ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಕಟುವಾಗಿ ಟೀಕಿಸುವವರು ಒಬ್ಬೊಬ್ಬರಾಗಿ ನಿಗೂಢವಾಗಿ ಸಾವಿಗೀಡಾಗುತ್ತಿದ್ದಾರೆ!
ಒಡಿಶಾದಲ್ಲೂ ಮೂವರು ರಷ್ಯನ್ನರು ಎರಡೇ ವಾರದ ಅವಧಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರಲ್ಲಿ ಒಬ್ಬರು ಪಾವೆಲ್ ಆ್ಯಂಟೋವ್. ರಷ್ಯಾದ ಸಂಸದ ಹಾಗೂ ಬಿಲಿಯನೇರ್ ಉದ್ಯಮಿ. ಉಕ್ರೇನ್ ವಿರುದ್ಧ ಯುದ್ಧ ನಡೆಸಿದ್ದಕ್ಕಾಗಿ ಪುಟಿನ್ ಅವರನ್ನು ರಷ್ಯಾದ ಭಯೋತ್ಪಾದಕ ಎಂದೇ ಟೀಕಿಸಿದ್ದರು. ಬಳಿಕ ಆ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದರೂ, ನಿಗೂಢವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಜತೆಗೆ ಅವರ ಆಪ್ತ ಸಹಾಯಕ ವ್ಲಾಡಿಮಿರ್ ಬೈಡನೋವ್ ಮೃತಪಟ್ಟಿದ್ದಾರೆ. ಇದೀಗ ಹಡಗಿನಲ್ಲಿ ಒಡಿಶಾಕ್ಕೆ ಬರುತ್ತಿದ್ದ ಸರ್ಗಿ ಮಿಲಾಯ್‌ಕೋವ್ (51) ಎಂಬುವರೂ ನಿಗೂಢವಾಗಿ ಬದುಕಿಗೆ ವಿದಾಯ ಹೇಳಿದ್ದಾರೆ! ಇನ್ನೂ ಹಲವಾರು ಮಂದಿ ಪುಟಿನ್ ವಿರೋಧಿಗಳು ಸಂಶಯಾಸ್ಪದ ಸನ್ನಿವೇಶದಲ್ಲಿ ಅಕಾಲಿಕ ನಿಧನ ಹೊಂದಿದ್ದಾರೆ. ಹತರಾಗಿದ್ದಾರೆ. ಈ ಕುರಿತ ವಿವರಗಳನ್ನು ನೋಡೋಣ.
ಒಡಿಶಾ ಹೋಟೆಲ್‌ನಲ್ಲಿ ರಷ್ಯಾ ಸಂಸದ ಪಾವೆಲ್ ಆ್ಯಂಟೋವ್ ನಿಗೂಢ ಸಾವು ( ಡಿಸೆಂಬರ್ 2022)
ಒಡಿಶಾದ ರಾಯಗಡ ಜಿಲ್ಲೆಯ ಒಂದೇ ಹೋಟೆಲ್‌ನಲ್ಲಿ ರಷ್ಯಾ ಸಂಸದ ಪಾವೆಲ್ ಆ್ಯಂಟೋವ್ ಹಾಗೂ ಅವರ ಆಪ್ತ ವ್ಲಾಡಿಮಿರ್ ಬುಡನೋವ್ ಅವರು ಮೃತಪಟ್ಟಿದ್ದಾರೆ. 2022ರ ಡಿಸೆಂಬರ್ ಕೊನೆಯ ವಾರ, ಎರಡೇ ದಿನದ ಅಂತರದಲ್ಲಿ ಇಬ್ಬರೂ ಮೃತಪಟ್ಟಿದ್ದರು. ಪಾವೆಲ್ ಆ್ಯಂಟೋವ್ ಹೋಟೆಲ್‌ನ ಕಿಟಿಕಿಯಿಂದ ಕೆಳಕ್ಕೆ ಬಿದ್ದು ಸಾವಿಗೀಡಾಗಿದ್ದಾರೆ ಎಂಬ ವರದಿಯೂ ಇದೆ.
ಪಾವೆಲ್ ಅವರು ತಮ್ಮ 65ನೇ ಜನ್ಮದಿನ ಆಚರಿಸಲು ಒಡಿಶಾ ಪ್ರವಾಸ ಕೈಗೊಂಡಿದ್ದರು. ಇವರೆಲ್ಲರೂ ಉಕ್ರೇನ್ ಮೇಲೆ ರಷ್ಯಾ ಮಾಡಿರುವ ಆಕ್ರಮಣವನ್ನು ಖಂಡಿಸಿದ್ದರು.
