Site icon Vistara News

ಪಾಕಿಸ್ತಾನದಲ್ಲಿ ಆಜೀವ ಚುನಾವಣೆ ನಿಷೇಧ ರದ್ದು; ನವಾಜ್ ಷರೀಫ್‌ಗೆ ಲಾಟರಿ!

Nawaz Sharif

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಶಿಕ್ಷೆಗೆ ಗುರಿಯಾದ ವ್ಯಕ್ತಿಗಳು ಜೀವಮಾನವಿಡೀ ಚುನಾವಣೆ ಸ್ಪರ್ಧಿಸುವಂತಿಲ್ಲ (lifetime election ban) ಎಂಬ ನಿಯಮವನ್ನು ಅಲ್ಲಿನ ಸುಪ್ರೀಂ ಕೋರ್ಟ್ ರದ್ದು ಮಾಡಿದೆ(Pakistan Supreme Court). ಇದರೊಂದಿಗೆ ಮಾಜಿ ಪ್ರಧಾನಿ ನವಾಜ್ ಷರೀಫ್ (Ex PM Nawaz Sharif) ಅವರ ಚುನಾವಣಾ ಸ್ಫರ್ಧೆ ಹಾದಿ ಸುಗಮವಾಗಿದೆ. ಮುಂದಿನ ತಿಂಗಳು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ(Pakistan election). ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಫೇಜ್ ಇಸಾ ಅವರು ನ್ಯಾಯಾಲಯದ ಜಾಲತಾಣದಲ್ಲಿ ತಮ್ಮ ಆದೇಶವನ್ನು ಪ್ರಕಟಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮೂರು ಬಾರಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರು ನಾಲ್ಕು ವರ್ಷಗಳ ಕಾಲ ಪಾಕಿಸ್ತಾನವನ್ನು ತೊರೆದು ವಿದೇಶಗಳಲ್ಲಿ ವಾಸವಾಗಿದ್ದರು. ಕಳೆದ ವರ್ಷವಷ್ಟೇ ನವಾಜ್ ಷರೀಫ್ ಅವರು ತವರು ದೇಶಕ್ಕೆ ವಾಪಸ್ ಆಗಿದ್ದರು. ಭ್ರಷ್ಟಾಚಾರ ಪ್ರಕರಣಗಳಲ್ಲಿ ತಪ್ಪಿತಸ್ಥ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ 14 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಆದರೆ, 2019ರಲ್ಲಿ ಅವರು ವೈದ್ಯಕೀಯ ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ್ದರು. ಆದರೆ, ಮತ್ತೆ ಪಾಕಿಸ್ತಾನಕ್ಕೆ ಕಾಲಿಟ್ಟಿರಲಿಲ್ಲ.

ಆಜೀವ ನಿಷೇಧವನ್ನು ಸುಪ್ರೀಂ ಕೋರ್ಟ್‌ ತೆರವು ಮಾಡಿದ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆಯಲ್ಲಿ ನವಾಜ್ ಷರೀಫ್ ಅವರು ಸ್ಪರ್ಧಿಸುವ ಎಲ್ಲ ಸಾಧ್ಯತೆಗಳಿವೆ. ಹಾಗಾಗಿ ಅವರು ನಾಲ್ಕನೇ ಬಾರಿಗೆ ಪಾಕಿಸ್ತಾನದ ಪ್ರಧಾನಿಯಾಗಬಹುದು ಎಂದು ಅಂದಾಜಿಸಲಾಗುತ್ತಿದೆ. ನವಾಜ್ ಷರೀಫ್ ನೇತೃತ್ವದ ಪಾಕಿಸ್ತಾನ್ ಮುಸ್ಲೀಮ್ ಲೀಗ್-ನವಾಜ್(ಪಿಎಂಎಲ್‌-ಎನ್) ಫೆಬ್ರುವರಿಯಲ್ಲಿ ನಡೆಯಲಿರುವ ಚುನಾವಣೆಯನ್ನು ಗೆಲ್ಲುವ ಫೆವರೀಟ್ ಪಕ್ಷವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನದಲ್ಲಿ ಫೆಬ್ರವರಿ 8ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ನವಾಜ್ ಷರೀಫ್ ಪ್ರಮುಖ ರಾಜಕೀಯ ಪ್ರತಿಸ್ಫರ್ಧಿಯಾಗಿರುವ ಕ್ರಿಕೆಟಿಗ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಈಗ ಜೈಲಿನಲ್ಲಿದ್ದಾರೆ. ಅಲ್ಲದೇ, ಅವರು ಐದು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಕೂಡ ಹೇರಲಾಗಿದೆ. ಹಾಗಾಗಿ, ಈ ಬಾರಿ ನವಾಜ್ ಷರೀಫ್ ಅವರ ಪ್ರಧಾನಿಯ ಹಾದಿಯು ಮತ್ತಷ್ಟು ಸುಗಮವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಪಾಕಿಸ್ತಾನದಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ ಹಿಂದೂ ಮಹಿಳೆ

