Site icon Vistara News

Pakistan Air Strikes: ಆಫ್ಘನ್ ಸೇನಾಪಡೆಗಳಿಂದ ಪಾಕ್ ವಿರುದ್ಧ ಪ್ರತಿಕಾರ ದಾಳಿ

pak air strike

pak air strike

ಕಾಬೂಲ್:‌ ಪೂರ್ವ ಅಫ್ಘಾನಿಸ್ತಾನ ಪ್ರದೇಶದ ಮೇಲೆ ಪಾಕಿಸ್ತಾನ ಸೋಮವಾರ (ಮಾರ್ಚ್‌ 18) ಬೆಳಗ್ಗೆ ನಡೆಸಿದ ವೈಮಾನಿಕ ದಾಳಿ (Pakistan Air Strikes)ಗೆ ಅಫ್ಘಾನ್ ಪಡೆಗಳು ಬಲವಾಗಿ ಪ್ರತೀಕಾರ ತೀರಿಸಿಕೊಳ್ಳುತ್ತಿವೆ. ʼʼಅಫ್ಘಾನ್ ರಾಷ್ಟ್ರೀಯ ರಕ್ಷಣಾ ಪಡೆಗಳು ತಮ್ಮ ನೆಲದಲ್ಲಿ ನಡೆದ ಪಾಕಿಸ್ತಾನದ ಅತಿಕ್ರಮಣಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿವೆʼʼ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ ಎರಡು ವಾಯುದಾಳಿಯಲ್ಲಿ ಎಂಟು ಜನ ಮೃತಪಟ್ಟಿದ್ದರು.

ಪ್ರತೀಕಾರದ ಭಾಗವಾಗಿ ಅಫ್ಘಾನ್ ಪಡೆಗಳು “ಡುರಾಂಡ್ ರೇಖೆಯ ಉದ್ದಕ್ಕೂ ಹಲವಾರು ಕಡೆಗಳಲ್ಲಿ ಪಾಕಿಸ್ತಾನಿ ಆಕ್ರಮಣಕಾರರ ವಿರುದ್ಧ ಗುಂಡು ಹಾರಿಸಿವೆʼʼ ಎಂದು ವರದಿಯೊಂದು ತಿಳಿಸಿದೆ. ಸೋಮವಾರ ನಡೆದ ಪಾಕಿಸ್ತಾನದ ದಾಳಿಯ ಬೆನ್ನಲ್ಲೇ, ತಾಲಿಬಾನ್‌ ಆಡಳಿತವು, “ಅಫಘಾನಿಸ್ತಾನದ ಖೋಸ್ಟ್‌ ಹಾಗೂ ಪಕ್ತಿಕಾ ಪ್ರಾಂತ್ಯಗಳ ಮೇಲೆ ಪಾಕಿಸ್ತಾನವು ಎರಡು ವಾಯುದಾಳಿ ನಡೆಸಿದೆ. ಐವರು ಮಹಿಳೆಯರು, ಮೂವರು ಮಕ್ಕಳು ಸೇರಿ ಎಂಟು ಮಂದಿ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಅಪಘಾನಿಸ್ತಾನದ ಪ್ರದೇಶದ ಮೇಲೆ ಬೇರೆ ಯಾರೂ ಹಕ್ಕು ಚಲಾಯಿಸುವುದು, ದಾಳಿ ಮಾಡುವುದನ್ನು ನಾವು ಸಹಿಸುವುದಿಲ್ಲ. ಪಾಕಿಸ್ತಾನದ ದಾಳಿಯನ್ನು ನಾವು ಖಂಡಿಸುತ್ತೇವೆ ಹಾಗೂ ಅಫಘಾನಿಸ್ತಾನದ ಭದ್ರತೆಯ ವಿಚಾರದಲ್ಲಿ ನಾವು ಎಂದಿಗೂ ರಾಜಿ ಆಗುವುದಿಲ್ಲ” ಎಂದು ಎಚ್ಚರಿಕೆ ನೀಡಿತ್ತು. ಅದರಂತೆ ಈಗ ಕ್ರಮ ಕೈಗೊಂಡಿದೆ.

ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯ ಬುಡಕಟ್ಟು ಜಿಲ್ಲೆಗಳಾದ ಕುರ್ರಾಮ್, ಉತ್ತರ ವಜಿರಿಸ್ತಾನ್ ಮತ್ತು ದಕ್ಷಿಣ ವಜಿರಿಸ್ತಾನ್‌ನ ಮೂರು ಪ್ರದೇಶಗಳಲ್ಲಿ ಪಾಕಿಸ್ತಾನವನ್ನು ಗುರಿಯಾಗಿಸಿ ಅಫ್ಘಾನ್ ಪಡೆಗಳು ಗುಂಡಿನ ದಾಳಿ ನಡೆಸುತ್ತಿವೆ ಎನ್ನಲಾಗಿದೆ. ಸೋಮವಾರ ಬೆಳಗ್ಗೆ ವೈಮಾನಿಕ ದಾಳಿಯ ನಂತರ ಪಾಕಿಸ್ತಾನದ ಭೂ ಪ್ರದೇಶದಲ್ಲಿ ಅನೇಕ ಮೋರ್ಟಾರ್‌ ಶೆಲ್‌ಗಳು ಬಿದ್ದಿವೆ.

ತಾಲಿಬಾನ್ ಆಡಳಿತದಿಂದ ಟೀಕೆ

ಪಾಕಿಸ್ತಾನದ ವೈಮಾನಿಕ ದಾಳಿಯನ್ನು ತಾಲಿಬಾನ್ ಆಡಳಿತವು ಟೀಕಿಸಿದೆ ಮತ್ತು ಇದಕ್ಕೆ ಪ್ರತೀಕಾರ ನಡೆಯಲಿದೆ ಎಂದು ಹೇಳಿದೆ. ವೈಮಾನಿಕ ದಾಳಿಯಲ್ಲಿ ಮುಗ್ಧ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಆರೋಪಿಸಿದೆ ಮತ್ತು ವೈಮಾನಿಕ ದಾಳಿಯನ್ನು ‘ಅಜಾಗರೂಕತೆ’ ಎಂದು ಕರೆದಿದೆ.

ಈ ದಾಳಿಗಳ ಹಿನ್ನೆಲೆಯಲ್ಲಿ ಪಾಕಿಸ್ತಾನವು ಪಂಜಾಬ್, ಖೈಬರ್ ಪಖ್ತುನ್ಖ್ವಾ, ಸಿಂಧ್ ಮತ್ತು ಬಲೂಚಿಸ್ತಾನದ ಪ್ರಾಂತೀಯ ಸರ್ಕಾರಗಳಿಗೆ ಎಚ್ಚರಿಕೆ ನೀಡಿದೆ. ಪಾಕಿಸ್ತಾನದಿಂದ ಅಕ್ರಮ ಅಫ್ಘಾನ್ ನಾಗರಿಕರನ್ನು ಮರಳಿ ಕರೆತರುವ ಎರಡನೇ ಹಂತದ ಕಾರ್ಯಾಚರಣೆ ಮತ್ತು ರಂಜಾನ್ ತಿಂಗಳ ನಡುವೆ ಈ ದಾಳಿಗಳು ನಡೆದಿವೆ.

ಇದನ್ನೂ ಓದಿ: Plane Crash: ಅಫಘಾನಿಸ್ತಾನದಲ್ಲಿ ಪತನಗೊಂಡ ವಿಮಾನ ಭಾರತದಲ್ಲ; ಕೇಂದ್ರ ಸ್ಪಷ್ಟನೆ

ದಾಳಿ ನಿರಾಕರಿಸಿದ್ದ ತಾಲಿಬಾನ್‌

ಪಾಕಿಸ್ತಾನ ಹಾಗೂ ಅಫಘಾನಿಸ್ತಾನದ ಮಧ್ಯೆ ಆಗಾಗ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ. ಪಾಕಿಸ್ತಾನದಲ್ಲಿರುವ ಉಗ್ರರು ಆಫ್ಘನ್‌ ಮೇಲೆ, ಆಫ್ಘನ್‌ನಲ್ಲಿರುವ ತಾಲಿಬಾನಿಗಳು ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತವೆ. ಇದರ ಭಾಗವಾಗಿಯೇ ಅಫಘಾನಿಸ್ತಾನದಲ್ಲಿರುವ ಪಾಕಿಸ್ತಾನಿ ತಾಲಿಬಾನಿಗಳು (TTP) ಪಾಕ್‌ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದವು. ಆದರೆ, ಅಫಘಾನಿಸ್ತಾನವು ಇದನ್ನು ನಿರಾಕರಿಸಿತ್ತು. “ತನ್ನ ದೇಶವನ್ನು ನಿಯಂತ್ರಿಸಿಕೊಳ್ಳಲು ಆಗದ ಪಾಕಿಸ್ತಾನ ಸುಖಾಸುಮ್ಮನೆ ನಮ್ಮ ಮೇಲೆ ಆರೋಪ ಮಾಡುವುದು ಸರಿಯಲ್ಲ” ಎಂದು ತಾಲಿಬಾನ್‌ ಆಡಳಿತ ಸ್ಪಷ್ಟಪಡಿಸಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version