ಒಡಿಶಾಕ್ಕೆ ಬರುತ್ತಿದ್ದ ಹಡಗಿನಲ್ಲಿ ರಷ್ಯಾ ಪ್ರಜೆಯ ಸಾವು, (ಜನವರಿ 2023 )
2023ರ ಜನವರಿ 2ರಂದು ರಷ್ಯಾದ ಮತ್ತೊಬ್ಬ ಪ್ರಜೆ, ಒಡಿಶಾದ ಪರದೀಪ್ ಬಂದರಿನ ಸಮೀಪ, ಹಡಗಿನಲ್ಲಿಯೇ ಮೃತಪಟ್ಟಿದ್ದಾರೆ. ಇವರ ಹೆಸರು ಸೆರ್ಗೆಯ್ ಮಿಲಿಯಕೋವ್ ಎಂದಾಗಿದ್ದು, 50ವರ್ಷ ವಯಸ್ಸಾಗಿದೆ. ಹಡಗಿನಲ್ಲಿ ಮುಖ್ಯ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಬಂದಿಲ್ಲ.
ರವಿಲ್ ಮ್ಯಾಗ್ನೋವ್, ಸೆಪ್ಟೆಂಬರ್ 2022, ಮಾಸ್ಕೊ ಆಸ್ಪತ್ರೆಯಲ್ಲಿ ಕಿಟಿಕಿಯಿಂದ ಬಿದ್ದು ಸಾವು:
ರಷ್ಯಾದ ಲುಕೋಯಿಲ್ ತೈಲ ಕಂಪನಿಯ ಅಧ್ಯಕ್ಷ ರವಿಲ್ ಮ್ಯಾಗ್ನೋವ್ (67) ಬಹಿರಂಗವಾಗಿಯೇ ಉಕ್ರೇನ್ ವಿರುದ್ಧದ ರಷ್ಯಾ ಸಮರಕ್ಕಾಗಿ ವ್ಲಾಡಿಮಿರ್ ಪುಟಿನ್ ಅವರನ್ನು ಟೀಕಿಸುತ್ತಿದ್ದರು. ಸಂಘರ್ಷವನ್ನು ಶೀಘ್ರ ಕೊನೆಗೊಳಿಸುವಂತೆ ಅವರ ತೈಲ ಕಂಪನಿ ಒತ್ತಾಯಿಸಿತ್ತು. ಮ್ಯಾಗ್ನೋವ್ ಕೂಡ ಮಾಸ್ಕೊದಲ್ಲಿ 2022ರ ಸೆಪ್ಟೆಂಬರ್‌ನಲ್ಲಿ ನಿಗೂಢವಾಗಿ ಕಿಟಿಕಿಯಿಂದ ಕೆಳಕ್ಕೆ ಬಿದ್ದು ಸಾವಿಗೀಡಾಗಿದ್ದರು.
ಡಾನ್ ರ‍್ಯಾಪೊಪೋರ್ಟ್, ಆಗಸ್ಟ್ 2022 : ಅಪಾರ್ಟ್‌ಮೆಂಟ್ ಎದುರು ಶವವಾಗಿದ್ದ ಪುಟಿನ್ ಟೀಕಾಕಾರ
ರಷ್ಯಾ-ಉಕ್ರೇನ್ ಸಮರವನ್ನು ಸಾರ್ವಜನಿಕವಾಗಿ ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದ ಉದ್ಯಮಿ ಡಾನ್ ರ‍್ಯಾಪೊಪೋರ್ಟ್ ಅವರು ಕಳೆದ ವರ್ಷ ಆಗಸ್ಟ್‌ನಲ್ಲಿ ವಾಷಿಂಗ್ಟನ್‌ನಲ್ಲಿ ಅಪಾರ್ಟ್‌ಮೆಂಟ್ ಒಂದರ ಎದುರು ಹೆಣವಾಗಿ ಬಿದ್ದಿದ್ದರು.
