ಇಸ್ಲಾಮಾಬಾದ್: ಪಾಕಿಸ್ತಾನ ಚುನಾವಣೆಯ ಮತಗಳ ಎಣಿಕೆ (Pakistan Election Result) ವಿಳಂಬವಾಗುತ್ತಿದ್ದು, ಮತ ಎಣಿಕೆಯಲ್ಲಿ (Pakistan poll Result) ವಂಚನೆ ನಡೆಯುತ್ತಿದೆ ಎಂಬ ಅನುಮಾನ ಮೂಡಿದೆ. ಇದುವರೆಗೂ 53 ಸ್ಥಾನಗಳ ಫಲಿತಾಂಶ ಘೋಷಿಸಲಾಗಿದ್ದು, ಮಾಜಿ ಪ್ರಧಾನಿ ನವಾಜ್ ಷರೀಫ್ (Nawaz Sharif) ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಪಕ್ಷ 17 ಸ್ಥಾನಗಳನ್ನು ಗೆದ್ದುಕೊಂಡಿದೆ. ಇವರಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರ ಪಕ್ಷದಿಂದ ಬೆಂಬಲಿತರಾದ ಸ್ವತಂತ್ರ ಸ್ಪರ್ಧಿಗಳು ಪೈಪೋಟಿ ನೀಡುತ್ತಿದ್ದು, 18 ಕಡೆ ಗೆದ್ದಿದ್ದಾರೆ.
266 ಸದಸ್ಯರಿರುವ ಅಸೆಂಬ್ಲಿಗಾಗಿ ಚುನಾವಣಾ ಸಮರ ನಡೆದಿದೆ. ಪಾಕಿಸ್ತಾನದ ರಾಜಕೀಯ ಪ್ರಧಾನವಾಗಿ ಮೂರು ಪ್ರಮುಖ ಪಕ್ಷಗಳಿಂದ ರೂಪುಗೊಂಡಿದೆ: ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್), ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ), ಮತ್ತು ಬೆನಜೀರ್ ಭುಟ್ಟೋ ಅವರ ಪುತ್ರ ಬಿಲಾವಲ್ ಭುಟ್ಟೋ ಮುನ್ನಡೆಸುತ್ತಿರುವ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ). ಇಮ್ರಾನ್ ಖಾನ್ ಜೈಲಿನಲ್ಲಿದ್ದು, ಅವರ ಪಕ್ಷವನ್ನು ರಾಜಕೀಯ ಸ್ಪರ್ಧೆಯಿಂದ ನಿರ್ಬಂಧಿಸಲಾಗಿದೆ. ಹೀಗಾಗಿ ಇಮ್ರಾನ್ ಪಕ್ಷ ಸ್ವತಂತ್ರ ಅಭ್ಯರ್ಥಿಗಳನ್ನು ನಿಲ್ಲಿಸಿದೆ.
ಇದುವರೆಗೆ ಬಂದಿರುವ ಫಲಿತಾಂಶಗಳಲ್ಲಿ, ನವಾಜ್ ಷರೀಫ್ ಪಕ್ಷ 17 ಸೀಟುಗಳನ್ನು, ಇಮ್ರಾನ್ ಬೆಂಬಲಿತ ಸ್ಪರ್ಧಿಗಳು 14 ಸೀಟುಗಳನ್ನು, ಬಿಲಾವಲ್ ಭುಟ್ಟೋ ಪಕ್ಷ 12 ಸೀಟುಗಳನ್ನು ಗೆದ್ದುಕೊಂಡಿದೆ. ನವಾಜ್ ಷರೀಫ್ ಅವರು ಲಾಹೋರ್ ಮತಕ್ಷೇತ್ರದಲ್ಲಿ 50,000 ಮತಗಳ ಅಂತರದಿಂದ ಗೆದ್ದಿದ್ದಾರೆ. ಭಾರತದ ಪಾರ್ಲಿಮೆಂಟ್ ಮೇಲಿನ ಉಗ್ರ ದಾಳಿಯ ರೂವಾರಿ ಹಫೀಜ್ ಸಯೀದ್‌ನ ಮಗ ಲಾಹೋರ್‌ನಲ್ಲಿ ಸೋತಿದ್ದಾನೆ. ಗೆದ್ದ ಪ್ರಮುಖರಲ್ಲಿ ಮರಿಯಮ್ ನವಾಜ್, ಶೆಹಬಾಜ್ ಷರೀಫ್, ಬಿಲಾವಲ್ ಭುಟ್ಟೋ ಸೇರಿದ್ದಾರೆ.
ಪ್ರಸ್ತುತ ಫಲಿತಾಂಶಗಳು ಅನಿಶ್ಚಿತ ಸಂಸತ್ತು ರೂಪುಗೊಳ್ಳುವ ಸಾಧ್ಯತೆಯನ್ನು ತೋರಿಸಿವೆ. ನವಾಜ್ ಷರೀಫ್ ಅವರ ಬೆಂಬಲಕ್ಕೆ ಪಾಕಿಸ್ತಾನದ ಮಿಲಿಟರಿ ಇದೆ ಎಂದು ಹೇಳಲಾಗಿದೆ. ಮತ ಎಣಿಕೆ ವಿಳಂಬವಾಗುತ್ತಿದ್ದು, ಇದನ್ನು ಮಿಲಿಟರಿ ನಿಯಂತ್ರಿಸುತ್ತಿದೆ ಎಂದು ಸ್ವತಂತ್ರ ಅಭ್ಯರ್ಥಿಗಳು ಆಪಾದಿಸಿದ್ದಾರೆ. ʼʼನವಾಜ್ ಷರೀಫ್ ಇನ್ನಾದರೂ ಸೋಲು ಒಪ್ಪಿಕೊಳ್ಳಬೇಕು” ಎಂದು ಇಮ್ರಾನ್ ಖಾನ್ ಅವರ ಪಕ್ಷ ಹೇಳಿದೆ.
ಇದನ್ನೂ ಓದಿ: Pakistan Elections: ಇಂದು ಪಾಕಿಸ್ತಾನ ಚುನಾವಣೆ; ಇಮ್ರಾನ್ ಖಾನ್, ನವಾಜ್ ಷರೀಫ್ ಅದೃಷ್ಟ ಪರೀಕ್ಷೆ