Site icon Vistara News

Ram Mandir: ರಾಮ ಮಂದಿರ ಉದ್ಘಾಟನೆಗೆ ಸಿದ್ದತೆ; ಅಮೆರಿಕದಲ್ಲೂ ಸಂಭ್ರಮಾಚರಣೆ

ram mandir

ram mandir

ನ್ಯೂಯಾರ್ಕ್‌: ಕೋಟ್ಯಂತರ ಹಿಂದೂಗಳ ಅನೇಕ ವರ್ಷಗಳ ಕನಸನ್ನು ನನಸಾಗಿಸಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ (Ram Mandir) ನಿರ್ಮಾಣವಾಗುತ್ತಿದೆ. 2024ರ ಜನವರಿ 22ರಂದು ಪ್ರಾಣ ಪ್ರತಿಷ್ಠೆ (Pran-Pratishta)ನಡೆಯಲಿದ್ದು, ಅದಕ್ಕಾಗಿ ಭರದ ಸಿದ್ದತೆ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್‌ ನೇತೃತ್ವದಲ್ಲಿ ಅಮೆರಿಕದ ವಾಷಿಂಗ್ಟನ್‌ನ ಮೇರಿಲ್ಯಾಂಡ್‌ನಲ್ಲಿರುವ ಶ್ರೀ ಭಕ್ತ ಆಂಜನೇಯ ದೇವಸ್ಥಾನದ ಬಳಿಯಿಂದ ಮಿನಿ ಕಾರು ಮತ್ತು ಬೈಕ್ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ಈ ರ‍್ಯಾಲಿ ನಗರದ ವಿವಿಧ ಕಡೆಗಳಲ್ಲಿ ಸಂಚರಿಸಿತು.

10 ವರ್ಷದ ಮಕ್ಕಳಿಂದ ಹಿಡಿದು 70 ವರ್ಷದ ವೃದ್ಧರವರೆಗೆ ವಿವಿಧ ವಯೋಮಾನದವರು ಈ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. ವಿಶ್ವ ಹಿಂದೂ ಪರಿಷತ್ ಆಫ್ ಅಮೆರಿಕ ಅಧ್ಯಕ್ಷ ಮಹೇಂದ್ರ ಸಪಾ ಮಾಹಿತಿ ನೀಡಿ, ʼʼಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಯ ಗೌರವಾರ್ಥವಾಗಿ ವಾಷಿಂಗ್ಟನ್ ಡಿಸಿಯಲ್ಲಿ ಐತಿಹಾಸಿಕ ರ‍್ಯಾಲಿ ಆಯೋಜಿಸಲಾಗಿತ್ತುʼʼ ಎಂದು ಹೇಳಿದ್ದಾರೆ.

ʼʼಹಿಂದೂಗಳ 500 ವರ್ಷಗಳ ಹೋರಾಟದ ಭಾಗವಾಗಿ ಭಗವಾನ್ ಶ್ರೀ ರಾಮನ ಮಂದಿರವನ್ನು ಉದ್ಘಾಟಿಸಲಾಗುತ್ತಿದೆ. ಆದ್ದರಿಂದ ನಾವು ಜನವರಿ 20, 2024ರಂದು ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ ಸುಮಾರು 1,000 ಅಮೆರಿಕನ್ ಹಿಂದೂ ಕುಟುಂಬಗಳೊಂದಿಗೆ ಐತಿಹಾಸಿಕ ಸಂಭ್ರಮಾಚರಣೆಯನ್ನು ಆಯೋಜಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ರಾಮ್ ಲೀಲಾ, ಶ್ರೀ ರಾಮನ ಕಥೆಗಳು, ಶ್ರೀ ರಾಮನ ಪ್ರಾರ್ಥನೆಗಳು ಮತ್ತು ಭಜನೆಗಳು ಮೊಳಗಲಿವೆʼʼ ಎಂದು ಮಹೇಂದ್ರ ಸಪಾ ತಿಳಿಸಿದ್ದಾರೆ.