ಮಿಖಾಯಿಲ್ ಲೆಸಿನ್: ಶ್ವೇತಭವನಕ್ಕೆ ಸಮೀಪದ ಹೋಟೆಲ್‌ನಲ್ಲಿ ಮೃತಪಟ್ಟಿದ್ದ ವಾರ್ತಾ ಸಚಿವ ಲೆಸಿನ್ (ನವೆಂಬರ್ 2016)
ರಷ್ಯಾದ ವಾರ್ತಾ ಸಚಿವರಾಗಿದ್ದ ಮಿಖಾಯಿಲ್ ಲೆಸಿನ್ 2016ರ ನವೆಂಬರ್‌ನಲ್ಲಿ ವಾಷಿಂಗ್ಟನ್‌ನಲ್ಲಿ ಶ್ವೇತಭವನಕ್ಕೆ ಸಮೀಪದ ಹೋಟೆಲ್‌ನಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು. ಮೊದಲಿಗೆ ಅವರಿಗೆ ಹೃದಯಾಘಾತ ಆಗಿರಬಹುದು ಎಂದು ಭಾವಿಸಲಾಗಿತ್ತು. ಆದರೆ ಬಳಿಕ ತಲೆಗೆ ಹೊಡೆತ ಬಿದ್ದು ಮೃತಪಟ್ಟಿದ್ದಾರೆ ಎಂದು ತನಿಖೆಯಲ್ಲಿ ಗೊತ್ತಾಗಿತ್ತು. ಸಾವಿಗೆ ಮುನ್ನ ಮದ್ಯ ಸೇವಿಸಿದ್ದರು. ಆದರೆ ಅದು ಅಸಹಜ ಸಾವಾಗಿತ್ತು.
ಗುಂಡಿನ ದಾಳಿಗೆ ಬಲಿಯಾಗಿದ್ದ ಮಾಜಿ ಉಪ ಪ್ರಧಾನಿ ಬೋರಿಸ್ ನೆಮ್ಟೋಸ್ವ್, ಫೆಬ್ರವರಿ 2015
ಬೋರಿಸ್ ನೆಮ್ಟೋಸ್ವ್ ಅಬರು ಬೋರಿಸ್ ಎಲ್ಸಿನ್ ಅವರು ಪ್ರಧಾನಿಯಾಗಿದ್ದಾಗ ಉಪ ಪ್ರಧಾನಿಯಾಗಿದ್ದವರು. ವ್ಲಾಡಿಮಿರ್ ಪುಟಿನ್ ಅವರ ಕಟು ಟೀಕಾಕಾರರಾಗಿದ್ದರು. ಉಕ್ರೇನ್ ವಿರುದ್ಧದ ದಮನಕಾರಿ ನೀತಿಯನ್ನೂ ಖಂಡಿಸಿದ್ದರು. ರೆಸ್ಟೋರೆಂಟ್ ಒಂದರಿಂದ ಮನೆಗೆ ಹಿಂತಿರುಗುತ್ತಿದ್ದಾಗ ಬೆನ್ನ ಹಿಂದಿನಿಂದ ಗುಂಡಿನ ದಾಳಿಗೆ ಅವರು ಬಲಿಯಾಗಿದ್ದರು.
ನೇಣು ಬಿಗಿದ ಸ್ಥಿತಿಯಲ್ಲಿ ಕೊನೆಯುಸಿರೆಳೆದಿದ್ದ ಪುಟಿನ್ ಟೀಕಾಕಾರ ಬೋರಿಸ್ ಬೆರೆಜೊವ್‌ಸ್ಕಿ, ಮಾರ್ಚ್ 2013:
ರಷ್ಯಾದ ಉದ್ಯಮಿ ಬೋರಿಸ್ ಬೆರೆಜೋವ್‌ಸ್ಕಿ ಅವರು ವ್ಲಾಡಿಮಿರ್ ಪುಟಿನ್ ಅವರನ್ನು ಸದಾ ಟೀಕಿಸುತ್ತಿದ್ದರು. ಸಂಘರ್ಷಕ್ಕಿಳಿದು ಬ್ರಿಟನ್‌ಗೆ ಗಡಿಪಾರಾಗಿದ್ದರು. ಅಲ್ಲಿಂದಲೂ ಪುಟಿನ್ ವಿರುದ್ಧ ಹೋರಾಟ ಮುಂದುವರಿಸಿದ್ದರು. ಆದರೆ ಬರ್ಕ್‌ಶೈರ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪ್ರಾಣ ಕಳೆದುಕೊಂಡಿದ್ದರು.
ಪತ್ರಕರ್ತೆ ನಟಾಲಿಯಾ ಎಸ್ಟೆಮಿರೋವಾ ಹತ್ಯೆ, ಜುಲೈ 2009
ರಷ್ಯಾದ ಪತ್ರಕರ್ತೆ ನಟಾಲಿಯಾ ಎಸ್ಟೆಮಿರೋವಾ ರಷ್ಯಾದ ಪ್ರಾಂತ್ಯ ಚೆಚೆನ್ಯಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದರ ಬಗ್ಗೆ ವಿಶೇಷ ವರದಿಗಳನ್ನು ಬರೆದಿದ್ದರು. ಅವರನ್ನು ಮನೆಯಿಂದಲೇ ಅಪಹರಿಸಿ ತಲೆಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಹಂತಕರ ಪತ್ತೆಯೂ ಆಗಿರಲಿಲ್ಲ.
