ಇಸ್ಲಾಮಾಬಾದ್: ಹೆಚ್ಚುತ್ತಿರುವ ಉಗ್ರಗಾಮಿ ದಾಳಿಗಳು (terrorist attacks), ಆರ್ಥಿಕ ಬಿಕ್ಕಟ್ಟು (Economic crisis) ಮತ್ತು ಆಳವಾದ ಧ್ರುವೀಕೃತ ರಾಜಕೀಯ ವಾತಾವರಣದಿಂದ ಹಾನಿಗೊಳಗಾಗಿರುವ ಸನ್ನಿವೇಶದ ನಡುವೆ ಗುರುವಾರ ಪಾಕಿಸ್ತಾನದಲ್ಲಿ ಪಾರ್ಲಿಮೆಂಟ್ ಚುನಾವಣೆ (Pakistan Elections) ಮತದಾನ ನಡೆಯುತ್ತಿದೆ.
ಈ ಚುನಾವಣೆಯಲ್ಲಿ ಯಾವುದೇ ಸ್ಪಷ್ಟ ವಿಜೇತರು ಹೊರಹೊಮ್ಮುವ ಸಾಧ್ಯತೆಯಿಲ್ಲ ಎಂದು ಅನೇಕ ವಿಶ್ಲೇಷಕರು ಹೇಳಿದ್ದಾರೆ. ಕಳೆದ ರಾಷ್ಟ್ರೀಯ ಚುನಾವಣೆಯಲ್ಲಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷ ಜಯಗಳಿಸಿ ಇಮ್ರಾನ್ ಖಾನ್ (Imran Khan) ಪ್ರಧಾನಿಯಾಗಿದ್ದರು. ಈಗ ಅವರು ಜೈಲಿನಲ್ಲಿದ್ದಾರೆ, ಅವರ ಪಕ್ಷ ಹಾಗೂ ಮೂರು ಬಾರಿ ಪ್ರಧಾನಿಯಾಗಿರುವ ನವಾಜ್ ಷರೀಫ್ (Nawaz Sharif) ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್ (ಪಿಎಂಎಲ್-ಎನ್) ಅಭ್ಯರ್ಥಿಗಳ ನಡುವೆ ಪ್ರಮುಖ ಸ್ಪರ್ಧೆ ನಿರೀಕ್ಷಿಸಲಾಗಿದೆ. ನವಾಜ್ ಷರೀಫ್ ಅವರು ಪ್ರಧಾನಿ ಅಭ್ಯರ್ಥಿಗಳಲ್ಲಿ ಮುಂಚೂಣಿಯಲ್ಲಿ ಇದ್ದಾರೆ.
ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಪುತ್ರ, 35 ವರ್ಷದ ಬಿಲಾವಲ್ ಭುಟ್ಟೋ ಜರ್ದಾರಿ ಕೂಡ ಉನ್ನತ ಹುದ್ದೆಗಾಗಿ ಆಕ್ರಮಣಕಾರಿ ಪ್ರಚಾರವನ್ನು ನಡೆಸುತ್ತಿದ್ದಾರೆ.
ವಿಶ್ಲೇಷಕರು ಹೇಳುವಂತೆ ಚುನಾವಣೆಯಲ್ಲಿ ಯಾವುದೇ ಸ್ಪಷ್ಟ ವಿಜೇತರು ಇಲ್ಲದಿರಬಹುದು; ಆದರೆ ಪಾಕಿಸ್ತಾನದ ಸೈನ್ಯದ ಪ್ರಬಲ ಜನರಲ್‌ಗಳು ಮುಂದಿನ ಪಾತ್ರ ವಹಿಸಬಹುದು. ಪಾಕಿಸ್ತಾನದ ಸೇನೆಯು ತನ್ನ 76 ವರ್ಷಗಳ ಇತಿಹಾಸದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ರಾಷ್ಟ್ರದ ಮೇಲೆ ಪ್ರಾಬಲ್ಯ ಸಾಧಿಸಿದೆ. ಆದರೆ ಇತ್ತೀಚೆಗಿನ ಹಲವು ವರ್ಷಗಳಿಂದ ಅದು ರಾಜಕೀಯದಲ್ಲಿ ನೇರ ಹಸ್ತಕ್ಷೇಪ ಮಾಡಿಲ್ಲ.
“ಬಲಶಾಲಿ ಮಿಲಿಟರಿ ಮತ್ತು ಭದ್ರತಾ ಏಜೆನ್ಸಿಗಳು ಯಾವ ಕಡೆ ಇವೆ ಎಂಬುದು ನಿರ್ಣಾಯಕ ಅಂಶವಾಗಿದೆ. ಪಿಟಿಐ ಪರವಾಗಿ ಭಾರಿ ಮತದಾನ ಆದರೆ ಮಾತ್ರ ಅದು ಸನ್ನಿವೇಶವನ್ನು ಕೈಗೆತ್ತಿಕೊಳ್ಳಬಹುದು” ಎಂದು ಅಂಕಣಕಾರ ಅಬ್ಬಾಸ್ ನಾಸಿರ್ ಹೇಳಿದ್ದಾರೆ. ಇಮ್ರಾನ್ ಖಾನ್ ಅವರ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಸೇನೆಯು ಪ್ರಯತ್ನಿಸುತ್ತಿದೆ. ಷರೀಫ್ ಅವರನ್ನು ಸೇನೆಯ ಜನರಲ್‌ಗಳು ಬೆಂಬಲಿಸುತ್ತಿದ್ದಾರೆ ಎಂದು ವಿಶ್ಲೇಷಕರು ಹೇಳುತ್ತಾರೆ.