ಸಹ-ಸಂಘಟಕ ಅನಿಮೇಶ್ ಶುಕ್ಲಾ ಮಾತನಾಡಿ, ʼʼಈ ಆಚರಣೆಯ ಭಾಗವಾಗಿ ಭಗವಾನ್ ರಾಮನ ಜೀವನದ ಭಾಗವನ್ನು 45 ನಿಮಿಷಗಳಲ್ಲಿ ಅಭಿನಯಿಸಲಾಗುತ್ತದೆ. ವಿವಿಧ ವಯಸ್ಸಿನ ಮಕ್ಕಳು ಇದನ್ನು ಪ್ರದರ್ಶಿಸಲಿದ್ದಾರೆ. ಇದನ್ನು ಅಮೆರಿಕದ ಮಕ್ಕಳಿಗೆ ಅರ್ಥವಾಗುವಂತೆ ನಿರೂಪಿಸಲಾಗುವುದುʼʼ ಎಂದು ಅವರು ಹೇಳಿದ್ದಾರೆ. ರ‍್ಯಾಲಿಯ ವೇಳೆ ಸಹ-ಸಂಘಟಕ ಮತ್ತು ಸ್ಥಳೀಯ ತಮಿಳು ಹಿಂದೂ ನಾಯಕ ಪ್ರೇಮ್ ಕುಮಾರ್ ಸ್ವಾಮಿನಾಥನ್ ಭಗವಾನ್ ರಾಮನನ್ನು ಸ್ತುತಿಯನ್ನು ಹಾಡಿದರು.

ಭರದ ಸಿದ್ದತೆ

ಶ್ರೀ ರಾಮ ಜನ್ಮಭೂಮಿ ಮಂದಿರದ ಮೊದಲ ಮಹಡಿ ನಿರ್ಮಾಣ ಪ್ರಗತಿಯಲ್ಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇತ್ತೀಚೆಗೆ ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿತ್ತು. ಜತೆಗೆ ಫೋಟೋಗಳನ್ನು ಶೇರ್‌ ಮಾಡಿತ್ತು. ಭಗವಾನ್ ಶ್ರೀ ರಾಮ ಅವರ ಗರ್ಭಗುಡಿ ಬಹುತೇಕ ಸಿದ್ಧವಾಗಿದೆ. ಇತ್ತೀಚೆಗೆ ಲೈಟಿಂಗ್-ಫಿಟ್ಟಿಂಗ್ ಕೆಲಸವೂ ಪೂರ್ಣಗೊಂಡಿದೆ. ಕೆಲವು ಛಾಯಾಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದರು. ಮತ್ತೊಂದೆಡೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶುಕ್ರವಾರ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯ ಫೋಟೋಗಳನ್ನು ಬಿಡುಗಡೆ ಮಾಡಿತ್ತು. ವಿಗ್ರಹವನ್ನು ನೆಲ ಮಹಡಿಯಲ್ಲಿರುವ ‘ಗ್ರಹಗೃಹ’ದಲ್ಲಿ ಪ್ರತಿಷ್ಠಾಪಿಸಲಾಗುವುದು. ದೇವಾಲಯದ ನೆಲ ಮಹಡಿ ಬಹುತೇಕ ಸಿದ್ಧವಾಗಿದೆ. ಹಾಗಾಗಿ ‘ಪ್ರಾಣ-ಪ್ರತಿಷ್ಠಾ’ (ಪ್ರತಿಷ್ಠಾಪನಾ ಸಮಾರಂಭ)ಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅವರು ಚಂಪತ್ ರಾಯ್ ಅವರು ತಿಳಿಸಿದ್ದರು.

ಇದನ್ನೂ ಓದಿ: Ram Mandir: ರಾಮ ಮಂದಿರದ ಕಡೆಗೆ ಹೊರಡಲಿವೆ ಸಾವಿರ ರೈಲುಗಳು!

Exit mobile version