗಿ ಗಡಿಪಾರಾದ ಆರೋಪಿಗಳು ದೇಶಕ್ಕೆ ಆಗಮಿಸಿದ ಒಂದು ದಿನದೊಳಗೆ ನ್ಯಾಯಾಲಯಕ್ಕೆ ಹಾಜರಾಗಬೇಕು ಎನ್ನುವ ಕಾನೂನಿದೆʼʼ ಎಂದು ವರದಿಯೊಂದು ತಿಳಿಸಿದೆ.

ಗುರುಪತ್ವಂತ್‌ ಸಿಂಗ್‌ ಪನ್ನುನ್‌ನನ್ನು ಹತ್ಯೆ ಮಾಡಲು ನಿಖಿಲ್‌ ಗುಪ್ತಾ ವ್ಯಕ್ತಿಯೊಬ್ಬರಿಗೆ ಸುಪಾರಿ ನೀಡಿದ್ದ. ಅಲ್ಲದೆ ಆತನಿಗೆ 15,000 ಡಾಲರ್ ಮುಂಗಡವನ್ನು ಪಾವತಿಸಿದ್ದ ಎಂದು ಫೆಡರಲ್ ಪ್ರಾಸಿಕ್ಯೂಟರ್‌ ಆರೋಪಿಸಿದ್ದಾರೆ. ಅನಾಮಧೇಯ ಭಾರತೀಯ ಸರ್ಕಾರಿ ಅಧಿಕಾರಿಯೊಬ್ಬರು ಇದರಲ್ಲಿ ಭಾಗಿಯಾಗಿದ್ದಾರೆ ಎಂದೂ ಅವರು ದೂರಿದ್ದಾರೆ. ಆದರೆ ಭಾರತ ಈಗಾಗಲೇ ಈ ಆರೋಪಗಳನ್ನು ತಳ್ಳಿ ಹಾಕಿದೆ. ಜತೆಗೆ ನಿಖಿಲ್‌ ಗುಪ್ತಾ ಕೂಡ ತನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ತಿಳಿಸಿದ್ದಾನೆ.

ವಾರ್ಷಿಕ ಐಸಿಇಟಿ ಮಾತುಕತೆಗಾಗಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ನವದೆಹಲಿಗೆ ಭೇಟಿ ನೀಡುವ ಮುನ್ನ ಈ ಹಸ್ತಾಂತರ ನಡೆದಿದೆ. ಈ ವಿಷಯವನ್ನು ಸುಲ್ಲಿವಾನ್ ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Khalistan Terrorist: ನಿಖಿಲ್‌ ಗುಪ್ತಾ ಬಂಧನ ವಿಚಾರದಲ್ಲಿ ಮಧ್ಯೆ ಪ್ರವೇಶಿಸುವುದಿಲ್ಲ: ಸುಪ್ರೀಂ ಕೋರ್ಟ್

ಕಳೆದ ವರ್ಷ ಬಂಧನ

ದೆಹಲಿ ಮೂಲದ ಉದ್ಯಮಿ ನಿಖಿಲ್ ಗುಪ್ತಾನನ್ನು ಕಳೆದ ವರ್ಷ ಅಂದರೆ 2023ರಲ್ಲಿ ಜೆಕ್ ಗಣರಾಜ್ಯದಲ್ಲಿ ಬಂಧಿಸಲಾಯಿತು. ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್‌ನನ್ನು ಕೊಲ್ಲಲು ಸಂಚು ರೂಪಿಸಿದ ಆರೋಪವನ್ನು ಅಮೆರಿಕ ಆತನ ಮೇಲೆ ಹೊರಿಸಿದೆ. ನಿಖಿಲ್ ಗುಪ್ತಾ ಭಾರತದ ಸರ್ಕಾರಿ ಏಜೆಂಟ್‌ನೊಂದಿಗೆ ಸಂಚಿನಲ್ಲಿ ಭಾಗಿಯಾಗಿದ್ದಾನೆ ಮತ್ತು ಪನ್ನುನ್‌ನನ್ನು ಕೊಲ್ಲಲು ಒಬ್ಬ ಹಿಟ್‌ಮ್ಯಾನ್ ಅನ್ನು ನೇಮಿಸಿಕೊಂಡಿದ್ದಾನೆ ಎಂದು ಅಮೆರಿಕ ಹೇಳಿದೆ.‌

ಆರೋಪಗಳು ತುಂಬಾ ಗಂಭೀರವಾಗಿರುವುದರಿಂದ ತನಿಖಾ ಸಮಿತಿಯನ್ನು ರಚಿಸಲಾಗಿದ್ದು, ವಿಚಾರವನ್ನು ಪರಿಶೀಲಿಸಲಾಗುತ್ತಿದೆ ಎಂದು ನವದೆಹಲಿ ಹೇಳಿದೆ. ನಿಖಿಲ್ ಗುಪ್ತಾ ಬಂಧನದ ಬಳಿಕ ಆತನ ಕುಟುಂಬವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಗುಪ್ತಾನನ್ನು ಜೈಲಿನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ, ಹಂದಿಮಾಂಸವನ್ನು ತಿನ್ನಲು ಅವರನ್ನು ಒತ್ತಾಯಿಸಲಾಗುತ್ತಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

Exit mobile version