ಇತಿಹಾಸದಲ್ಲೇ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯೊಬ್ಬರು (hindu woman) ಸಾರ್ವತ್ರಿಕ ಚುನಾವಣೆಗೆ (Pakistan Election) ಸ್ಪರ್ಧಿಸುತ್ತಿದ್ದಾರೆ. ಸವೀರಾ ಪ್ರಕಾಶ್ ಎಂಬವರು ಖೈಬರ್ ಪಖ್ತುಂಖ್ವಾದ ಬುನೆರ್ ಜಿಲ್ಲೆಯಲ್ಲಿ ಸಾಮಾನ್ಯ ಸ್ಥಾನಕ್ಕೆ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದಾರೆ. ಪಾಕಿಸ್ತಾನದ 16ನೇ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರನ್ನು ಆಯ್ಕೆ ಮಾಡಲು 2024ರ ಫೆಬ್ರವರಿ 8ರಂದು ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಹಿಂದೂ ಧರ್ಮೀಯರಾದ ಸವೀರಾ ಪ್ರಕಾಶ್, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸುವ ಆಶಾವಾದ ಹೊಂದಿದ್ದಾರೆ. ಅವರ ತಂದೆ ಓಂಪ್ರಕಾಶ್ 35 ವರ್ಷಗಳಿಂದ ಪಿಪಿಪಿಯ ಸದಸ್ಯರು ಹಾಗೂ ಇತ್ತೀಚೆಗೆ ನಿವೃತ್ತರಾದ ವೈದ್ಯ.

2022ರಲ್ಲಿ ಅಬೋಟಾಬಾದ್ ಇಂಟರ್ನ್ಯಾಷನಲ್ ಮೆಡಿಕಲ್ ಕಾಲೇಜಿನ ಪದವೀಧರರಾದ ಪ್ರಕಾಶ್ ಅವರು ಬುನೆರ್‌ನಲ್ಲಿ PPP ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮುದಾಯದ ಕಲ್ಯಾಣಕ್ಕಾಗಿ ತನ್ನ ಬದ್ಧತೆಯನ್ನು ವ್ಯಕ್ತಪಡಿಸಿರುವ ಅವರು, ಮಹಿಳೆಯರ ಸುಧಾರಣೆಗಾಗಿ ಕೆಲಸ ಮಾಡುವ, ಅವರಿಗಾಗಿ ಸುರಕ್ಷಿತ ವಾತಾವರಣವನ್ನು ಖಾತ್ರಿಪಡಿಸುವ ಮತ್ತು ಅವರ ಹಕ್ಕುಗಳನ್ನು ಪ್ರತಿಪಾದಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಅವರು ಅಭಿವೃದ್ಧಿ ವಲಯದಲ್ಲಿ ಮಹಿಳೆಯರ ಮೇಲಿರುವ ಐತಿಹಾಸಿಕ ನಿರ್ಲಕ್ಷ್ಯದತ್ತ ಗಮನ ಸೆಳೆದಿದ್ದಾರೆ. ಚುನಾಯಿತರಾದರೆ ಈ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದ್ದಾರೆ. ಪಾಕಿಸ್ತಾನದ ಪತ್ರಿಕೆ ʼಡಾನ್‌ʼಗೆ ನೀಡಿದ ಸಂದರ್ಶನದಲ್ಲಿ ಪ್ರಕಾಶ್ ಅವರು ತಮ್ಮ ತಂದೆಯ ಹೆಜ್ಜೆಗಳನ್ನು ಅನುಸರಿಸುವ ಬಗ್ಗೆ ಮಾತನಾಡಿದ್ದಾರೆ. ಈ ಪ್ರದೇಶದ ಹಿಂದುಳಿದವರಿಗಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಡಿಸೆಂಬರ್ 23ರಂದು ತಮ್ಮ ನಾಮಪತ್ರವನ್ನು ಸಲ್ಲಿಸಿರುವ ಅವರು PPPಯ ಹಿರಿಯ ನಾಯಕತ್ವವು ಅವರ ಉಮೇದುವಾರಿಕೆಯನ್ನು ಅನುಮೋದಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಸವೀರಾ ಪ್ರಕಾಶ್ ವೈದ್ಯಕೀಯ ಹಿನ್ನೆಲೆ ಹೊಂದಿದ್ದು, “ಮಾನವೀಯತೆಗೆ ಸೇವೆ ಸಲ್ಲಿಸುವ ತಂದೆಯ ಬದ್ಧತೆ ನನ್ನ ರಕ್ತದಲ್ಲಿದೆ” ಎಂದಿದ್ದಾರೆ.

ಪಾಕಿಸ್ತಾನದ ಚುನಾವಣಾ ಆಯೋಗದ (ECP) ಇತ್ತೀಚಿನ ತಿದ್ದುಪಡಿಯ ಪ್ರಕಾರ ಸಾಮಾನ್ಯ ಸ್ಥಾನಗಳಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಶೇಕಡಾ ಐದರಷ್ಟು ಮೀಸಲು ಕಡ್ಡಾಯಗೊಳಿಸಿದೆ. ಬುನೆರ್ ಪಾಕಿಸ್ತಾನದೊಂದಿಗೆ ವಿಲೀನಗೊಂಡು 55 ವರ್ಷಗಳ ನಂತರ ಈ ಪ್ರದೇಶದಲ್ಲಿ ಚುನಾವಣೆಗೆ ಸ್ಪರ್ಧಿಸಲು ಮಹಿಳೆಯೊಬ್ಬರು ಮುಂದಾಗಿದ್ದಾರೆ.

ಈ ಸುದ್ದಿಯನ್ನೂ ಓದಿ: Pakistan Economic Crisis : ಪಾಕ್​ನಲ್ಲಿ ಗೋಧಿಗಾಗಿ ಗುದ್ದಾಟ; ಕಾಲ್ತುಳಿತದಲ್ಲಿ ನಾಲ್ವರ ಸಾವು

Exit mobile version