ಇಸ್ಲಾಮಾಬಾದ್: ಉಗ್ರರನ್ನು ದೇಶದಲ್ಲಿಟ್ಟುಕೊಂಡು ಪೋಷಿಸುತ್ತಿದ್ದ, ಉಗ್ರ ಸಂಘಟನೆಗಳಿಗೆ ಹಲವು ರೀತಿಯಲ್ಲಿ ನೆರವು ನೀಡುತ್ತಿದ್ದ ಪಾಕಿಸ್ತಾನಕ್ಕೆ ಈಗ ಉಗ್ರರೇ ತಲೆನೋವಾಗಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಪಾಕಿಸ್ತಾನದ ಪಂಜಾಬ್‌ನಲ್ಲಿರುವ ಮಿಯಾನ್‌ವಾಲಿ (Mianwali) ವಾಯುನೆಲೆಯ (Pakistan Airbase) ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಶನಿವಾರ (ನವೆಂಬರ್ 4) ಬೆಳಗಿನ ಜಾವ ಉಗ್ರರು ವಾಯುನೆಲೆಗೆ ದಾಳಿ ನಡೆಸಿದ್ದು, ಪಾಕ್ ಸೇನೆಯು ಪ್ರತಿದಾಳಿ ಮೂಲಕ 9 ಉಗ್ರರನ್ನು ಹೊಡೆದುರುಳಿಸಿದೆ ಎಂದು ತಿಳಿದುಬಂದಿದೆ.
ಪಂಜಾಬ್ ಪ್ರಾಂತ್ಯದಲ್ಲಿರುವ ತರಬೇತಿ ವಾಯುನೆಲೆಗೆ ಆತ್ಮಾಹುತಿ ಬಾಂಬ್ ದಾಳಿಕೋರರು ನುಗ್ಗಿದ್ದಾರೆ. ಡ್ರೋನ್‌ಗಳ ಮೂಲಕವೂ ವಾಯುನೆಲೆ ಮೇಲೆ ದಾಳಿ ನಡೆಸಿದ್ದಾರೆ. ಒಂದಷ್ಟು ಜನ ಗುಂಡಿನ ದಾಳಿಯನ್ನೂ ಮಾಡಿದ್ದಾರೆ. ಇದರಿಂದಾಗಿ ಪಾಕಿಸ್ತಾನದ ಸುಮಾರು 40 ಯುದ್ಧವಿಮಾನಗಳು ಧ್ವಂಸಗೊಂಡಿವೆ. ದಾಳಿಯ ಬಳಿಕ ಪಾಕಿಸ್ತಾನದ ಉಗ್ರ ಸಂಘಟನೆಯಾದ ‘ತೆಹ್ರೀಕ್ ಎ ಜಿಹಾದ್ ಪಾಕಿಸ್ತಾನವು’ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ಹೀಗೆ ನಡೆದಿದೆ ಉಗ್ರರ ದಾಳಿ
Tehreek-e-Jihad Pakistan (TJP) claims that their fidayeens have attacked Mianwali Pakistan Airforce airbase in punjab and destroyed many small & Big jets along with killing PAF Pilots & forces personnel, Ops ongoing….
— Megh Updates 🚨™ (@MeghUpdates) November 4, 2023
Local residents posted unverified video footage on social… pic.twitter.com/HVwiAcjj1I
ಮೂವರು ಉಗ್ರರ ಹತ್ಯೆ
ಹೆಚ್ಚು ಭದ್ರತೆ ಇದ್ದರೂ ಪಾಕಿಸ್ತಾನದ ವಾಯುನೆಲೆ ಮೇಲೆ ದಾಳಿ ಆರಂಭವಾಗುತ್ತಲೇ ಸೇನೆಯೂ ತಿರುಗೇಟು ನೀಡಿದೆ. ಸುಮಾರು 10-15 ಉಗ್ರರಲ್ಲಿ 9 ಉಗ್ರರನ್ನು ಪಾಕ್ ಸೇನೆ ಹೊಡೆದುರುಳಿಸಿದೆ ಎಂದು ತಿಳಿದುಬಂದಿದೆ. ಇದಾದ ಬಳಿಕವೇ ಉಗ್ರರ ದಾಳಿ ನಿಂತಿದೆ. ಇಷ್ಟಾದರೂ ಪಾಕಿಸ್ತಾನ ವಾಯುಪಡೆಯು ಭದ್ರತಾ ದೃಷ್ಟಿಯಿಂದ ಕಾರ್ಯಾಚರಣೆ ಕೈಗೊಂಡಿದೆ. ಹಾಗೊಂದು ವೇಳೆ ಉಗ್ರರು ಹೆಚ್ಚು ಅವಧಿಗೆ ದಾಳಿ ನಡೆಸಿದ್ದರೆ, ಇಡೀ ವಾಯುನೆಲೆಯೇ ನಾಶವಾಗುತ್ತಿತ್ತು ಎಂದು ತಿಳಿದುಬಂದಿದೆ.
ಆಫ್ಘನ್ ತಾಲಿಬಾನಿಗಳಿಂದ ಕೃತ್ಯ?
ಅಫಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಆಡಳಿತ ಜಾರಿಗೆ ಬಂದ ಬಳಿಕ ಪಾಕಿಸ್ತಾನ ಹಾಗೂ ಅಫಘಾನಿಸ್ತಾನದ ಸಂಬಂಧ ಮತ್ತಷ್ಟು ಹಳಸಿದೆ. ಅದರಲ್ಲೂ, ಇತ್ತೀಚೆಗೆ ಪಾಕಿಸ್ತಾನದಲ್ಲಿರುವ ಆಫ್ಘನ್ ನಿರಾಶ್ರಿತರನ್ನು ಪಾಕ್ ಬಲವಂತವಾಗಿ ವಾಪಸ್ ಕಳುಹಿಸಿದ ಕಾರಣ ತಾಲಿಬಾನ್ ಉಗ್ರರು ತೆಹ್ರೀಕ್ ಎ ಜಿಹಾದ್ ಪಾಕಿಸ್ತಾನ ಉಗ್ರ ಸಂಘಟನೆ ಮೂಲಕ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ತೆಹ್ರೀಕ್ ಎ ಜಿಹಾದ್ ಪಾಕಿಸ್ತಾನ ಉಗ್ರ ಸಂಘಟನೆಗೆ ಇದಕ್ಕೂ ಮೊದಲು ತಾಲಿಬಾನ್ ಹಲವು ರೀತಿಯಲ್ಲಿ ಬೆಂಬಲ ನೀಡಿದೆ ಎಂದು ಮೂಲಗಳು ತಿಳಿಸಿವೆ.