ಇಂಗ್ಲೆಂಡ್ನ ದಕ್ಷಿಣ ಭಾಗದ ಸರ್ರೆಯಲ್ಲಿರುವ ರೈಲ್ವೆ ಪ್ಲಾಟ್ಫಾರ್ಮ್ನಲ್ಲಿ ತನಗಾದ ಒಂದು ವಿಚಿತ್ರ ಅನುಭವವನ್ನು ಎಮ್ಮಾ ಒಬಾಂಕ್ ಎಂಬ ಮಹಿಳೆ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ. ಅದು ಹಳೇ ಟ್ವೀಟ್ ಆಗಿದ್ದು, ಮತ್ತೀಗ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆಗಿದ್ದೇನು ಎಂಬುದರ ವಿವರ ಇಲ್ಲಿದೆ ನೋಡಿ.
2018ರಲ್ಲಿ ಒಮ್ಮೆ ಎಮ್ಮಾ ಒಬಾಂಕ್ ಅವರು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಸರ್ರೆಯಲ್ಲಿರುವ ವೋಕಿಂಗ್ ರೈಲ್ವೆ ಸ್ಟೇಶನ್ನಲ್ಲಿ ಆ ರೈಲು ನಿಂತಿತ್ತು. ರೈಲಿನಲ್ಲಿ ಕುಳಿತಿದ್ದ ಎಮ್ಮಾ ಕಣ್ಣಿಗೆ ಅಲ್ಲಿಯೇ ಪ್ಲಾಟ್ಫಾರ್ಮ್ನ ಬೆಂಚ್ ಮೇಲೆ ಒಬ್ಬ ವ್ಯಕ್ತಿ ಕುಳಿತಿದ್ದಂತೆ ಕಂಡಿತು. ಆತ ತಟಸ್ಥವಾಗಿ ಕುಳಿತುಕೊಂಡಿದ್ದಾನೆ, ಮೈಮೇಲೆಲ್ಲ ಅಲ್ಲಲ್ಲಿ ಹಿಮ ಬಿದ್ದಂತೆ ಕಾಣುತ್ತಿತ್ತು. ಅದನ್ನ ನೋಡಿದ ಎಮ್ಮಾ ಒಬಾಂಕ್ ಅವರು, ಕೂಡಲೇ ಅದೇ ರೈಲ್ವೆ ನಿಲ್ದಾಣದ ಸಿಬ್ಬಂದಿಯನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರಂತೆ. ‘ಆ ವ್ಯಕ್ತಿಯನ್ನು ನೋಡಿ, ತೀವ್ರ ಅಸ್ವಸ್ಥನಾದಂತೆ ಕಾಣಿಸುತ್ತಾನೆ. ಇದ್ದಾನೋ, ಜೀವ ಹೋಗಿದೆಯೋ ಗೊತ್ತಾಗುತ್ತಿಲ್ಲ. ಚಳಿಗೆ ಅವನ ದೇಹ ಹೆಪ್ಪುಗಟ್ಟಿದಂತೆ ಕಾಣಿಸುತ್ತಿದೆ. ಯಾರಾದರೂ ಚೆಕ್ ಮಾಡುತ್ತೀರಾ’ ಎಂದು ಬರೆದಿದ್ದಾರೆ.
ಅದಕ್ಕೆ ವೋಕಿಂಗ್ ರೈಲ್ವೆ ಸ್ಟೇಶನ್ನ ಸಿಬ್ಬಂದಿ ತಕ್ಷಣವೇ ಉತ್ತರ ಕೊಟ್ಟಿದ್ದಾರೆ ಮತ್ತು ಆ ಉತ್ತರ ಕೇಳಿ ಎಮ್ಮಾ ಒಂದು ಕ್ಷಣ ಬೆಪ್ಪಾದರಂತೆ. ‘ಎಮ್ಮಾ ಅವರೇ, ಏನೂ ಗಾಬರಿಯಾಗಬೇಡಿ. ಅದೊಂದು ಪ್ರತಿಮೆಯಷ್ಟೇ. ಈ ಪಟ್ಟಣದಲ್ಲಿ ಇಂಥ ಸ್ಟ್ಯಾಚ್ಯೂಗಳು ಹಲವು ಇವೆ. ಹಾಗೇ, ರೈಲ್ವೆ ಸ್ಟೇಶನ್ನಲ್ಲೂ ಇಂಥ ವಿವಿಧ ಪ್ರತಿಮೆಗಳಿವೆ ಎಂದು ಆ ರೈಲ್ವೆ ಸ್ಟೇಶನ್ ಸಿಬ್ಬಂದಿ ಹೇಳಿದ್ದಾರೆ. ಅಂದರೆ, ಆ ಮನುಷ್ಯನ ಪ್ರತಿಮೆಯಲ್ಲಿ ಅಷ್ಟು ಜೀವತುಂಬಿದ ಕಳೆಯಿತ್ತು. ಥೇಟ್ ಮನುಷ್ಯನಂತೆ ಕಾಣುತ್ತಿತ್ತು. ಅದನ್ನು ನೋಡಿ ನಾನು ಮೂರ್ಖಳಾಗಿದ್ದೆ ಎಂದು ಎಮ್ಮಾ ತಿಳಿಸಿದ್ದಾರೆ.
ಟಿವಿ ಮತ್ತು ಸಿನಿಮಾ ಏಜೆಂಟ್ ಆಗಿರುವ ಎಮ್ಮಾ ಒಬಾಂಕಾ ಅವರ ಈ ಟ್ವೀಟ್ಗೆ ನೆಟ್ಟಿಗರು ವಿವಿಧ ರೀತಿಯ ಕಮೆಂಟ್ ಮಾಡಿದ್ದಾರೆ. ಕೆಲವರು ಎಮ್ಮಾ ಕಾಲೆಳೆದಿದ್ದರೆ, ಇನ್ನೂ ಕೆಲವರು ನಿಮ್ಮ ಹೃದಯವಂತಿಕೆಗೆ ನಮ್ಮದೊಂದು ನಮನ ಎಂದಿದ್ದಾರೆ. ಇಂಥ ಮುಜುಗರದ ಸನ್ನಿವೇಶ ನಡೆದಾಗ ಅದೆಷ್ಟೋ ಜನರು ಹೇಳಿಕೊಳ್ಳುವುದೇ ಇಲ್ಲ, ಆದರೆ ನೀವು ಹೇಳಿಕೊಂಡಿರುವುದೇ ಖುಷಿ ಎಂದು ತಿಳಿಸಿದ್ದಾರೆ.