Site icon Vistara News

Viral News: ಒಂದು ಕುಟುಂಬದಲ್ಲಿ 9 ಜನ, ಇವರೆಲ್ಲರ ಬರ್ತ್‌ಡೇ ಒಂದೇ ದಿನ; ಗಿನ್ನಿಸ್ ದಾಖಲೆಗೆ ಫ್ಯಾಮಿಲಿ ಭಾಜನ

Pakistan Family Members Birthday

Nine people In One Family Celebrate Birthday On Same Day In Family; Sets World Record

ಇಸ್ಲಾಮಾಬಾದ್: ಐದಾರು ಜನ ಒಟ್ಟಿಗೆ ಇರುವ ಒಂದು ಕುಟುಂಬದಲ್ಲಿ ಒಬ್ಬೊಬ್ಬರದ್ದು ಒಂದೊಂದು ದಿನ ಬರ್ತ್‌ ಡೇ ಇರುತ್ತದೆ. ಹೆಚ್ಚೆಂದರೆ ಇಬ್ಬರ ಜನ್ಮದಿನ ಒಂದೇ ದಿನಾಂಕದಂದು ಇರಬಹುದು. ಅದನ್ನೇ, ಕುಟುಂಬಸ್ಥರು ಹಬ್ಬದ ರೀತಿ ಆಚರಿಸುತ್ತಾರೆ. ಆದರೆ, ಪಾಕಿಸ್ತಾನದ (Pakistan) ಒಂದು ಕುಟುಂಬದಲ್ಲಿ ಒಂಬತ್ತು ಜನರಿದ್ದಾರೆ. ಆ ಒಂಬತ್ತೂ ಜನರ ಬರ್ತ್‌ಡೇ (Birthday) ಒಂದೇ ದಿನ (Viral News) ಬರುವುದು ಅಚ್ಚರಿಯಾಗಿದೆ. ಹಾಗೆಯೇ, ಇದು ಗಿನ್ನಿಸ್‌ ವಿಶ್ವ ದಾಖಲೆಗೆ (Guinness Record) ಭಾಜನವಾಗಿದೆ.

ಹೌದು, ಪಾಕಿಸ್ತಾನದ ಲರ್ಕಾನ ನಗರದಲ್ಲಿ ವಾಸಿಸುವ ಕುಟುಂಬವು ಇಂಥದ್ದೊಂದು ದಾಖಲೆ ಬರೆದಿದೆ. ಕುಟುಂಬದ ಯಜಮಾನ ಆಮೀರ್‌ ಅಲಿ, ಪತ್ನಿ ಖುದೇಜಾ ಅವರು ಹಾಗೂ ದಂಪತಿಯ ಏಳು ಮಕ್ಕಳದ್ದು ಆಗಸ್ಟ್‌ 1ರಂದು ಬರ್ತ್‌ಡೇ. ಪತಿ ಹಾಗೂ ಪತ್ನಿ ಒಂದೇ ದಿನಾಂಕದಂದು ಜನಿಸಿದರೆ, ಅವರ ಏಳು ಮಕ್ಕಳು ಕೂಡ ಒಂದೇ ದಿನಾಂಕದಂದು ಜನಿಸಿದ್ದಾರೆ. ಹಾಗೆಯೇ, ಯಾರದ್ದೂ ಸಿಸೇರಿಯನ್‌ ಡೆಲಿವರಿ ಅಲ್ಲ. ಎಲ್ಲ ಮಕ್ಕಳು ಸಹಜ ಹೆರಿಗೆ ಮೂಲಕವೇ ಜನಿಸಿದ್ದಾರೆ. ಇದು ಈಗ ಎಲ್ಲರಿಗೂ ಅಚ್ಚರಿ ಎನಿಸಿದೆ.

