Site icon Vistara News

Attack on Poland | ನ್ಯಾಟೋ ರಾಷ್ಟ್ರ ಪೋಲೆಂಡ್ ಮೇಲೆ ರಷ್ಯಾ ದಾಳಿ, ಜಿ20 ಶೃಂಗದಲ್ಲಿ ವಿಶ್ವ ನಾಯಕರ ಖಂಡನೆ

Poland

ನವದೆಹಲಿ: ನ್ಯಾಟೋ ಸದಸ್ಯ ರಾಷ್ಟ್ರ ಪೋಲೆಂಡ್ (Attack on Poland) ಮೇಲೆ ರಷ್ಯಾ ನಡೆಸಿದ ರಾಕೆಟ್ ದಾಳಿಗೆ ಇಬ್ಬರು ಮೃತಪಟ್ಟ ಘಟನೆ ನಡೆದಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪೂರ್ವ ಪೋಲೆಂಡ್‌ನ ಉಕ್ರೇನ್ ಗಡಿಯಲ್ಲಿ ರಷ್ಯನ್ ಮೇಡ್ ರಾಕೆಟ್‌ ದಾಳಿ ನಡೆಸಲಾಗಿದೆ. ಈ ಕೃತ್ಯದಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ. ಆದರೆ, ರಷ್ಯಾ ಈ ದಾಳಿಯನ್ನು ನಿರಾಕರಿಸಿದೆ. ಪರಿಣಾಮ, ಪೋಲೆಂಡ್ ಸರ್ಕಾರವು ರಷ್ಯನ್ ರಾಯಭಾರಿಯನ್ನು ಕರೆಯಿಸಿಕೊಂಡು ವಿವರಣೆ ನೀಡುವಂತೆ ಕೇಳಿಕೊಂಡಿದೆ. ಮತ್ತೊಂದೆಡೆ, ಪೋಲೆಂಡ್ ಮೇಲಿನ ದಾಳಿಯನ್ನು ವಿಶ್ವದ ನಾಯಕರು ಖಂಡಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ಪೂರ್ವ ಪೋಲೆಂಡ್‌ನ ಉಕ್ರೇನ್ ಗಡಿಯಿಂದ ಆರು ಕಿ.ಮೀ. ದೂರಲ್ಲಿರುವ ಪ್ರಜೆವೊಡೋವ್ ಹಳ್ಳಿಯ ಮೇಲೆ ರಾಕೆಟ್ ದಾಳಿ ನಡೆದಿದೆ ಎಂದು ಪೋಲೆಂಡ್ ವಿದೇಶಾಂಗ ಸಚಿವಾಲಯವು ಖಚಿತಪಡಿಸಿದೆ.

ಜಿ20 ಶೃಂಗದಲ್ಲಿ ಸಭೆ
ನ್ಯಾಟೋ ಪಡೆಯ ಸದಸ್ಯ ರಾಷ್ಟ್ರ ಪೋಲೆಂಡ್ ಮೇಲೆ ರಷ್ಯಾ ನಡೆಸಿದ ರಾಕೆಟ್ ದಾಳಿ ಗೊತ್ತಾಗುತ್ತಿದ್ದಂತೆ ಜಿ20 ಶೃಂಗದಲ್ಲಿ ನೆರೆದಿರುವ ವಿಶ್ವ ನಾಯಕರು ತುರ್ತು ಸಭೆ ಸೇರಿ, ದಾಳಿಯನ್ನು ಖಂಡಿಸಿದರು. ಈ ಸಭೆಯ ಅಧ್ಯಕ್ಷತೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ವಹಿಸಿದ್ದರು. ಜರ್ಮನಿ, ಕೆನಡಾ, ನೆದರ್ಲೆಂಡ್, ಜಪಾನ್, ಸ್ಪೇನ್, ಇಟಲಿ, ಫ್ರಾನ್ಸ್ ಮತ್ತು ಇಂಗ್ಲೆಂಡ್ ರಾಷ್ಟ್ರಗಳು ನಾಯಕರು ಈ ಸಭೆಯಲ್ಲಿ ಭಾಗವಹಿಸಿದ್ದರು. ಜಪಾನ್ ಹೊರತುಪಡಿಸಿ ಉಳಿದ ರಾಷ್ಟ್ರಗಳು ನ್ಯಾಟೋ ಪಡೆಯ ಸದಸ್ಯ ರಾಷ್ಟ್ರಗಳಾಗಿವೆ.

ನ್ಯಾಟೋ, ಜಿ7 ಖಂಡನೆ
ಮತ್ತೊಂದೆಡೆ, ನ್ಯಾಟೋ ಹಾಗೂ ಜಿ7 ರಾಷ್ಟ್ರಗಳೂ ಈ ದಾಳಿಯನ್ನು ಖಂಡಿಸಿವೆ. ಕೆನಡಾ, ಯುರೋಪಿಯನ್ ಕಮಿಷನ್, ಯುರೋಪಿಯನ್ ಕೌನ್ಸಿಲ್, ಫ್ರಾನ್ಸ್, ಜರ್ಮನಿ, ಇಟಲಿ, ಸ್ಪೇನ್ ಸೇರಿದಂತೆ ಇತರ ರಾಷ್ಟ್ರಗಳು ಪೋಲೆಂಡ್ ಮೇಲಿನ ದಾಳಿಯನ್ನು ಖಂಡಿಸಿವೆ. ಮತ್ತೊಂದೆಡೆ, ವಿಶ್ವ ಸಂಸ್ಥೆಯು ಈ ದಾಳಿಯನ್ನು ಖಂಡಿಸಿದ್ದು, ಶಾಂತಿ ಕಾಪಾಡಲು ಮನವಿ ಮಾಡಿಕೊಂಡಿದೆ.

ಇದನ್ನೂ ಓದಿ | ರಷ್ಯಾ ಸೇನಾ ತರಬೇತಿ ನೆಲೆ ಮೇಲೆ ಉಗ್ರರಿಂದ ದಾಳಿ; 11 ಜನರು ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ

Exit mobile version