ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ತಮ್ಮ ಹೊಸ ವರ್ಷದ ಭಾಷಣವನ್ನು ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ಸೇನಾ ಪಡೆ ಮತ್ತು ಅದರ ಬೆಂಬಲಕ್ಕಿರುವ ಜನತೆಗೆ ಸಮರ್ಪಿಸಿದ್ದಾರೆ. ಈ ನಡುವೆ ಹೊಸ ವರ್ಷ ಉಕ್ರೇನ್ ವಿರುದ್ಧ ಸಂಘರ್ಷವನ್ನು ತೀವ್ರಗೊಳಿಸುವ ಸುಳಿವನ್ನು (Russia-Ukraine war ) ನೀಡಿದ್ದಾರೆ.
ರಷ್ಯಾವನ್ನು ನಾಶಪಡಿಸಲು ಯತ್ನಿಸುತ್ತಿರುವ ಉಕ್ರೇನ್, ನವ-ನಾಜಿಗಳು ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ಧ ಗೆಲುವಿನ ಸಂಕಲ್ಪವನ್ನು ವ್ಲಾದಿಮಿರ್ ಪುಟಿನ್ ಘೋಷಿಸಿದರು. ತಮ್ಮ 9 ನಿಮಿಷಗಳ ಹೊಸ ವರ್ಷದ ಆಚರಣೆಯ ಭಾಷಣದಲ್ಲಿ ಪುಟಿನ್, ಪಾಶ್ಚಿಮಾತ್ಯ ದೇಶಗಳು ರಷ್ಯಾವನ್ನು ನಾಶಪಡಿಸುವುದಕ್ಕೋಸ್ಕರ ಉಕ್ರೇನ್ ಅನ್ನು ದಾಳದಂತೆ ಪ್ರಯೋಗಿಸುತ್ತಿವೆ. ಆದರೆ ಇದಕ್ಕೆ ನಾವು ಆಸ್ಪದ ನೀಡುವುದಿಲ್ಲ ಎಂದರು. ಉಕ್ರೇನ್‌ನಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆ ನಡೆಸಲು ಕಾರಣ ಪಶ್ಚಿಮದ ರಾಷ್ಟ್ರಗಳಾಗಿವೆ. ಶಾಂತಿಯ ಹೆಸರಿನಲ್ಲಿ ಅವುಗಳು ಭಯೋತ್ಪಾದನೆಯನ್ನೇ ನಡೆಸಿವೆ ಎಂದು ಗುಡುಗಿದರು.
ರಷ್ಯಾದ ರಕ್ಷಣಾ ಸಚಿವ ಸರ್ಗಿ ಶೋಯಿಗೊ ಅವರು ರಷ್ಯಾದ ಧೀರೋದಾತ್ತ ಸೈನಿಕರು ಉಕ್ರೇನ್ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ಧ ಜಯ ತಂದುಕೊಡಲಿದ್ದಾರೆ ಎಂದಿದ್ದಾರೆ. ಜನವರಿ 5ರಿಂದ ಸೇನೆಯನ್ನು ಕ್ರೋಢೀಕರಿಸಿ ಉಕ್ರೇನ್ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸುವ ಸುಳಿವನ್ನು ನೀಡಿದ್ದಾರೆ. ಈ ನಡುವೆ ಉಭಯ ಬಣಗಳು ಒಟ್ಟು 200 ಸೈನಿಕರನ್ನು ಬಂಧಮುಕ್ತಗೊಳಿಸಿವೆ.