ವಾಷಿಂಗ್ಟನ್: ಜಗತ್ತಿನಲ್ಲೇ ಪಾಕಿಸ್ತಾನವು ಅತ್ಯಂತ ಅಪಾಯಕಾರಿ ರಾಷ್ಟ್ರ (Dangerous Pakistan) ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರು ಹೇಳಿದ್ದಾರೆ. ಪಾಕಿಸ್ತಾನದ ಜತೆಗೆ ಆರಂಭದಿಂದಲೂ ಅಮೆರಿಕ ಸಾಫ್ಟ್ ಕಾರ್ನರ್ ತೋರುತ್ತಲೇ ಬಂದಿದೆ. ಪಾಕಿಸ್ತಾನಕ್ಕೆ ಸೇನಾ ಸಹಾಯದ ಜತೆಗೆ ಆರ್ಥಿಕ ನೆರವು ನೀಡುತ್ತಾ ಬಂದಿದೆ. ಹಾಗಾಗಿ, ಹಾಲಿ ಅಧ್ಯಕ್ಷ ಜೋ ಬೈಡೆನ್ ಅವರು ಜಗತ್ತಿನಲ್ಲೇ ಪಾಕಿಸ್ತಾನವು ಅತ್ಯಂತ ಅಪಾಯಕಾರಿ ರಾಷ್ಟ್ರ ಎಂದು ಹೇಳಿರುವುದು ಚರ್ಚೆಗೆ ಕಾರಣವಾಗಿದೆ. ಅಮೆರಿಕದ ಈ ಹೇಳಿಕೆ ಪಾಕಿಸ್ತಾನದ ವಿದೇಶಾಂಗ ನೀತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯೂ ಇದೆ.
ಡೆಮಾಕ್ರಟಿಕ್ ಪಕ್ಷದ ಚುನಾವಣಾ ಪ್ರಚಾರ ಸಮಿತಿಯ ಸ್ವಾಗತ ಸಮಾರಂಭಲ್ಲಿ ಭಾಗವಹಿಸಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು, ಉಕ್ರೇನ್ ಮೇಲೆ ರಷ್ಯಾ ಯುದ್ಧ ನಡೆಸುತ್ತಿರುವುದರಿಂದ ಜಗತ್ತಿನ ಮೇಲೆ ಉಂಟಾಗುತ್ತಿರುವ ಪರಿಣಾಮ ಹಾಗೂ ಇತರ ರಾಷ್ಟ್ರಗಳೊಂದಿಗೆ ಅಮೆರಿಕ ಬಾಂಧವ್ಯ ಹಗಾಗೂ ಬದಲಾಗುತ್ತಿರುವ ಸಮಿಕರಣಗಳ ಕುರಿತು ವಿವರಣೆ ನೀಡಿದರು.
ಈ ವೇಳೆ, ಅಮೆರಿಕವು ಇತರ ರಾಷ್ಟ್ರಗಳ ಜತೆಗಿನ ಸಂಬಂಧವನ್ನು ವಿಶ್ಲೇಷಣೆ ಮಾಡಿದ ಬೈಡೆನ್, ಪಾಕಿಸ್ತಾನ ಅಪಾಯಕಾರಿ ರಾಷ್ಟ್ರವಾಗಿದೆ. ಜಗತ್ತಿನಲ್ಲೇ ಅತಿ ಅಪಾಯಕಾರಿ ರಾಷ್ಟ್ರ. ಅದೊಂದು ಅಣ್ವಸ್ತ್ರ ಸಜ್ಜಿತ ರಾಷ್ಟ್ರವಾಗಿದೆ ಎಂದು ಹೇಳಿದರು.
ಚೀನಾದೊಂದಿಗೆ ತಮ್ಮ ಸಂಬಂಧ ಬಗ್ಗೆ ಮಾಹಿತಿ ನೀಡಿದ ಬೈಡೆನ್, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಜತೆ ಸಂವಾದಕ್ಕೆ ನನ್ನನ್ನು ನಿಯೋಜಿಸಿದ್ದರು. ಹಾಗಾಗಿ, ಅವರ ಜತೆ ಹೆಚ್ಚಿನ ಸಮಯವನ್ನು ನಾನು ಕಳೆದಿದ್ದೇನೆ. ಯಾವುದೇ ದೇಶದ ಮುಖಂಡರಿಗಿಂತಲೂ ನಾನು ಜಿನ್‌ಪಿಂಗ್ ಅವರ ಜತೆ ಹೆಚ್ಚಿನ ಕಾಲ ಕಳೆದಿದ್ದೇನೆ ಎಂದು ಅವರು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ | ಪಾಕಿಸ್ತಾನಕ್ಕೆ ಎಫ್-16 ಪೂರೈಕೆಗೆ ಅಮೆರಿಕ ಒಪ್ಪಿದ ಬೆನ್ನಲ್ಲೇ, ವ್ಯಾಪಾರ ಮಾತುಕತೆ ಸ್ಥಗಿತಗೊಳಿಸಿದ ಭಾರತ