ಅರ್ಜೆಂಟೀನಾ: ವ್ಯಕ್ತಿಯೊಬ್ಬರನ್ನು ಅವರು ಸಾಕಿದ 17 ನಾಯಿಗಳೇ ತಿಂದಿರುವ ಆಘಾತಕಾರಿ ಘಟನೆ ಅರ್ಜೆಂಟೀನಾದಲ್ಲಿ (Argentina) ನಡೆದಿದೆ. ಅರ್ಜೆಂಟೀನಾದ ತನ್ನ ಮನೆಯೊಳಗೆ ವ್ಯಕ್ತಿಯೊಬ್ಬರ ಅವಶೇಷಗಳು ಪತ್ತೆಯಾಗಿದ್ದು, ಅವರನ್ನು 17 ಹಸಿದ ನಾಯಿಗಳ ಗುಂಪು ತಿಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 13ರಂದು ಮೆಂಡೋಜಾ (Mendoza) ಪ್ರಾಂತ್ಯದ ಗ್ವಾಯಿಮಲ್ಲೆನ್‌ನ (Guaymallen) ಕಾರ್ಲೋಸ್ ಟೋನಿನಿ ಅವರ ಮನೆಯಿಂದ ಅಸಹನೀಯ ದುರ್ವಾಸನೆ ಬರುತಿತ್ತು. ಈ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಮನೆಯೊಳಗೆ ಪ್ರವೇಶಿಸಿದಾಗ ನೆಲದ ಮೇಲೆ ಬಿದ್ದ ತೊಡೆಯ ಮೂಳೆಗಳು ಕಂಡು ಬಂದಿದ್ದವು. ಜತೆಗೆ ಟಿ-ಶರ್ಟ್ ಬಳಿ ಎಂಟು ಇಂಚಿನ ಎರಡು ಸಣ್ಣ ಮೂಳೆಗಳು ಪತ್ತೆಯಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ʼʼಅನಾರೋಗ್ಯದ ಕಾರಣದಿಂದ ಟೋನಿನಿ ಮೃತಪಟ್ಟಿದ್ದಾರೆ. ಅವರು ಒಂಟಿಯಾಗಿ ವಾಸಿಸುತ್ತಿದ್ದರಿಂದ ಅವರು ಸಾಕಿದ ನಾಯಿಗಳಿಗೆ ಯಾರೂ ಆಹಾರ ನೀಡಿರಲಿಲ್ಲ. ಇದರಿಂದ ಹಸಿದ ನಾಯಿಗಳು 65 ವರ್ಷದ ಟೋನಿನಿ ಅವರ ಮೃತದೇಹವನ್ನು ತಿಂದಿವೆʼʼ ಎಂದು ಪೊಲೀಸರು ಊಹಿಸಿದ್ದಾರೆ. ಎರಡು ವರ್ಷಗಳಿಂದ ತಂದೆಯೊಂದಿಗೆ ಸಂಪರ್ಕ ಇರಲಿಲ್ಲ ಎಂದು ಟೋನಿನಿ ಅವರ ಪುತ್ರಿ ಸುಸಾನಾ ಎಲಿಜಬೆತ್ ವಿಡೆಲಾ ಟೋನಿನಿ ಪೊಲೀಸರಿಗೆ ತಿಳಿಸಿದ್ದಾರೆ. ʼʼಟೋನಿನಿ ಒಂಟಿಯಾಗಿ, ತಮ್ಮ ನಾಯಿಯೊಂದಿಗೆ ವಾಸಿಸುತ್ತಿದ್ದರುʼʼ ಎಂದು ನೆರೆ ಮನೆಯವರು ಮಾಹಿತಿ ನೀಡಿದ್ದಾರೆ. ʼʼಟೋನಿನಿ ಅವರ ಸಾವಿನ ನಿಖರ ಕಾರಣವನ್ನು ಕಂಡುಹಿಡಿಯಲು ಲಭಿಸಿದ ಅಲ್ಪ ಅವಶೇಷಗಳ ಪರೀಕ್ಷೆ ನಡೆಸಲಾಗುವುದು. ಮೇಲ್ನೋಟಕ್ಕೆ ಅವರ ಮೇಲೆ ಹಿಂಸೆ ನಡೆದಿರುವ ಕುರುಹುಗಳಿಲ್ಲ. ನಾಯಿಗಳು ಅವರ ಮೇಲೆ ದಾಳಿ ನಡೆಸಿಲ್ಲ. ಮೃತಪಟ್ಟ ನಂತರವೇ ನಾಯಿಗಳ ಗುಂಪು ಅವರನ್ನು ಕಡಿದಿವೆʼʼ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ರಷ್ಯಾದಲ್ಲೂ ನಡೆದಿತ್ತು
