ಪತ್ರಕರ್ತರು ಕ್ರಿಯಾಶೀಲರಾಗಿರಬೇಕು. ವರದಿಗಾರಿಕೆ, ಸುದ್ದಿ ಕೊಡುವಿಕೆಯಲ್ಲಿ ಹೊಸತನ ಇರಬೇಕು. ಇಲ್ಲದಿದ್ದರೆ ಜನರನ್ನು ತಲುಪಲು ಸಾಧ್ಯವೇ ಇಲ್ಲ. ಇದು ಸತ್ಯ. ಪಾಕಿಸ್ತಾನದ ಈ ಪತ್ರಕರ್ತನಂತೂ ಕ್ರಿಯಾಶೀಲತೆಯ ಪರಮಾವಧಿ ತೋರಿಸಿಬಿಟ್ಟಿದ್ದಾನೆ. ಅದೆಂಥಾ ವರದಿಗಾರಿಕೆ ಅಂತೀರಿ?-ಖಂಡಿತ ಎದೆಗಾರಿಕೆ ಇರಬೇಕು ನೋಡಿ ಹೀಗೆಲ್ಲ ವರದಿ ಮಾಡಲು! ಪಾಕಿಸ್ತಾನದ ಕರಾಚಿಯಲ್ಲಿ ಪತ್ರಕರ್ತನೊಬ್ಬ (Pakistan Journalist) ಹವಾಮಾನ ವರದಿ ಕೊಟ್ಟಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಪತ್ರಕರ್ತ ವಿಡಿಯೊದಲ್ಲಿ ತನ್ನ ಹೆಸರು ಅಬ್ದುಲ್ ರೆಹಮಾನ್ ಖಾನ್ ಎಂದು ಹೇಳಿಕೊಂಡಿದ್ದಾನೆ. ಹವಾಮಾನ ವರದಿ ಕೊಡುತ್ತಿದ್ದ ಅವನು, ಕಡಲ ತೀರದ ವಾತಾವರಣದ ಬಗ್ಗೆ ವಿವರಿಸುತ್ತಿದ್ದ. ಸಮುದ್ರದ ಅಲೆಗಳ ಪ್ರಭಾವ, ಅದರ ಆಳದ ಬಗ್ಗೆ ವಿವರಿಸುತ್ತ ಆ ವರದಿಗಾರ ನೀರಿಗೆ ಬೀಳುತ್ತಾನೆ. ನೀರಿನ ಒಳಗೆ ಧುಮುಕಿದಾಗಲೂ ಅವನು ವರದಿಯನ್ನು ಮುಂದುವರಿಸುತ್ತಾನೆ. ಅಷ್ಟೇ ಅಲ್ಲ, ನೀರಿನ ಒಳಗೆ ಮುಳುಗಲೂ ಪ್ರಯತ್ನ ಮಾಡುವುದನ್ನು ವಿಡಿಯೊದಲ್ಲಿ ನೋಡಬಹುದು. ಅವನೊಂದಿಗೆ ಇದ್ದ ಟಿವಿ ಕ್ಯಾಮರಾಮೆನ್ ಇದೆಲ್ಲವನ್ನೂ ಚಿತ್ರೀಕರಿಸಿಕೊಂಡಿದ್ದಾನೆ.
ಅಬ್ದುಲ್ ರೆಹಮಾನ್ ಖಾನ್ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಆ ಪತ್ರಕರ್ತ ಯಾವ ಮಾಧ್ಯಮದವನು ಎಂದು ತಿಳಿದುಕೊಳ್ಳುವುದಕ್ಕೆ ಕುತೂಹಲ ವ್ಯಕ್ತಪಡಿಸಿದ್ದಾರೆ. ಅಬ್ದುಲ್ ರೆಹಮಾನ್ ಖಾನ್ ಕೇವಲ ಒಂದು ಮೈಕ್ ಹಿಡಿದಿದ್ದಾನೆ ಬಿಟ್ಟರೆ, ಯಾವುದೇ ಚಾನೆಲ್ನ ಲೋಗೋ ಅಲ್ಲಿಲ್ಲ. ಹೀಗಾಗಿ ನೆಟ್ಟಿಗರು ಇವನ್ಯಾವ ಚಾನೆಲ್ನ ಪತ್ರಕರ್ತ ಇರಬಹುದು ಎಂದು ಪ್ರಶ್ನಿಸುತ್ತಿದ್ದಾರೆ?-ಇನ್ನೂ ಕೆಲವರು ಪತ್ರಕರ್ತನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಲ್ಲಿದೆ ನೋಡಿ ಪತ್ರಕರ್ತ ಸಮುದ್ರಕ್ಕೆ ಹಾರಿದ ವಿಡಿಯೊ
Masterclass in weather reporting. pic.twitter.com/bedXuvcEaA
— Naila Inayat (@nailainayat) June 14, 2023