Site icon Vistara News

Nawaz Sharif: 4 ವರ್ಷ ವನವಾಸದ ಬಳಿಕ ಪಾಕ್‌ಗೆ ಆಗಮಿಸಿದ ನವಾಜ್‌ ಷರೀಫ್;‌ ಬಂಧನ ಫಿಕ್ಸ್?

Nawaz Sharif

ಇಸ್ಲಾಮಾಬಾದ್:‌ ಭ್ರಷ್ಟಾಚಾರ ಪ್ರಕರಣಗಳಲ್ಲಿ (Corruption Cases) ಅಪರಾಧಿ ಎಂದು ಸಾಬೀತಾಗಿ, ಅನಾರೋಗ್ಯದ ಕಾರಣದಿಂದಾಗಿ ನಾಲ್ಕು ವರ್ಷಗಳಿಂದ ವಿದೇಶದಲ್ಲೇ ನೆಲೆಸಿದ್ದ, ಸ್ವಯಂ ಗಡಿಪಾರು (Self Exile) ಆಗಿದ್ದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ (Nawaz Sharif) ಅವರು ಶನಿವಾರ (ಅಕ್ಟೋಬರ್‌ 21) ತಾಯ್ನಾಡಿಗೆ ವಾಪಸಾಗಿದ್ದಾರೆ. ಎರಡು ಪ್ರಮುಖ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಪಡೆದಿರುವ ಕಾರಣ ನವಾಜ್‌ ಷರೀಫ್‌ ಬಂಧನ ಆಗುವುದಿಲ್ಲ ಎಂದು ತಿಳಿದುಬಂದಿದೆ.

ನಾಲ್ಕು ವರ್ಷಗಳ ಹಿಂದೆ ದೇಶ ಬಿಟ್ಟು ಹೋಗಿ ಲಂಡನ್‌ನಲ್ಲಿ ನೆಲೆಸಿದ್ದ ನವಾಜ್‌ ಷರೀಫ್‌, ದುಬೈನಿಂದ ಖಾಸಗಿ ವಿಮಾನದ ಮೂಲಕ ಇಸ್ಲಾಮಾಬಾದ್‌ಗೆ ಆಗಮಿಸಿದ್ದಾರೆ. ಪಾಕಿಸ್ತಾನ ಮುಸ್ಲಿಂ ಲೀಗ್‌-ನವಾಜ್ (Pakistan Muslim League-Nawaz-PML-N) ಪಕ್ಷದ ಮುಖ್ಯಸ್ಥರಾಗಿರುವ ನವಾಜ್‌ ಷರೀಫ್‌ ಅವರು ಇಸ್ಲಾಮಾಬಾದ್‌ನಿಂದ ಲಾಹೋರ್‌ಗೆ ತೆರಳಿದ ಬಳಿಕ ಬೃಹತ್‌ ರ‍್ಯಾಲಿಯೊಂದನ್ನು ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಆ ಮೂಲಕ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಹುರಿದುಂಬಿಸುವುದು, ಅವರ ಬೆಂಬಲ ಪಡೆಯುವುದು ನವಾಜ್‌ ಷರೀಫ್‌ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.

2019ರಲ್ಲಿ ನವಾಜ್‌ ಷರೀಫ್‌ ಗಡಿಪಾರು

ಮೂರು ಬಾರಿ ಪಾಕ್‌ ಪ್ರಧಾನಿಯಾಗಿದ್ದ ನವಾಜ್‌ ಷರೀಫ್‌, 2019ರಲ್ಲಿ ಲಂಡನ್‌ಗೆ ತೆರಳಿದ್ದರು. ಅವೆನ್‌ಫೀಲ್ಡ್‌ ಹಾಗೂ ಅಲ್‌-ಅಜಿಜಿಯಾ ಭ್ರಷ್ಟಾಚಾರ ಪ್ರಕರಣಗಳಲ್ಲಿ ನ್ಯಾಯಾಲಯವು ನವಾಜ್‌ ಷರೀಫ್‌ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು. ಇದಾದ ಬಳಿಕ ಜಾಮೀನು ಪಡೆದಿದ್ದ ನವಾಜ್‌ ಷರೀಫ್‌, ಏಕಾಏಕಿ ದೇಶವನ್ನು ತೊರೆದಿದ್ದರು. ಅನಾರೋಗ್ಯದ ಕಾರಣದಿಂದಾಗಿ ಚಿಕಿತ್ಸೆ ಪಡೆಯಲು ಅವರು ಲಂಡನ್‌ಗೆ ತೆರಳಿದ್ದರು. ಇದಾದ ಬಳಿಕವೂ ಅವರು ಬಂಧನದ ಭೀತಿಯಿಂದಾಗಿ ವಿದೇಶದಲ್ಲಿಯೇ ಇದ್ದರು.

ಇದನ್ನೂ ಓದಿ: Nawaz Sharif: ಪಾಕ್‌ ಭಿಕ್ಷೆ ಬೇಡುತ್ತಿದ್ದರೆ ಭಾರತ ಚಂದ್ರಯಾನ ಕೈಗೊಂಡಿದೆ; ನವಾಜ್‌ ಷರೀಫ್‌ ಅಳಲು

ರಂಗೇರಿದ ಚುನಾವಣೆ ಕಣ

ಅವೆನ್‌ಫೀಲ್ಡ್‌ ಹಾಗೂ ಅಲ್‌-ಅಜಿಜಿಯಾ ಭ್ರಷ್ಟಾಚಾರ ಪ್ರಕರಣಗಳಲಿ ನವಾಜ್‌ ಷರೀಫ್‌ ಅವರಿಗೆ ಈಗಾಗಲೇ ನಿರೀಕ್ಷಣಾ ಜಾಮೀನು ಸಿಕ್ಕಿದೆ. ಹಾಗಾಗಿ ಅವರು ಸದ್ಯಕ್ಕೆ ಬಂಧನದಿಂದ ಮುಕ್ತಿ ಪಡೆದಿದ್ದಾರೆ. ಅದರಲ್ಲೂ, ಜನವರಿಯಲ್ಲಿ ಪಾಕಿಸ್ತಾನ ಸಂಸತ್‌ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈಗ ನವಾಜ್‌ ಷರೀಫ್‌ ಅವರೂ ಪಾಕಿಸ್ತಾನಕ್ಕೆ ಆಗಮಿಸಿರುವ ಕಾರಣ ಚುನಾವಣೆ ಕಣವು ರಂಗೇರುವುದು ನಿಶ್ಚಿತ ಎಂದು ತಿಳಿದುಬಂದಿದೆ. ಶೀಘ್ರದಲ್ಲಿಯೇ ನವಾಜ್‌ ಷರೀಫ್‌ ಅವರು ಸಾಲು ಸಾಲು ರ‍್ಯಾಲಿಗಳನ್ನು ಆಯೋಜಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Exit mobile version