ಕೀವ್: ವಿದೇಶ ಪ್ರವಾಸದಲ್ಲಿರುವ ನರೇಂದ್ರ ಮೋದಿ (Narendra Modi) ಅವರು ಉಕ್ರೇನ್‌ಗೆ ಭೇಟಿ ನೀಡಿದ್ದು, ಬರೋಬ್ಬರಿ 30 ವರ್ಷಗಳ ಬಳಿಕ ಅಲ್ಲಿಗೆ ತೆರಳಿದ ಭಾರತದ ಪ್ರಧಾನಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ (PM Modi Ukraine Viisit). ರಷ್ಯಾ-ಉಕ್ರೇನ್ ಯುದ್ಧ ಮುಂದುವರಿದಿರುವ ಮಧ್ಯೆ ಮೋದಿ ಅವರ ಈ ಭೇಟಿ ಅತ್ಯಂತ ಮಹತ್ವ ಪಡೆದಿದೆ. 6 ವಾರಗಳ ಹಿಂದೆ ರಷ್ಯಾಕ್ಕೆ ತೆರಳಿದ್ದ ಅವರು ಇದೀಗ ಉಕ್ರೇನ್‌ಗೆ ಭೇಟಿ ನೀಡಿದ್ದು, ಸಹಜವಾಗಿ ಜಗತ್ತಿನ ಗಮನ ಸೆಳೆದಿದೆ. ಉಕ್ರೇನ್ ರಾಜಧಾನಿ ಕೀವ್‌ಗೆ ಬಂದಿಳಿದ ಮೋದಿ ಅವರನ್ನು ಅಲ್ಲಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಉಭಯ ನಾಯಕರು ಪರಸ್ಪರ ಕೈ ಕುಲುಕಿ ಆತ್ಮೀಯವಾಗಿ ಅಪ್ಪಿಕೊಂಡರು.
ಜಾಗತಿಕ ಮಾಧ್ಯಮಗಳಲ್ಲಿ ಮೋದಿ ಭೇಟಿ
ಮೋದಿಯ ಉಕ್ರೇನ್ ಭೇಟಿಯನ್ನು ವರದಿ ಮಾಡಿದ ಸುದ್ದಿಸಂಸ್ಥೆ ರಾಯಿಟರ್ಸ್, ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಮಾಸ್ಕೋಗೆ ಭೇಟಿ ನೀಡಿ ಶಾಂತಿಗಾಗಿ ಕರೆ ನೀಡಿದ್ದನ್ನು ಉಲ್ಲೇಖಿಸಿದೆ. ಜತೆಗೆ ಆಗ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನೂ ಮೋದಿ ಆತ್ಮೀಯವಾಗಿ ಅಪ್ಪಿಕೊಂಡಿದ್ದರು ಎಂದು ನೆನಪಿಸಿಕೊಂಡಿದೆ.
Bharat Health Initiative for Sahyog Hita & Maitri (BHISHM) is a unique effort which will ensure medical facilities in a rapidly deployable manner. It consists of cubes which contain medicines and equipment for medical care. Today, presented BHISHM cubes to President @ZelenskyyUa. pic.twitter.com/gw3DjBpXyA
— Narendra Modi (@narendramodi) August 23, 2024
“2022ರ ಫೆಬ್ರವರಿಯಲ್ಲಿ ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣ ಪ್ರಾರಂಭವಾದಾಗಿನಿಂದ ಮೃತಪಟ್ಟ ಎಲ್ಲ 570 ಮಕ್ಕಳನ್ನು ಸ್ಮರಿಸುವ ಉಕ್ರೇನ್‌ನ ಇತಿಹಾಸ ವಸ್ತುಸಂಗ್ರಹಾಲಯಕ್ಕೆ ಮೋದಿ ಅವರನ್ನು ಕರೆದೊಯ್ಯಲಾಯಿತುʼʼ ಎಂದು ಬಿಬಿಸಿ ವರದಿ ಮಾಡಿದೆ. ಭೇಟಿ ಬಳಿಕ ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ “ರಷ್ಯಾ-ಉಕ್ರೇನ್ ಸಂಘರ್ಷವು ವಿಶೇಷವಾಗಿ ಚಿಕ್ಕ ಮಕ್ಕಳಿಗೆ ವಿನಾಶಕಾರಿಯಾಗಿದೆ” ಎಂದು ಬರೆದುಕೊಂಡಿದ್ದಾರೆ. “ಪ್ರಾಣ ಕಳೆದುಕೊಂಡ ಮಕ್ಕಳ ಕುಟುಂಬಗಳಿಗಾಗಿ ನನ್ನ ಹೃದಯ ಮಿಡಿಯುತ್ತದೆ. ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರು ಪಡೆಯಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ. ವಸ್ತುಸಂಗ್ರಹಾಲಯದ ಸ್ಮಾರಕದಲ್ಲಿ ಟೆಡ್ಡಿ ಬೇರ್‌ಗಳನ್ನು ಇರಿಸಿದ ಅವರು ಒಂದು ಕ್ಷಣ ಮೌನ ಆಚರಿಸಿದರು.
ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್, ಉಕ್ರೇನ್ ಭೇಟಿಯು ತಟಸ್ಥ ನಿಲುವನ್ನು ತೆಗೆದುಕೊಳ್ಳುವ ಮೋದಿ ಅವರ ಪ್ರಯತ್ನದ ಭಾಗ ಆಗಿರಬಹುದು ಎಂದು ವರದಿ ಮಾಡಿದೆ.
ಇದನ್ನೂ ಓದಿ: PM Modi Ukraine Visit: ಉಕ್ರೇನ್‌ಗೆ ಬಂದಿಳಿದ ಪ್ರಧಾನಿ ಮೋದಿ- ಝೆಲೆನ್ಸ್ಕಿಗೆ ಆತ್ಮೀಯ ಅಪ್ಪುಗೆ
ಮೋದಿ ಅವರ ಭೇಟಿಯ ಮೊದಲು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕಚೇರಿಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ಅವರು ಸುದ್ದಿಸಂಸ್ಥೆ ರಾಯಿಟರ್ಸ್ ಜತೆ ಮಾತನಾಡಿ, ʼʼಈ ಪ್ರವಾಸ ಮಹತ್ವದ್ದಾಗಿದೆ. ಯಾಕೆಂದರೆ ನವದೆಹಲಿ ಮಾಸ್ಕೋ ಮೇಲೆ ನಿಜವಾಗಿಯೂ ಒಂದು ನಿರ್ದಿಷ್ಟ ಪ್ರಭಾವವನ್ನು ಹೊಂದಿದೆ” ಎಂದು ಹೇಳಿದ್ದರು. ಇನ್ನು ಉಕ್ರೇನ್ ಅಧ್ಯಕ್ಷೀಯ ಕಚೇರಿಯ ಮುಖ್ಯಸ್ಥ ಆ್ಯಂಡ್ರಿ ಯೆರ್ಮಾಕ್, ಮೋದಿ ಅವರ ಭೇಟಿ ಐತಿಹಾಸಿಕವಾಗಿದೆ ಮತ್ತು ಯುದ್ಧವನ್ನು ಕೊನೆಗೊಳಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಬಹುದು ಎಂದು ನಿರೀಕ್ಷೆ ಹೊಂದಿದ್ದಾರೆ. ಪೋಲೆಂಡ್ ಪ್ರವಾಸ ಮುಗಿಸಿ ಶುಕ್ರವಾರ (ಆಗಸ್ಟ್ 23) ಉಕ್ರೇನ್‌ಗೆ ಬಂದಿಳಿದ ಮೋದಿ ಅವರು ವೊಲೊಡಿಮಿರ್ ಝೆಲೆನ್ಸ್ಕಿ ಜತೆ ದ್ವಿಪಕ್ಷೀಯ ಸಭೆ ನಡೆಸಿದರು. ಈ ವೇಳೆ ಎರಡು ದೇಶಗಳ ಸಂಬಂಧ ವೃದ್ದಿಯ ಬಗ್ಗೆಯೂ ಉಭಯ ನಾಯಕರು ಚರ್ಚೆ ನಡೆಸಿದರು ಎನ್ನಲಾಗಿದೆ.