ವಿಷ ಬೆರೆಸಿದ್ದ ಚಹಾ ಕುಡಿದು ಸಾವಿಗೀಡಾಗಿದ್ದ ಅಲೆಕ್ಸಾಂಡರ್ ಲೆಟ್ವಿನೆನ್ಕೊ, ನವೆಂಬರ್ 2006:
ರಷ್ಯಾದ ಸೆಕ್ಯುರಿಟಿ ಏಜೆನ್ಸಿ ಕೆಜಿಬಿಯ ಮಾಜಿ ಏಜೆಂಟ್ ಆಗಿದ್ದ ಅಲೆಕ್ಸಾಂಡರ್ ಲೆಟ್ವಿನೆನ್ಕೊ ಅವರು ಲಂಡನ್‌ನ ಹೋಟೆಲ್‌ನಲ್ಲಿ ವಿಷ ಬೆರೆಸಿದ್ದ ಒಂದು ಕಪ್ ಚಹಾ ಕುಡಿದ ಬಳಿಕ ಅಸ್ವಸ್ಥರಾಗಿದ್ದರು. ಮೂರು ವಾರಗಳ ಬಳಿಕ ನಿಧನರಾಗಿದ್ದರು. ಅಲೆಕ್ಸಾಂಡರ್ ಅವರು ಪುಟಿನ್ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು. ಪತ್ರಕರ್ತೆಯ ಹತ್ಯೆ ಮತ್ತಿತರ ಪ್ರಕರಣಗಳಲ್ಲಿ ಪುಟಿನ್ ಆರೋಪಿ ಎಂದು ದೂರಿದ್ದರು.
ಲಿಫ್ಟ್‌ನಲ್ಲಿ ಗುಂಡಿನ ದಾಳಿಗೆ ಬಲಿಯಾಗಿದ್ದ ಪತ್ರಕರ್ತೆ ಅನ್ನಾ ಪೊಲಿಟ್ಕೋವ್‌ಸ್ಕಯಾ, ಅಕ್ಟೋಬರ್ 2006
ರಷ್ಯಾದ ಪತ್ರಕರ್ತೆ ಅನ್ನಾ ಪೊಲಿಟ್ಕೋವ್‌ಸ್ಕಯಾ ಪುಟಿನ್ ಅವರನ್ನು ಟೀಕಿಸಿ ಪುಟಿನ್ಸ್ ರಷ್ಯಾ ಎಂಬ ಪುಸ್ತಕ ಬರೆದಿದ್ದರು. ಬಾಡಿಗೆ ಹಂತಕರನ್ನು ಕಳಿಸಿ ಅವರ ಫ್ಲ್ಯಾಟ್‌ನ ಲಿಫ್ಟ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಐವರು ಹಂತಕರನ್ನು ದೋಷಿಗಳೆಂದು ಕೋರ್ಟ್ ತೀರ್ಪು ನೀಡಿತ್ತು. ಈ ಬಾಡಿಗೆ ಹಂತಕರಿಗೆ ಅಪರಿಚಿತ ವ್ಯಕ್ತಿ 150,000 ಡಾಲರ್ ಕೊಟ್ಟಿದ್ದ.
ಜೈಲಿನಲ್ಲಿದ್ದಾರೆ ಟೀಕಾಕಾರರು: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಟೀಕಿಸಿದ ಅನೇಕ ಮಂದಿ ಈಗ ರಾಜಕೀಯ ಕೈದಿಗಳಾಗಿ ಜೈಲಿನಲ್ಲಿದ್ದಾರೆ. ಅವರಲ್ಲಿ ಹಲವಾರು ಮಂದಿ ಜೈಲಿನಲ್ಲಿದ್ದುಕೊಂಡೇ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಬಲಿಗರು ಕಳಿಸುವ ಪತ್ರಗಳನ್ನು ಜೈಲಿನ ಕೊಠಡಿಗಳಲ್ಲಿ ನೇತು ಹಾಕುವ ಮೂಲಕ ಕೆಲವರು ಪ್ರತಿಭಟಿಸಿದ್ದಾರೆ. ಉಕ್ರೇನ್ ಮೇಲಿನ ದಾಳಿ ಟೀಕಿಸಿದ್ದ ಕಲಾವಿದ ಕ್ರೊಮೋವ್ ರಷ್ಯಾದಿಂದ ನ್ಯೂಯಾರ್ಕ್‌ಗೆ ಪರಾರಿಯಾಗಿದ್ದರು. ಅಲ್ಲೂ ತೀವ್ರ ಸುಟ್ಟಗಾಯಗಳೊಂದಿಗೆ ನಿಗೂಢವಾಗಿ ಸಾವಿಗೀಡಾಗಿದ್ದರು.