ರಷ್ಯಾದಲ್ಲಿ ನಡೆದ ನಾಯಿಗಳ ಭಯಾನಕ ದಾಳಿಯಲ್ಲಿ ಒಂಬತ್ತು ವರ್ಷದ ಬಾಲಕಿ ಗಾಯಗೊಂಡ ಕೆಲವೇ ಗಂಟೆಗಳ ನಂತರ ಈ ಘಟನೆ ವರದಿಯಾಗಿದೆ. ಬೀದಿ ನಾಯಿಗಳೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸಿದ ಬಾಲಕಿ ದಾರುಣವಾಗಿ ಗಾಯಗೊಂಡಿದ್ದಾಳೆ. ಬಾಲಕಿ ಮೇಲೆ ಭೀಕರ ದಾಳಿ ನಡೆಸಿ ಉಗುರುಗಳಿಂದ ಗಾಯಗೊಳಿಸಿವೆ ಎಂದು ಮೂಲಗಳು ತಿಳಿಸಿವೆ.
ಏನಾಗಿತ್ತು?
ರಷ್ಯಾದ ನೊವಿ ಉರೆಂಗೊಯ್‌ನಲ್ಲಿ ದಶಾ ಎನ್ನುವ ಶಾಲಾ ಬಾಲಕಿ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಳು. ಆಗ ಅವಳಿಗೆ ರಸ್ತೆ ಬದಿಯಿದ್ದ ನಾಲ್ಕು ದೊಡ್ಡ ಗಾತ್ರದ ನಾಯಿಗಳು ಕಾಣಿಸಿದವು. ಅವುಗಳ ಬಳಿ ಅವಳು ತೆರಳುತ್ತಿದ್ದಂತೆ ಆಕ್ರಮಣ ಮಾಡಿದ ಮೂರು ನಾಯಿಗಳು ಅವಳನ್ನು ನೆಲಕ್ಕೆ ಬೀಳಿಸಿ ಕಡಿದವು. ಒಂದು ನಾಯಿ ಅವಳ ತಲೆಯ ಮೇಲೆ ದಾಳಿ ಮಾಡಿದರೆ ಉಳಿದ ಮೂರು ಆಕೆಯ ದೇಹಕ್ಕೆ ಕಡಿದವು. ಕೂಡಲೇ ವ್ಯಕ್ತಿಯೊಬ್ಬರು ಧಾವಿಸಿ ನಾಯಿಗಳ ಗುಂಪನ್ನು ಓಡಿಸಿ ಬಾಲಕಿಯ ನೆರವಿಗೆ ಬಂದಿದ್ದರು. ಸದ್ಯ ಬಾಲಕಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ರಷ್ಯಾದಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಸಂಖ್ಯೆ ಹೆಚ್ಚಿದ್ದು, ಮಕ್ಕಳನ್ನು ಬಗ್ಗೆ ಎಚ್ಚರಿಕೆ ವಹಿಸಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Heart Attack: ಸಂಸತ್ತಿನಲ್ಲಿ ಮಾತನಾಡುತ್ತಿರುವಾಗಲೇ ಹೃದಯಾಘಾತವಾಗಿ ಮೃತಪಟ್ಟ ಸಂಸದ