Site icon Vistara News

Vladimir Putin | ಉಕ್ರೇನ್ ಜತೆಗಿನ ಯುದ್ಧ ಸ್ಥಗಿತಕ್ಕೆ ಸಿದ್ಧ ಎಂದು ಘೋಷಿಸಿದ ರಷ್ಯಾ ಅಧ್ಯಕ್ಷ ಪುಟಿನ್

Putin and zelensky @ Ukraine-Russia War

ನವದೆಹಲಿ: ಉಕ್ರೇನ್‌ನೊಂದಿಗೆ ಯುದ್ಧವನ್ನು ಕೊನೆಗಾಣಿಸಲು ಸಿದ್ಧ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರು ಘೋಷಿಸಿದ್ದಾರೆ. ಎಲ್ಲ ಸಶಸ್ತ್ರ ಸಂಘರ್ಷಗಳು ರಾಜತಾಂತ್ರಿಕ ಮಾತುಕತೆಗಳ ಮೂಲಕವೇ ಅಂತ್ಯವಾಗಿವೆ ಎಂದು ಅವರು ತಿಳಿಸಿದ್ದಾರೆ.

ಸೇನಾ ಸಂಘರ್ಷದ ಚಕ್ರವನ್ನು ಮತ್ತಷ್ಟು ತಿರುಗಿಸುವುದು ನಮ್ಮ ಗುರಿಯಲ್ಲ. ಆದರೆ, ಇದಕ್ಕೆ ವಿರುದ್ಧವಾಗಿ ಯುದ್ಧವನ್ನು ಅಂತ್ಯಗೊಳಿಸವುದಾಗಿದೆ. ನಾವು ಯುದ್ಧವನ್ನು ಕೊನೆಗಾಣಿಸಲು ಸಿದ್ಧರಾಗಿದ್ದೇವೆ. ಮತ್ತು ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ಮುಂದುವರಿಯಲಿವೆ ಎಂದು ವ್ಲಾದಿಮಿರ್ ಪುಟಿನ್ ಅವರು ಮಾಸ್ಕೋದಲ್ಲಿ ತಿಳಿಸಿದ್ದಾರೆ.

ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಅವರು ಅಮೆರಿಕದ ಶ್ವೇತಭವನಕ್ಕೆ ಭೇಟಿ ನೀಡಿದ ಮಾರನೇ ದಿನವೇ ಪುಟಿನ್ ಅವರು ಯುದ್ಧವನ್ನು ಅಂತ್ಯಗೊಳಿಸುವ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ, ನಾನು ಸಾಕಷ್ಟು ಬಾರಿ ಹೇಳಿದ್ದೇನೆ, ದ್ವೇಷವನ್ನು ಹೆಚ್ಚಿಸುವುದರಿಂದ ಸಮರ್ಥನೆ ಮಾಡಿಕೊಳ್ಳಲಾರದಷ್ಟು ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಕಳೆದ ಹತ್ತು ತಿಂಗಳಿಂದ ರಷ್ಯಾ ತನ್ನ ನೆರೆಯ ರಾಷ್ಟ್ರ ಉಕ್ರೇನ್‌ ಮೇಲೆ ಯುದ್ಧವನ್ನು ಸಾರಿದೆ. ಈವರೆಗೂ ಯಾವುದೇ ಫಲಿತಾಂಶನ್ನು ಪಡೆಯಲು ಸಾಧ್ಯವಾಗಿಲ್ಲ. ಉಕ್ರೇನ್ ನ್ಯಾಟೋ ಪಡೆಯನ್ನು ಸೇರುವುದನ್ನು ವಿರೋಧಿಸಿ ವ್ಲಾದಿಮಿರ್ ಪುಟಿನ್ ಅವರು ಉಕ್ರೇನ್ ವಿರುದ್ಧ ಸೇನಾ ಕಾರ್ಯಾಚರಣೆಯನ್ನು ಆರಂಭಿಸಿದ್ದರು.

ಏತನ್ಮಧ್ಯೆ, ಉಕ್ರೇನ್ ಮಾತುಕತೆಗೆ ಸಿದ್ಧವಿಲ್ಲ. ಅದು ರಾಜತಾಂತ್ರಿಕ ಮಾತುಕತೆಗಳನ್ನು ತಿರಸ್ಕರಿಸುತ್ತಿದೆ ಎಂದು ರಷ್ಯಾ ಹೇಳಿದೆ. ಆದರೆ, ಈ ಆರೋಪವನ್ನು ಅಲ್ಲಗಳೆದಿರುವ ಉಕ್ರೇನ್, ರಷ್ಯಾ ಮೊದಲು ಯುದ್ಧವನ್ನು ನಿಲ್ಲಿಸಬೇಕು. ಆಮೇಲಷ್ಟೇ ಮಾತುಕತೆ ಎಂದು ಹೇಳಿದೆ. ರಷ್ಯಾ ವಿರುದ್ಧ ಅಂತಾರಾಷ್ಟ್ರೀಯವಾಗಿ ಅನೇಕ ನಿರ್ಬಂಧಗಳನ್ನು ಹೇರಲಾಗಿದೆ. ಹಾಗೆಯೇ, ಉಕ್ರೇನ್‌ಗೆ ಅಮೆರಿಕ ಹಾಗೂ ಯುರೋಪಿಯನ್ ದೇಶಗಳು ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ಬೆಂಬಲ ನೀಡಿವೆ.

ಇದನ್ನೂ ಓದಿ | Volodymyr Zelensky | ರಷ್ಯಾ ದಾಳಿಗೆ ಜಗ್ಗದೆ ದೇಶ ಮುನ್ನಡೆಸಿದ ಉಕ್ರೇನ್‌ ಅಧ್ಯಕ್ಷನಿಗೆ ಟೈಮ್‌ ಮ್ಯಾಗಜಿನ್‌ನ ‘ವರ್ಷದ ವ್ಯಕ್ತಿ’ ಗರಿ

Exit mobile version