ಪ್ರತಿ ವರ್ಷ ಆಗಸ್ಟ್‌ 1 ಬಂದಾಗಲೆಲ್ಲ ಆಮೀರ್‌ ಅಲಿ ಮನೆಯಲ್ಲಿ ಹಬ್ಬಕ್ಕಿಂತ ಹೆಚ್ಚಿನ ಸಂಭ್ರಮ ಇರುತ್ತದೆ. ಒಂದೇ ದಿನ ಇಡೀ ಕುಟುಂಬಸ್ಥರ ಜನ್ಮದಿನ ಇರುವುದರಿಂದ, ಆಮೀರ್‌ ಅಲಿ ಅವರು ದೊಡ್ಡದೊಂದು ಕೇಕ್‌ ತರುತ್ತಾರೆ. ಎಲ್ಲರಿಗೂ ಅಂದೇ ಹೊಸ ಬಟ್ಟೆ ಕೊಡಿಸುತ್ತಾರೆ. ಮಕ್ಕಳಿಗೆ ಸಿಹಿ ತಿನ್ನಿಸುತ್ತಾರೆ. ಎಲ್ಲರೂ ಕೇಕ್‌ ಕತ್ತರಿಸಿ ಜನ್ಮದಿನ ಆಚರಿಸುತ್ತಾರೆ. ಆ ಮೂಲಕ ಸಾಮೂಹಿಕವಾಗಿ ಜನ್ಮದಿನ ಆಚರಿಸುತ್ತಾರೆ. ಇದರಿಂದಾಗಿ ಇವರ ಕುಟುಂಬವು ಕಳೆದ ಜುಲೈನಲ್ಲಿ ಗಿನ್ನಿಸ್‌ ವಿಶ್ವ ದಾಖಲೆಗೆ ಭಾಜನವಾಗಿದೆ.

ಇದನ್ನೂ ಓದಿ: Viral News: ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದು 90 ಸಾವಿರ ರೂ. ಮೌಲ್ಯದ ಲೆನ್ಸ್‌, ಸಿಕ್ಕಿದ್ದು ಈ 150 ರೂ. ವಸ್ತು!

ದಾಖಲೆ ಇಲ್ಲಿಗೇ ಮುಗಿಯುವುದಿಲ್ಲ

ಖಂಡಿತವಾಗಿಯೂ ಹೌದು. ಇವರ ಕುಟುಂಬದ ದಾಖಲೆ ಇಲ್ಲಿಗೇ ಮುಗಿಯುವುದಿಲ್ಲ. ಆಮೀರ್‌ ಹಾಗೂ ಖುದೇಜಾ ಮದುವೆಯಾಗಿದ್ದು ಕೂಡ 1991ರ ಆಗಸ್ಟ್‌ 1ರಂದೇ. ಅಷ್ಟೇ ಅಲ್ಲ, ಇವರ ಕುಟುಂಬದಲ್ಲಿ ಎರಡು ಬಾರಿ ಅವಳಿ ಮಕ್ಕಳು ಹುಟ್ಟಿವೆ. ಮೊದಲು ಅಮ್ಮರ್‌ ಹಾಗೂ ಅಹ್ಮರ್‌ ಎಂಬ ಅವಳಿ ಗಂಡು ಮಕ್ಕಳು ಹುಟ್ಟಿವೆ. ಇದಾದ ಬಳಿಕ ಸೌಸಿ ಹಾಗೂ ಸಪ್ನಾ ಎಂಬ ಅವಳಿ ಹೆಣ್ಣು ಮಕ್ಕಳು ಜನಿಸಿವೆ. ಇದು ಒಂದೇ ಕುಟುಂಬದಲ್ಲಿ ಅತಿ ಹೆಚ್ಚು ಅವಳಿಗಳು ಜನಿಸಿದ ವಿಶ್ವ ದಾಖಲೆಯನ್ನು ಸರಿಗಟ್ಟಿದಂತಾಗಿದೆ. ಇದರ ಕುರಿತು ಆಮೀರ್‌ ಅಲಿಯನ್ನು ಕೇಳಿದಾಗ, “ಇದು ನನಗೂ ಅಚ್ಚರಿ ಎನಿಸುತ್ತದೆ. ಇದೆಲ್ಲ ಅಲ್ಲಾನ ಕೃಪೆ” ಎಂದು ಹೇಳಿ ನಗುತ್ತಾರೆ.

Exit mobile version