2018ರಲ್ಲಿ ನಡೆದ ಚುನಾವಣೆಯ ನಂತರ ಇಬ್ಬರು ಮಾಜಿ ಪ್ರಧಾನ ಮಂತ್ರಿಗಳೂ ತನಿಖೆಗೆ ಒಳಗಾಗಿದ್ದಾರೆ. ಖಾನ್ ಅವರಿಗೆ ಮಿಲಿಟರಿ ಬೆಂಬಲವಿದೆ ಎಂದು ನಂಬಲಾಗಿತ್ತು ಮತ್ತು ಷರೀಫ್ ಭ್ರಷ್ಟಾಚಾರದ ಆರೋಪದಲ್ಲಿ ಜೈಲಿನಲ್ಲಿದ್ದರು.
“ಐತಿಹಾಸಿಕವಾಗಿ, ಇಲ್ಲಿನ ಚುನಾವಣೆಗಳು ಸ್ಥಿರತೆಯನ್ನು ತಂದಿಲ್ಲ. ಇಲ್ಲಿನ ಆರ್ಥಿಕ ಸವಾಲುಗಳು ತುಂಬಾ ಗಂಭೀರವಾಗಿವೆ. ಪರಿಹಾರಗಳು ತುಂಬಾ ಯಾತನಾದಾಯಕ. ಅಧಿಕಾರಕ್ಕೆ ಬರುವವರು ಇದನ್ನು ಹೇಗೆ ಸ್ಥಿರಗೊಳಿಸುತ್ತಾರೆ ಎಂಬುದು ಗೊತ್ತಿಲ್ಲ” ಎಂದು ವಿಶ್ಲೇಷಕರು ಹೇಳುತ್ತಾರೆ.
ಚುನಾವಣೆಯು ಯಾರಿಗೂ ಸ್ಪಷ್ಟ ಬಹುಮತವನ್ನು ನೀಡದಿದ್ದರೆ, ವಿಶ್ಲೇಷಕರು ಊಹಿಸುವಂತೆ, ಬಹು ಸವಾಲುಗಳನ್ನು ನಿಭಾಯಿಸುವುದು ಕಷ್ಟ. ಪ್ರಮುಖವಾಗಿ ಮಾರ್ಚ್‌ನಲ್ಲಿ ಪ್ರಸ್ತುತ ಅವಧಿ ಮುಗಿದ ನಂತರ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) ಹೊಸ ಧನಸಹಾಯ ಪಡೆಯುವುದು ಕಷ್ಟಕರ.
ಇಂದು ನಡೆಯುವ ಮತದಾನವು ಸಂಜೆ 5 ಗಂಟೆಗೆ ಮುಕ್ತಾಯವಾಗುತ್ತದೆ. ಕೆಲವು ಗಂಟೆಗಳ ನಂತರ ಮೊದಲ ಅನಧಿಕೃತ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ. ಸ್ಪಷ್ಟ ಚಿತ್ರಣ ಶುಕ್ರವಾರ ಹೊರಹೊಮ್ಮುವ ಸಾಧ್ಯತೆಯಿದೆ.
336 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ 169 ಸ್ಥಾನಗಳು ಸರ್ಕಾರ ರಚನೆಗೆ ಅಗತ್ಯವಿದೆ. ಮತದಾರರು ನೇರವಾಗಿ 266 ಸದಸ್ಯರನ್ನು ಆಯ್ಕೆ ಮಾಡುತ್ತಾರೆ. 70 ಮೀಸಲು ಸ್ಥಾನಗಳಿವೆ; ಇವುಗಳಲ್ಲಿ 60 ಮಹಿಳೆಯರಿಗೆ ಮತ್ತು 10 ಮುಸ್ಲಿಮೇತರರಿಗೆ. ಪ್ರತಿ ಪಕ್ಷವೂ ಗೆದ್ದ ಸ್ಥಾನಗಳ ಸಂಖ್ಯೆಗೆ ಅನುಗುಣವಾಗಿ ಇದನ್ನು ಹಂಚಲಾಗುತ್ತದೆ.
ಹೆಚ್ಚುತ್ತಿರುವ ಉಗ್ರರ ದಾಳಿಯ ಭೀತಿಯ ನಡುವೆ ಚುನಾವಣೆಗಳು ನಡೆಯುತ್ತಿವೆ. ಚುನಾವಣೆಯ ಮುನ್ನಾದಿನದಂದು, ಬಲೂಚಿಸ್ತಾನದ ನೈಋತ್ಯ ಪ್ರಾಂತ್ಯದಲ್ಲಿ ಚುನಾವಣಾ ಕಚೇರಿಗಳಲ್ಲಿ ಎರಡು ಸ್ಫೋಟಗಳು 26 ಜನರನ್ನು ಕೊಂದವು.
ಇದನ್ನೂ ಓದಿ: Pakistan Election: ಪಾಕಿಸ್ತಾನದಲ್ಲಿ ಅವಳಿ ಬಾಂಬ್ ಸ್ಫೋಟ; 22ಕ್ಕೂ ಅಧಿಕ ಜನರ ಸಾವು